ಭಾರತ ಅಂದು-ಇಂದು: ಸೈಲೆಂಟ್ ಜನರೇಶನ್’ ನೋಟ

0
317

✍️ ಅಬೂ ಅನೀಸ್, ಕಲ್ಲಾಪು

ಪ್ರಶ್ನೆ: ನೀವು ಚಿಕ್ಕವರಿದ್ದಾಗ ನಿಮ್ಮ ಕಣ್ಣ ಮುಂದಿದ್ದ ಭಾರತದ ಕನಸು ಅಥವಾ ಪರಿಕಲ್ಪನೆ ಹೇಗಿತ್ತು?

ಉತ್ತರ: ಶಾಲೆಯಲ್ಲಿ ಕಲಿಯುತ್ತಿದ್ದಾಗ ದೇಶದ ಭವಿಷ್ಯದ ಬಗ್ಗೆ ಹೆಚ್ಚಿನ ಚಿಂತನೆಯಿಲ್ಲದಿದ್ದರೂ, ಅಂದು ಸರ್ಕಾರವು ಹಮ್ಮಿಕೊಂಡಿದ್ದ ಪಂಚವಾರ್ಷಿಕ ಯೋಜನೆಗಳ ಫಲಶ್ರುತಿಯು ಉತ್ತಮವಾಗಬಹುದು ಮತ್ತು ಚೀನಾದ ದುರಾಕ್ರಮಣದಿಂದ ದುರ್ಬಲವಾಗಿದ್ದ ದೇಶದ ರಕ್ಷಣಾ ವ್ಯವಸ್ಥೆ ಮುಂದಕ್ಕೆ ಬಲಿಷ್ಠವಾಗಬಹುದು ಎಂಬ ಚಿಂತನೆಗಳು ಗುಪ್ತವಾಗಿದ್ದವು.

ಪ್ರಶ್ನೆ: ಅಂದು ವಿವಿಧ ಧರ್ಮ, ಭಾಷೆಗಳ ಜನರ ನಡುವಿದ್ದ ಬಾಂಧವ್ಯಕ್ಕೂ ಇಂದಿನ ಪರಿಸ್ಥಿತಿಗೂ ಏನು ವ್ಯತ್ಯಾಸ ಕಾಣುತ್ತಿದ್ದೀರಿ? `ವೈವಿಧ್ಯತೆಯಲ್ಲಿ ಏಕತೆ’ ಎಷ್ಟು ಸಹಜವಾಗಿತ್ತು?

ಉತ್ತರ: ಅಂದು ಚುನಾವಣೆಗಳಲ್ಲಿ ಕಾಂಗ್ರೆಸ್ ಗೆದ್ದು ಬರಬೇಕೆಂದು ದೇಶದ ಅತ್ಯಧಿಕ ಪ್ರಜೆಗಳ ಆಶಯಕ್ಕೆ ಪೂರಕವಾಗಿ ದೇಶದ ಅಲ್ಪಸಂಖ್ಯಾತರು ಬದ್ಧತೆಯನ್ನು ಪ್ರಕಟಿಸುತ್ತಿದ್ದರು. ಕಾಂಗ್ರೆಸ್ ನಿಜಾರ್ಥದಲ್ಲಿ ಸೆಕ್ಯುಲರ್ ಆಶಯಗಳ ಮೇಲೆ ನಿಂತಿತ್ತು. ಗಾಂಧೀಜಿಯವರ ಕೊಲೆಯಿಂದಾಗಿ ಅಪರಾಧಿ ಸ್ಥಾನದಲ್ಲಿ ನಿಂತಿದ್ದ ಕೋಮು ಶಕ್ತಿಗಳ ಮೇಲೆ ಜನರಿಗೆ ಯಾವುದೇ ಉತ್ತಮ ಭಾವನೆಗಳಿರಲಿಲ್ಲ. ಆದಕಾರಣ ಕಾಂಗ್ರೆಸ್ ಪ್ರತಿಪಾದಿಸುತ್ತಿದ್ದ ಏಕತೆಯ ಹೆಜ್ಜೆಗೆ ಮುಸ್ಲಿಮರು, ಕ್ರೈಸ್ತರು ಮತ್ತು ಹಿಂದುಳಿದವರ ಬೆಂಬಲವಿತ್ತು.

ಪ್ರಶ್ನೆ: ನೀವು ಕಂಡಂತೆ ಭಾರತೀಯರ ಅಭಿವ್ಯಕ್ತಿ ಸ್ವಾತಂತ್ರ‍್ಯ ಮತ್ತು ಹಕ್ಕುಗಳು ದಶಕಗಳಲ್ಲಿ ಹೇಗೆ ಬದಲಾಗಿವೆ?

ಉತ್ತರ: ಅಂದು ಯಾವುದೇ ಧರ್ಮ, ಪಂಥ, ರಾಜಕೀಯ ಪಕ್ಷಗಳು, ಮುದ್ರಣ ಮಾಧ್ಯಮಗಳು ಸಮಾಜದಲ್ಲಿ ಶಾಂತಿ ನೆಮ್ಮದಿ ಕದಡದಂತೆ ಸಾಕಷ್ಟು ಸಂತುಲಿತವಾದ ಅಭಿವ್ಯಕ್ತಿ ನೀತಿಯನ್ನು ಕಾಯ್ದುಕೊಂಡಿದ್ದವು. ಆದರೆ ಕ್ರಮೇಣ ಕೋಮುವಾದಿ ಶಕ್ತಿಗಳು ಧರ್ಮ ಸಂಸ್ಕೃತಿಯ ಲೇಪ ಹಚ್ಚುವುದರ ಮೂಲಕ ರಾಜನೀತಿಯನ್ನು, ನಾಗರಿಕ ಸಮಾಜವನ್ನು, ಶಿಕ್ಷಣ ಕೇಂದ್ರಗಳನ್ನು ಕೋಮು ವೈಷಮ್ಯದ ರಂಗವನ್ನಾಗಿಸಲು ಪ್ರಯತ್ನಿ ಸಿದವು. ಅದರ ಫಲಶ್ರುತಿಯಾಗಿ ನಿಕೃಷ್ಟ ಕೋಮು ಚಿಂತನೆಗಳು ಮತೀಯ ಭಾವನೆಗಳಾಗಿ… ಸಮಾಜದಲ್ಲಿ ಕೋಮು ಭಾವನೆಗಳು ಉದ್ದೀಪನಗೊಂಡವು. ಹಿಂದುಳಿದ ವರ್ಗವು ಕೂಡಾ ಕೋಮು ವಾದವನ್ನೇ ಧರ್ಮದ ಸಂಸ್ಕೃತಿಯೆಂದು ಭಾವಿಸಿ ಅನುಚಿತ ನೀತಿ ಭಾವನೆಗಳ ಬಲಿಪಶುಗಳಾಗುತ್ತಿದ್ದಾರೆ.

ಪ್ರಶ್ನೆ: ಅಂದಿನ ಸರಳ ಜೀವನ ಮತ್ತು ಇಂದಿನ ತಾಂತ್ರಿಕ ಬೆಳವಣಿಗೆ – ಇವುಗಳಲ್ಲಿ ಭಾರತದ ಆತ್ಮ ಎಲ್ಲಿ ಅಡಗಿದೆ ಎಂದು ನಿಮಗನ್ನಿಸುತ್ತದೆ?

ಉತ್ತರ: ಸ್ವಾತಂತ್ರ‍್ಯದ ಪ್ರಾರಂಭದ ದಿನಗಳಲ್ಲಿ ದೇಶದಲ್ಲಿ ತೀವ್ರ ದಾರಿದ್ರ್ಯ, ಬಡತನ ವಿದ್ದರೂ ಜನರಲ್ಲಿ ಸಂವಿಧಾನ ಬದ್ಧತೆ, ಸೆಕ್ಯುಲರ್ ಚಿಂತನೆಗಳು ಸಹಜವಾಗಿ ನಡವಳಿಕೆಯಲ್ಲಿತ್ತು. ಟಿಪ್ಪು ಸುಲ್ತಾನನು ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಕಥೆ, ನಾಟಕಗಳು ನಿರಂತರವಾಗಿ ನಡೆಯುತ್ತಿದ್ದವು. ಶಾಲಾ ಪಠ್ಯ ಪುಸ್ತಕಗಳಲ್ಲಿ ಮುಸ್ಲಿಮ್ ಆಳರಸರ ಇತಿಹಾಸಗಳು ಸಹಜ ರೂಪದಲ್ಲಿ ಪ್ರಕಟವಾಗುತ್ತಿದ್ದವು.

ಪ್ರಶ್ನೆ: ನಮ್ಮ ಸಂವಿಧಾನದ ಆಶಯಗಳು ನಿಜ ಜೀವನದಲ್ಲಿ ಎಷ್ಟು ಜಾರಿಗೆ ಬಂದಿವೆ ಎಂದು ನಿಮಗನ್ನಿಸುತ್ತದೆ?

ಉತ್ತರ: ಇಂದಿರಾ ಗಾಂಧಿಯವರ ಆಳ್ವಿ ಕೆಯ ಕೊನೆಯ ದಿನಗಳಲ್ಲೂ ಹೆಚ್ಚು ಕಡಿಮೆ ಇಂತಹ ಸಂತುಲಿತ ವಾತಾವರಣವಿತ್ತು. ಬಾಬರಿ ಮಸೀದಿ ಧ್ವಂಸದ ಕಾಲಘಟ್ಟದಲ್ಲಿ ಕಾಂಗ್ರೆಸ್ ತನ್ನ ಸೆಕ್ಯುಲರ್ ಭಾವನೆಗಳಿಗೆ `ಮೃದು ಹಿಂದುತ್ವದ’ ಕಲಬೆರಕೆ ಮಾಡಿದ ಪರಿಣಾಮವಾಗಿ ಕೋಮುವಾದವು ಗರಿಕೆದರುವಂತೆ ಮಾಡಿತು. ಯಾವುದೇ ದೇವಳದ ಪಳಿಯುಳಿಕೆಯ ಮೇಲೆ ನಿಂತಿರದ ಬಾಬರಿ ಮಸೀದಿಯ ಕಬಳಿಕೆಗೆ ಕಾಂಗ್ರೆಸ್ ಹಸಿರು ನಿಶಾನೆ ತೋರಿಸಿ ತಮ್ಮದೇ ಅಜೆಂಡಾ ಹೇರಲು ಸಕಾಲಕ್ಕೆ ಹಿಂಜರಿಯಲಿಲ್ಲ. ಇದರಿಂದಾಗಿ ಬಹುತ್ವದ ಭಾರತದ ಸೆಕ್ಯುಲರ್ ಆತ್ಮವು ಮಸಕುಗೊಂಡು ನಾಗರಿಕ ಸಾಮರಸ್ಯವು ವಿಡಂಬನಾತ್ಮಕವಾಗಿ ಸಾರ್ವಜನಿಕ ಜಾಲ ತಾಣಗಳಲ್ಲಿ ವಿಮರ್ಶಿಸಲ್ಪಡುತ್ತಿದೆ. ಶ್ರೀಮಂತ, ಸಂತುಲಿತ ಭಾವನೆಯ ಹೃದಯಗಳು ಇಂದು ಹಗೆತನದ ಮಾತುಗಳ ವಿನಿಮಯದಲ್ಲಿ ನಿರತವಾಗಿವೆ. ಅಸ್ಥಿರವಾದ ಅನುಚಿತ ಭವಿಷ್ಯದತ್ತ ದೇಶವು ದಾಪುಗಾಲು ಹಾಕುತ್ತಿದೆ ಎಂಬುದರ ಬಗ್ಗೆ ಪರಿಶೀಲನೆ ನಡೆಸಬೇಕಾಗಿದೆ.

ಪ್ರಶ್ನೆ: ಇಂದು ಭಾರತವು ಎದುರಿಸುತ್ತಿರುವ ಅತಿದೊಡ್ಡ ಸವಾಲು ಯಾವುದು?

ಉತ್ತರ: ಈ ದೇಶವು ಎದುರಿಸುತ್ತಿರುವ ಸಮಸ್ಯೆ ನಿರುದ್ಯೋಗ, ದಾರಿದ್ರ‍್ಯ, ಬೆಲೆಯೇರಿಕೆ ಇತ್ಯಾದಿ ಎಂದೆನ್ನಬಹುದಾದರೂ ದ್ವೇಷಾತ್ಮಕ ಚಿಂತನೆಗಳು, ಬೆದರಿಕೆ ಪುಂಡಾಟಿಕೆಗಳು, ಕೋಮು ಪ್ರಚೋದಕ ಹೇಳಿಕೆಗಳು ಸಹಜತೆಯನ್ನು ಪಡೆಯುತ್ತಿರುವುದು ದೊಡ್ಡ ಅಪಾಯವಾಗಿದೆ. ನೈತಿಕತೆ, ಮಾನವೀಯತೆ, ಅನುಕಂಪ, ಸಹಿಷ್ಣುತೆಗಳಂತಹ ಮೌಲ್ಯಗಳನ್ನು ತನ್ನ ಆಡಳಿತ ಸೂತ್ರದ ಅಂಗವಾಗಿ ಇರಿಸದ ಪಕ್ಷವು ದೇಶವನ್ನಾಳುತ್ತಿರುವುದು ಖೇದಾಸ್ಪದ.

ಪ್ರಶ್ನೆ: ಭಾರತದ ಭವಿಷ್ಯದ ಬಗ್ಗೆ ನಿಮಗಿ ರುವ ಭಯ ಮತ್ತು ಭರವಸೆ ಏನು?

ಉತ್ತರ: ನಕಾರಾತ್ಮಕತೆಯ ಸ್ವರೂಪವನ್ನು ಪಡೆಯುತ್ತಿರುವ ರಾಜಕೀಯ ಪ್ರಕ್ರಿಯೆಗಳು ನಿರಾಶೆಯನ್ನುಂಟು ಮಾಡುತ್ತಿದ್ದರೂ, ಚುನಾವಣಾ ರಾಜಕೀಯದ ಮೂಲಕ ಬದಲಾವಣೆ ತರಬಹುದೆಂಬ ಆಶಾಭಾವನೆಯಿದೆ. ಆದರೂ ಅದರಲ್ಲಿ ಭ್ರಷ್ಟರು ಕೈಯಾಡಿಸುತ್ತಿರುವುದು ಭಯಾನಕವಾಗಿದೆ.

(80 ವರ್ಷ ಪ್ರಾಯ ಮೀರಿದವರನ್ನು ಸೈಲೆಂಟ್ ಜನರೇಶನ್ ಎಂದು ಕರೆಯಲಾಗುತ್ತದೆ.)