ಬ್ಯಾಂಕ್‌ ಮೂಲಕ ಲಂಚ ನೀಡಬಹುದೆಂದು ಖಚಿತಪಡಿಸಿದ ಚುನಾವಣಾ ಬಾಂಡ್: ಕಾಂಗ್ರೆಸ್‌

0
224

ಸನ್ಮಾರ್ಗ ವಾರ್ತೆ

‘ಅಪಾರದರ್ಶಕ’ ಚುನಾವಣಾ ಬಾಂಡ್‌ಗಳು ಲಂಚವನ್ನು ಬ್ಯಾಂಕ್‌ ಮೂಲಕ ನೀಡಬಹುದು ಎಂಬುದನ್ನು ಖಚಿತಪಡಿಸಿವೆ ಎಂದಿರುವ ಕಾಂಗ್ರೆಸ್‌, ಚುನಾವಣಾ ಬಾಂಡ್‌ಗಳ ವಿಚಾರದಲ್ಲಿ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಮತ್ತೆ ವಾಗ್ದಾಳಿ ನಡೆಸಿದೆ.

ಪ್ರೀ ಪೇಯ್ಡ್‌, ಪೋಸ್ಟ್‌ ಪೇಯ್ಡ್‌ ರೀತಿಯಲ್ಲಿ ಮಾತ್ರವಲ್ಲದೆ, ದಾಳಿಗಳ ನಡೆದಾಗಲೂ ಚುನಾವಣಾ ಬಾಂಡ್‌ಗಳನ್ನು ಬಳಸಿ ಬ್ಯಾಂಕ್‌ ಮೂಲಕವೇ ಲಂಚ ನೀಡಲಾಗಿದೆ ಎಂದು ಕಾಂಗ್ರೆಸ್‌ ಆರೋಪಿಸಿದೆ. ಈ ಹಗರಣವನ್ನು ಸುಪ್ರೀಂ ಕೋರ್ಟ್‌ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದೆ.

ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, “ಕಪ್ಪು ಹಣವನ್ನು ಮರಳಿ ತರುತ್ತೇವೆಂದು ಭರವಸೆ ನೀಡಿದ್ದ ಪ್ರಧಾನಿ ಮೋದಿ, ಭ್ರಷ್ಟಾಚಾರವನ್ನು ಕಾನೂನುಬದ್ಧಗೊಳಿಸಿದ್ದರು. ಈಗ ಅದನ್ನು ಮರೆಮಾಚಲು ಭಾರೀ ಪ್ರಯತ್ನಿಸುತ್ತಿದ್ದಾರೆ ಮತ್ತು ಹತಾಶರಾಗಿದ್ದಾರೆ” ಎಂದು ಹೇಳಿದರು.

“41 ಕಾರ್ಪೊರೇಟ್ ಕಂಪನಿಗಳು ಒಟ್ಟು 56 ಬಾರಿ ಇಡಿ/ಸಿಬಿಐ/ಐಟಿ ದಾಳಿಗಳನ್ನು ಎದುರಿಸಿವೆ. ಅಲ್ಲದೆ, ಆ ಕಂಪನಿಗಳು ಬಿಜೆಪಿಗೆ 2,592 ಕೋಟಿ ರೂ. ದೇಣಿಗೆ ನೀಡಿವೆ. ಅದರಲ್ಲಿ 1,853 ಕೋಟಿ ರೂ.ಗಳನ್ನು ದಾಳಿಯ ನಂತರ ನೀಡಲಾಗಿದೆ” ಎಂದು ಆರೋಪಿಸಿದ್ದಾರೆ.

“ಇಂಡಿಯಾ ಮೈತ್ರಿಕೂಟವು ಅಧಿಕಾರಕ್ಕೆ ಬಂದ ಬಳಿಕ ಚುನಾವಣಾ ಬಾಂಡ್‌ ಹಗರಣವನ್ನು ಎಸ್‌ಐಟಿ ತನಿಖೆಗೆ ಒಳಪಡಿಸುತ್ತದೆ. ಅಲ್ಲದೆ, ಪಿಎಂ-ಕೇರ್ಸ್ ನಿಧಿಯ ಬಗ್ಗೆಯೂ ಎಸ್‌ಐಟಿ ಮೂಲಕ ತನಿಖೆ ನಡೆಸಲಾಗುತ್ತದೆ” ಎಂದು ಅವರು ಹೇಳಿದ್ದಾರೆ.