ಅನುಗ್ರಹ ಮಹಿಳಾ ಕಾಲೇಜು ಕಲ್ಲಡ್ಕದಲ್ಲಿ ಇಫ್ತಾರ್‌-2024

0
1206

ಸನ್ಮಾರ್ಗ ವಾರ್ತೆ

ಅನುಗ್ರಹ ಮಹಿಳಾ ಕಾಲೇಜ್ ಕಲ್ಲಡ್ಕದಲ್ಲಿ ಇಫ್ತಾರ್ -2024 ಆಯೋಜಿಸಲಾಯಿತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಜಮಾಅತೆ ಇಸ್ಲಾಮೀ ಹಿಂದ್ ಮಂಗಳೂರು ವಲಯ ಸಂಚಾಲಕರಾದ ಜನಾಬ್ ಸಈದ್ ಇಸ್ಮಾಯಿಲ್ ರವರು ಉಪವಾಸದ ಮಹತ್ವ ಮತ್ತು ಕುರ್‌ಆನ್‌ನ ಸಂದೇಶವನ್ನು ನೀಡಿದರು.

ಯಾವ ರೀತಿ ಮನುಷ್ಯನಿಗೆ ಓರ್ವನೇ ತಂದೆ-ತಾಯಿ ಇರುತ್ತಾರೆಯೋ, ಅದೇ ರೀತಿ ಈ ಲೋಕಕ್ಕೆ ಓರ್ವನೆ ದೇವನು ಮಾತ್ರ ಇರಲು ಸಾಧ್ಯ, ಆ ದೇವನನ್ನು ಅನುಸರಿಸಿ ಈ ಲೋಕದಲ್ಲಿ ಬದುಕಿ ಪರಲೋಕದಲ್ಲಿ ಮೋಕ್ಷವನ್ನು ಪಡೆಯಲು ಪ್ರಯತ್ನಸುವುದು ಪ್ರತಿಯೊಬ್ಬ ಮನುಷ್ಯನ ಕರ್ತವ್ಯವಾಗಿದೆ ಎಂದು ಅವರು ತಮ್ಮ ಭಾಷಣದಲ್ಲಿ ತಿಳಿಸಿದರು.

ಪ್ರಾಂಶುಪಾಲರಾದ ಶ್ರೀಮತಿ ಹೇಮಲತ ಬಿ. ಡಿ. ಮಾತನಾಡಿ ಕಾಲೇಜಿನಲ್ಲಿ ಇಫ್ತಾರ್ ಕೂಟವನ್ನು ಆಯೋಜಿಸಿದ ಆಡಳಿತ ಮಂಡಳಿ ಹಾಗೂ ಸಹಕರಿಸಿದ ಎಲ್ಲ ಸಿಬ್ಬಂದಿ ವರ್ಗದವರಿಗೆ ಮತ್ತು ವಿದ್ಯಾರ್ಥಿಗಳಿಗೆ ವಂದಿಸಿ, ಪ್ರಶಂಸಿಸಿದರು.

ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ವಹಿಸಿದ್ದ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀಯುತ ಯಾಸೀನ್ ಬೇಗ್ ರವರು ಅಧ್ಯಕ್ಷೀಯ ಭಾಷಣದಲ್ಲಿ ಮನುಷ್ಯನ ಪೈಕಿ ಅತ್ಯುತ್ತಮನು ಯಾರೆಂದರೆ ಅತೀ ಹೆಚ್ಚು ದೇವನನ್ನು ಭಯಪಟ್ಟು ಬದುಕುವವನು ಆಗಿರುತ್ತಾನೆ ಎಂಬ ಕುರ್‌ಆನ್‌ನ ಸೂಕ್ತದೊಂದಿಗೆ ತಮ್ಮ ಮಾತುಗಳನ್ನು ಕೊನೆಗೊಳಿಸಿದರು.

ವೇದಿಕೆಯಲ್ಲಿ ಕಲ್ಲಡ್ಕ ಮ್ಯೂಸಿಯಂನ ಸ್ಥಾಪಕರಾದ ಶ್ರೀಯುತ ಯಾಸೀರ್ ಕಲ್ಲಡ್ಕ, ಕಾಲೇಜ್ ನ ಆಡಳಿತ ಮಂಡಳಿಯ ಉಪಾಧ್ಯಕ್ಷರಾದ ಶ್ರೀಯುತ ಇಮಾರತ್ ಅಲಿ, ಸಂಚಾಲಕರಾದ ಶ್ರೀಯುತ ಅಮಾನುಲ್ಲಾ ಖಾನ್, ಖಜಾಂಜಿಯಾಗಿರುವ ಶ್ರೀಯುತ ಹೈದರ್ ಅಲಿ ನೀರ್ಕಜೆ, , ಸದಸ್ಯರಾದ ಶ್ರೀಯುತ ಅಬ್ದುಲ್ಲಾ ಕುಂಞ, ಮತ್ತು ಕಾಲೇಜ್ ನ ಸಲಹಾ ಸಮಿತಿಯ ಕಾರ್ಯದರ್ಶಿಯಾದ ಶ್ರೀಮತಿ ಮಮಿತಾ ಎಸ್ ರೈ ಉಪಸ್ಥಿತರಿದ್ದರು.

ಈ ಕಾರ್ಯಕ್ರಮದಲ್ಲಿ ಕುಮಾರಿ ನಿಹ್ಲಾ ಹೈದರ್ ಖಿರಾಅತ್ ಪಠಿಸಿದರು, ಕಾಲೇಜ್‌ನ ಗ್ರಂಥ ಪಾಲಕಿಯಾದ ಶ್ರೀಮತಿ ಪ್ರಜ್ಞಾ ಇವರು ಕಾರ್ಯಕ್ರಮವನ್ನು ನಿರೂಪಿಸಿ, ಆಗಮಿಸಿದ ಎಲ್ಲರನ್ನು ಸ್ವಾಗತಿಸಿ, ವಂದಿಸಿದರು.

ಸಭಾ ಕಾರ್ಯಕ್ರಮದ ನಂತರ ಇಫ್ತಾರ್‌ನ ವ್ಯವಸ್ಥೆಯನ್ನು ಮಾಡಲಾಗಿತ್ತು. ಮುಸ್ಸಂಜೆಯ ಪ್ರಶಾಂತವಾದ ವಾತಾವರಣದಲ್ಲಿ, ಕಾಲೇಜ್ ನ ಮುಂಭಾಗದಲ್ಲಿ ಶಾಂತಿಯುತವಾಗಿ ಶಿಸ್ತಿನಿಂದ ಇಫ್ತಾರ್ ಮಾಡಲಾಯಿತು. ಮಗ್ರಿಬ್‌ ನಮಾಝ್ ಹಾಗೂ ಊಟದ ವ್ಯವಸ್ಥೆಯನ್ನು ಮಾಡಲಾಯಿತು.

ಈ ಇಫ್ತಾರ್ ಕಾರ್ಯಕ್ರಮದಲ್ಲಿ ಕಾಲೇಜ್‌ನ ವಿದ್ಯಾರ್ಥಿನಿಯರು, ಆಡಳಿತ ಮಂಡಳಿಯ ಸದಸ್ಯರು, ಪೋಷಕರು, ಉಪನ್ಯಾಸಕರು ಹಾಗೂ ಸಿಬ್ಬಂದಿ ವರ್ಗದವರು ಸಕ್ರಿಯವಾಗಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲು ಸಹಕರಿಸಿದರು.