ಸನ್ಮಾರ್ಗ ವಾರ್ತೆ
ಹೊಸದೆಹಲಿ: ಉಷ್ಣ ಅಲೆಯ ಕಾರಣದಿಂದ ವಿದ್ಯುತ್ ಬೇಡಿಕೆಯು ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿರುವುದರಿಂದ, ಭಾರತದ 191 ಕಲ್ಲಿದ್ದಲು ಆಧಾರಿತ ವಿದ್ಯುತ್ ಸ್ಥಾವರಗಳ ಸುಮಾರು ಅರ್ಧದಷ್ಟು ಭಾಗದಲ್ಲಿ ಕಲ್ಲಿದ್ದಲು ಸಂಗ್ರಹವು ತೀವ್ರವಾಗಿ ಕಡಿಮೆಯಾಗಿದೆ. ಸೆಂಟ್ರಲ್ ಎಲೆಕ್ಟ್ರಿಸಿಟಿ ಅಥಾರಿಟಿ (ಸಿಇಎ) ಪ್ರಕಾರ, ಅಕ್ಟೋಬರ್ 19 ರ ಮಾಹಿತಿಯ ಅನುಸಾರ 96 ವಿದ್ಯುತ್ ಸ್ಥಾವರಗಳು ಕಲ್ಲಿದ್ದಲು ಸಂಗ್ರಹದ ಗಂಭೀರ ಕೊರತೆಯನ್ನು ಎದುರಿಸುತ್ತಿವೆ. ಸೆಪ್ಟೆಂಬರ್ ಮಧ್ಯಭಾಗದಲ್ಲಿ ತೀವ್ರ ಕೊರತೆಯನ್ನು ಎದುರಿಸುತ್ತಿರುವ ಸ್ಥಾವರಗಳ ಸಂಖ್ಯೆ 60 ಆಗಿತ್ತು.
ಮೂರು ದಿನಗಳಿಗಿಂತ ಕಡಿಮೆ ಕಲ್ಲಿದ್ದಲು ಆಧಾರಿತ ವಿದ್ಯುತ್ ಉತ್ಪಾದನೆಗೆ ಸಾಕಾಗುವಷ್ಟು ಕಲ್ಲಿದ್ದಲು ಹೊಂದಿರುವ ವಿದ್ಯುತ್ ಸ್ಥಾವರಗಳು ತೀವ್ರ ಇಂಧನ ಕೊರತೆಯನ್ನು ಎದುರಿಸುತ್ತಿವೆ ಎಂದು ಪರಿಗಣಿಸಲಾಗಿದೆ. ‘ಎಲ್ ನಿನೋ’ ವಿದ್ಯಮಾನಕ್ಕೆ ಸಂಬಂಧಿಸಿದ ಹೆಚ್ಚಿನ ತಾಪಮಾನದಿಂದಾಗಿ ವಿದ್ಯುತ್ ಬೇಡಿಕೆಯಲ್ಲಿ ಹೆಚ್ಚಳವಾಗಿದೆ.
ಕಳೆದ ವಾರ, ಕಲ್ಲಿದ್ದಲು ಸಚಿವಾಲಯವು ವಿದ್ಯುತ್ ಸ್ಥಾವರಗಳಿಗೆ ಪೂರೈಕೆಯನ್ನು ಹೆಚ್ಚಿಸಿದೆ ಎಂದು ಘೋಷಿಸಿತು. ಆದರೆ ಕೊರತೆಯು ಮುಂದುವರಿದಿದೆ. ಅಕ್ಟೋಬರ್ ಆರಂಭದಿಂದ ಸ್ಥಾವರಗಳಲ್ಲಿನ ಒಟ್ಟು ಕಲ್ಲಿದ್ದಲು ದಾಸ್ತಾನು ಸುಮಾರು ಶೇಕಡಾ ಐದರಷ್ಟು ಕುಸಿದಿದೆ ಎಂದು ಅಂಕಿಅಂಶಗಳು ಸೂಚಿಸುತ್ತವೆ.
ಕಲ್ಲಿದ್ದಲು ಬಿಕ್ಕಟ್ಟನ್ನು ದುರ್ಬಲ ಮುಂಗಾರು ಇನ್ನಷ್ಟು ಉಲ್ಬಣಗೊಳಿಸಿತು. ಮಳೆ ಕಡಿಮೆಯಾಗುವುದರೊಂದಿಗೆ ಜಲವಿದ್ಯುತ್ ಉತ್ಪಾದನೆಯೂ ಕುಸಿಯಿತು. ಈ ಮಧ್ಯೆ, ಈ ವರ್ಷದ ದೈನಂದಿನ ವಿದ್ಯುತ್ ಬೇಡಿಕೆಯು ಕಳೆದ ವರ್ಷಕ್ಕಿಂತ 45 ರಿಂದ 50 ಗಿಗಾವ್ಯಾಟ್ ಹೆಚ್ಚಾಗಿದೆ. ಇದು ವಿದ್ಯುತ್ ಬೇಡಿಕೆಯನ್ನು ಪೂರೈಸಲು ಕಲ್ಲಿದ್ದಲು ಆಧಾರಿತ ವಿದ್ಯುತ್ ಸ್ಥಾವರಗಳ ಮೇಲೆ ಹೆಚ್ಚಿನ ಅವಲಂಬನೆಗೆ ಕಾರಣವಾಗಿದೆ.
ಸೆಪ್ಟೆಂಬರ್ನಲ್ಲಿ ಕಲ್ಲಿದ್ದಲು ಆಧಾರಿತ ವಿದ್ಯುತ್ ಉತ್ಪಾದನೆಯು ಶೇಕಡಾ 13.3 ರಷ್ಟು ಹೆಚ್ಚಾದರೆ, ಜಲವಿದ್ಯುತ್ ಉತ್ಪಾದನೆಯು ಶೇಕಡಾ 20 ರಷ್ಟು ಕುಸಿದಿದೆ ಎಂದು ಸಿಇಎ ದತ್ತಾಂಶ ತೋರಿಸುತ್ತದೆ. ಆದರೂ, ಸೆಪ್ಟೆಂಬರ್ನಲ್ಲಿ ಬೇಡಿಕೆ ಮತ್ತು ಪೂರೈಕೆಯ ನಡುವಿನ ಅಂತರವು 560 ಮಿಲಿಯನ್ ಕಿಲೋವ್ಯಾಟ್ಗೆ ವಿಸ್ತರಿಸಿತು, ಇದು ಆಗಸ್ಟ್ 2023 ರ ನಂತರದ ಅತ್ಯಧಿಕ ಮಟ್ಟವಾಗಿದೆ.
ದೇಶದ ಒಟ್ಟು ವಿದ್ಯುತ್ ಉತ್ಪಾದನೆಯ ಶೇಕಡಾ 55 ರಷ್ಟು ಭಾಗವು ಈಗ ಸಂಪ್ರಾದಾಯಿಕ ಇಂಧನ ಮೂಲಗಳಿಂದ ಉತ್ಪತ್ತಿಯಾಗುತ್ತದೆ. ಆದರೆ ಉತ್ಪತ್ತಿಯಾಗುವ ಅಧಿಕ ಸ್ವಚ್ಛ ಶಕ್ತಿಯನ್ನು ಸಂಗ್ರಹಿಸಲು ಭಾರತವು ಸೀಮಿತ ಬ್ಯಾಟರಿ ವ್ಯವಸ್ಥೆಗಳನ್ನು ಹೊಂದಿದೆ. ಆದ್ದರಿಂದ, ಗರಿಷ್ಠ ಸಮಯದಲ್ಲಿ ಬೇಡಿಕೆಯನ್ನು ಪೂರೈಸಲು ಇದು ಕಲ್ಲಿದ್ದಲನ್ನು ಅವಲಂಬಿಸಬೇಕಾಗುತ್ತದೆ. ಈ ಬೆಳವಣಿಗೆಗಳು ಭಾರತೀಯ ವಿದ್ಯುತ್ ವಲಯಕ್ಕೆ ದೊಡ್ಡ ಸವಾಲನ್ನು ಒಡ್ಡುತ್ತಿವೆ.












