ಅಮಾನವೀಯತೆ ಮತ ಸಂಸ್ಕೃತಿಯ ಬಳುವಳಿಯೇ?

0
723

✍️ ಅಬೂ ಅನೀಸ್, ಕಲ್ಲಾಪು

ಮತ ಸಂಸ್ಕೃತಿ ಮತ್ತು ಧರ್ಮ ಸಂಸ್ಕೃತಿಯನ್ನು ಒಂದೇ ತಟ್ಟೆಯಲ್ಲಿಟ್ಟು ತೂಗಿ ನೋಡುವವರಿದ್ದಾರೆ. ವಾಸ್ತವದಲ್ಲಿ ಇವೆರಡರ ಆವಿಷ್ಕಾರದಲ್ಲಿ ಅಜ ಗಜಾಂತರವಿದೆ. ಧರ್ಮದಲ್ಲಿ ಅಧರ್ಮದಿಂದ ವಿಮುಕ್ತ ವಾದ ಸಂಸ್ಕಾರ ನೀತಿ ನಿಯಮಗಳಿವೆ. ಒಂದಕ್ಕೊಂದು ಪೂರಕವಾದ ಧರ್ಮ ಸಂಸ್ಕಾರಗಳಲ್ಲಿ ಸತ್ಯ, ನ್ಯಾಯ, ಸಮಾನತೆ, ಸಹಿಷ್ಣುತೆ, ಸಹಕಾರ ಮತ್ತು ಮಾನವೀಯ ಮೌಲ್ಯಗಳು ಆವೃತವಾಗಿವೆ. ಸ್ವಯಂ ಬದುಕುವುದು ಮತ್ತು ಇನ್ನೊಬ್ಬರನ್ನು ತನ್ನಂತೆ ಬದುಕುವ ಅವಕಾಶ ಕೊಡುವುದು.

ಅರ್ಥಾತ್ ಸಮಾಜದಲ್ಲಿ ಸರ್ವರಿಗೂ ಸಮಾನ ಅವಕಾಶವಿರುವಂತೆ ಅವರವರ ಧರ್ಮ ಶ್ರದ್ಧೆ, ಆಚಾರ ವಿಚಾರಗಳು, ಆಧ್ಯಾತ್ಮಿಕ ಜ್ಞಾನಾರ್ಜನೆ ಮತ್ತು ಶೈಕ್ಷಣಿಕ ಹಕ್ಕು ಬಾಧ್ಯತೆಗಳನ್ನು ಪರಸ್ಪರ ಮನ್ನಣೆ ಮತ್ತು ಗೌರವಿಸುವುದು… ಇವೆಲ್ಲವೂ ಧರ್ಮ ಪ್ರಧಾನ ಸಂಸ್ಕೃತಿಯ ಬಳುವಳಿಯಾಗಿವೆ. ಈ ಸಕಾರಾತ್ಮಕ ಮೌಲ್ಯಗಳನ್ನು ಎತ್ತಿಹಿಡಿದು ಮೈಗೂಡಿಸಿಕೊಂಡವರು ಉನ್ನತಮಟ್ಟದ ಪ್ರಜೆಗಳು ರಾಷ್ಟçನಿಷ್ಠೆ ಇರುವವರು ಆಗಿರುತ್ತಾರೆ.

ಧಾರ್ಮಿಕ ಕೇಂದ್ರಗಳಲ್ಲಿ ಅರ್ಥಾತ್ ದೇಗುಲ, ಮಸೀದಿ, ಚರ್ಚ್, ಗುರುದ್ವಾರ, ಬೌದ್ಧ ಮಂದಿರ ಮಠಮಾನ್ಯಗಳಲ್ಲಿ ಇಂದಿಗೂ ಭ್ರಾತೃತ್ವದ ಈ ಸಕಾರಾತ್ಮಕ ಘೋಷಣೆಗಳು ಮೊಳಗುತ್ತಿವೆ. ಬಹುಧರ್ಮ, ಬಹು ಕುಲ-ಜಾತಿ ಬಹು ಸಂಸ್ಕೃತಿಯ ಜನರಿರುವ ದೇಶದಲ್ಲಿ ಸಭ್ಯ ನಾಗರಿಕತೆಯನ್ನು ಜೀವಂತವಾಗಿರಿಸು ವಂತಹ ಈ ಪ್ರಕ್ರಿಯೆಗಳು ಸದಾ ನಡೆಯುತ್ತಲೇ ಇರಬೇಕು. ಭಾರತದಂತಹ ಧರ್ಮ ಪ್ರಧಾನ ದೇಶದಲ್ಲಿ ಧರ್ಮ ಗ್ರಂಥಗಳು, ಸರ್ವೇ ಜನ ಸುಖಿನೊ ಭವಂತು. ವಸುದೈವ ಕುಟುಂಬಕA, ಪರಧರ್ಮ ಸಹಿಷ್ಣುತೆಯಂತಹ ಉದಾತ್ತ ಮೌಲ್ಯಗಳನ್ನು ಎತ್ತಿ ಹಿಡಿದಿದೆ.

ಮಾತ್ರವಲ್ಲ ಈ ಮೌಲ್ಯಗಳ ಬೆಳಕಿನಲ್ಲಿ ದೇಶದಲ್ಲಿ ಅನೇಕ ದಾರ್ಶನಿಕರು, ಮೇಧಾವಿಗಳು ಆಗಮಿಸಿದ್ದಾರೆ. ಶ್ರೀ ನಾರಾಯಣ ಗುರು, ಸ್ವಾಮೀ ವಿವೇಕಾನಂದ, ಮಹಾತ್ಮ ಗಾಂಧಿ, ಜ್ಯೋತಿಬಾ ಫುಲೆ, ಕುದ್ಮುಲ್ ರಂಗರಾಯರು ಮತ್ತು ಇತ್ತೀಚೆಗೆ ನಿಧನರಾದ ಸ್ವಾಮೀ ಅಗ್ನಿವೇಶ್‌ರಂತಹ ದಾರ್ಶನಿಕರು ಸಮಾಜ ಸುಧಾರಕರು ಭವಿಷ್ಯದ ಭಾರತದಲ್ಲಿ ಈ ಮೌಲ್ಯಗಳು ಮಾಸಿ ಹೋಗದೆ ಸದಾ ಜೀವಂತವಾಗಿರಲೆಂದು ಶತ ಪ್ರಯತ್ನಪಟ್ಟಿದ್ದಾರೆ.

ಸ್ವಾಮೀ ವಿವೇಕಾನಂದರು ಅಸ್ಪೃಶ್ಯತೆ ಮತ್ತು ಧರ್ಮ ಬೀರುಗಳು ಸಮಾಜದ ದುರ್ಬಲ ವರ್ಗದ ಮೇಲೆ ನಡೆಸುತ್ತಿರುವ ಮತಾಂಧ ದೌರ್ಜನ್ಯವನ್ನು ಖಂಡಿಸಿದರು.

ಅವರು ಪ್ರತಿಪಾದಿಸಿದಂತೆ ಪಂಗಡಗಳಾಗಿ ಒಡೆಯುವುದು ಸಮಾಜದ ಸಹಜ ವಿಧಾನ. ಸಾಮಾಜಿಕ ಜೀವನದಲ್ಲಿ ನಾನು ಒಂದು ಕರ್ತವ್ಯವನ್ನು ನಿರ್ವಹಿಸುತ್ತಿದ್ದೇನೆ. ನೀವು ಇನ್ನೊಂದು ಕರ್ತವ್ಯವನ್ನು ನಿರ್ವಹಿಸುತ್ತೀರಿ. ನೀವು ದೇಶವನ್ನು ಆಳುವವರು, ನಾನು ಒಂದು ಜತೆ ಹಳೆಯ ಪಾದರಕ್ಷೆಯನ್ನು ಹೊಲಿಯ ಬಹುದು. ಆ ಕಾರಣದಿಂದಲೇ ನೀವು ನನಗಿಂತ ಹೆಚ್ಚಿನವರಾಗಿದ್ದೀರಿ ಎಂಬುದು ಅರ್ಥ ಶೂನ್ಯವಾದುದು.

ನೀವು ನನ್ನ ಪಾದರಕ್ಷೆಯನ್ನು ಹೊಲಿಯ ಬಲ್ಲಿರೊ, ನೀವು ವೇದವನ್ನು ಓದುವುದರಲ್ಲಿ ಬುದ್ಧಿವಂತರಿರಬಹುದು. ಹಾಗೆಂದು ನನ್ನ ತಲೆಯನ್ನು ಮೆಟ್ಟಿ ತುಳಿಯಬೇಕೇನು. ಒಬ್ಬಾತ ಕೊಲೆ ಮಾಡಿದ್ದನ್ನು ಪ್ರಶಂಶಿಸುವುದೇಕೆ…? ಇನ್ನೊಬ್ಬ ಒಂದು ಸೇಬು ಹಣ್ಣನ್ನು ಕದ್ದರೆ ಅವನನ್ನು ಗಲ್ಲಿಗೇರಿಸುವುದೇಕೆ? ಈ ತಾರತಮ್ಯ ಹೋಗಲೇಬೇಕು.

ಮೀನು ಹಿಡಿಯುವ ಬೆಸವಿಗೆ ನೀವು ವೇದಾಂತ ತತ್ವವನ್ನು ಬೋಧಿಸಿದರೆ ಅವನು ಕೂಡಾ ನಿನ್ನಂಥ ಶ್ರೇಷ್ಠ ವ್ಯಕ್ತಿ ಎನ್ನಬಲ್ಲ. ಈ ದೃಷ್ಟಿಯಲ್ಲಿ ಮೀನುಗಾರ ಮತ್ತು ತತ್ವಜ್ಞಾನಿ ಇಬ್ಬರಲ್ಲಿರುವ ಆಂತರ್ಯದಲ್ಲಿ ದೇವತ್ವವೇ ಇರುವುದು. ಇದು ನಮಗೆ ಬೇಕಾಗಿರುವಂತಹ ದೃಷ್ಟಿಕೋನ. ಎಲ್ಲರಿಗೂ ಸಮಾನ ಅವಕಾಶವಿರಬೇಕು. ವಿಶೇಷ ಅಧಿಕಾರಗಳು ಹಕ್ಕುಗಳು ಹೋಗಬೇಕು. ಪ್ರತಿಯೊಬ್ಬನ ಆಂತರ್ಯದಲ್ಲಿ ದೇವತ್ವವಿದೆ ಎಂಬುದನ್ನು ಬೋಧಿಸಬೇಕು. ಆಗ ಪ್ರತಿಯೊಬ್ಬನು ತನ್ನ ಬಿಡುಗಡೆಗೆ ತಾನೆ ದುಡಿಯಲು ತೊಡಗುವನು. (ಭವ್ಯ ಭಾರತ ನಿರ್ಮಾಣ ಪುಟ- 14)

ಪುರಾತನ ಭಾರತದ ಇಬ್ಬರು ಮಹಾಮಹಿಮರು ಶ್ರೀ ಕೃಷ್ಣ ಮತ್ತು ಬುದ್ಧ ಇಬ್ಬರೂ ಕ್ಷತ್ರಿಯ ಪಂಗಡಕ್ಕೆ ಸೇರಿದವರು. ಅರ್ಥ ಪೂರ್ಣವೇನೆಂದರೆ ಆ ಇಬ್ಬರೂ ಜಾತಿ ಮತ್ತು ಲಿಂಗಭೇದವನ್ನೆಣಿಸದೇ ಜ್ಞಾನದ ಬಾಗಿಲನ್ನು ಎಲ್ಲರಿಗೂ ತೆರೆದಿಟ್ಟರು. (ಪುಟ- 14) ಈ ಉದಾತ್ತ ಆ ಶಯಗಳು ಅಭಿನವ ಹಿಂದುತ್ವವಾದಿಗಳಲ್ಲಿ ಯಾಕೆ ಕಂಡು ಬರುವುದಿಲ್ಲ?

ಶ್ರೀ ನಾರಾಯಣಗುರುಗಳು ಭಾರತೀಯ ಸಮಾಜದಲ್ಲಿರುವ ಜಾತಿ ಪದ್ಧತಿ ಮತ್ತು ಆ ಮೂಲಕ ಬೆಳೆದಿರುವ ಅಸಮಾನತೆ ಅಸ್ಪೃಶ್ಯತೆ, ಅಸಹಿಷ್ಣತೆ ಮತ್ತು ಕುಲವರ್ಣಗಳಲ್ಲಿರುವ ತಾರತಮ್ಯ ಇವುಗಳ ವಿರುದ್ಧ ದಕ್ಷಿಣ ಭಾರತದಲ್ಲಿ ಜನಾಕರ್ಷಾಕ ಆಂದೋಲನವನ್ನು ಕೈಗೊಂಡರು. ಮನುಷ್ಯ ಮನುಷ್ಯನೊಂದಿಗೆ ಮನುಷ್ಯನೆಂಬ ನೆಲೆಯಲ್ಲಿ ಪರಸ್ಪರ ಗೌರವಾದರಗಳಿರಬೇಕು ಎಂಬ ವಿಶಾಲ ಮಾನವೀಯ ಭ್ರಾತೃತ್ವವನ್ನು ಪ್ರತಿಪಾದಿಸಿದ್ದರು.

ಜ್ಯೋತಿ ಭಾ ಪುಲೆ, ಕುದ್ಮುಲ್ ರಂಗರಾಯರಂತಹ ಸುಧಾರಕರು, ಕೆಳಸ್ತರದವರೆಂದು ಅಂದಿನ ಸಮಾಜವು ಪರಿಗಣಿಸಿದ್ದ ದಲಿತರು ಮತ್ತು ಸಾಮಾಜಿಕವಾಗಿ ಹಿಂದುಳಿದವರಲ್ಲಿ ಶೈಕ್ಷಣಿಕ ಜ್ಯೋತಿಯನ್ನು ಬೆಳಗಿಸಿ ಅವರನ್ನು ಸಾಮಾಜಿಕವಾಗಿ ಮೇಲೆತ್ತುವ ಆಂದೋಲನ ನಡೆಸಿದರು. ಈ ಉದ್ಧರಣೆಯ ಕಾರ್ಯವನ್ನು ಅಂದಿಗೂ-ಇಂದಿಗೂ ವಿರೋಧಿಸುವವರಿದ್ದಾರೆ. ತೆರೆಮರೆಯಲ್ಲಿ ನಿಂತಿರುವ ಈ ಮೀಸಲಾತಿ ವಿರೋಧಿಗಳಿಗೆ ಅವರದೇ ಆದ ಒಂದು ವಿಲಕ್ಷಣ ರಾಜಕೀಯ ಸಿದ್ಧಾಂತವು ಇವೆ.

ಮಹಾತ್ಮಾಗಾಂಧಿ ಅವರು ಇಲ್ಲಿನ ದಲಿತ ವರ್ಗವನ್ನು ಹರಿಜನ ರೆಂದು ಕರೆದರು. ದೇಶದ ಸಂಸ್ಕೃತಿಯ ಸಂಕುಚಿತ ವಿಚಾರಗಳನ್ನು ದೂರವಿಟ್ಟು ದೇಶದಲ್ಲಿ ಬಹುತ್ವ ಮನೋಭಾವ ಬೆಳೆದು ಬರಬೇಕೆಂದು ಅವರ ಆಶಯವಾಗಿತ್ತು ಎಂಬುದರಲ್ಲಿ ಎರಡಭಿಪ್ರಾಯವಿಲ್ಲ. ಮಾತ್ರವಲ್ಲ ಕುಲಗೋತ್ರ ಆಧಾರದಲ್ಲಿರುವ ಅಸ್ಪೃಶ್ಯತೆ, ಅಸಹಿಷ್ಣತೆಯ ಬಣವೆ ಯಿಂದ ದಲಿತರನ್ನು ಹೊರ ತೆಗೆದು ಅವರನ್ನು ಸರ್ವ ಜನರ ಹಿತ ಬಯಸುವ ಬಹುತ್ವದ ವಿಚಾರಗಳು ಅವರಲ್ಲಿ ಬೆಳೆದು ಬರ ಬೇಕೆಂಬುದೂ ಗಾಂಧೀಜಿಯವರ ಇಂಗಿತವಾಗಿತ್ತು.

ಆದರೂ ಡಾ| ಅಂಬೇಡ್ಕರ್ ನೇತೃತ್ವದಲ್ಲಿದ್ದ ದಲಿತರಿಗೆ ಕೆಲವು ಗಾಂಧೀ ವಿಚಾರಗಳಲ್ಲಿ ಭಿನ್ನಾಭಿಪ್ರಾಯಗಳಿದ್ದವು. ಆದಾಗ್ಯೂ ಮಹಾತ್ಮಾಗಾಂಧಿ ಅವರಂತೆ ಸುಧಾರಕರೆನಿಸಿದ ಹಿಂದೂ ದಾರ್ಶನಿಕರು ಪ್ರತಿಪಾದಿಸಿದ ವಿಶಾಲ ಹಿಂದೂ ಧರ್ಮದ ಸಕಾರಾತ್ಮಕ ಮೌಲ್ಯಗಳ ತಳಹದಿಯಲ್ಲಿ ದಲಿತ ರನ್ನೂ ಒಗ್ಗೂಡಿಸಲು ಗಾಂಧೀಜಿ ಬದ್ಧರಾಗಿದ್ದರು.

ದುರದೃಷ್ಟವಶಾತ್ ಈ ವಾಸ್ತವವಾದಿ ರಾಷ್ಟ್ರಾಭಿಮಾನಿಯನ್ನು ಸನಾತನವಾದಿ ಪಟ್ಟಭದ್ರರು ದೇವಾಲಯದೊಳಗೆ ನಿರ್ದಾಕ್ಷಿಣ್ಯವಾಗಿ ಕೊಲೆ ಮಾಡಿದರು. ಯಾಕೆಂದರೆ ಮಹಾನ್ ಹಿಂದೂ ಸಂತ ಸ್ವಾಮೀ ವಿವೇಕಾನಂದರು ಪ್ರತಿಪಾದಿಸಿದ ಅಸ್ಪೃಶ್ಯತೆ ಮೇಲು-ಕೀಳು ಭಾವನೆ ಸಹಿಸಲಾಗಲಿಲ್ಲ.

ಜರ್ಮನಿಯ ಹಿಟ್ಲರ್ ಮೂಲತಃ ಕ್ರೈಸ್ತ ಧರ್ಮದವನಾಗಿದ್ದ. ಆದರೆ ಜರ್ಮನ್ ಚಾನ್ಸಲರ್ ಆಗಿ ಅವನು ಕೈಗೆತ್ತಿಕೊಂಡ ರಾಜ ಧರ್ಮ ಕ್ರೈಸ್ತ ಧರ್ಮದ ಕ್ಷಮೆ, ಪರೋಪಕಾರ, ಸಹಿಷ್ಣತೆಗೆ ವ್ಯತಿರಿಕ್ತ ವಾದ ಜನಾಂಗವಾದಿ ನಾಝಿ ಸಿದ್ಧಾಂತವಾಗಿತ್ತು. ಅಡಾಲ್ಫ್ ಹಿಟ್ಲರ್‌ನ ನಾಝಿ ಸಿದ್ಧಾಂತ ಮತ್ತು ಇಟೆಲಿಯ ಸರ್ವಾಧಿಕಾರಿ ಬೆನಿಟ್ ಮುಸ್ಸೋಲಿನಿಯ ಫ್ಯಾಸಿಸ್ಟ್ ಕಾರಸ್ಥಾನಗಳು ಪ್ರಾರಂಭದಲ್ಲಿ ವಿಲಕ್ಷಣವಾದ ಆಕರ್ಷಣೆ ಮತ್ತು ಜನಪ್ರಿಯತೆಯನ್ನು ಪಡೆದಿತ್ತು. ಅದರಲ್ಲಿ ನಿರ್ದಿಷ್ಟ ಜನಾಂಗದ ಅಭಿವೃದ್ಧಿಯನ್ನು ಮುಂದಿಟ್ಟು ಅದನ್ನೇ ದೇಶದ ಸಾಂಸ್ಕೃತಿಕ ಮತ್ತು ರಾಷ್ಟ್ರೀಯ ಅಭಿವೃದ್ಧಿಯೆಂದು ಬಿಂಬಿಸಲಾಗಿತ್ತು.

ಮಾತ್ರವಲ್ಲ ದೇಶದ ಸೇನೆ, ರಕ್ಷಣಾದಳ, ಗುಪ್ತಚರ ವಿಭಾಗಗಳು, ಸರಕಾರಿ ಅಧಿಕಾರಿಗಳು ಅರ್ಥಾತ್ ಪೂರ್ಣ ರೂಪ ದಲ್ಲಿ ಆಡಳಿತ ಯಂತ್ರವು ದೇಶದ ಸರಕಾರದ ಈ ಅಂಧ ಕಾರಸ್ಥಾನಗಳನ್ನು ನಿಷ್ಠೆಯಿಂದ ಪಾಲಿಸುತ್ತಿದ್ದೆವು. ಈ ಸರ್ವಾಧಿಕಾರಿಗಳ ಒಂದೂವರೆ ದಶಕದ ಆಡಳಿತವು ಅಲ್ಲಿನ 16 ರಿಂದ 25 ವರ್ಷದ ಯುವಕರಲ್ಲಿ ವಿಲಕ್ಷಣ ಉತ್ಸಾಹವನ್ನು ಮೂಡಿಸಿತು. ಒಂದು ಸಮೀಕ್ಷೆಯಂತೆ ಹಿಟ್ಲರ್‌ನ ಸಲಹೆಗಾರರಲ್ಲಿ 80% ಶೇಕಡಾ ಮಂದಿ ಪಿಹೆಚ್‌ಡಿ ಪದವೀಧರರಾಗಿದ್ದರು.

ಆದರೂ ಹಿಟ್ಲರ್‌ನನ್ನು ಮಹಾತ್ವಾಕಾಂಕ್ಷಿ ಜಾಗತಿಕ ಮಹಾ ಯುದ್ಧದಿಂದ ತಡೆಯಲು ಅವರಿಗೆ ಸಾಧ್ಯವಾಗಲಿಲ್ಲ.

ಈ ಉಭಯ ಸರ್ವಾಧಿಕಾರಿಗಳ ದುರಾಡಳಿತದಿಂದ ಹತಾಶರಾಗಿ ಕೊನೆಗೂ ರೊಚ್ಚಿಗೆದ್ದ ಜನತೆ ಪಲಾಯನ ಸೂತ್ರವನ್ನು ಕೈಗೊಂಡ ಬೆನಿಟ್ ಮುಸ್ಸೋಲಿನಿಯನ್ನು ನಡು ರಸ್ತೆಯಲ್ಲಿ ಕೊಂದು ಹಾಕಿದರು. ಹಿಟ್ಲರ್ ಆತ್ಮಹತ್ಯೆ ಮಾಡಿದ.

ಇಲ್ಲಿ ನಡೆದಿರುವ ಅಚಾತುರ್ಯವೇನೆಂದರೆ ದೇಶದ ಒಂದು ಜನಾಂಗವನ್ನು ಇನ್ನೊಂದು ಜನಾಂಗದ ವಿರುದ್ಧ ದ್ವೇಷಾತ್ಮಕವಾಗಿ ಪ್ರಯೋಗಿಸುವ ಸರಕಾರಿ ಪ್ರಾಯೋಜಿತ ನಾಝಿ ಚಿಂತನೆಗಳು ಮತ್ತು ನ್ಯಾಯ, ನೀತಿ, ಸಹಿಷ್ಣುತೆ ಮಾನವೀಯತೆ ಅನುಕಂಪ ಧರ್ಮ ಶ್ರದ್ಧೆ ಯಾವುದನ್ನೂ ಪರಿಗಣಿಸಿದೆ ಬುಲ್ಡೋಝರ್ ಚಲಾಯಿಸಿ ಅಮಾಯಕರ ಸೊತ್ತುವಿತ್ತಗಳನ್ನು ನಾಮಾವಶೇಷ ಮಾಡುವ ಏಕಪಕ್ಷೀಯ ಫ್ಯಾಸಿಸ್ಟ್ ಕಾರ್ಯಾಚರಣೆಗಳು.

ಈ ರೀತಿ ಜನಮನವನ್ನು ಜನಾಂಗೀಯವಾಗಿ ಒಡೆದು ಮರ್ದಿತ ವಿಭಾಗವನ್ನು ಅಮಾನವೀಯವಾಗಿ ತೇಜೋವಧೆಗೀಡಾಗಿಸುವುದು. ಕಪೋಲಕಲ್ಪಿತ ಆರೋಪಗಳನ್ನು ಹೊರಿಸಿ ನಿರಪರಾಧಿಗಳನ್ನು ಅಥವಾ ಆಡಳಿತ ನ್ಯೂನತೆಗಳನ್ನು ಪ್ರಶ್ನಿಸುವವರನ್ನು ದೇಶದ್ರೋಹದ ಆರೋಪ ಹೊರಿಸಿ ಜೈಲಿಗಟ್ಟುವುದು. ದೇಶದಲ್ಲಿರುವ ಇನ್ನಿತರ ಧರ್ಮದ ವಿಚಾರಗಳನ್ನು ಅವಿಚಾರಿತವಾಗಿ ವಿಕೃತಗೊಳಿಸಿ ಐತಿಹಾಸಿಕ ಮತ್ತು ಸಾಮಾಜಿಕ ಅಪರಾಧಿಗಳಂತೆ ಪುಕಾರು ಹಬ್ಬಿಸುವುದು.


ಈ ರೀತಿ ಮಾನವೀಯತೆಯನ್ನು ಹನನಗೈದು ನ್ಯಾಯ ನೀತಿಗೆ ವಿರುದ್ಧವಾದ ನಕಾರಾತ್ಮಕ ಹೆಜ್ಜೆಗಳನ್ನು ವೈಭವೀಕರಿಸುವುದು ಅರ್ಥಾತ್ ಮೇಲ್ವರ್ಗದವರ ಅಪ ರಾಧಗಳನ್ನು ನ್ಯಾಯೀಕರಿಸುವುದು. ಈ ಕಾರ್ಯಕ್ಕಾಗಿ ಸರಣಿ ಬದ್ಧವಾಗಿ ಕುಪ್ರಚಾರ ಮಾಡುವ ಸ್ವಪಕ್ಷೀಯ ರಾಜಕೀಯ ವಕ್ತಾರರನ್ನೂ ಕೈಗೊಂಬೆ ಮಾಧ್ಯಮಗಳನ್ನು ಬಳಸುವುದು ಹಿಟ್ಲರ್‌ನ ನಾಝಿ ಸಿದ್ಧಾಂತದ ಪ್ರಚಾರಕ ಗೋಬೆಲ್ಸ್ನ ವಿಚಾರದಂತೆ ಒಂದು ಸುಳ್ಳನ್ನು ಪದೇ ಪದೇ ನೂರು ಬಾರಿ ಹೇಳಿದರೆ ಜನರು ಅದನ್ನು ಸತ್ಯವೆಂದೇ ನಂಬುತ್ತಾರೆ.

ಈ ರೀತಿಯಲ್ಲಿ ಸರ್ವ ನಿಟ್ಟಿನಲ್ಲೂ ಮಾನವತೆಯನ್ನು ಹನನಗೈಯ್ಯುವ ನಾಝಿ ಫ್ಯಾಸಿಸ್ಟ್ ಸಿದ್ಧಾಂತಗಳು ಕೇವಲ ಒಂದೂವರೆ ದಶಕದಲ್ಲೇ ನೆಲಕಚ್ಚಿತು. ಭರ್ಜರಿಯಾಗಿ ಮಾನವರ ರಕ್ತ ಮಾಂಸವನ್ನು ಹೀರಿದ ಕಿರಾತ ಸಿದ್ಧಾಂತವು ಅಷ್ಟೇ ಶೀಘ್ರದಲ್ಲಿ ಪರ್ಯಾವಸಾನಗೊಂಡಿತು.

ಇದಕ್ಕೆ ಇನ್ನೊಂದು ನೈಜ ನಿದರ್ಶನವೆಂಬಂತೆ ನೆರೆಯ ಪುಟ್ಟ ದೇಶ ಶ್ರೀಲಂಕಾದಲ್ಲಿ ಅಲ್ಲಿನ ಬೌದ್ಧ ಮತಸ್ಥರು ತಮ್ಮ ಮೂಲಭೂತ ಅಹಿಂಸಾ ತತ್ವಾದರ್ಶಕ್ಕೆ ವ್ಯತಿರಿಕ್ತವಾಗಿ ಆ ದೇಶದ ತಮಿಳರು, ಮುಸ್ಲಿಮರು ಮತ್ತು ಕ್ರೈಸ್ತರನ್ನು ಸಾಮಾನ್ಯವಾಗಿ ಎಲ್ಲಾ ಸ್ತರಗಳಲ್ಲೂ ದಮನಕ್ಕೀಡಾಗಿಸುವುದರ ಮೂಲಕ ಸಿಂಹಳಿ ರಾಷ್ಟ್ರೀಯತೆಯನ್ನು ಎತ್ತಿ ಹಿಡಿದರು. ಆದರೆ ಪರಿಸ್ಥಿತಿಯು ತಿರುಗು ಮುರುಗಾಯಿತು. ಈ ಅಸಹಕಾರ ನೀತಿಯಿಂದ ರಾಷ್ಟ್ರದ ಅರ್ಥವ್ಯವಸ್ಥೆ ಹದಗೆಟ್ಟು ದೇಶವು ದಿವಾಳಿಯ ಅಂಚನ್ನು ತಲಪಿತು.

ಇದರಿಂದಾಗಿ ರೊಚ್ಚಿಗೆದ್ದ ಸಿಂಹಳಿ ಜನತೆಯು ಅದರ ರೂವಾರಿಗಳಾದ ಅಧ್ಯಕ್ಷ ಗೋಟಾಬಾಯ ಮತ್ತು ಮಹೀಂದಾ ರಾಜಪಕ್ಷೆ ದ್ವಯರನ್ನು ಪಲಾಯನ ಮಾಡುವಂತೆ ಮಾಡಿದರು. ದೇಶದ ಯುವ ಜನಾಂಗ ಮುಖ್ಯವಾಗಿ 16 ರಿಂದ 25ರ ಹರೆಯದವರು ದೇಶದ ದಿಸೆಯನ್ನು ನಿರ್ಧರಿಸುವ ಅಮೂಲ್ಯ ಸಂಪನ್ಮೂಲವಾಗಿದ್ದಾರೆ.

ಯುವಜನಾಂಗವನ್ನು ಉನ್ನತ ವಿಜ್ಞಾನ ಮತ್ತು ತಂತ್ರಜ್ಞಾನದ ಮೂಲಕ ಮತ್ತು ಧರ್ಮ ಸಂಸ್ಕಾರಗಳ ಮೂಲಕ ಮಾನವೀಯ ದಿಸೆಯಲ್ಲಿ ಉಳಿಸಿ ಬೆಳೆಸುವುದು ಈ ದೇಶದ ಶಿಕ್ಷಣ ತಜ್ಞರ, ದೇವ ಮಾನವರ ಮತ್ತು ದೇಶವನ್ನಾಳುವ ಸರಕಾರದ ಕರ್ತವ್ಯವಾಗಿದೆ. ಇದಕ್ಕೆ ವ್ಯತಿರಿಕ್ತವಾಗಿ ನ್ಯಾಯ ನೀತಿರಹಿತ ಮತೀಯ ದಂಗಾಯಿಗಳನ್ನು ಹುಟ್ಟು ಹಾಕಿದರೆ ಪ್ರಾರಂಭದಲ್ಲಿ ಗೆಲುವು ಕಂಡರೂ ನಿಕಟ ಭವಿಷ್ಯದಲ್ಲೇ ದೇಶವು ಅಪಾಯಕಾರಿಯಾಗಿ ಬೆಳೆದು ನುಂಗಲಾರದ ತುತ್ತಾಗಿ ಪರಿಣಮಿಸಬಹುದಷ್ಟೇ.