ರಾಜ್ಯ ಕಾಂಗ್ರೆಸ್ಸಿನಲ್ಲಿ ಕಸಿವಿಸಿ

0
278

✍️ ಅರಫಾ ಮಂಚಿ

ಕಾಂಗ್ರೆಸ್ ಹೈಕಮಾಂಡ್ ಇಷ್ಟೂ ದುರ್ಬಲನಾ? ಜನರು ಮಾತಾಡುತ್ತಿದ್ದಾರೆ. ಕರ್ನಾಟಕದ ಮುಖ್ಯಮಂತ್ರಿ ಕುರ್ಚಿಯ ಪೈಪೋಟಿಗೆ ಇಷ್ಟು ದಿನವಾಗಿಯೂ ಒಂದು ನಿರ್ಧಾರಕ್ಕೆ ಬರಲು ಅದಕ್ಕೆ ಸಾಧ್ಯವಾಗಿಲ್ಲ. ಅಂದರೆ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಸಿದ್ದರಾಮಯ್ಯರ ನಡುವಿನ ಪೈಪೋಟಿಯಿದು. ಆದ್ದರಿಂದ ಅದನ್ನು ಬಗೆಹರಿಸುವುದು ಹೈಕಮಾಂಡಿಗೂ ಅಷ್ಟು ಸುಲಭವಲ್ಲ. ನೆನಪಿಸಿಕೊಳ್ಳಿ ಯಡಿಯೂರಪ್ಪರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲು ಬಿಜೆಪಿಗೂ ಅಂದು ಎಷ್ಟು ಕಷ್ಟವಾಗಿತ್ತು. ಅತ್ತ ಮುಖ್ಯಮಂತ್ರಿ ಸ್ಥಾನದಿಂದ ಯಡಿಯೂರಪ್ಪ ಕೆಳಗಿಳಿದರೂ ಇತ್ತ ತನ್ನ ಮಗ ವಿಜಯೇಂದ್ರರನ್ನು ರಾಜ್ಯ ಬಿಜೆಪಿ ಅಧ್ಯಕ್ಷ ಮಾಡಿದರು. ಈಗ ಹೊರಗೆ ಕೂತು ಮಾತಾಡಿದಷ್ಟು ಹೈಕಮಾಂಡಿಗೆ ಬಿಕ್ಕಟ್ಟು ಬಗೆಹರಿಸುವುದು ಸುಲಭ ಅಲ್ಲ.

ರಾಜ್ಯದಲ್ಲಿ ಈ ರಾಜಕೀಯ ಕ್ರಾಂತಿ ಕಳೆದ ಸೆಪ್ಟೆಂಬರ್‌ಗಿಂತ ಮೊದಲೇ ಸದ್ದು ಮಾಡುತ್ತಿತ್ತು. ಈಗ ಅದು ಡಿಕೆಶಿ, ಸಿದ್ದರಾಮಯ್ಯರಿಂದ ಮುಖ್ಯಮಂತ್ರಿ ಕುರ್ಚಿಯನ್ನು ಕಿತ್ತುಕೊಳ್ಳುತ್ತಾರೆ ಎಂಬಲ್ಲಿಗೆ ಬಂದು ನಿಂತಿದೆ. ಎರಡು ನಾಯಕರ ಮುಂದಿನ ಯೋಜನೆ ಏನಿರಬಹುದು ಎಂಬ ಕುತೂಹಲ ರಾಜಕೀಯ ಪಡಸಾಲೆಯಲ್ಲಿದೆ. 2023ರಲ್ಲಿ ಕಾಂಗ್ರೆಸ್ ಅಧಿಕಾರ ಬಂತು. ಮುಖ್ಯಮಂತ್ರಿ ಸ್ಥಾನ ಸಿದ್ದರಾಮಯ್ಯ ಮತ್ತು ಡಿಕೆಶಿಯವರ ನಡುವೆ ಅರ್ಧರ್ಧ ಅವಧಿಗೆ ಹಂಚಿಕೆ ಆಗಲಿದೆ ಎಂಬ ಮಾತು ಚಲಾವಣೆಯಲ್ಲಿತ್ತು. ಪಾರ್ಟಿ ಉಸ್ತುವಾರಿ ಆಗಿದ್ದ ರಣದೀಪ್ ಸುರ್ಜೇವಾಲ ಇಂತಹ ಚರ್ಚೆಯೇ ಆಗಿಲ್ಲ ಎಂದು ಕೂಡಾ ಹೇಳಿದ್ದರು. ಈಗ ಸುರ್ಜೇವಾಲ ಸುಳ್ಳು ಹೇಳಿದರಾ ಎಂಬ ಸಂದೇಹ ಮೂಡುವಂತೆ ಕುರ್ಚಿ ಗಲಾಟೆ ಭುಗಿಲೆದ್ದಿದೆ. ಇಂತಹದ್ದೊಂದು ಒಪ್ಪಂದ ಆಗಿಲ್ಲದಿದ್ದರೆ ಡಿಕೆಶಿ ತನ್ನ ಪಾಳಿಯನ್ನು ಕೇಳುತ್ತಿರಲಿಲ್ಲ ಎಂದಿಟ್ಟುಕೊಳ್ಳಿ.

ಆದರೂ ಜನ ಕಾಂಗ್ರೆಸ್ ಅನ್ನು ಯಾಕೆ ಗೆಲ್ಲಿಸಿದ್ದಾರೆ ಎಂದು ಈ ಕಾಂಗ್ರೆಸ್ ನಾಯಕರು ಯಾಕೆ ಯೋಚಿಸುವುದಿಲ್ಲ. ಬಿಜೆಪಿಯ ಆಡಳಿತದಿಂದ ಜಿಗುಪ್ಸೆ ಪಟ್ಟು ಮತದಾರರು ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ಸನ್ನು ಅಧಿಕಾರಕ್ಕೆ ತಂದಿದ್ದಾರೆ. ಯಾಕೆ ತಂದರು? ಮತದಾರರು ಒಂದು ಉತ್ತಮ ಆಡಳಿತವನ್ನು ಕಾಂಗ್ರೆಸ್ಸಿನಿಂದ ಬಯಸಿದ್ದರು. ಇವರು ಮುಖ್ಯಮಂತ್ರಿ ಕುರ್ಚಿಗಾಗಿ ಕಿತ್ತಾಡುವುದನ್ನು ಮತದಾರ ಸಹಿಸಲ್ಲ ಎಂದು ಕೆಲವರು ಹೇಳುತ್ತಿದ್ದಾರೆ. ಎಲ್ಲಿಯಾದರೂ ಈ ಸರಕಾರ ಬಿದ್ದು ಹೋಗುವ ಸ್ಥಿತಿ ಬಂದರಂತೂ ಮತದಾರ ಕ್ಷಮಿಸಲ್ಲ. ಅಷ್ಟೇಕೆ ಮತ್ತೆಂದೂ ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೂ ಬರಲ್ಲ, ಬರೆದಿಟ್ಟುಕೊಳ್ಳಿ ಎಂದು ಇನ್ನೂ ಕೆಲವರು ಹೇಳುತ್ತಿದ್ದಾರೆ. ಇದಕ್ಕೆ ಅವರು ಬಿಹಾರದ ಎನ್‌ಡಿಎ ಗೆಲುವನ್ನು ಪುರಾವೆಯಾಗಿ ಕೊಡುತ್ತಿದ್ದಾರೆ.

ಈ ವರೆಗೆ ಸಿದ್ದರಾಮಯ್ಯ ಸರಕಾರ ಕಾಂಗ್ರೆಸ್ಸಿಗೆ ವೋಟು ಕೊಟ್ಟ ಮತದಾರನನ್ನು ನಿರಾಶರಾಗದಂತೆ ನೋಡಿಕೊಂಡಿತು. ರಾಹುಲ್ ಗಾಂಧಿ ಘೋಷಿಸಿದ್ದ ಗ್ಯಾರಂಟಿಯನ್ನು ಜನರಿಗೆ ಕೊಟ್ಟಿದೆ. ಯಾವಾಗ ಈ ಸರಕಾರ ಬೀಳುತ್ತೆ ಎಂದು ಬಿಜೆಪಿ ಕಾಯುತ್ತಿದೆ. ಇಂತಹ ಸ್ಥಿತಿಯಲ್ಲಿ ಕರ್ನಾಟಕದಲ್ಲಿ ಕುರ್ಚಿ ಕಸಿವಿಸಿ ಶುರುವಾಗಿದೆ.

ಬಿಜೆಪಿ ಆಪರೇಷನ್ ಕಮಲ ಮಾಡುತ್ತಾ?:

ಇಲ್ಲ, ಈ ವರೆಗೂ ಅದು ಕಾದು ನೋಡುವ ತಂತ್ರವನ್ನೇ ಅನುಸರಿಸುತ್ತಿದೆ ಎನ್ನಲಾಗುತ್ತಿದೆ.. ಆದ್ದರಿಂದ ಪ್ರತಿಪಕ್ಷ ನಾಯಕ ಆರ್. ಆಶೋಕ್ ಕಾಂಗ್ರೆಸ್ ಹೈಕಮಾಂಡಿನ ಕಾಲೆಳೆಯುವ ಕೆಲಸಕ್ಕಿಳಿದ್ದಾರೆ. ಮುಂದಿನ ಮುಖ್ಯಮಂತ್ರಿ ಯಾರು ಎಂದು ಕಾಂಗ್ರೆಸ್ ಹೈಕಮಾಂಡ್ ಘೋಷಿಸಬೇಕೆಂದು ಮಾಧ್ಯಮದವರ ಮುಂದೆ ಹೇಳುತ್ತಿದ್ದಾರೆ. ಡಿ.ಕೆ. ಶಿವಕುಮಾರ್ ಸಿಎಂ ಆಗುತ್ತಾರೋ ದಲಿತ ನಾಯಕರೊಬ್ಬರು ಸಿಎಂ ಆಗುತ್ತಾರೋ, ಎಂದು ಬೇಗ ಹೇಳಿ ಎಂದು ಮಾಧ್ಯಮದ ಮುಂದೆ ಹೇಳಿಕೊಂಡಿದ್ದಾರೆ. ಸಿದ್ದರಾಮಯ್ಯ ಬದಲಾವಣೆ ಗ್ಯಾರಂಟಿ ಎಂಬುದನ್ನು ಆರ್. ಅಶೋಕ್ ಮಾತು ಸೂಚಿಸುತ್ತಿದೆ. ಜೊತೆಗೆ ಡಿಕೆಶಿಯ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷೆಯಲ್ಲಿ ಅವರ ಪ್ರತಿಸ್ಪರ್ಧಿಗಳಿಗೂ ಹೈಕಮಾಂಡ್ ಮಣೆ ಹಾಕ ಬಹುದು ಎಂದು ಕಾಂಗ್ರೆಸ್ಸಿನ ಕಸಿವಿಸಿಗೆ ತನ್ನದೊಂದು ಕಹಳೆ ಊದಿದ್ದಾರೆ.

ಇದೇ ವೇಳೆ ಮಾಜಿ ಮುಖ್ಯಮಂತ್ರಿ ಡಿ. ಸದಾನಂದ ಗೌಡ ಕಾಂಗ್ರೆಸ್ ಸರಕಾರ ಬಿದ್ದರೆ ಸರಕಾರ ರಚಿಸಲು ಬಿಜೆಪಿ ಪ್ರಯತ್ನಿಸಲಿದೆ ಎಂದು ಹೇಳಿದ್ದಾರೆ. ಹಾಗಿದ್ದರೆ ಸಿದ್ದರಾಮಯ್ಯ ಸರಕಾರವನ್ನು ಬೀಳಿಸಿ ಡಿಕೆಶಿಗೆ ಸಿಗುವುದೇನು ಎಂಬ ಪ್ರಶ್ನೆಯೂ ಇದೆ. ಮಾತ್ರವಲ್ಲ ಆರ್. ಅಶೋಕ್ ಡಿಕೆಶಿ ಒಕ್ಕಲಿಗ ನಾಯಕನೇ ಅಲ್ಲ ಎನ್ನುತ್ತಾ ತಿರುಗಾಡುತ್ತಿದ್ದಾರೆ. ಅಂದರೆ, ಡಿಕೆಶಿಗೆ ಗಾಳ ಹಾಕಿ ಅವರನ್ನು ಕರೆತಂದು ಮುಖ್ಯಮಂತ್ರಿ ಮಾಡಲು ಬಿಜೆಪಿಗೂ ಇಷ್ಟ ಇಲ್ಲ. ಅವರ ಶಕ್ತಿ ಅಷ್ಟಿದೆ. ಒಮ್ಮೆ ಮುಖ್ಯ ಮಂತ್ರಿಯಾದರೆ ಡಿಕೆಶಿಯನ್ನು ಕದಲಿಸುವುದು ಕಷ್ಟ ಎಂದು ರಾಜ್ಯ ಬಿಜೆಪಿ ನಾಯಕರು ಹೈ ಕಮಾಂಡಿಗೂ ಕಿವಿ ಊದಿರಬಹುದು. ಡಿಕೆಶಿಗೆ ಬಿಜೆಪಿ ಮುಖ್ಯಮಂತ್ರಿ ಸ್ಥಾನ ಕೊಡುವುದಿಲ್ಲ ಎನ್ನುವುದನ್ನೇ ಇವೆಲ್ಲ ಬೆಳವಣಿಗೆಗಳು ಸೂಚಿಸುತ್ತಿದೆ.

ಡಿಕೆಶಿ ಪಟ್ಟು?:

ಡಿಕೆಶಿ ಪಟ್ಟಿನ ಮೇಲೆ ಪಟ್ಟು ಹಾಕುತ್ತಿದ್ದಾರೆ:

ಡಿಕೆಶಿ 200 ಪರ್ಸೆಂಟ್ ಮುಖ್ಯಮಂತ್ರಿ ಗ್ಯಾರಂಟಿ ಎಂದು ರಾಮನಗರ ಶಾಸಕ ಇಕ್ಬಾಲ್ ಹುಸೈನ್ ಹೇಳುತ್ತಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಬೆಂಗಳೂರಿಗೆ ಬಂದಿದ್ದರು. ನಾಯಕರೊಂದಿಗೆ ಮಾತಾಡಿ ಹೋಗಿದ್ದಾರೆ. ಆ ನಂತರ ಮುಖ್ಯ ಮಂತ್ರಿ ಬದಲಾವಣೆ ಖಚಿತ ಎಂಬ ಚರ್ಚೆಗಳು ಮಾಧ್ಯಮಗಳಲ್ಲಿ ಬಿರುಸನ್ನು ಪಡೆದುಕೊಂಡಿದ್ದು. ಡಿಕೆಶಿ ಕಾಂಗ್ರೆಸ್ಸಿಗೆ ಕೆಲವು ವಿಷಯಗಳನ್ನು ನೆನಪಿ ಸುತ್ತಿದ್ದಾರೆ. ಮಾತಿನ ಶಕ್ತಿ ಲೋಕ ಶಕ್ತಿ ಎನ್ನುತ್ತಿದ್ದಾರೆ. ಕೊಟ್ಟ ಮಾತು ಪಾಲಿಸಬೇಕೆಂದು ಕಾಂಗ್ರೆಸ್ಸಿಗೆ ಹೇಳುತ್ತಿದ್ದಾರೆ. ಮುಖ್ಯ ಮಂತ್ರಿ ಸ್ಥಾನಕ್ಕೆ ಈಗ ಎದ್ದಿರುವ ಬೇರೆ ಹುರಿಯಾಳುಗಳ ಬಗ್ಗೆ ಡಿಕೆಶಿ ಸ್ವಲ್ಪ ಕೋಪದಿಂದಲೇ ಮಾತಾಡಿದ್ದಾರೆ.

ನನ್ನ ಹಿಂದೆ ನಿಲ್ಲುವವರಿಗೆ ಒಂದು ಕುರ್ಚಿಯ ಮೌಲ್ಯ ತಿಳಿದಿಲ್ಲ. ಅವರಿಗೆ ಸಿಕ್ಕ ಯಾವುದಾದರೂ ಕುರ್ಚಿಯಲ್ಲಿ ಕೂತುಕೊಳ್ಳುವ ಬದಲು ಅಗತ್ಯ ವಿಲ್ಲದೆ ಅವರು ಎದ್ದು ನಿಂತಿದ್ದಾರೆ. ಡಿಕೆಶಿ ರೋಷ ಇನ್ನೂ ತಣಿದಿಲ್ಲ. ಅಂದರೆ ಬೆಂಗಳೂರಿಗೆ ಬಂದರೂ ಸಮಸ್ಯೆ ಬಗೆಹರಿಸಲು ಮಲ್ಲಿಕಾರ್ಜುನ ಖರ್ಗೆಗೆ ಆಗಿಲ್ಲ ಎಂದು ಇದನ್ನು ಅರ್ಥೈಸಬಹುದು. ಈಗ ಮಲ್ಲಿಕಾರ್ಜುನ ಖರ್ಗೆಯವರು ರಾಹುಲ್ ಗಾಂಧಿ ಸೋನಿಯಾ ಗಾಂಧಿಯವರು ಸಮಸ್ಯೆ ಬಗೆಹರಿಸಲಿದ್ದಾರೆ ಎಂದು ಸಮಸ್ಯೆಯ ಚೆಂಡು ಆಚೆ ಅಂಗಳಕ್ಕೆ ಒದ್ದಿದ್ದಾರೆ.

ಜೆಡಿಎಸ್ ಸುಮ್ಮಗಿದೆಯಾ?

ಇಷ್ಟರಲ್ಲೇ ಪಾರ್ಟಿಯ ಇಪ್ಪತ್ತೈದು ವರ್ಷ ಆಚರಿಸಿಕೊಂಡ ಜೆಡಿಎಸ್ ಸುಮ್ಮಗಿರಲ್ಲ ಬಿಡಿ. ಅವಕಾಶಕ್ಕೆ ಕಾಯುತ್ತಿದೆ. ಮೊದಲೇ ಅವಕಾಶವಾದಿ ರಾಜಕೀಯ ಮಾಡುತ್ತದೆ ಎಂಬ ಆರೋಪವೇ ಇದೆ. ಇತ್ತೀಚೆಗೆ ಜೆಡಿಎಸ್ ನಾಯಕರೊಬ್ಬರು ಡಿಕೆಶಿ 45 ಶಾಸಕರನ್ನು ಕರಕೊಂಡು ಬಂದು ಬಿಜೆಪಿ ಮತ್ತು ಜೆಡಿಎಸ್ ಬೆಂಬಲದಲ್ಲಿ ಮುಖ್ಯಮಂತ್ರಿ ಆಗುತ್ತಾರೆ ಎಂದಿದ್ದರು. ಸದ್ಯಕ್ಕೆ ಹಾಗೆ ಆಗಿಲ್ಲ. ಈವರೆಗೂ ಮುಖ್ಯಮಂತ್ರಿ ಬದಲಾವ ಣೆಯೂ ಆಗಿಲ್ಲ. ಈ ಸಾಧ್ಯತೆಯಲ್ಲಿ ಡಿಕೆಶಿಗೆ ಎಂತಹ ಲಾಭ ಇದೆ? ನೋಡಿ ಈ ಹಿಂದೊಮ್ಮೆ ಜೆಡಿಎಸ್ ಬಿಜೆಪಿಯೊಂದಿಗೆ ಸಖ್ಯ ಮಾಡಿಕೊಂಡು ಅಧಿಕಾರ ಪಡೆಯಿತು. ಅದರಿಂದ ಬೇಸತ್ತು ಜೆಡಿಎಸ್ ಬಿಟ್ಟು ಹೋದ ಒಂದು ವಿಭಾಗದ ಮತದಾರರು ಅದರತ್ತ ಮುಖ ಹಾಕಿಯೂ ನೋಡಿಲ್ಲ.

ಈ ಸತ್ಯ ಡಿಕೆಶಿಗೂ ಗೊತ್ತು. ಹೀಗಾಗಿ ಪಕ್ಷ ಒಡೆಯುವ ಕೆಲಸಕ್ಕೆ ಡಿಕೆಶಿ ಇಳಿಯಲ್ಲ. ಕಾಂಗ್ರೆಸ್ಸಿನಿಂದಲೇ ಮುಖ್ಯಮಂತ್ರಿಯಾಗಲು ಅವರು ಬಯಸುತ್ತಿದ್ದಾರೆ. ಜೆಡಿಎಸ್‌ಗೆ ಅಧಿಕಾರಬೇಕು. ಅದು ಸಿಗಬೇಕಾದರೆ ಯಾವ ಲೆಕ್ಕ ನೋಡಿದರೂ ಡಿಕೆಶಿ ಸ್ಟಂಟ್ ಮಾಡಬೇಕು. ಆ ಸ್ಟಂಟನ್ನೇ ಜೆಡಿಎಸ್ ಕಾಯುತ್ತಿರಲೂಬಹುದು. ಅದರ ಲೆಕ್ಕಾಚಾರ ಸರಿಯಾಗುವ ಲಕ್ಷಣಗಳು ಮಾತ್ರ ಗೋಚರಿಸುತ್ತಿಲ್ಲ. ಇನ್ನು ಕಾಂಗ್ರೆಸ್ಸಿನಿಂದ ಸಿಡಿದು ಹೋಗಿ ಡಿಕೆಶಿ ಮುಖ್ಯಮಂತ್ರಿಯಾಗತ್ತಾರೆ ಎಂದು ಇಟ್ಟುಕೊಳ್ಳಿ ಅಥವಾ ಮುಖ್ಯಮಂತ್ರಿ ಕುರ್ಚಿ ಕೇಳುತ್ತಿರುವ ಇತರ ಕಾಂಗ್ರೆಸ್ ನಾಯಕರೂ ಹೀಗೆ ಮಾಡಿದರೆನ್ನಿ. ಅವರಿಗೆ ಬಿಜೆಪಿಯ ಅಗತ್ಯವಿರುತ್ತದೆ ಕಾಂಗ್ರೆಸ್ಸಿನ ಮತದಾರನಿಗಿಲ್ಲ ಎಂದು ನಿಮಗೂ ಗೊತ್ತು. ಸದಾನಂದ ಗೌಡರ ವಾದ ಏನೇ ಇರಲಿ. ಖಂಡಿತಾ ಬಿಜೆಪಿ ಸೇರುವುದಾದರೆ ಡಿಕೆಶಿಯ ಅಗತ್ಯ ಖಂಡಿತ ಕಾಂಗ್ರೆಸ್ಸಿನ ವೋಟರ್ಸ್‌ಗಿಲ್ಲ. ಅವರಿಗೆ ಕಾಂಗ್ರೆಸ್ ಸರಕಾರ ಬೇಕು. ಅದಕ್ಕೆ ವೋಟು ಕೊಟ್ಟಿದ್ದಾರೆ.

ಕರ್ನಾಟಕ್ಕೂ ಎಸ್ಸೈಆರ್‌:

ಇವರು ಅಧಿಕಾರಕ್ಕಾಗಿ ಕುರ್ಚಿ ಆಟ ಆಡುತ್ತಿರಲಿ. ಇದರ ನಡುವೆಯೇ ವೋಟ್ ಕಟ್ಟರ್ ಎಸ್ಸೈಆರ್‌ ಕರ್ನಾಟಕದ ಮತದಾರನ ಮೇಲೆ ಬಂದೆರಗಲಿದೆ. ಈಗ ತಮಿಳ್ನಾಡು ನಂತರ ಕೇರಳ ಸುತ್ತಿ ಕರ್ನಾಟಕಕ್ಕೂ ಖಂಡಿತ ಅದು ಕಾಲಿಡುತ್ತದೆ. ಇವರು ಏನಂತ ತಿಳ್ಕೊಂಡಿದ್ದಾರೆ? ನಮ್ಮ ಸರಕಾರ ಕೋರ್ಟಿಗೆ ಹೋಗಿದೆ, ಅಲ್ಲಿಂದ ಏನಾದರೂ ಬದಲಾವಣೆ ಆಗಬಹುದು ಅಂತಾನಾ. ಬದಲಾವಣೆ ಮಣ್ಣಾಂಗಟ್ಟಿಯೂ ಇಲ್ಲ. ಈಗ ಕಾಂಗ್ರೆಸ್ ಸಹಿತ ಪಾರ್ಟಿಗಳು ಯೋಚಿಸಬೇಕಾದ್ದು ಎಸ್ಸೈಆರ್‌ ಕರ್ನಾಟಕಕ್ಕೂ ಬಂದರೆ ಏನಾಗಬಹುದು ಎಂದು ಆಗಿದೆ. ಬಿಹಾರದಂತೆ ಲಕ್ಷಾಂತರ ಮಂದಿ ವೋಟಿನ ಹಕ್ಕು ಕಳಕೊಳ್ಳುವ ಸಾಧ್ಯತೆ ಸೃಷ್ಟಿಯಾಗದಂತೆ ನೋಡಿಕೊಳ್ಳುವುದು ಹೇಗೆ ಎಂದು. ಅಂದರೆ ಮುಖ್ಯಮಂತ್ರಿ ಕುರ್ಚಿಯ ಕಟಿಪಿಟಿಯಲ್ಲಿ ಇನ್ನೆಂದೂ ಕಾಂಗ್ರೆಸ್ ಅಧಿಕಾರಕ್ಕೆ ಬರದಂತಹ ಖೆಡ್ಡವನ್ನು ಅದರ ನಾಯಕರು ಸ್ವಯಂ ತೋಡಿಕೊಳ್ಳುತ್ತಿದ್ದಾರಾ?

ಒಂದು ಉದಾಹರಣೆ ಎತ್ತಿ ಕೊಳ್ಳೋಣ, ಮಾಧ್ಯಮಂ. ಪತ್ರಕರ್ತ ಹಸನುಲ್ ಬನ್ನ ಹೇಳುತ್ತಾರೆ. ಬಿಹಾರದ ಪ್ರತಿಪಕ್ಷಗಳಲ್ಲಿ ಚುನಾವಣಾ ಆಯೋಗ ಯಾರೆಲ್ಲದ್ದರ ವೋಟು ಕಟ್ ಮಾಡಿದೆ ಎಂದು ಕೇಳಿದಾಗ ಉತ್ತರ ಇರಲಿಲ್ಲ ಎನ್ನುತ್ತಾರೆ. ಪ್ರತಿಪಕ್ಷಗಳಲ್ಲಿ ಯಾರಿಗೂ ಯಾವುದೂ ಸ್ಪಷ್ಟವಾಗಿ ಗೊತ್ತಿರಲಿಲ್ಲ. ಕಟ್ ಮಾಡಿದ ಮತ್ತು ಹೊಸದಾಗಿ ಸೇರಿಸಿದ ವೋಟುಗಳ ಲೆಕ್ಕ ಲೆಕ್ಕವೇ ಗೊತ್ತಿಲ್ಲ. ಅದರಲ್ಲೂ ಮುಖ್ಯ ಪ್ರತಿಪಕ್ಷ ಪಾರ್ಟಿ ಆರ್‌ಜೆಡಿ ಕಾಂಗ್ರೆಸ್ಸಿನ ನಾಯಕರಲ್ಲಿ ಉತ್ತರವಿಲ್ಲ ಅಂದರೆ. ಇವರಿಗೆ ಕುರ್ಚಿ ಬೇಕು ಅಧಿಕಾರ ಬೇಕು. ಅದಕ್ಕಾಗಿ ಪೂರ್ವ ಸಿದ್ಧತೆ ಏನು ಮಾಡಬೇಕೆಂದು ಗೊತ್ತಿಲ್ಲ. ಸೋಂಭೇರಿತರ ಕೂತರೆ ಗೆಲ್ಲಕ್ಕಾಗಲ್ಲ. ಎಲ್ಲ ರೀತಿಯ ಹೋಮ್ ವರ್ಕ್ ಮಾಡುವ ಬಿಜೆಪಿ ಗೆಲ್ಲುತ್ತದೆ. ಈ ಎರಡು ಪಾರ್ಟಿಗಳ ಚುನಾವಣೆ ಉಸ್ತುವಾರಿ ಇರುವ ಸ್ಥಳೀಯ ನಾಯಕರ ಬಳಿಯೂ ಅಂತಹ ಲೀಸ್ಟೇ ಇರಲ್ಲಿಲ್ಲ. ಬರೇ ಬೊಬ್ಬೆ ಹೊಡೆಯುವುದರಿಂದಲ್ಲ ರಾಹುಲ್ ಗಾಂಧೀ ಚುನಾವಣೆ ನಂತರ ಪತ್ರಿಕಾಗೋಷ್ಠಿ ಮಾಡುತ್ತಾರೆ. ಆದರೆ ಪ್ರತಿ ಪಕ್ಷ ಪಾರ್ಟಿಗಳು ಸಕ್ರಿಯವಾಗಿ ತೊಡಗಿಸಿಕೊಳ್ಳುವುದರಿಂದ ಪ್ರಯೋಜನವಿದೆ.

ಹಾಗಿದ್ದರೆ ಜವಾಬ್ದಾರ ಪ್ರತಿಪಕ್ಷಗಳು ಏನು ಮಾಡಬೇಕು:

ಈಗ ಕರ್ನಾಟಕವನ್ನೇ ಉದಾಹ ರಣೆಗಿಟ್ಟುಕೊಳ್ಳಿ. ಮೊದಲೇ ಹೇಳಿದಂತೆ ವೋಟು ಕಟ್ ಆಗದಂತೆ ಇಲ್ಲಿ ನೋಡಿಕೊಳ್ಳಬೇಕು. ಮನೆಮನೆಗೆ ತೆರಳಿ 2003ರ ವೋಟರ್ ಲೀಸ್ಟ್‌ನಲ್ಲಿಲ್ಲದ ಮತದಾರರನ್ನು ಹುಡುಕಿ ತೆಗೆಯಬೇಕು. ವೋಟರ್ ಪಟ್ಟಿಗೆ ಸೇರ್ಪಡೆಯಾಗಲು ಬೇಕಾದ ದಾಖಲೆಗಳನ್ನು ಸಂಗ್ರಹಿಸಲು ಮತದಾರನಾಗಿ ನೆರವಾಗಬೇಕು. ಎಸ್ಸೈಆರ್‌ ಬಿಎಲ್‌ಒಗಳು ದಾಖಲೆ ಕೇಳುವ ಮೊದಲೇ ಅದನ್ನು ಆನ್‌ಲೈನ್‌ನಲ್ಲಿ ಅಪ್ಲೈ ಮಾಡಬಹುದು. ಅಥವಾ ಬಿಎಲ್‌ಒಗಳ ಮುಂದೆ ಸಮರ್ಪಿಸಬಹುದು. ಬಿಹಾರದ ಪ್ರತಿಪಕ್ಷಪಾರ್ಟಿಗಳ ನಾಯಕರಂತೆ ಯರ‍್ಯಾರ ಹೆಸರು ಮತದಾರ ಪಟ್ಟಿಯಲ್ಲಿಲ್ಲ ಮತ್ತು ಇದೆ ಎಂದು ಗೊತ್ತಿಲ್ಲ ಎಂದು ಮುಖ ಸಿಂಡರಿಸುವುದರಿಂದ ಪ್ರಯೋಜನ ಇಲ್ಲ. ಅಥವಾ ಮತದಾರನಿಗೆ ವೋಟು ನಿರಾಕರಿಸಲ್ಪಟ್ಟ ಮೇಲಷ್ಟೇ ಗೊತ್ತಾಗುತ್ತದೆ ಎಂದು ಹೇಳಿ ಬಿಟ್ಟರೆ ಪ್ರತಿಪಕ್ಷಗಳ ವೋಟ್‌ಗಳೇ ಕಟ್‌ ಆಗುವ ಸಾಧ್ಯತೆ ಹೆಚ್ಚಿರುತ್ತದೆ. ಮಹಾರಾಷ್ಟ್ರ ಕರ್ನಾಟಕ ತಮಿಳ್ನಾಡು ಎಲ್ಲ ಕಡೆ ರಾಜಕೀಯ ಪಾರ್ಟಿಗಳು ಮತದಾರನ ವೋಟುಗಳನ್ನು ಉಳಿಸುವುದಕ್ಕೆ ಕೆಲಸ ಮಾಡ ಬೇಕಾಗುತ್ತದೆ. ಗೆಲುವನ್ನು ಬಯಸುವವರು ಈ ಕೆಲಸವನ್ನು ಈಗಿಂದಲೇ ಆರಂಭಿಸಬೇಕಾಗುತ್ತದೆ.

ಸಿದ್ದರಾಮಯ್ಯರ ಗೇಮ್‌ಪ್ಲಾನ್ ಬಿ:

ಹೀಗೊಂದು ಪ್ಲಾನ್ ಸಿದ್ದರಾಮಯ್ಯ ರಲ್ಲಿರಬಹುದಾ ಎಂಬ ಪ್ರಶ್ನೆ ನಂತರದ್ದು. ಆದರೆ, ಅಷ್ಟು ಸುಲಭದಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನವನ್ನು ಬಿಟ್ಟುಕೊಡುವುದಿಲ್ಲ ಎಂಬುದು ಈಗಾಗಲೇ ಈಗಿನ ಕಸಿವಿಸಿಯಲ್ಲಿ ಎಲ್ಲರಿಗೂ ಗೊತ್ತಾಗಿದೆ ಬಿಡಿ. ಹಾಗಿದ್ದರೆ ಕೆಲವು ಮೂಲಗಳ ವರದಿಯಿಂದ ಗೊತ್ತಾಗುವುದು. ಸಿದ್ದರಾಮಯ್ಯರನ್ನು ಬದಲಿಸಿದಾಗ ಮುಖ್ಯಮಂತ್ರಿ ಸ್ಥಾನಕ್ಕೆ ಹಲವು ಸ್ಪರ್ಧಿಗಳನ್ನು ಎದ್ದು ನಿಲ್ಲುವಂತೆ ಮಾಡಿದ್ದಾರೆ. ಇದು ಸಿದ್ದರಾಮಯ್ಯರ ಗೇಮ್‌ಪ್ಲಾನ್ ಬಿ ಆಗಿದೆ. ಇತ್ತೀಚೆಗೆ ಸಚಿವ ಸತೀಶ್ ಜಾರಕಿ ಹೊಳಿ ಮನೆಯಲ್ಲಿ ಸಿದ್ದರಾಮಯ್ಯರ ಬಣ ಸಭೆ ಸೇರಿತ್ತು. ಇಲ್ಲಿಂದ ಏನೋ ಪ್ಲಾನ್ ಆಗಿದೆ ಎಂಬ ಮಾತು ಸುದ್ದಿಯಾಗುತ್ತಿದೆ. ಸತೀಶ್ ಜಾರಕಿ ಹೊಳಿ ಮುಖ್ಯಮಂತ್ರಿ ಆಕಾಂಕ್ಷೆ ಆಗಿದ್ದಾರೆ. ಗೃಹ ಸಚಿವ ಜಿ. ಪರಮೇಶ್ವರ್ ಕೂಡ ದಲಿತ ಮುಖ್ಯಮಂತ್ರಿ ಕುರ್ಚಿ ಕೇಳುತ್ತಿದ್ದಾರೆ. ಅಂದರೆ ಅವರಿಗಾಗಿ ಮುಖ್ಯಮಂತ್ರಿ ಸ್ಥಾನ ಕೇಳುತ್ತಿದ್ದಾರೆ.

ಮುಂದೆ ಈ ಕುರ್ಚಿಗೆ ಎಷ್ಟು ಮಂದಿ ಎದ್ದು ಬರಬಹುದೋ ಗೊತ್ತಿಲ್ಲ. ಆದರೆ ಈ ಸಭೆಯ ನಂತರ ಸತೀಶ್ ಜಾರಕಿ ಹೊಳಿ ಸದ್ಯದ ಸಮಸ್ಯೆಯನ್ನು ಹೈ ಕಮಾಂಡ್ ಪರಿಹರಿಸುತ್ತದೆ ಎಂದು ಹೇಳಿದ್ದು ವರದಿಯಾಗಿದೆ.. ಸಿದ್ದರಾಮಯ್ಯ ಕೂಡ ಬೇಗ ಗೊಂದಲ ನಿಲ್ಲಿಸಿ ಎಂದು ಹೈಕಮಾಂಡಿನ ಮೊರೆ ಹೋಗಿದ್ದಾರೆ. ಈಗಿನ ಬಿಕ್ಕಟ್ಟು ಕಾಂಗ್ರೆಸ್ಸಿನ ಮುಂದೆ ದೊಡ್ಡ ಸಮಸ್ಯೆಯೂ ಹೌದು. ಗಟ್ಟಿ ನಿರ್ಧಾರವನ್ನು ಪ್ರಕಟಿಸುವ ಧೈರ್ಯ ಇದೆ ಎಂದು ಹೈ ಕಮಾಂಡ್ ತೋರಿಸಿಕೊಡಬೇಕಾಗಿದೆ. ಬಿಹಾರದ ಸೋಲು. ರಾಹುಲ್ ಗಾಂಧಿಯನ್ನು ಇಂಡಿಯ ಕೂಟದ ನೇತೃತ ಸ್ಥಾನದಿಂದ ಕೆಳಗಿಡಬೇಕೆಂಬ ಕೂಗು ಎದ್ದದ್ದು ಇದರ ಮಧ್ಯೆ ಕರ್ನಾಟಕದ ಕಸಿವಿಸಿ ಹೈಕಮಾಂಡನ್ನು ಒಂದಿಷ್ಟು ಧೃತಿಗೆಡಿಸಿರಬಹದು. ಒಂದು ವೇಳೆ ಮುಖ್ಯಮಂತ್ರಿ ಬದಲಾವಣೆ ಆದ್ರೂ ಬರುವ ವರ್ಷ ಆಗಲೂಬಹುದು. ಯಾಕೆಂದರೆ ಮುಂದಿನ ಬಜೆಟನ್ನೂ ನಾನೇ ಮಂಡಿಸುವುದು ಎಂದು ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಇದಕ್ಕೆ ಹೈಕಮಾಂಡ್ ಒಪ್ಪ ಬಹುದಾಗಿದೆ.

ಜನರು ಕಾಂಗ್ರೆಸ್ಸಿಗೆ ಯಾಕೆ ವೋಟು ಕೊಟ್ಟಿದ್ದಾರೆ?:

ಕಾಂಗ್ರೆಸ್ ನಾಯಕರಿಗೂ ಮುಖ್ಯವಾಗಿ ಗೊತ್ತಿರಬೇಕು. ಮುಖ್ಯಮಂತ್ರಿ ಕುರ್ಚಿಗೆ ಜಂಗೀ ಕುಸ್ತಿಗಿಳಿಯಲಿ ಎಂದು ಜನರು ವೋಟು ಕೊಟ್ಟು ಪಾರ್ಟಿಯನ್ನು ಗೆಲ್ಲಿಸಿ ಅಧಿಕಾರಕ್ಕೆ ತಂದಿಲ್ಲ. ಅಲ್ಲ, ಇರುವುದು ಒಂದು ಮುಖ್ಯಮಂತ್ರಿ ಕುರ್ಚಿ ಆ ಕುರ್ಚಿ ಎಲ್ಲರೂ ಬೇಕೆಂದರೆ ಹೇಗೆ? ಪಕ್ಷ ಕೊಟ್ಟ ಹೊಣೆಗಾರಿಕೆಯನ್ನು ಸ್ವೀಕರಿಸಿ ಜವಾಬ್ದಾರಿಯಿಂದ ನಿಭಾಯಿಸಿಕೊಂಡು ಹೋಗುವುದು ಕಾಂಗ್ರೆಸ್ಸಿಗರಿಗೆ ಮುಖ್ಯವಾಗಬೇಕಿತ್ತು. ಕಾಂಗ್ರೆಸನ್ನು ಜನರು ಅಧಿಕಾರಕ್ಕೆ ತಂದದ್ದು. ಅದರ ಸರಕಾರ ಇರಬೇಕು ಎಂಬುದಕ್ಕಾಗಿದೆ ಈ ಪರಿ ಜ್ಞಾನ ಕಾಂಗ್ರೆಸ್ ನಾಯಕರಲ್ಲಿ ಇರಬೇಕು.

ಮತದಾರರಿಗೆ ಕಾಂಗ್ರೆಸ್ಸಿನೊಳಗಿನ ಅಧಿಕಾರದ ಮೇಲಾಟ ಸ್ವಲ್ಪವೂ ಅಗತ್ಯವಿಲ್ಲ. ಕಾಂಗ್ರೆಸ್ ಸರಕಾರ ಮತದಾರ ಕೊಟ್ಟ ಅಧಿಕಾರವನ್ನು ಬಳಸಿ ಐದು ವರ್ಷ ಉತ್ತಮ ಆಡಳಿತ ಕೊಡಬೇಕೆಂದಷ್ಟೇ ಅವರು ಬಯಸುತ್ತಾರೆ. ಆದರೆ ಕಾಂಗ್ರೆಸ್ ಸರಕಾರ ಯಾವಾಗ ಬೀಳುತ್ತೋ ಎಂದು ಕಾದು ಕುಳಿತಿರುವ ಬಿಜೆಪಿ-ಜೆಡಿಎಸ್‌ಗೆ ಈ ಗೊಂದಲ ಕಸಿವಿಸಿ ಕಟಿಪಿಟಿಗಳಿಂದ ಈ ನಾಯಕರು ಔತಣ ಉಣ್ಣಿಸುತ್ತಿದ್ದಾರೆ. ಸರಕಾರವೇ ಬಿದ್ದು ಹೋದರೆ ನಷ್ಟ ಇವರಿಗಲ್ಲ. ಅದನ್ನು ಗೆಲ್ಲಿಸಿದ ಮತದಾರನಿಗೆ. ಇವರ ತಪ್ಪುಗಳು ಬಿಜೆಪಿಯನ್ನೋ ಎನ್ಡಿಎಎಯನ್ನೋ ಮತದಾರನ ಮಡಿಲಿಗೆ ಹಾಕುತ್ತದೆ. ಹೀಗಾಗುವುದು ಅಕ್ಷಮ್ಯವಾಗಿದೆ. ಕಾಂಗ್ರೆಸ್‌ನವರು ಬುದ್ಧಿ ಇಲ್ಲದವರಂತೆ ವರ್ತಿಸುವುದು ನಿಲ್ಲಿಸಬೇಕು. ಐದು ವರ್ಷ ಅಧಿಕಾರ ಕೊಟ್ಟ ಮತದಾರನನ್ನು ನಿರಾಶೆಗೊಳ ಪಡಿಸಬಾರದು.