ಆ ಬಾಲಕನನ್ನು ಕಂಡು ನಾನು ದಂಗಾದೆ

0
16069

ಸನ್ಮಾರ್ಗ ವಾರ್ತೆ

ಡಾ| ಅಬ್ದುರ್ರಹ್ಮಾನ್ ಅಸ್ಸುಮೈತ್ವು

ಕುವೈಟ್ ಸಮಾಜ ಸೇವಾ ಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿರುವ ಪ್ರಸಿದ್ಧ ಸಂದೇಶ ಪ್ರಚಾರಕರೂ ಆದ ಡಾ. ಅಬ್ದುರ್ರಹ್ಮಾನ್ ಅಸ್ಸುಮೈತ್ವ್ ತಮ್ಮ ಅನುಭವವನ್ನು ವಿವರಿಸುತ್ತಾರೆ.

ಆಫ್ರಿಕಾ ದೇಶಗಳ ಪ್ರವಾಸದಲ್ಲಿದ್ದ ಸಂದರ್ಭದಲ್ಲಿ ಓರ್ವ ಬಡ ಮಹಿಳೆಯ ದೀನರೋಧನ ಗಮನಕ್ಕೆ ಬಂತು. ನಮ್ಮ ತಂಡದಲ್ಲಿದ್ದ ವೈದ್ಯರೊಡನೆ ಅವರು ಸಹಾಯ ಯಾಚಿಸುತ್ತಿದ್ದರು. ತನ್ನ ಮಗನ ವಿದ್ಯಾಭ್ಯಾಸದ ವೆಚ್ಚವನ್ನು ಯಾವುದಾದರೂ ದಾನಿಗಳು ಭರಿಸುವಂತೆ ಮಾಡಬೇಕು. ತನ್ನ ಮಗನನ್ನು ಅಂತಹ ಪಟ್ಟಿಯಲ್ಲಿ ಸೇರಿಸಬೇಕು ಎಂಬುದು ಆಕೆಯ ಬಯಕೆಯಾಗಿತ್ತು. ಅವರು ಪದೇ ಪದೇ ವೈದ್ಯ ರೊಂದಿಗೆ ಅದನ್ನೇ ಪುನರಾವರ್ತಿಸುತ್ತಿದ್ದರು. ಮಹಿಳೆಯ ರೋದನ, ಬೇಡಿಕೆ ಮಿತಿ ಮೀರಿದಾಗ ನಾನು ವೈದ್ಯರೊಡನೆ ಈ ಕುರಿತು ವಿಚಾರಿಸಿದೆ. ಆಗ ವೈದ್ಯರು ಹೇಳಿದರು:

“ಆ ಮಗುವಿನ ಆರೋಗ್ಯ ಸ್ಥಿತಿ ಬಹಳ ಹದಗೆಟ್ಟಿದೆ. ಅಂತಹ ಮಗುವಿನ ಶಿಕ್ಷಣದ ವಿಷಯವನ್ನು ಆಕೆ ಮಾತನಾಡುತ್ತಿದ್ದಾಳೆ. ಆತ ಹೆಚ್ಚು ಕಾಲ ಬದುಕಲಾರ. ನಾವು ಬದುಕುವ ಸಾಧ್ಯತೆಯುಳ್ಳವರಿಗೆ ಪರಿಗಣನೆ ನೀಡಬೇಕಲ್ಲವೇ?

ನಾನು ಓರ್ವ ಅನುವಾದಕನೊಂದಿಗೆ ಆ ಮಹಿಳೆಯ ಮಗನಿಗೆ ದಿನಕ್ಕೆ ಎಷ್ಟು ಹಣ ಬೇಕಾದೀತೆಂದು ವಿಚಾರಿಸಿದಾಗ ಏನೋ ಅಲ್ಪ ಮೊತ್ತವೆಂದು ಅರಿವಾಯಿತು. ಬಳಿಕ ಆತನ ವಿದ್ಯಾಭ್ಯಾಸದ ಹೊಣೆ ಯನ್ನು ನಾನೇ ವಹಿಸುತ್ತೇನೆಂದು ಹೇಳಿದೆ. ಅವರು ಹೇಳಿದ ಮೊತ್ತ ನಮ್ಮ ದೇಶದ ಪೆಸ್ಸಿಯ ಬೆಲೆಗಿಂತಲೂ ಕಡಿಮೆಯಿತ್ತು.

ಸಹೋದರಿ, ನಿಮ್ಮ ಮಗನ ಶಿಕ್ಷಣ ವೆಚ್ಚವನ್ನು ನಾನೇ ವಹಿಸುತ್ತೇನೆಂದು ಹೇಳಿದಾಗ, ಆಕೆ ಸಂತೋಷಾತಿರೇಕದಿಂದ ನನ್ನ ಕೈಯನ್ನು ಚುಂಬಿಸಲು ಬಂದರೂ ನಾನು ಅವರನ್ನು ತಡೆದೆ. ಆ ಮಗುವಿನ ಒಂದು ವರ್ಷದ ಶಿಕ್ಷಣದ ವೆಚ್ಚದ ಚೆಕ್ ಅನ್ನು ನೀಡಿದೆ. ಅದು ಮುಗಿದರೆ ತನ್ನ ಕಚೇರಿಯನ್ನು ಸಂಪರ್ಕಿಸಬೇಕೆಂದು ಹೇಳಿದೆ. ಆ ಮಾತೆಯು ನವ ಮುಸ್ಲಿಮ್ ಆಗಿದ್ದಳು. ಅವರ ಮನಸ್ಸಿಗೆ ಸಾಂತ್ವನವೂ, ಸಹಾಯವೂ ಅನಿವಾರ್ಯವಾಗಿತ್ತು. ಆ ಮಗುವಿನ ಅನಾರೋಗ್ಯದಿಂದ ಅದು ಕೆಲವು ಎಣಿಕೆಯಷ್ಟು ದಿನ ಮಾತ್ರ ಬದುಕಬಹುದೆಂದು ಮನಸ್ಸು ಮಂತ್ರಿಸುತ್ತಿತ್ತು.

ದಿನಗಳುರುಳಿದಂತೆ ನಾನು ಆ ವಿಷಯ ಮರೆತು ಬಿಟ್ಟೆ. ಕೆಲವು ವರ್ಷಗಳ ಬಳಿಕ ನನಗೆ ಆ ಸ್ಥಳವನ್ನು ಭೇಟಿಯಾಗುವ ಅವಕಾಶ ಬಂತು. ಕಚೇರಿಯ ಕರ್ತವ್ಯದ ವೇಳೆ ಓರ್ವ ಮಹಿಳೆ ತನ್ನನ್ನು ಭೇಟಿಯಾಗಬಯಸಿರುವುದಾಗಿ ಗುಮಾಸ್ತ ಹೇಳಿದ. ಇದಕ್ಕಿಂತ ಮೊದಲೂ ಈಕೆ ನಿಮ್ಮನ್ನು ಕಾಣುವ ಬಯಕೆಯಿಂದ ಹಲವು ಬಾರಿ ಇಲ್ಲಿಗೆ ಬಂದಿದ್ದಳೆಂದೂ ಹೇಳಿದ. ನಾನು ಒಳಗೆ ಬರಲು ಸೂಚಿಸಿದಾಗ ಮಹಿಳೆಯು ಓರ್ವ ಬಾಲಕನೊಂದಿಗೆ ಒಳಬಂದಳು. ಅಪರಿಚಿತಳಾಗಿದ್ದ ಆ ಸ್ತ್ರೀ ಹೇಳಿದರು: “ಇದು ನನ್ನ ಮಗ ಅಬ್ದುರ್ರಹ್ಮಾನ್. ಕುರ್‍ಆನ್ ಸಂಪೂರ್ಣವಾಗಿ ಕಂಠಪಾಠ ಮಾಡಿದ್ದಾನೆ. ಧಾರಾಳ ಪ್ರವಾದಿ ವಚನಗಳು ಕಂಠಪಾಠವಿದೆ. ಓರ್ವ ಸಂದೇಶ ಪ್ರಚಾರಕನಾಗ ಬೇಕೆಂಬುದು ಆತನ ಬಯಕೆ.”

ಅವರ ಸರಾಗವಾದ ಮಾತು ಕೇಳಿ ನಾನು ಹೇಳಿದೆ-

“ನನಗೆ ನಿಮ್ಮ ಪರಿಚಯವಿಲ್ಲವಲ್ಲ.”

ಆಗ ಆ ಬಾಲಕ ಶುದ್ಧ ಅರಬಿಯಲ್ಲಿ ಹೇಳಲಾರಂಭಿಸಿದ-

“ಇಸ್ಲಾಮಿನ ಕಾರುಣ್ಯ ಇಲ್ಲದಿರುತ್ತಿದ್ದರೆ ನಾನು ಇಂದು ನಿಮ್ಮ ಮುಂದೆ ನಿಂತಿರುತ್ತಿರಲಿಲ್ಲ. ನನ್ನ ತಾಯಿ ವಿಷಯವನ್ನೆಲ್ಲಾ ವಿವರವಾಗಿ ನನಗೆ ತಿಳಿಸಿದ್ದಾರೆ. ನನ್ನ ಶೈಶವದಿಂದ ಬಾಲ್ಯದವರೆಗೂ ತಮ್ಮ ಸಹಾಯವೇ ನಮಗೆ ಆಧಾರವಾಗಿತ್ತು. ಇನ್ನು ಮುಂದೆ ನಾನು ನಿಮ್ಮೊಂದಿಗೆ ಸಂದೇಶ ಪ್ರಚಾರ ರಂಗದಲ್ಲಿ ಕೆಲಸಮಾಡಬೇಕೆಂದು ನಿರ್ಧರಿಸಿದ್ದೇನೆ. ಅರಬಿಯೊಂದಿಗೆ ಆಫ್ರಿಕನ್ ಭಾಷೆಯನ್ನೂ ಕರಗತಗೊಳಿಸಿಕೊಂಡಿದ್ದೇನೆ. ಅದಕ್ಕೆ ಪ್ರತಿಫಲವಾಗಿ ಆಹಾರ ನೀಡಿದರೆ ಸಾಕು. ನನ್ನ ಕುರ್‍ಆನ್ ಪಾರಾಯಣ ತಾವೊಮ್ಮೆ ಆಲಿಸಬೇಕು.
ಬಳಿಕ ಆ ಬಾಲಕ ಅಲ್‍ಬಕರದ ಹಲವು ಸೂಕ್ತಗಳನ್ನು ಸುಶ್ರಾವ್ಯ ಕಂಠದಿಂದ ಓದಿ ಕೇಳಿಸಿದ. ಅವನ ಸುಂದರ ನಯನಗಳು ತನ್ನ ಬೇಡಿಕೆಯನ್ನು ಈಡೇರಿಸಲು ಭಿನ್ನವಿಸುವಂತೆ ತೋರಿತು.

ಹಳೆ ನೆನಪಿನ ಬುತ್ತಿಯಿಂದ ಹೆಕ್ಕಿಕೊಂಡು ನಾನು ಕೇಳಿದೆ:

ಸ್ಪಾನ್ಸರ್ ಶಿಪ್ ನಿರಾಕರಿಸಲಾಗಿದ್ದ ಆ ಬಾಲಕ ನೀನಾ? ಅವನು ಹೇಳಿದ:

“ಹೌದು, ನನ್ನನ್ನು ತಮಗೆ ಪರಿಚಯ ಪಡಿಸಬೇಕೆಂಬುದು ಅಮ್ಮನ ಇಚ್ಛೆಯಾಗಿತ್ತು. ತಮ್ಮ ಹೆಸರನ್ನೇ ಅವರು ನನಗೆ ಇಟ್ಟಿದ್ದಾರೆ.”
ಇದನ್ನು ಕೇಳಿದಾಗ ನನ್ನ ಪಾದಗಳು ಕುಸಿದವು. ಸರ್ವಶಕ್ತನಾದ ಅಲ್ಲಾಹನಿಗೆ ಸಾಷ್ಟಾಂಗವೆಗಿ ಪ್ರಾರ್ಥಿಸಿದೆ.

“ಅಲ್ಲಾಹನೇ! ನೀನು ಎಷ್ಟು ಉದಾರಿ. ಒಂದು ತುಚ್ಛ ಸಂಖ್ಯೆಯಿಂದ ಓರ್ವನ ಪ್ರಾಣ ಉಳಿಸಿದೆ. ಓರ್ವ ಇಸ್ಲಾಮೀ ಪ್ರಚಾರಕನನ್ನು ಕೊಡುಗೆಯಿತ್ತೆ. ನಾವೆಷ್ಟು ಹಣವನ್ನು ಪೋಲು ಮಾಡುತ್ತಿದ್ದೇವೆ. ಬಳಿಕ ಈ ಬಾಲಕ ಆಫ್ರಿಕಾದ ಅತ್ಯಂತ ಪ್ರಸಿದ್ಧನಾದ ಸಂದೇಶ ಪ್ರಚಾರಕನಾಗಿ ಮಾರ್ಪಟ್ಟ.

ಸ್ವರ್ಗವು ಅದೆಷ್ಟು ಸುಂದರ! ಅದನ್ನು ಗಳಿಸುವುದು ಎಷ್ಟು ಸುಲಭ! ಒಂದು ಖರ್ಜೂರದ ತುಂಡಿನಿಂದಾದರೂ ನರಕದಿಂದ ರಕ್ಷಿಸಿಕೊಳ್ಳಿ.

ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.