✍️ ಇಶಲ್ ತಮನ್ನ
ಒಂದೇ ಒಂದು ವರ್ಷದಲ್ಲಿ ಯುಎಪಿಎ ಪ್ರಕರಣದಲ್ಲಿ 2914 ಮಂದಿಯನ್ನು ಬಂಧಿಸಲಾಗಿದೆ. ಆದರೆ ನಂಬಲೇಬೇಕು. ಈ ಮಾಹಿತಿಯನ್ನು ಕೊಟ್ಟಿರುವುದು ಬೇರಾರೂ ಅಲ್ಲ. ಕೇಂದ್ರ ಸರಕಾರ. ಪಾರ್ಲಿಮೆಂಟಿನಲ್ಲಿ ಕೇಳಲಾದ ಪ್ರಶ್ನೆಗೆ ಈ ಭೀಕರ ಮಾಹಿತಿಯನ್ನು ಕೇಂದ್ರ ಸರಕಾರ ಹಂಚಿಕೊಂಡಿದೆ.
ಯುಎಪಿಎ ಅಂದರೆ ಗೊತ್ತಲ್ಲ. ಕಳೆದ ಐದು ವರ್ಷಗಳಿಂದ ವಿಚಾರಣೆಯೇ ಇಲ್ಲದೆ ಜೈಲಲ್ಲಿ ಕೊಳೆಯುತ್ತಿರುವ ಉಮರ್ ಖಾಲಿದ್, ಗುಲ್ಫಿಶಾ ಫಾತಿಮಾ ಶರ್ಜಿಲ್ ಇಮಾಮ್ ಮುಂತಾದವರು ಇದೇ ಕಾಯ್ದೆ ಅಡಿಯಲ್ಲಿ ಜೈಲಲ್ಲಿದ್ದಾರೆ. ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ವರ್ಷಗಳ ಕಾಲ ಜೈಲಲ್ಲಿದ್ದು ಅಲ್ಲೇ ಸಾವಿಗೀಡಾದ ಸ್ಟ್ಯಾನ್ ಸ್ವಾಮಿ ಇದೇ ಕಾಯ್ದೆಯಡಿ ಜೈಲಲ್ಲಿದ್ದರು.
1967ರಲ್ಲಿ ಈ ಯುಏಪಿಏ ಕಾಯ್ದೆಯನ್ನು ಮೊಟ್ಟಮೊದಲ ಬಾರಿ ಜಾರಿಗೆ ತರಲಾಯಿತು. ದೇಶದ ಸಾರ್ವಭೌಮತ್ವವನ್ನು ರಕ್ಷಿಸುವುದು ಮತ್ತು ಅಖಂಡತೆಯನ್ನು ಉಳಿಸಿಕೊಳ್ಳುವ ಉದ್ದೇಶವನ್ನು ಈ ಕಾಯ್ದೆ ಹೊಂದಿದೆ. ಈ ಕಾಯ್ದೆಯ ಕರಾಳತೆ ಮತ್ತು ಅಪಾಯಕಾರಿ ಅಂಶ ಏನೆಂದರೆ ಸಂವಿಧಾನವು ನಾಗರಿಕರಿಗೆ ಕೊಡ ಮಾಡುವ ಸ್ವಾತಂತ್ರ್ಯವನ್ನೇ ಕಸಿದುಕೊಳ್ಳುವ ಅವಕಾಶ ಈ ಕಾಯ್ದೆಗೆ ಇದೆ. ಅಭಿಪ್ರಾಯ ಸ್ವಾತಂತ್ರ್ಯವನ್ನೇ ಕಸಿದುಕೊಳ್ಳುವುದಕ್ಕೂ ಈ ಕಾಯ್ದೆಯಲ್ಲಿ ಅವಕಾಶ ಇದೆ. ಅತ್ಯಂತ ಶಾಂತಿಯಿಂದ ಮತ್ತು ಆಯುಧರಹಿತವಾಗಿ ಒಂದು ಕಡೆ ಪ್ರತಿಭಟನೆ ಸೇರಿದವರನ್ನು ಈ ಕಾಯ್ದೆಯ ಮೂಲಕ ದಮನಿಸುವುದಕ್ಕೂ ಅವಕಾಶ ಇದೆ. ಅಲ್ಲದೆ ಪ್ರಭುತ್ವಕ್ಕೆ ದೇಶ ಸುರಕ್ಷತೆಯ ಹೆಸರಲ್ಲಿ ಮತ್ತು ಸಂವಿಧಾನ ಹಾಗೂ ಇನ್ನಿತರ ನಿಯಮಗಳನ್ನು ಮೀರಿ ಅಧಿಕಾರ ಚಲಾಯಿಸಲು ಈ ಕಾಯ್ದೆಯಲ್ಲಿ ಅವಕಾಶ ಇದೆ.
ಆದ್ದರಿಂದಲೇ ಇದೊಂದು ನಿರಂಕುಶ ಕಾನೂನು ಮತ್ತು ಸರ್ವಾಧಿಕಾರಿ ಕಾನೂನು ಎಂಬ ಆರೋಪವನ್ನು ಹೊಂದಿದೆ.
1967ರಲ್ಲಿ ಪಾರ್ಲಿಮೆಂಟಿನ ಎರಡೂ ಸದನಗಳು ಈ ಕಾಯ್ದೆಗೆ ಅಂಗೀಕಾರ ನೀಡಿ ಡಿಸೆಂಬರ್ 30ರಂದು ರಾಷ್ಟ್ರಪತಿಯವರ ಸಹಿಯೊಂದಿಗೆ ಜಾರಿಗೆ ಬಂತು. ಆ ಬಳಿಕ 1969, 72, 86, 2004, 2008 ಮತ್ತು 2012 ಇತ್ಯಾದಿ ವರ್ಷ ಗಳಲ್ಲಿ ಈ ಕಾಯ್ದೆಗೆ ಇನ್ನಷ್ಟು ಉಗುರು ಹಲ್ಲುಗಳನ್ನು ಸೇರಿಸಲಾಯಿತು. 2008 ರಲ್ಲಿ ಕಾಯ್ದೆಗೆ ತರಲಾದ ತಿದ್ದುಪಡಿಯ ಬಳಿಕ ವ್ಯಾಪಕವಾಗಿ ಈ ಕಾಯ್ದೆಯನ್ನು ದುರುಪಯೋಗ ಪಡಿಸಲಾಗಿದೆ ಎಂದು ಹೇಳಲಾಗುತ್ತಿದೆ.
ಸಾಮಾನ್ಯರ ಮೇಲೂ ಯುಎಪಿಎ ಕಾಯ್ದೆಯನ್ನು ಹೇರುವ ಪರಂಪರೆ ಆರಂಭವಾದದ್ದೇ 2008ರ ಬಳಿಕ. ವಿಶೇಷ ಏನೆಂದರೆ 2914 ಮಂದಿಯನ್ನು ಕೇವಲ 2023 ಒಂದರಲ್ಲೇ ಯುಎಪಿಎ ಕಾಯ್ದೆಯಡಿ ಬಂಧಿಸಲಾಗಿದ್ದರೂ ಕೇವಲ 10 ಮಂದಿಗೆ ಮಾತ್ರ ಶಿಕ್ಷೆಯನ್ನು ನೀಡಲಾಗಿದೆ ಎಂದು ಕೂಡ ಕೇಂದ್ರ ಸಚಿವಾಲಯ ಪಾರ್ಲಿಮೆಂಟಿಗೆ ಮಾಹಿತಿಯನ್ನು ನೀಡಿದೆ. ಅಂದರೆ ಒಟ್ಟು ಬಂಧನದ 0.8% ಮಾತ್ರವೇ ಶಿಕ್ಷೆಯಾಗಿದೆ.
ಈ 2914 ಮಂದಿಯ ಬಂಧನದಲ್ಲಿ 1206 ಮಂದಿಯನ್ನು ಕೇವಲ ಜಮ್ಮು ಕಾಶ್ಮೀರದಿಂದಲೇ ಬಂಧಿಸಲಾಗಿದೆ. ಇದು ಒಟ್ಟು ಬಂಧನದ 42 ಶೇಕಡವಾಗುತ್ತದೆ.
ಇನ್ನೊಂದು ಕಡೆ ಈ ಕಾಯ್ದೆಯಡಿ ಬಂಧಿತರಾದವರ ಮಾಹಿತಿಯನ್ನು ಕಲೆ ಹಾಕಿದರೆ ಇವರಲ್ಲಿ ಹೆಚ್ಚಿನವರು ಒಂದೇ ಸಮುದಾಯಕ್ಕೆ ಸೇರಿದವರು ಅನ್ನುವುದು ಗೊತ್ತಾಗುತ್ತದೆ. ಒಂದು ನಿರ್ದಿಷ್ಟ ಸಮುದಾಯವನ್ನು ಗುರಿ ಮಾಡಿ 2014ರ ಬಳಿಕ ಬಂಧನ ಆರಂಭವಾಗಿದೆ ಎಂಬ ಅಭಿಪ್ರಾಯವೂ ಇದೆ. ಕೇವಲ ಜಮ್ಮು-ಕಾಶ್ಮೀರ ಒಂದರಿಂದಲೇ 1206 ಮಂದಿಯನ್ನು ಬಂಧಿಸಲಾಗಿದೆ ಎಂಬುದೇ ಈ ಅಭಿಪ್ರಾಯಕ್ಕೆ ಪುಷ್ಟಿಯನ್ನು ನೀಡುತ್ತದೆ.
ಅಂದ ಹಾಗೆ 2914 ಮಂದಿಯಲ್ಲಿ ಕೇವಲ ಹತ್ತು ಮಂದಿಗೆ ಮಾತ್ರ ಶಿಕ್ಷೆಯಾಗಿದೆ ಎಂದರೆ ಇದರ ಅರ್ಥವೇನು ? ಪ್ರಭುತ್ವವು ವಿನಾ ಕಾರಣ ಜನರನ್ನು ದೀರ್ಘಕಾಲಿಕವಾಗಿ ಜೈಲಲ್ಲಿ ಇಡುವುದಕ್ಕೆ ಈ ಕಾಯ್ದೆಯನ್ನು ದುರುಪಯೋಗಿಸುತ್ತಿದೆಯಾ? ಪ್ರಭುತ್ವ ವಿರೋಧಿ ಧ್ವನಿಯನ್ನು ದೇಶ ವಿರೋಧಿಯಾಗಿ ಬಿಂಬಿಸಿ ಮತ್ತು ದೇಶದ ಅಖಂಡತೆಗೆ ಅಪಾಯಕಾರಿಯಾಗಿ ಬಿಂಬಿಸಿ ಜೈಲಿಗೆ ತಳ್ಳುತ್ತಿದೆಯಾ? ಈ ಪ್ರಶ್ನೆಗೆ ಕಾರಣ ಏನೆಂದರೆ 2020ರಲ್ಲಿ ದೆಹಲಿಯಲ್ಲಿ ನಡೆದ ಗಲಭೆ. ಈ ಗಲಭೆಯಲ್ಲಿ ನಿರ್ದಿಷ್ಟ ವ್ಯಕ್ತಿಗಳನ್ನೇ ಗುರಿ ಮಾಡಿ ಯುಎಪಿಎ ದಾಖಲಿಸಲಾಗಿದೆ. ಈ ಗಲಭೆಗೆ ಪೂರಕವಾಗಿ ಬಿಜೆಪಿ ನಾಯಕರಾದ ಅನುರಾಗ್ ಠಾಕೂರ್ ತಿವಾರಿ ಮುಂತಾದ ಬಿಜೆಪಿ ನಾಯಕರು ಅತ್ಯಂತ ಆಕ್ಷೇಪಾರ್ಹ ಘೋಷಣೆಗಳನ್ನು ಕೂಗಿದ್ದಾರೆ. ಗಲಭೆಗೆ ಪ್ರಚೋದನೆ ಮಾಡುವ ಭಾಷಣ ಮಾಡಿದ್ದಾರೆ. ಗೋಲಿ ಮಾರೋ ಸಾಲೋಂಕೋ ಎಂಬ ಕುಪ್ರಸಿದ್ಧ ಘೋಷಣೆಯೂ ಇದರಲ್ಲಿ ಒಂದು.
ಆದರೆ ಇವರಾರ ಮೇಲೂ ಯುಎಪಿಎ ಪ್ರಕರಣದಡಿ ಕೇಸು ದಾಖಲಾಗಿಲ್ಲ. ಆದರೆ ಕೇಂದ್ರ ಸರ್ಕಾರದ NRC ನಿಯಮವನ್ನು ಪ್ರಶ್ನಿಸಿ ನಿರಾಯುಧರಾಗಿ ಪ್ರತಿಭಟನೆ ನಡೆಸಿದ ಉಮರ್ ಖಾಲಿದ್ ಮತ್ತು ಇನ್ನಿತರ ವಿದ್ಯಾರ್ಥಿ ನಾಯಕರನ್ನು ಐದು ವರ್ಷಗಳಿಂದ ವಿಚಾರಣೆಯೂ ಇಲ್ಲದೆ ಜೈಲಲ್ಲಿ ಇಡಲಾಗಿದೆ.
ಇದೀಗ ಕೇಂದ್ರ ಸರಕಾರ ನೀಡಿರುವ ಮಾಹಿತಿಯ ಆಧಾರದಲ್ಲಿ ಹೇಳುವುದಾದರೆ ಇವರನ್ನೆಲ್ಲ ಜೈಲಲ್ಲಿಟ್ಟು ಸತಾಯಿಸುವುದಕ್ಕಾಗಿಯೇ ಯುಎಪಿಎ ಕಾಯ್ದೆಯನ್ನು ಹೇರಲಾಗಿದೆ ಎಂದೇ ಹೇಳಬಹುದು. 2914 ಮಂದಿಯನ್ನು ಬಂಧಿಸಿ ಅವರಲ್ಲಿ ಕೇವಲ ಹತ್ತು ಮಂದಿಗೆ ಮಾತ್ರ ಶಿಕ್ಷೆಯಾಗುವುದಾದರೆ ಈ ರೀತಿಯ ಬಂಧನದಿಂದ ಆಗುವ ಪ್ರಯೋಜನ ಏನು? ಯಾರಿಗೆ? ಸರಕಾರ ಉದ್ದೇಶಪೂರ್ವಕವಾಗಿಯೇ ನಿರ್ದಿಷ್ಟ ಜನರನ್ನು, ಜೈಲಲಿಟ್ಟು ಅವರ ಪ್ರತಿಭಟನಾ ಮನೋಭಾವವನ್ನು ಕುಗ್ಗಿಸುವುದಕ್ಕಾಗಿ ಈ ಕಾಯ್ದೆಯನ್ನು ದುರ್ಬಳಕೆ ಮಾಡುತ್ತಿದೆಯೇ ಎಂಬ ಅನುಮಾನ ಉಂಟಾಗಿದೆ.












