ಸನ್ಮಾರ್ಗ ವಾರ್ತೆ
ಅಮೆರಿಕ ಜೊತೆ ಮಾತುಕತೆ ಇಲ್ಲ ಎಂದು ಇರಾನ್ ನ್ಯಾಷನಲ್ ಸೆಕ್ಯೂರಿಟಿ ಕೌನ್ಸಿಲ್ ಕಾರ್ಯದರ್ಶಿ ಅಲಿ ಲರಿಜಾನಿ ಹೇಳಿಕೆ.
ಟೆಹ್ರಾನ್: ನ್ಯೂಕ್ಲಿಯರ್ ಮಾತುಕತೆ ನಡೆಸಲು ಇರಾನ್ ಮುಂದಾಗಿದೆ ಎಂದು ಯು.ಎಸ್ ಮಾಧ್ಯಮಗಳು ಮಾಡಿರುವ ವರದಿಯನ್ನು ಇರಾನ್ ತಳ್ಳಿಹಾಕಿದೆ.
ಅಯಾತುಲ್ಲಾ ಖಾಮ್ನೆಯಿ ಹತ್ಯೆಯ ನಂತರ ಒಮಾನಿ ಮಧ್ಯಸ್ಥಿಕೆಗಾರರ ಮೂಲಕ ಮಾತುಕತೆ ನಡೆಸುವಂತೆ ಇರಾನ್ ನ್ಯಾಷನಲ್ ಸೆಕ್ಯೂರಿಟಿ ಕೌನ್ಸಿಲ್ ಕಾರ್ಯದರ್ಶಿ ಅಲಿ ಲರಿಜಾನಿ ಒತ್ತಾಯಿಸುತ್ತಿದ್ದಾರೆ ಎಂದು ವಾಲ್ ಸ್ಟ್ರೀಟ್ ಜರ್ನಲ್ ಒಳಗೊಂಡಂತೆ ಅಮೆರಿಕದ ಸುದ್ದಿ ಮಾಧ್ಯಮಗಳು ವರದಿ ಮಾಡಿರುವ ಹಿನ್ನೆಲೆಯಲ್ಲಿ ಈ ಹೇಳಿಕೆ ಬಂದಿದೆ.
ಲರಿಜಾನಿ ಅವರ ಪತ್ರಿಕಾ ಪ್ರಕಟಣೆಯಲ್ಲಿ, “ಟ್ರಂಪ್ ತನ್ನ ಭ್ರಮಾ ಆಲೋಚನೆಗಳಿಂದ ಮಧ್ಯಪ್ರಾಚ್ಯವನ್ನು ತೀವ್ರ ಅವಸ್ಥೆಗೆ ತಳ್ಳಿದ್ದಾರೆ. ಹೆಚ್ಚಿನ ಅಮೆರಿಕನ್ ಸೈನಿಕರು ಪ್ರಾಣ ಕಳೆದುಕೊಳ್ಳಬಹುದೆಂದು ಈಗ ಭಯಬಿದ್ದಿದ್ದಾರೆ. ತನಗಾಗಿ ಸ್ವತಃ ರೂಪಿಸಿಕೊಂಡಿದ್ದ ‘ಅಮೆರಿಕಾ ಫಸ್ಟ್’ ಎಂಬ ಘೋಷಣೆಯನ್ನು ಬದಲಾಯಿಸಿಕೊಂಡು ‘ಇಸ್ರೇಲ್ ಫಸ್ಟ್’ ಎಂದು ಮಾಡುತ್ತಾ, ಇಸ್ರೇಲ್ನ ಅಧಿಕಾರ ಆಕಾಂಕ್ಷೆಗಳಿಗೆ ಅಮೆರಿಕದ ಸೈನಿಕರನ್ನು ಬಲಿಕೊಡುತ್ತಿದ್ದಾರೆ” ಎಂದು ತಿಳಿಸಿದ್ದಾರೆ.
ಇರಾನ್ನ ಹೊಸ ನೇತಾರರೊಂದಿಗೆ ಮಾತುಕತೆ ನಡೆಸಲು ಸಿದ್ಧವಿರುವುದಾಗಿ ಅಮೆರಿಕ ಅಧ್ಯಕ್ಷ ಟ್ರಂಪ್ ಇಚ್ಛೆ ವ್ಯಕ್ತಪಡಿಸಿದ್ದಾರೆ. ಇಸ್ರೇಲ್ ಮತ್ತು ಅಮೆರಿಕನ್ ಸೇನಾ ನೆಲೆಗಳ ಮೇಲೆ ಇರಾನ್ ತನ್ನ ದಾಳಿ ತೀವ್ರಗೊಳಿಸಿರುವ ಸಂದರ್ಭದಲ್ಲಿ ಈ ಹೇಳಿಕೆ ಬಂದಿದೆ.












