ಭಾರತದಲ್ಲಿ ಕಳೆದ ಆರು ತಿಂಗಳಲ್ಲಿ ಮುಸ್ಲಿಮ್ ದ್ವೇಷ ಭಾಷಣಗಳ ಹೆಚ್ಚಳ: ವಾಷಿಂಗ್ಟನ್ ಸಂಶೋಧನಾ ಸಮಿತಿಯ ಸ್ಪೋಟಕ ವರದಿ

0
178

ಸನ್ಮಾರ್ಗ ವಾರ್ತೆ

ಭಾರತದಲ್ಲಿ ಕಳೆದ ಆರು ತಿಂಗಳಲ್ಲಿ ಮುಸ್ಲಿಂ ವಿರೋಧಿ ದ್ವೇಷ ಭಾಷಣಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿರುವ ಬಗ್ಗೆ ವಾಷಿಂಗ್ಟನ್ ಮೂಲದ ಸಂಶೋಧನಾ ಸಮಿತಿ ಸ್ಪೋಟಕ ಮಾಹಿತಿಯನ್ನು ಬಹಿರಂಗಗೊಳಿಸಿದೆ.

ವರ್ಷದ ಮೊದಲ ಆರು ತಿಂಗಳಿಗೆ ಹೋಲಿಸಿದರೆ 2023ರ ದ್ವಿತೀಯಾರ್ಧದಲ್ಲಿ ಭಾರತದಲ್ಲಿ ಮುಸ್ಲಿಮ್ ವಿರೋಧಿ ದ್ವೇಷದ ಭಾಷಣವು ಶೇಕಡಾ 62ರಷ್ಟು ಹೆಚ್ಚಾಗಿದೆ ಎಂದು ತಿಳಿಸಿದೆ.

‘ಇಂಡಿಯಾ ಹೇಟ್ ಲ್ಯಾಬ್’ 2023ರಲ್ಲಿ ಮುಸ್ಲಿಮರನ್ನು ಗುರಿಯಾಗಿಸಿಕೊಂಡ 668 ದ್ವೇಷ ಭಾಷಣ ಘಟನೆಗಳನ್ನು ಉಲ್ಲೇಖಿಸಿದೆ. ಅದರಲ್ಲಿ 255 ವರ್ಷದ ಮೊದಲಾರ್ಧದಲ್ಲಿ ಸಂಭವಿಸಿದೆ ಮತ್ತು 2023ರ ಕೊನೆಯ ಆರು ತಿಂಗಳಲ್ಲಿ 413 ಘಟನೆಗಳು ನಡೆದಿವೆ ಎಂದು ಸಂಶೋಧನಾ ಸಮಿತಿ ಸೋಮವಾರ ಬಿಡುಗಡೆ ಮಾಡಿದ ವರದಿಯಲ್ಲಿ ತಿಳಿಸಿದೆ.

ವರದಿಯ ಪ್ರಕಾರ, ಸುಮಾರು 75 ಪ್ರತಿಶತ ಅಥವಾ 498 ಘಟನೆಗಳು ಭಾರತೀಯ ಜನತಾ ಪಕ್ಷ ಆಡಳಿತವಿರುವ ರಾಜ್ಯಗಳಲ್ಲಿ ನಡೆದಿವೆ. ಮಹಾರಾಷ್ಟ್ರ, ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶ ರಾಜ್ಯಗಳಲ್ಲಿ ಹೆಚ್ಚು ದ್ವೇಷಪೂರಿತ ಭಾಷಣಗಳನ್ನು ಮಾಡಲಾಗಿದೆ ಎಂದು ವರದಿಯು ತಿಳಿಸಿದೆ.

ಅಕ್ಟೋಬರ್ 7ರಂದು ಹಮಾಸ್ ಸಶಸ್ತ್ರ ಗುಂಪು ಮತ್ತು ಇಸ್ರೇಲ್ ನಡುವೆ ಯುದ್ಧ ಘೋಷಣೆ ಬಳಿಕ ಭಾರತೀಯ ಮುಸ್ಲಿಮರ ವಿರುದ್ಧ ದ್ವೇಷದ ಭಾಷಣದ 41 ಘಟನೆಗಳು ವರದಿಯಾಗಿದೆ. ಅಂದರೆ 2023ರ ಕೊನೆಯ ಮೂರು ತಿಂಗಳಲ್ಲಿ ಸುಮಾರು 20 ಪ್ರತಿ ಶತದಷ್ಟು ದ್ವೇಷ ಭಾಷಣ ಪ್ರಕರಣಗಳು ವರದಿಯಾಗಿದೆ ಎಂದು ಸಂಶೋಧನೆಯು ಉಲ್ಲೇಖಿಸಿದೆ.

ಇಂಡಿಯಾ ಹೇಟ್ ಲ್ಯಾಬ್ ಹಿಂದೂ ರಾಷ್ಟ್ರೀಯತಾವಾದಿ ಗುಂಪುಗಳ ಆನ್‌ಲೈನ್ ಚಟುವಟಿಕೆಯನ್ನು ಟ್ರ‍್ಯಾಕ್ ಮಾಡಿದೆ, ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ದ್ವೇಷ ಭಾಷಣದ ವೀಡಿಯೊಗಳನ್ನು ಪರಿಶೀಲಿಸಿದೆ ಮತ್ತು ಭಾರತೀಯ ಮಾಧ್ಯಮಗಳು ವರದಿ ಮಾಡಿದ ಪ್ರತ್ಯೇಕ ಘಟನೆಗಳ ದಾಖಲೆಯನ್ನು ಸಂಗ್ರಹಿಸಿ ವರದಿಯನ್ನು ಸಿದ್ದ ಪಡಿಸಿದೆ.