✍️ ಸಲೀಮ್ ಬೋಳಂಗಡಿ
“ಜಿನ್ನ್ ಮತ್ತು ಮಾನವರನ್ನು ನನ್ನ ಇಬಾದತ್ಗೆ ಹೊರತಾಗಿ ಬೇರಾವ ಉದ್ದೇಶಕ್ಕಾಗಿಯೂ ಸೃಷ್ಟಿಸಲಿಲ್ಲ.” (ಅದ್ದಾರಿಯಾತ್: 56) ಎಂದು ಅಲ್ಲಾಹನು ಪವಿತ್ರ ಕುರ್ಆನಿನಲ್ಲಿ ಸ್ಪಷ್ಟವಾಗಿ ಹೇಳಿರುತ್ತಾನೆ. ಆದ್ದರಿಂದ ಮನುಷ್ಯನ ಸೃಷ್ಟಿಯ ಪ್ರಮುಖ ಉದ್ದೇಶವೇ ಅಲ್ಲಾಹನ ಆರಾಧನೆಯಾಗಿದೆ. ಆ ಆರಾಧನೆಯ ಮಾರ್ಗದರ್ಶಕರಾಗಿ ಅಲ್ಲಾಹನು ಪ್ರವಾದಿಗಳನ್ನು ನೇಮಕ ಮಾಡಿದನು. ಅವರಿಗೆ ದೇವವಾಣಿಗಳನ್ನು ಅನುಗ್ರಹಿಸಿದನು. ಹೀಗೆ ಪ್ರವಾದಿಗಳ ಮೂಲಕ ಅಲ್ಲಾಹನು ಈ ಜಗತ್ತಿನ ಸೃಷ್ಟಿಯ ಉದ್ದೇಶವನ್ನು ಜನರಿಗೆ ಮನಗಾಣಿಸಿದನು. ಜಿನ್ನ್ ಮತ್ತು ಮನುಷ್ಯರು ಅಲ್ಲಾಹನ ಮುಂದೆ ಮಾತ್ರ ಶಿರಬಾಗಿ ಆತನಿಗೆ ಕೃತಜ್ಞರಾಗಿರಬೇಕೆಂಬುದಾಗಿದೆ. ಅಲ್ಲಾಹನಿಗೆ ವಿರುದ್ಧವಾಗಿ ಇತರರ ಆಜ್ಞಾಪಾಲನೆ ಮಾಡದಿರುವುದು. ಅಲ್ಲಾಹನ ಆದೇಶಗಳನ್ನು ಶಿರಸಾ ಪಾಲಿಸುವುದಾಗಿದೆ. ಆತನೇ ವಿಶ್ವದ ಸಾರ್ವಭೌಮ. ಇತರ ಯಾರನ್ನೂ ಆತನಿಗೆ ಸಮನಾಗಿ ಕಾಣದಿರುವುದು. ಪ್ರವಾದಿಗಳ ಶಿಕ್ಷಣದ ತಾತ್ಪರ್ಯವೂ ಅದೇ ಆಗಿದೆ. ಅದು ನಮ್ಮ ಬದುಕಿನ ಎಲ್ಲಾ ರಂಗಗಳಲ್ಲೂ ಪ್ರತಿಬಿಂಬಿಸಬೇಕು.
ಅಲ್ಲಾಹನ ಆರಾಧನೆ ಎಂಬುದು ಕೇವಲ ಮಸೀದಿಗಳಿಗೆ ಸೀಮಿತವಾಗಿರುವುದಲ್ಲ. ನಮ್ಮ ವ್ಯಾಪಾರ, ನಮ್ಮ ಮದುವೆ, ನಮ್ಮ ಕುಟುಂಬ ವ್ಯವಹಾರ, ನಮ್ಮ ಸಂಪತ್ತು, ನಮ್ಮ ಗಳಿಕೆ, ನಮ್ಮ ನಿದ್ರೆ, ಹೀಗೆ ಬದುಕಿನ ಎಲ್ಲಾ ರಂಗಗಳಲ್ಲಿಯೂ ಅಲ್ಲಾಹನ ಧರ್ಮದ ಛಾಯೆಯು ಗೋಚರಿಸಬೇಕು. ಅಂದರೆ ಅವೆಲ್ಲವೂ ಅಲ್ಲಾಹನ ಮುಂದೆ ಪ್ರತಿಫಲಾರ್ಹವಾಗಬೇಕು. ಹಾಗಿದ್ದರೆ ಅದು ಆರಾಧನೆಯ ಪ್ರತಿಫಲಕ್ಕೆ ಅರ್ಹವಾಗುತ್ತದೆ. ಅಲ್ಲಾಹನ ಪ್ರವಾದಿವರ್ಯರ(ಸ) ಸಂದೇಶದ ತಳಹದಿಯಲ್ಲಿ ಬದುಕು ಸವೆಸುತ್ತಾ, ಪರಲೋಕದ ಯಶಸ್ಸಿನ ಮೇಲೆ ಪ್ರಾಮಾಣಿಕವಾಗಿ ಭರವಸೆಯಿಟ್ಟು ಮುಂದುವರಿದಾಗ ಉದ್ದೇಶ ಸಾಫಲ್ಯವಾಗುತ್ತದೆ.
ಮೊದಲನೆಯದಾಗಿ ನಾವು ನಮ್ಮ ಗಳಿಕೆಯ, ನಮ್ಮ ಸಂಪಾದನೆಯ ಬಗ್ಗೆ ಆತ್ಮಾವಲೋಕನ ಮಾಡೋಣ. ನಮ್ಮ ಸಂಪಾದನೆಯು ಈ ಮಟ್ಟದಲ್ಲಿದೆಯೇ, ನಮ್ಮ ಪರಿಶ್ರಮ ಅಲ್ಲಾಹನ ಪ್ರೀತಿಗೆ ಪಾತ್ರವಾಗುವಂತಿದೆಯೇ? ಅದರಲ್ಲಿ ಪ್ರಾಮಾಣಿಕತೆ, ಸತ್ಯ, ನ್ಯಾಯ ಅಡಕವಾಗಿದೆಯೇ ಎಂಬ ಬಗ್ಗೆ ಸತ್ಯವಿಶ್ವಾಸಿಯು ಅಗತ್ಯವಾಗಿ ಪರಿಶೀಲಿಸುತ್ತಿರಬೇಕು. ಅದಕ್ಕೇನಾದರೂ ಚ್ಯುತಿ ಬಂದರೆ ನಮ್ಮ ಇತರ ಎಲ್ಲಾ ಆರಾಧನಾ ಕರ್ಮಗಳು ವ್ಯರ್ಥವಾಗಿ ನಿಷ್ಫಲವಾಗುವ ಸಾಧ್ಯತೆಯಿದೆ. ನಮ್ಮ ಲೌಕಿಕ ಬದುಕಿನಲ್ಲಿ ದೇವಭಯದಿಂದ ಹರಾಮ್ ಸಂಪಾದನೆಯಿಂದ ದೂರವಿದ್ದು ಧರ್ಮಬದ್ಧವಾದ ಸಂಪಾದನೆಗಾಗಿ ಮಾಡುವ ತ್ಯಾಗವು ಆರಾಧನೆಯ ಸಾಲಿಗೆ ಸೇರುತ್ತದೆ. ಅದು ಪುಣ್ಯ ಕರ್ಮವಾಗಿ ನಮ್ಮ ಒಳಿತಿನ ದಾಖಲೆಗೆ ಸೇರುತ್ತದೆ. ನಿಷಿದ್ಧ ಸಂಪಾದನೆ, ಅಥವಾ ಬಡ್ಡಿ ವ್ಯವಹಾರಗಳಿಂದ ಅಂತರ ಕಾಯ್ದುಕೊಂಡು ಮಾಡುವ ವ್ಯವಹಾರಗಳೂ ಈ ಸಾಲಿಗೆ ಸೇರುತ್ತವೆ. ದೇವಭಯದ ಕಾರಣದಿಂದ ಮಾರಕ ರೋಗಕ್ಕೆ ಕಾರಣವಾಗುವ ಪದಾರ್ಥಗಳ ಮಾರಾಟದಿಂದ ದೂರವಿದ್ದು ಅದರಲ್ಲಿ ಬರುವಂತಹ ದೊಡ್ಡ ಮಟ್ಟದ ಲಾಭವನ್ನು ನಿರ್ಲಕ್ಷಿಸಿ ಸಿಕ್ಕಿದ್ದರಲ್ಲಿ ತೃಪ್ತಿಪಡುವ ತ್ಯಾಗ ಕೂಡಾ ಈ ಸಾಲಿಗೆ ಸೇರುತ್ತದೆ. ಅದರಲ್ಲಿ ಸಮಾಜದ ಜನರ ಹಿತದೃಷ್ಟಿ ಅಡಕವಾಗಿದೆಯೆಂಬ ವಾಸ್ತವ ಸತ್ಯವನ್ನು ಮನಗಾಣಬೇಕು.
ಪ್ರವಾದಿ(ಸ)ರವರು ಹೇಳಿದರು: “ಹಲಾಲ್ (ಧರ್ಮ ಸಮ್ಮತ) ಸ್ಪಷ್ಟವಾಗಿದೆ. ಹರಾಮ್ (ನಿಷಿದ್ಧ) ಸ್ಪಷ್ಟವಾಗಿದೆ. ಇವೆರಡರ ಮಧ್ಯೆ ಸಂಶಯಾಸ್ಪದ ವಸ್ತುಗಳಿವೆ. ಯಾರು ಸಂಶಯಾಸ್ಪದ ವಸ್ತುಗಳಿಂದ ದೂರ ಉಳಿದನೋ ಅವನು ತನ್ನ ಧರ್ಮ ಮತ್ತು ಮಾನವನ್ನು ರಕ್ಷಿಸಿಕೊಂಡನು. ಯಾರು ಸಂಶಯಾಸ್ಪದ ವಸ್ತುಗಳಲ್ಲಿ ಸಿಲುಕಿಕೊಂಡನೋ ಅವನು ನಿಷಿದ್ಧತೆಯೆಡೆಗೆ ತಲುಪಿಯೇ ತೀರುವನು. ನಿಷಿದ್ಧ ಹುಲ್ಲುಗಾವಲಿನ ಪಕ್ಕದಲ್ಲಿ ತನ್ನ ಜಾನುವಾರುಗಳನ್ನು ಮೇಯಿಸುವವನಂತೆ. ಅವನ ಜಾನುವಾರು ಹುಲ್ಲುಗಾವಲಿಗೆ ನುಗ್ಗಿ ಮೇಯುವ ಸಂಭವವಿದೆ. ಎಚ್ಚರಿಕೆ, ಪ್ರತಿಯೊಬ್ಬ ರಾಜನಿಗೂ ಒಂದು ನಿಷಿದ್ಧ ಹುಲ್ಲುಗಾವಲಿರುತ್ತದೆ. ಎಚ್ಚರಿಕೆ, ಅಲ್ಲಾಹನ ನಿಷಿದ್ಧ ಹುಲ್ಲುಗಾವಲು ಅವನ ನಿಷೇಧಗಳಾಗಿವೆ. (ನಿಷಿದ್ಧಗೊಳಿಸಿದಂತಹ ವಸ್ತುಗಳು) ತಿಳಿಯಿರಿ, ಮನುಷ್ಯನ ಶರೀರದಲ್ಲಿ ಒಂದು ಮಾಂಸದ ತುಂಡಿದೆ. ಅದು ಸರಿಯಾದರೆ ಇಡೀ ದೇಹ ಸರಿಯಾಗಿರುತ್ತದೆ. ಅದು ಕೆಟ್ಟು ಹೋದರೆ ಇಡೀ ದೇಹ ಕೆಟ್ಟು ಹೋಗುತ್ತದೆ, ನೆನಪಿಡಿ. ಅದು(ಮಾಂಸದ ತುಂಡು) ಹೃದಯವಾಗಿದೆ” (ವರದಿ: ನುಅ್ಮಾನ್ ಬಿನ್ ಬಶೀರ್(ರ) – ಬುಖಾರಿ, ಮುಸ್ಲಿಮ್). ಧರ್ಮ ಸಮ್ಮತ ಯಾವುದು, ಧರ್ಮ ನಿಷಿದ್ಧ ಯಾವುದು ಎಂಬುದು ಸ್ಪಷ್ಟವಾಗಿರುವಾಗ ಆ ಮೇರೆಯನ್ನು ಮೀರುವುದು ಅಲ್ಲಾಹನ ಆದೇಶದ ಉಲ್ಲಂಘನೆಯಾಗಿದೆ.
ಪ್ರವಾದಿ(ಸ) ಹೇಳಿರುವರು: “ಯಾರು ಪರಿಶುದ್ಧ ಸಂಪಾದನೆಯಲ್ಲೇ ದಿನಕಳೆದನೋ ಅವನು ತನ್ನ ಚರ್ಯೆಯನ್ನು ಪಾಲಿಸಿದನು. ಜನರನ್ನು ತನ್ನ ಕೇಡಿನಿಂದ ಸುರಕ್ಷಿತವಾಗಿರಿಸಿದವನು ಸ್ವರ್ಗ ಪ್ರವೇಶಿಸುವನು.” ಆಗ ಜನರು “ಈಗಂತೂ ಅಂತಹವರು ಅನೇಕರಿದ್ದಾರೆ” ಎಂದರು. ಆಗ ಪ್ರವಾದಿ(ಸ)ರವರು “ನನ್ನ ಬಳಿಕವೂ ಅಂತಹ ಜನರು ಇರುವರು” ಎಂದು ಹೇಳಿದರು. (ತಿರ್ಮಿದಿ) ಪ್ರವಾದಿ(ಸ)ರವರು ಹೀಗೂ ಹೇಳಿರುವರು: “ಸತ್ಯಸಂಧನೂ ಪ್ರಾಮಾಣಿಕನೂ ಆದ ವ್ಯಾಪಾರಿಯು ನಿರ್ಣಾಯಕ ದಿನದಂದು ಪ್ರವಾದಿಗಳ, ಸತ್ಯಸಂಧರ ಮತ್ತು ಹುತಾತ್ಮರ ಜೊತೆಗಾರನಾಗಿರುವನು.” (ತಿರ್ಮಿದಿ) ವ್ಯಾಪಾರಕ್ಕಿರುವ ಮಹತ್ವವನ್ನು ಇದರಿಂದ ಅರಿಯಬಹುದು. ಇಂತಹ ಪ್ರಾಮಾಣಿಕ ವ್ಯಾಪಾರವು ಆರಾಧನೆಯಾಗಿದೆ. ಅಲ್ಲಾಹನನ್ನು ಭಯಪಟ್ಟು ಆತನ ಆದೇಶಗಳಿಗೆ ವಿಧೇಯನಾಗಿದ್ದುಕೊಂಡು ಮಾಡುವ ವ್ಯಾಪಾರವು ಪ್ರತಿಫಲಾರ್ಹ ಆರಾಧನೆಯಾಗಿದೆ. ಅದಕ್ಕೆ ವ್ಯತಿರಿಕ್ತವಾದರೆ ಅದು ನಿಷಿದ್ಧವೂ ಶಿಕ್ಷಾರ್ಹವೂ ಆಗಿದೆ.
ತೂಕ ಅಳತೆಯ ಬಗ್ಗೆ ತಾತ್ಸಾರದಿಂದ ವರ್ತಿಸಿ ಗ್ರಾಹಕರನ್ನು ಶೋಷಿಸುವಂತಹ ವ್ಯಾಪಾರವು ಅಪಾಯಕಾರಿಯಾಗಿದೆ. ಈ ಬಗ್ಗೆ ಪವಿತ್ರ ಕುರ್ಆನಿನಲ್ಲಿ ಹೀಗೆ ಹೇಳಲಾಗಿದೆ: “ತೂಕ ಅಳತೆಗಳಲ್ಲಿ ಕಡಿತಗೊಳಿಸುವವರಿಗೆ ವಿನಾಶವಿದೆ. ಅವರು ಜನರಿಂದ ಪಡೆಯುವಾಗ ಪೂರ್ಣ ಪ್ರಮಾಣದಲ್ಲಿ ಪಡೆಯುತ್ತಾರೆ. ತೂಕ ಅಳತೆ ಮಾಡಿ ಕೊಡುವಾಗ ಮಾತ್ರ ಕಡಿತಗೊಳಿಸುತ್ತಾರೆ. ಒಂದು ಮಹಾ ಕಠಿಣ ದಿನದಂದು ಅವರು ಪುನರುತ್ಥಾನಗೊಂಡು ಎಬ್ಬಿಸಲ್ಪಡುವರು ಎಂಬುದನ್ನು ಇವರು ಅರಿತಿಲ್ಲವೇ? ಆ ದಿನ ಎಲ್ಲ ಮನುಷ್ಯರೂ ಸರ್ವಲೋಕ ಪರಿಪಾಲಕನ ಸನ್ನಿಧಿಯಲ್ಲಿರುವರು” (ಅಲ್ ಮುತಫ್ಪಿಫೀನ್: 1-6). ಹೀಗೆ ಅಲ್ಲಾಹನ ಆದೇಶದ ಪ್ರಕಾರ ಆತನು ನಿಶ್ಚಯಿಸಿದ ನಿಯಮ ನಿರ್ದೇಶನಗಳನ್ನು ಪಾಲಿಸಿ ಧರ್ಮಬದ್ಧವಾದ ಮಾರ್ಗದಿಂದ ಸಂಪಾದಿಸಿದ ಆಹಾರವನ್ನು ನಾವು ಸ್ವತಃ ಉಂಡು ನಮ್ಮ ಹೆಂಡತಿ ಮಕ್ಕಳಿಗೂ ಉಣಿಸುತ್ತೇವೆ. ಮತ್ತು ಅಲ್ಲಾಹನು ನಿಶ್ಚಯಿಸಿದ ಇತರ ಹಕ್ಕುದಾರರಿಗೂ ಉಣಿಸುತ್ತೇವೆ. ಹೀಗೆ ನಮ್ಮ ವ್ಯಾಪಾರದ ಸಮಯವನ್ನೆಲ್ಲಾ ಧರ್ಮಬದ್ಧವಾಗಿ ವ್ಯಯಿಸಿ ನಾವು ಪುಣ್ಯಫಲ ಪಡೆಯಲು ಅರ್ಹರಾಗುವೆವು. ಇದು ಪರಲೋಕದ ವಿಜಯಕ್ಕೆ ಕಾರಣವಾಗುವ ವ್ಯಾಪಾರವಾಗಿದೆ. ಆದ್ದರಿಂದ ಆರಾಧನೆಯನ್ನು ಕೇವಲ ಮಸೀದಿಯ ಪ್ರಾರ್ಥನೆಗಳಿಗೆ, ಝಿಕ್ರ್ಗಳಿಗೆ ಮಾತ್ರ ಸೀಮಿತವಾಗಿರಿಸಿದರೆ ಸಾಲದು. ನಮ್ಮ ಬದುಕಿನ ಪ್ರತಿಯೊಂದು ರಂಗಕ್ಕೂ ಆರಾಧನೆಯು ವ್ಯಾಪಿಸಬೇಕು.












