ಸನ್ಮಾರ್ಗ ವಾರ್ತೆ
ಟೆಹರಾನ್ (ಇರಾನ್), ಜು. 16: ಚಬಹಾರ್-ಝಹೆದನ್ ರೈಲ್ವೆ ಯೋಜನೆಯಿಂದ ಭಾರತವನ್ನು ಕೈಬಿಡಲಾಗಿದೆ ಎಂಬ ಭಾರತೀಯ ಮಾಧ್ಯಮಗಳ ವರದಿಯನ್ನು ಇರಾನ್ ನಿರಾಕರಿಸಿದೆ. ಅಲ್ಲದೇ, ಚಬಹಾರ್ನಲ್ಲಿನ ಇರಾನ್-ಭಾರತ ಸಹಕಾರಕ್ಕೂ ಅಮೆರಿಕ ವಿಧಿಸಿರುವ ದಿಗ್ಬಂಧನಗಳಿಗೂ ಸಂಬಂಧವಿಲ್ಲ ಎಂದು ಇರಾನ್ ಬಂದರುಗಳು ಮತ್ತು ಸಮುದ್ರತೀರ ಸಂಘಟನೆಯ ಸದಸ್ಯರಲ್ಲೊಬ್ಬರಾದ ಫರ್ಹಾದ್ ಮೊಂಟಾಸಿರ್ ಹೇಳಿದ್ದಾರೆ.
ಭಾರತೀಯ ಮಾಧ್ಯಮಗಳ ವರದಿಗಳನ್ನು ಅಲ್ಲಗಳೆದ ಅವರಯ; “ಈ ವಿಷಯವು ಸಂಪೂರ್ಣ ಸುಳ್ಳು. ಚಬಹಾರ್-ಝಹದನ್ ರೈಲ್ವೆ ಯೋಜನೆಗೆ ಸಂಬಂಧಿಸಿ ಇರಾನ್ ಭಾರತದೊಂದಿಗೆ ಯಾವುದೇ ಒಪ್ಪಂದಕ್ಕೆ ಸಹಿ ಹಾಕಿಲ್ಲ” ಎಂದು ಹೇಳಿರುವುದಾಗಿ ‘ಅಲ್ ಜಝೀರಾ’ ವರದಿ ಮಾಡಿದೆ
“ಇರಾನ್ ಭಾರತದೊಂದಿಗೆ ಕೇವಲ ಎರಡು ಒಪ್ಪಂದಗಳಿಗೆ ಸಹಿ ಹಾಕಿದ್ದು; ಬಂದರಿನ ಯಂತ್ರೋಪಕರಣಗಳು ಮತ್ತು ಸಲಕರಣೆಗಳಿಗೆ ಸಂಬಂಧಿಸಿ ಹಾಗೂ ಭಾರತದ 150 ಮಿಲಿಯನ್ ಡಾಲರ್ (ಸುಮಾರು 1,130 ಕೋಟಿ ರೂಪಾಯಿ) ಹೂಡಿಕೆಗೆ ಸಂಬಂಧಿಸಿದೆ” ಫರ್ಹಾದ್ ಮೊಂಟಾಸಿರ್ ಹೇಳಿದ್ದಾರೆ.
ಚಬಹಾರ್ ಬಂದರಿನಲ್ಲಿ ನಾವು ಭಾರತೀಯ ಹೂಡಿಕೆಗಳ ಪಟ್ಟಿಯನ್ನು ಹೊಂದಿದ್ದೇವೆ, ಅದರಲ್ಲಿ ಚಬಹಾರ್ ರೈಲ್ವೆ ಮೂಲಸೌಕರ್ಯ ಮತ್ತು ರೈಲ್ವೆಯ ವಿಷಯವೂ ಸೇರಿದೆ, ಆದರೆ ಮಾತುಕತೆಯ ಸಮಯದಲ್ಲಿ ಈ ಕುರಿತು ಒಪ್ಪಂದವಾಗಿಲ್ಲ ಎಂದು ಅವರು ಹೇಳಿದರು.
“ಭಾರತದ ಸಹಭಾಗಿತ್ವವಿಲ್ಲದೇ ದೀರ್ಘಕಾಲ ಸ್ಥಗಿತಗೊಂಡ ರೈಲು ಯೋಜನೆಯನ್ನು ಮುಂದುವರಿಸಲು ಇರಾನಿನ ಸರ್ಕಾರ ನಿರ್ಧರಿಸಿದೆ” ಎಂದು ಭಾರತದ ಪ್ರಮುಖ ಇಂಗ್ಲೀಷ್ ದಿನ ಪತ್ರಿಕೆಯು ಮಂಗಳವಾರ ವರದಿ ಮಾಡಿದರ ಬೆನ್ನಿಗೆ ಈ ವಿಷಯವನ್ನು ಇರಾನ್ ನಿರಾಕರಿಸಿದೆ ಎಂದು ಅಲ್ ಜಝೀರಾ ವರದಿಯು ಉಲ್ಲೇಖಿಸಿದೆ.
ಕಳೆದ ವಾರ ಚಬಹಾರ್-ಜಹೇದಾನ್ ರೈಲು ಮಾರ್ಗಕ್ಕಾಗಿ ಟ್ರ್ಯಾಕ್ ಹಾಕುವ ಸಮಾರಂಭ ನಡೆಯಿತು. ಇದು ಅಂತಿಮವಾಗಿ ಅಫ್ಘಾನ್ ಬದಿಯಲ್ಲಿರುವ ಜರಂಜ್ಗೆ ವಿಸ್ತರಿಸುತ್ತದೆ, ಇದು ಮುಕ್ತ ವ್ಯಾಪಾರ ಮತ್ತು ಚಲನೆಯನ್ನು ಶಕ್ತಗೊಳಿಸುತ್ತದೆ.
ಭಾರತೀಯ ಕನ್ಸಲ್ಟೆನ್ಸಿ IRCON ಯೋಜನೆಗೆ ಎಲ್ಲಾ ಸೇವೆಗಳು ಮತ್ತು ಹಣವನ್ನು ಒದಗಿಸುವುದಾಗಿ ವಾಗ್ದಾನ ಮಾಡಿತ್ತು. ಎಂಬುದಾಗಿಯೂ ಭಾರತೀಯ ಪತ್ರಿಕೆಗಳು ವರದಿ ಮಾಡಿದ್ದವು.
ವಾಸ್ತವವಾಗಿ, 2012ರ ಇರಾನ್ ಫ್ರೀಡಂ ಆ್ಯಂಡ್ ಕೌಂಟರ್- ಪ್ರೋಲಿಫರೇಶನ್ ಕಾಯ್ದೆ (ಐಎಫ್ಸಿಎ)ಅನ್ವಯ, ಚಬಹಾರ್ ಬಂದರು ಯೋಜನೆಗಳಿಗೆ ಸಂಬಂಧಿಸಿ ಭಾರತಕ್ಕೆ ವಿನಾಯಿತಿ ನೀಡಲು 2018ರಲ್ಲಿ ಅಮೆರಿಕ ಒಪ್ಪಿಗೆ ಸೂಚಿಸಿತ್ತು.
ಇರಾನ್ನ ಅಧ್ಯಕ್ಷ ಹಸನ್ ರೂಹಾನಿ ಈ ಬಂದರನ್ನು ಇರಾನ್ನ ಆರ್ಥಿಕ ಭವಿಷ್ಯವನ್ನು ರೂಪಿಸುವಲ್ಲಿ ಪ್ರಮುಖ ಭಾಗವೆಂದು ಬಣ್ಣಿಸಿದ್ದಾರೆ.
ಓದುಗರೇ, ಸನ್ಮಾರ್ಗ ಫೇಸ್ಬುಕ್ ಪೇಜ್ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












