ಸನ್ಮಾರ್ಗ ಸಂಪಾದಕೀಯ
ಇಸ್ರೇಲ್ ಮತ್ತು ಅಮೇರಿಕ ಜೊತೆ ಸೇರಿಕೊಂಡು ಇರಾನ್ ಮೇಲೆ ನಡೆಸಿರುವ ದಾಳಿ ಮತ್ತು ಇದಕ್ಕೆ ಪ್ರತಿಯಾಗಿ ಇರಾನ್ ನಡೆಸುತ್ತಿರುವ ಪ್ರತೀಕಾರದ ದಾಳಿಗಳು ಎರಡು ಪ್ರಶ್ನೆಗಳನ್ನು ಹುಟ್ಟು ಹಾಕುತ್ತವೆ.
- ಗಲ್ಫ್ ರಾಷ್ಟ್ರಗಳಲ್ಲಿರುವ ಅಮೇರಿಕನ್ ಸೇನಾ ನೆಲೆಗಳು ಮತ್ತು ನೆಲೆಗಳಲ್ಲದ ಜಾಗಗಳ ಮೇಲೂ ಇರಾನ್ ದಾಳಿ ನಡೆಸಿದ್ದೇಕೆ? ಈ ದಾಳಿಯಿಂದಾಗಿ ಅಮರಿಕ ಮತ್ತು ಇಸ್ರೇಲ್ನ ಜೊತೆ ಇನ್ನಷ್ಟು ಶತ್ರು ರಾಷ್ಟ್ರಗಳನ್ನು ಇರಾನ್ ಸೃಷ್ಟಿಸಿಕೊಂಡಂತೆ ಆಗಲಿಲ್ಲವೇ?
- ಇರಾನ್ನ ಪಾಲಿಗೆ ಅತ್ಯಂತ ನಂಬಿಗಸ್ಥ ರಾಷ್ಟ್ರವಾಗಿರುವ ರಷ್ಯಾ ಏಕೆ ನೆರವಿಗೆ ಬರುತ್ತಿಲ್ಲ?
‘ಇರಾನ್ ಮೇಲಿನ ದಾಳಿಗೆ ತನ್ನ ವಾಯು ಮಾರ್ಗವನ್ನು ಬಳಸಿಕೊಳ್ಳಬಾರದು..’ ಎಂದು ಅಮೇರಿಕಕ್ಕೆ ಬಹಿರಂಗವಾಗಿ ಕರೆ ಕೊಟ್ಟ ಗಲ್ಫ್ ರಾಷ್ಟ್ರಗಳ ಮೇಲೆಯೇ ಇರಾನ್ ದಾಳಿ ಮಾಡಿರುವುದು ಬಾಹ್ಯನೋಟಕ್ಕೆ ತಿಳಿಗೇಡಿತನದಂತೆ ಕಂಡರೂ ಇದು ಸಂಪೂರ್ಣ ಅರಿವಿದ್ದೇ ಮತ್ತು ಬುದ್ಧಿವಂತಿಕೆಯಿಂದಲೇ ಮಾಡಿರುವ ದಾಳಿಯಂತೆ ಕಾಣಿಸುತ್ತಿದೆ. 10 ಸಾವಿರ ಕಿ.ಮೀಟರ್ ದೂರದಲ್ಲಿರುವ ಅಮೇರಿಕದ ಮೇಲೆ ನೇರ ದಾಳಿ ಮಾಡುವ ಸಾಮರ್ಥ್ಯ ಇರಾನ್ಗೆ ಇಲ್ಲ. ಅಷ್ಟೊಂದು ದೂರಕ್ಕೆ ಹಾರುವ ಖಂಡಾಂತರ ಕ್ಷಿಪಣಿಗಳೂ ಅದರ ಬಳಿ ಇಲ್ಲ. ಕಳೆದ ವರ್ಷ ಇರಾನಿನ ಅಣ್ವಸ್ತç ಕೇಂದ್ರದ ಮೇಲೆ ಅಮೇರಿಕ ದಾಳಿ ಮಾಡಿದಾಗ ಪ್ರತೀಕಾರವಾಗಿ ಕತಾರ್ನಲ್ಲಿರುವ ಅಮೇರಿಕದ ಅತೀ ದೊಡ್ಡ ಸೇನಾ ನೆಲೆಗೆ ಇರಾನ್ ಕ್ಷಿಪಣಿ ಹಾರಿಸಿ ತನ್ನ ಯುದ್ಧತಂತ್ರದ ಪರಿಚಯವನ್ನು ಮಾಡಿಕೊಟ್ಟಿತ್ತು. ‘ನೀವು ನಮ್ಮ ಮೇಲೆ ದಾಳಿ ಮಾಡಿದರೆ ನಾವು ನಿಮ್ಮ ಸೇನಾ ನೆಲೆಗಳು ಎಲ್ಲೆಲ್ಲ ಇವೆಯೋ ಅಲ್ಲಿಗೆಲ್ಲಾ ದಾಳಿ ಮಾಡುವೆವು..’ ಎಂಬುದೇ ಆ ಸೂಚನೆ. ಇದೀಗ ಇರಾನ್ ಅದೇ ತಂತ್ರವನ್ನು ಮರಳಿ ಪ್ರಯೋಗಿಸಿದೆ.
ಯುಎಇ, ಕತಾರ್, ಸೌದಿ, ಬಹರೈನ್, ಕುವೈಟ್ಗಳ ಮೇಲೆ ದಾಳಿ ಮಾಡಿದೆ. ಅದರಲ್ಲೂ ದುಬೈ ಮೇಲೆ ರಾಕೆಟ್ಗಳನ್ನೂ ಡ್ರೋನ್ಗಳನ್ನೂ ಹಾರಿಸಿದೆ. ಈ ಮೂಲಕ ಅಮೇರಿಕದ ಸೇನಾ ನೆಲೆಗಳ ಜೊತೆಗೇ ಅಮೇರಿಕದ ಸ್ನೇಹಿತರನ್ನೂ ಬೆಂಬಲಿಗರನ್ನು ಗುರಿ ಮಾಡಿರುವುದೂ ಕಾಣಿಸುತ್ತಿದೆ. ಇದರಿಂದ ಇರಾನಿನ ಮೇಲೆ ಈ ರಾಷ್ಟçಗಳಿಗಿರುವ ಅನುಕಂಪ ಕಡಿಮೆಯಾಗಿ ಶತ್ರುತ್ವ ಸೃಷ್ಟಿಯಾಗಬಹುದಲ್ಲವೇ ಎಂಬ ಪ್ರಶ್ನೆ ಸಹಜ. ನಿಜವಾಗಿ,
ಗಲ್ಫ್ ರಾಷ್ಟ್ರಗಳು ಇರಾನಿನ ಬಗ್ಗೆ ಎಷ್ಟಂಶ ಅನುಕಂಪವನ್ನು ಹೊಂದಿವೆ ಎಂಬುದು ಇರಾನಿಗೆ ಚೆನ್ನಾಗಿಯೇ ಗೊತ್ತಿದೆ ಮತ್ತು ಅಮೇರಿಕದೊಂದಿಗೆ ಎಂಥ ಸಂಬಂಧವನ್ನು ಈ ಎಲ್ಲ ರಾಷ್ಟ್ರಗಳು ಇಟ್ಟುಕೊಂಡಿವೆ ಎಂಬುದನ್ನೂ ಚೆನ್ನಾಗಿಯೇ ಅರಿತುಕೊಂಡಿದೆ. ಅವುಗಳ ಅನುಕಂಪವು ತನ್ನ ಮೇಲಿನ ಅಮೇರಿಕದ ದಾಳಿಯನ್ನು ತಡೆಯಲಾರವು ಮತ್ತು ತನ್ನ ಮೇಲಿನ ಅಮೇರಿಕನ್ ದಾಳಿಯನ್ನು ಕಟ್ಟಿ ಹಾಕುವಷ್ಟು ಬಲಶಾಲಿ ಆಗಲಾರವು ಎಂಬುದನ್ನೂ ಇರಾನ್ ಅರಿತುಕೊಂಡಂತಿದೆ. ಅದರ ಬದಲು ಈ ರಾಷ್ಟ್ರಗಳ ಮೇಲೆ ದಾಳಿ ಮಾಡಿದರೆ ಅಮೇರಿಕಕ್ಕೆ ಈ ಎಲ್ಲ ರಾಷ್ಟ್ರಗಳಿಗೆ ರಕ್ಷಣೆ ಕೊಡಬೇಕಾದ ಹೊಸ ತಲೆನೋವು ಎದುರಾಗುತ್ತದೆ.
ಇರಾನ್ನಿಂದ ತೂರಿ ಬರುವ ಕ್ಷಿಪಣಿಗಳು ಮತ್ತು ಡ್ರೋನ್ ಗಳಿಂದ ಈ ರಾಷ್ಟ್ರಗಳನ್ನು ರಕ್ಷಿಸುವುದರ ಜೊತೆಗೇ ಇಸ್ರೇಲನ್ನೂ ಅದು ರಕ್ಷಿಸಬೇಕಾಗುತ್ತದೆ. ಗಲ್ಫ್ ರಾಷ್ಟ್ರಗಳನ್ನು ಇರಾನ್ ಯುದ್ಧಭೂಮಿಯಾಗಿಸಿಕೊಂಡಾಗ ಅಮೇರಿಕವು ಆರಾಮವಾಗಿ ಯುದ್ಧ ಮಾಡುವುದಕ್ಕಾಗುವುದಿಲ್ಲ. ಗಲ್ಫ್ ರಾಷ್ಟ್ರಗಳ ಮೇಲೆ ಬೀಳಬಹುದಾದ ಪ್ರತಿಯೊಂದು ರಾಕೆಟ್, ಡ್ರೋನ್ಗೂ ಅದು ಪರೋಕ್ಷ ಹೊಣೆಯನ್ನು ಹೊರಬೇಕಾಗುತ್ತದೆ. ಈ ಲೆಕ್ಕಾಚಾರವನ್ನು ಮಾಡಿಯೇ ಇರಾನ್ ಯುದ್ಧತಂತ್ರ ಹೆಣೆದಿರುವಂತೆ ಕಾಣಿಸುತ್ತಿದೆ. ಇನ್ನೊಂದು ಏನೆಂದರೆ,
ಇರಾನ್ನಿಂದ ಅಪಾಯ ಹೆಚ್ಚಾದಂತೆ ಈ ಗಲ್ಫ್ ರಾಷ್ಟ್ರಗಳು ಯುದ್ಧ ನಿಲ್ಲಿಸುವಂತೆ ಅಮೇರಿಕದ ಮೇಲೆ ಒತ್ತಡ ಹೇರಬಹುದು ಎಂಬ ಮುಂದಾಲೋಚನೆ ಇದ್ದಿರಬಹುದು. ಅಮೇರಿಕಕ್ಕೂ ಇಂಥ ಒತ್ತಡವನ್ನು ನಿರಾಕರಿಸಿ ಮುಂದುವರಿಯುವುದು ಸುಲಭ ಅಲ್ಲ. ಇದರ ಜೊತೆಗೇ ಹುರ್ಮುಝ್ ಜಲಮಾರ್ಗವನ್ನು ಬಂದ್ ಮಾಡಿದರೆ ಜಗತ್ತಿನ ತೈಲ ಮಾರುಕಟ್ಟೆ ಬಿದ್ದು ಹೋಗುವುದು ಖಚಿತ. ಈಗಾಗಲೇ ಇರಾನ್ ಈ ತಂತ್ರವನ್ನು ಯಶಸ್ವಿಯಾಗಿಯೇ ಪೂರೈಸಿದೆ. ಇದರಿಂದಾಗಿ ಈ ಜಲ ಮಾರ್ಗದ ಮೂಲಕ ಸಾಗುವ ತೈಲವನ್ನೇ ಅವಲಂಬಿಸಿರುವ ಭಾರತ ಸಹಿತ ಜಗತ್ತಿನ ಇತರ ರಾಷ್ಟ್ರಗಳು ಯುದ್ಧ ನಿಲ್ಲಿಸುವಂತೆ ಅಮೇರಿಕದ ಮೇಲೆ ಒತ್ತಡ ಹೇರಲೇಬೇಕಾಗುತ್ತದೆ. ಅಲ್ಲದೇ,
ಗಲ್ಫ್ ನಾಗರಿಕರನ್ನು ಅಮೇರಿಕ ವಿರುದ್ಧ ತಿರುಗಿ ಬೀಳುವಂತೆ ಮಾಡುವ ಮತ್ತು ಆಡಳಿತಗಾರರಿಗೆ ತಮ್ಮ ಅಮೇರಿಕ ಪರ ನೀತಿಯನ್ನು ಬದಲಿಸಿಕೊಳ್ಳುವುದಕ್ಕೆ ಅನಿವಾರ್ಯಗೊಳಿಸುವ ತಂತ್ರವೂ ಇದ್ದಿರಬಹುದು. ಅಮೇರಿಕಕ್ಕೆ ಸೇನಾ ನೆಲೆ ಒದಗಿಸಿರುವುದರಿಂದ ತಾವು ಅಸುರಕ್ಷಿತರಾಗಿದ್ದೇವೆ ಎಂಬ ಭಾವ ಗಲ್ಫ್ ನಾಗರಿಕರಲ್ಲಿ ಹುಟ್ಟುಹಾಕುವ ತಂತ್ರದ ಭಾಗವಾಗಿಯೂ ಈ ದಾಳಿಗಳನ್ನು ಇರಾನ್ ನಡೆಸುತ್ತಿರಲೂ ಬಹುದು. ಇನ್ನೊಂದೆಡೆ,
ಇರಾನಿನ ಬೆಂಬಲಿಗ ರಾಷ್ಟ್ರವಾಗಿ ಗುರುತಿಸಿಕೊಂಡಿರುವ ರಷ್ಯಾದ ನಿಲುವೂ ಪ್ರಶ್ನಾರ್ಹವಾಗುತ್ತದೆ. ಇಸ್ರೇಲ್ ಪರ ಅಮೇರಿಕ ನಿಂತಂತೆ ಇರಾನ್ ಪರ ರಷ್ಯಾ ನಿಲ್ಲುತ್ತಿಲ್ಲವೇಕೆ ಎಂಬ ಪ್ರಶ್ನೆ ಅಸಹಜವಲ್ಲ. ನಿಜವಾಗಿ, ಇಸ್ರೇಲ್ನ ಒಟ್ಟು ಜನಸಂಖ್ಯೆಯ 15% ಮಂದಿ ರಷ್ಯನ್ ಯಹೂದಿಗಳಾಗಿದ್ದಾರೆ. ಜಗತ್ತಿನಲ್ಲಿಯೇ ಇಸ್ರೇಲ್ಗೆ ಅತೀ ಹೆಚ್ಚು ವಲಸೆ ಬಂದಿರುವುದೂ ರಷ್ಯಾ ಮೂಲದಿಂದಲೇ ಆಗಿದೆ. ಸದ್ಯ ರಷ್ಯನ್ ಭಾಷೆ ಮಾತಾಡುವ ಸುಮಾರು 13 ಲಕ್ಷ ಯಹೂದಿಯರು ಇಸ್ರೇಲ್ನಲ್ಲಿದ್ದಾರೆ. ಮಾಜಿ ಸೋವಿಯತ್ ಯೂನಿಯನ್ನಿಂದ ಒಟ್ಟು 18 ಲಕ್ಷದಷ್ಟು ಯಹೂದಿಯರು ಇಸ್ರೇಲ್ಗೆ ವಲಸೆ ಬಂದಿದ್ದಾರೆ. 1990ರಲ್ಲಿ ಸೋವಿಯತ್ ಯೂನಿಯನ್ ಪತನವಾದ ಬಳಿಕ ಒಂದೇ ದಶಕದಲ್ಲಿ ಸುಮಾರು 12 ಲಕ್ಷದಷ್ಟು ಯಹೂದಿಯರು ಇಸ್ರೇಲ್ಗೆ ವಲಸೆ ಬಂದಿದ್ದಾರೆ.
ರಷ್ಯಾವು ಅಶ್ಕೆನಾಜಿ ಯಹೂದಿಗಳ ಪ್ರಮುಖ ಕೇಂದ್ರವಾಗಿತ್ತು. ಆಧುನಿಕ ಯಹೂದಿ ಸಂಸ್ಕೃತಿ, ಝಿಯೋನಿಝಂ, ಇದ್ದಿಶ್ ಸಾಹಿತ್ಯ, ಹಸಿದಿಕ್ ಚಳವಳಿ ಇತ್ಯಾದಿಗಳ ಜನ್ಮಸ್ಥಳವಾಗಿಯೂ ರಷ್ಯಾ ಗುರುತಿಸಿಕೊಂಡಿದೆ. ರಷ್ಯಾದ ಹಾಲಿ ಪ್ರಧಾನಿ ಮೈಖೆಲ್ ಮಿಶುಸ್ಟಿನ್ ಅವರು ಯಹೂದಿಯಾಗಿದ್ದಾರೆ. ಸೋವಿಯತ್ ಒಕ್ಕೂಟದ ಭಾಗವಾಗಿದ್ದ ಉಕ್ರೇನ್ನ ಇಂದಿನ ಅಧ್ಯಕ್ಷ ವ್ಲಾದಿಮೀರ್ ಝೆಲೆನ್ಸ್ಕಿ ಕೂಡಾ ಯಹೂದಿಯಾಗಿದ್ದಾರೆ. ತನ್ನದು ಸೋವಿಯತ್ ಯಹೂದಿ ಕುಟುಂಬ ಎಂದೂ ಅವರು ಬಹಿರಂಗವಾಗಿಯೇ ಹೇಳಿದ್ದಾರೆ. ಈ ಎಲ್ಲ ಮಾಹಿತಿಗಳನ್ನು ಹರಡಿಕೊಂಡು ನೋಡಿದರೆ,
ರಷ್ಯಾದ ಅಧ್ಯಕ್ಷ ಪುಟಿನ್ ಅವರ ನಿಲುವು ಇವುಗಳಿಂದ ಪ್ರಭಾವಿತವಾಗಿರುವ ಸಾಧ್ಯತೆ ಕಾಣಿಸುತ್ತಿದೆ. ಪುಟಿನ್ ಯಹೂದಿ ಅಲ್ಲದೇ ಇದ್ದರೂ ತನ್ನ ದೇಶದವರೆಂಬ ನೆಲೆಯಲ್ಲಿ ಇಸ್ರೇಲ್ನಲ್ಲಿರುವ ವಲಸಿಗ ಯಹೂದಿಯರ ಮೇಲೆ ಅನುಕಂಪ ಹುಟ್ಟುವ ಸಾಧ್ಯತೆಯೇ ಅಧಿಕ. ಅಲ್ಲದೇ, ರಷ್ಯಾ ಎಂದೂ ಇರಾನಿನ ಪಾರಂಪರಿಕ ಬೆಂಬಲಿಗ ರಾಷ್ಟ್ರ ಆಗಿರಲಿಲ್ಲ. 1980ರಲ್ಲಿ ಪ್ರಾರಂಭವಾಗಿ 1988ರಲ್ಲಿ ಕೊನೆಗೊಂಡ ಇರಾನ್-ಇರಾಕ್ ಯುದ್ಧದ ಸಮಯದಲ್ಲಿ ಇರಾಕ್ನ ಪರ ಬಲವಾಗಿ ನಿಂತ ರಾಷ್ಟ್ರವೇ ಸೋವಿಯತ್ ಯೂನಿಯನ್ ಎಂಬ ಹೆಸರಲ್ಲಿದ್ದ ಇಂದಿನ ರಷ್ಯಾ. ಆರಂಭದಲ್ಲಿ ತಟಸ್ಥವಾಗಿದ್ದ ರಷ್ಯಾ, ಇರಾಕ್ಗೆ ಸ್ಕಡ್ ಕ್ಷಿಪಣಿಗಳು, ಯುದ್ಧ ವಿಮಾನಗಳು, ಟ್ಯಾಂಕ್ಗಳು, ಆರ್ಟಿಲರಿ ಇತ್ಯಾದಿ 30 ಬಿಲಿಯನ್ ಡಾಲರ್ ಮೊತ್ತದ ಸೈನಿಕ ನೆರವು ನೀಡಿತ್ತು. ಇರಾಕ್ಗೆ ಬಂದ ಸೈನಿಕ ಸಹಾಯದ ಅರ್ಧಕ್ಕಿಂತಲೂ ಇದು ಹೆಚ್ಚಾಗಿತ್ತು. ಆದ್ದರಿಂದ,
ಇರಾನ್ ತನ್ನದೇ ಆದ ತಂತ್ರ ಮತ್ತು ತಂತ್ರಜ್ಞಾನದೊಂದಿಗೆ ಒಂಟಿಯಾಗಿಯೇ ಯುದ್ಧದಲ್ಲಿ ಭಾಗವಹಿಸುವುದಕ್ಕೆ ಮುಂದಾಗಿರುವಂತಿದೆ. ತನ್ನ ಮೇಲೆ ದಾಳಿ ಮಾಡಿದವರು ಮಾತ್ರವಲ್ಲ, ತನ್ನ ವಿರೋಧಿ ಅಮೇರಿಕಕ್ಕೆ ನೆಲೆ ಒದಗಿಸಿದವರನ್ನೂ ಯುದ್ಧರಂಗಕ್ಕೆ ಎಳೆದು ತಂದು ಅವರೆಲ್ಲರನ್ನೂ ರಕ್ಷಿಸುವ ಹೊಸ ತಲೆನೋವನ್ನು ಟ್ರಂಪ್ಗೆ ಕೊಡುವ ಯುದ್ಧತಂತ್ರವನ್ನು ಅದು ಹೆಣೆದಿರುವಂತಿದೆ. ಹಾಗಂತ, ಈ ಯುದ್ಧ ತಂತ್ರ ಅಚಾನಕ್ ಎನ್ನುವಂತೆಯೂ ಇಲ್ಲ. ಯುದ್ಧ ಪ್ರಾರಂಭವಾದ ಮರುದಿನವೇ ಗಲ್ಫ್ ರಾಷ್ಟ್ರಗಳಲ್ಲಿರುವ ಅಮೇರಿಕನ್ ಸೇನಾ ನೆಲೆಗಳ ಮೇಲೆ ಇರಾನ್ ದಾಳಿ ನಡೆಸಿದೆ. ಅಂದರೆ, ಅದು ಈ ಯುದ್ಧತಂತ್ರವನ್ನು ಮೊದಲೇ ಹೆಣೆದಿತ್ತು ಎಂದೇ ಅರ್ಥ. ಹಾಗಂತ,
ಈ ಯುದ್ಧತಂತ್ರದಿಂದ ಇರಾನ್ ನಿರೀಕ್ಷಿಸಿರುವ ಫಲಿತಾಂಶ ಬರುತ್ತದೋ ಅಥವಾ ತದ್ವಿರುದ್ಧ ಪರಿಣಾಮಕ್ಕೆ ಕಾರಣವಾಗುತ್ತದೋ ಹೇಳಲಾಗದು. ಆದರೆ, ಅಮೇರಿಕ ಮತ್ತು ಇಸ್ರೇಲ್ ನಿರೀಕ್ಷಿಸಿರದ ಯುದ್ಧತಂತ್ರದೊಂದಿಗೆ ಇರಾನ್ ರಂಗಕ್ಕಿಳಿದಿದೆ. ಈ ಕ್ಷಣದಲ್ಲಿ ಟ್ರಂಪ್ ಮತ್ತು ನೇತನ್ಯಾಹು ಅವರನ್ನು ಒತ್ತಡಕ್ಕೆ ಸಿಲುಕಿಸುವುದಕ್ಕಂತೂ ಇರಾನ್ ಶಕ್ತವಾಗಿದೆ.












