ಐಎಂಎ ವಂಚಕ ಮನ್ಸೂರ್ ಖಾನ್ ಬಂಧನ: ರೋಷನ್ ಬೇಗ್ ಗೆ ಉರುಳು?

0
425

ಸನ್ಮಾರ್ಗ ಜು. 19, 2019

ಹೊಸದಿಲ್ಲಿ, ಜು. 19: ಬೆಂಗಳೂರಿನ ಐಎಂಎ ಜ್ಯುವೆಲ್ಲರಿ ವಂಚನೆ ಪ್ರಕರಣದಲ್ಲಿ ಅದರ ಮಾಲಕ ಮನ್ಸೂರ್ ಖಾನ್‍ರನ್ನು ಬಂಧಿಸಲಾಗಿದೆ. ಶುಕ್ರವಾರ ಬೆಳಗ್ಗೆ ದುಬೈಯಿಂದ ಹೊಸದಿಲ್ಲಿ ವಿಮಾನ ನಿಲ್ದಾಣಕ್ಕೆ ಬಂದು ಇಳಿದಾಗ ಮನ್ಸೂರ್ ಖಾನ್‍ರನ್ನು ಇಡಿ ಬಂಧಿಸಿ ವಿಚಾರಣೆ ನಡೆಸುತ್ತಿದೆ.

ಐಎಂಎ ಜ್ಯೂವೆಲ್ಲರಿಯಲ್ಲಿ ಠೇವಣಿ ಇರಿಸಿದ 40,000 ಮಂದಿ ವಂಚನೆಗೊಳಗಾಗಿದ್ದರು. ಇವರಲ್ಲಿ ಹೆಚ್ಚಿನವರು ಸಾಮಾನ್ಯ ಜನರು. ಮನ್ಸೂರ್ ಭೂಗತನಾಗುವುದರೊಂದಿಗೆ ಹಣಕೊಟ್ಟವರು ತೀವ್ರ ಪ್ರತಿಭಟನೆ ನಡೆಸಿದ್ದಾರೆ. ನಂತರ ಕರ್ನಾಟಕ ಸರಕಾರದ ನಿರ್ದೇಶನ ಪ್ರಕಾರ ಪ್ರಕರಣ ತನಿಖೆಗೆ ಡಿಐಜಿ ಬಿ ಆರ್ ದೇವೆಗೌಡ ಅವರು ಹನ್ನೊಂದು ಸದಸ್ಯರ ವಿಶೇಷ ತಂಡವನ್ನು ನಿಯೋಜಿಸಿದ್ದರು. ಮನ್ಸೂರ್ ಖಾನ್ ದುಬೈಯಲ್ಲಿ ಅಡಗಿ ಕೂತಿರುವುದು ಪತ್ತೆಯಾಗಿತ್ತು. ಭಾರತದಲ್ಲಿ ಕಾನೂನು ಕ್ರಮ ಎದುರಿಸಲು ತನಿಖಾ ತಂಡ ಸೂಚಿಸಿತ್ತು. ಹೃದ್ರೋಗ ,ಚಿಕಿತ್ಸೆಗೆ ಊರಿಗೆ ಬರುವೆ ಮತ್ತು ಭಾರತದ ನ್ಯಾಯ ವ್ಯವಸ್ಥೆಯಲ್ಲಿ ವಿಶ್ವಾಸ ಇದೆ ಎಂದು ವೀಡಿಯೊ ಸಂದೇಶದಲ್ಲಿ ಮನ್ಸೂರ್ ತಿಳಿಸಿದ್ದನು.

ತಾನು 400 ಕೋಟಿ ರೂಪಾಯಿಯನ್ನು ಕಾಂಗ್ರೆಸ್ ನಾಯಕ ರೋಶನ್ ಬೇಗ್‍ ಗೆ ನೀಡಿದ್ದೆ. ಆದರೆ ಅವರು ಮರಳಿ ಕೊಟ್ಟಿಲ್ಲ ಎಂದು ಖಾನ್ ಆರೋಪಿಸಿದ್ದಾನೆ. ಕರ್ನಾಟಕದಲ್ಲಿ ಈಗ ನಡೆಯುತ್ತಿರುವ ರಾಜಕೀಯ ಬಿಕ್ಕಟ್ಟಿನಲ್ಲಿ ಕಾಂಗ್ರೆಸ್ -ಜೆಡಿಎಸ್ ದೋಸ್ತಿ ಸರಕಾರಕ್ಕೆ ರೋಶನ್ ಬೇಗ್ ರಾಜೀನಾಮೆ ನೀಡಿ ಬಂಡಾಯವೆದ್ದಿದ್ದಾರೆ. ತನಿಖಾ ತಂಡದ ಮುಂದೆ ಹಾಜರಾಗದ ಕಾರಣ ರೋಶನ್ ಬೇಗ್‍ರನ್ನು ಪೊಲೀಸರು ಕಳೆದ ದಿವಸ ಕಸ್ಟಡಿಗೆ ಪಡೆದಿದ್ದರು.