✍️ ಏ.ಕೆ. ಕುಕ್ಕಿಲ
2024 ಜನವರಿ 2
2024 ಡಿಸೆಂಬರ್ 20
- ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ಬಗ್ಗೆ ಚರ್ಚಿಸುವಾಗ ಈ ಎರಡೂ ದಿನಾಂಕಗಳು ಬಹಳ ಮುಖ್ಯವಾಗುತ್ತವೆ.
ಕಾನೂನು ಮತ್ತು ನ್ಯಾಯ ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರು 2023 ಆಗಸ್ಟ್ 10ರಂದು ರಾಜ್ಯಸಭೆಯಲ್ಲಿ ಒಂದು ಮಸೂದೆಯನ್ನು ಮಂಡಿಸಿದರು. ‘ಮುಖ್ಯ ಚುನಾವಣಾ ಆಯುಕ್ತರು ಮತ್ತು ಇತರ ಚುನಾವಣಾ ಆಯುಕ್ತರ ನೇಮಕಾತಿ, ಸೇವಾ ಷರತ್ತುಗಳು ಮತ್ತು ಅಧಿಕಾರಾವಧಿ ಕಾಯ್ದೆ..’ ಎಂಬುದು ಇದರ ಹೆಸರು. ‘ಮುಖ್ಯ ಚುನಾವಣಾ ಆಯುಕ್ತರು ಮತ್ತು ಇತರ ಇಬ್ಬರು ಆಯುಕ್ತರು ತಮ್ಮ ಕರ್ತವ್ಯದ ಅವಧಿಯಲ್ಲಿ ತೆಗೆದುಕೊಂಡ ಯಾವುದೇ ನಿರ್ಧಾರವನ್ನೂ ನ್ಯಾಯಾಲಯದಲ್ಲಿ ಪ್ರಶ್ನಿಸುವಂತಿಲ್ಲ, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತಿಲ್ಲ ಮತ್ತು ಜೀವನ ಪರ್ಯಂತ ಅವರಿಗೆ ಕಾನೂನು ರಕ್ಷಣೆ ಒದಗಿಸಲಾಗುವುದು..’ ಎಂಬುದಾಗಿ ಈ ಮಸೂದೆಯಲ್ಲಿ ಹೇಳಲಾಗಿತ್ತು. ನಿಜವಾಗಿ,
ರಾಷ್ಟ್ರಪತಿಗೂ ಇಂಥದ್ದೊಂದು ರಿಯಾಯಿತಿ ಇಲ್ಲ. ಪ್ರಧಾನಿ ಗಾಗಲಿ, ಸುಪ್ರೀಮ್ ಕೋರ್ಟ್ ನ ಮುಖ್ಯ ನ್ಯಾಯಾಧೀಶರಿಗಾಗಲಿ ಯಾರಿಗೂ ಕಾನೂನಿನಲ್ಲಿ ಇಂಥದ್ದೊಂದು ರಿಯಾಯಿತಿಯೇ ಇಲ್ಲ. ಹೀಗಿರುವಾಗ, ಚುನಾವಣಾ ಆಯುಕ್ತರಿಗೆ ಮಾತ್ರ ಈ ರಿಯಾಯಿತಿ ಏಕೆ ಎಂಬ ಪ್ರಶ್ನೆಯನ್ನು ವಿರೋಧ ಪಕ್ಷಗಳು ಎತ್ತಬಹುದು ಎಂಬ ಪ್ರಜ್ಞೆ ಸರಕಾರಕ್ಕಿತ್ತು. ಆದ್ದರಿಂದಲೇ,
ಮಸೂದೆಯಲ್ಲಿ ಸೆಕ್ಷನ್ 16 ಎಂಬ ಈ ಅಂಶವನ್ನು ಸೇರಿಸದೆಯೇ ಮಂಡಿಸಲಾಗಿತ್ತು. ಬಳಿಕ ಕೊನೆಯ ಕ್ಷಣದ ತಿದ್ದು ಪಡಿಯಾಗಿ ಸೆಕ್ಷನ್ 16ನ್ನು ಸೇರಿಸಲಾಯಿತು. ವಿರೋಧ ಪಕ್ಷಗಳ ಸಭಾತ್ಯಾಗದ ನಡುವೆಯೇ 2023 ಡಿಸೆಂಬರ್ 12ರಂದು ಮಸೂದೆಯನ್ನು ಅಂಗೀಕರಿಸಲಾಯಿತು. 2023 ಡಿಸೆಂಬರ್ 21ರಂದು ಲೋಕಸಭೆಯಲ್ಲೂ ಅಂಗೀಕಾರವಾಯಿತು. ಡಿಸೆಂಬರ್ 28ರಂದು ರಾಷ್ಟ್ರಪತಿಯವರು ಅಂಕಿತ ಹಾಕಿದರು. 2024 ಜನವರಿ 2ರಂದು ಕಾನೂನಾಗಿ ಜಾರಿಯಾಯಿತು.
- 2024 ಅಕ್ಟೋಬರ್ನಲ್ಲಿ ಹರ್ಯಾಣದಲ್ಲಿ ವಿಧಾನಸಭಾ ಚುನಾವಣೆ ನಡೆಯಿತು. ಬಿಜೆಪಿ ಮರಳಿ ಅಧಿಕಾರಕ್ಕೆ ಬರುವುದಿಲ್ಲ ಎಂಬುದಾಗಿ ಮಾಧ್ಯಮ ಸಮೀಕ್ಷೆಗಳೂ ಹೇಳಿದ್ದುವು. ಚುನಾವಣಾ ತಜ್ಞರೂ ಈ ಬಗ್ಗೆ ಬಹುತೇಕ ಖಚಿತ ನಿಲುವನ್ನೇ ವ್ಯಕ್ತಪಡಿಸಿದ್ದರು. ಹರ್ಯಾಣದ ಕುಸ್ತಿಪಟುಗಳ ಮೇಲೆ ನಡೆದಿರುವ ಲೈಂಗಿಕ ಕಿರು ಕುಳ ಮತ್ತು ಅದಕ್ಕೆ ಬಿಜೆಪಿ ಸಂಸದ ಮತ್ತು ಕುಸ್ತಿ ಫೆಡರೇಶನ್ ಅಧ್ಯಕ್ಷ ಬ್ರಿಜ್ಭೂಷಣ್ ಸಿಂಗ್ ಕಾರಣ ಎಂಬ ಆರೋಪಗಳು ಚುನಾವಣೆಯ ಮೇಲೆ ಸಾಕಷ್ಟು ಪರಿಣಾಮವನ್ನು ಬೀರಿದ್ದುವು. ಲೈಂಗಿಕ ಕಿರುಕುಳ ಆರೋಪ ಹೊರಿಸಿದ್ದ ಕುಸ್ತಿಪಟು ವಿನೇಶ್ ಫೋಗಟ್ ಅವರು ಕಾಂಗ್ರೆಸ್ನಿಂದ ಸ್ಪರ್ಧಿಸುವ ಮೂಲಕ ಜುಲಾನಾ ಕ್ಷೇತ್ರದಲ್ಲಿ ಹವಾ ಎಬ್ಬಿಸಿದ್ದರು. ಇಷ್ಟೆಲ್ಲ ಇದ್ದರೂ ಮತ ಎಣಿಕೆಯ ದಿನದಂದು ಎಲ್ಲ ನಿರೀಕ್ಷೆಗಳೂ ತಲೆ ಕೆಳಗಾದುವು. ಬಿಜೆಪಿಗೆ ಅನಿರೀಕ್ಷಿತ ಗೆಲುವು ಲಭ್ಯವಾಯಿತು. ಇದು ಕಾಂಗ್ರೆಸ್ ಮಾತ್ರವಲ್ಲ, ಮಾಧ್ಯಮ ಸಮೀಕ್ಷಕರನ್ನೂ ಅಚ್ಚರಿಯಲ್ಲಿ ಕೆಡವಿತು. ಈ ಹಿನ್ನೆಲೆಯಲ್ಲಿ, ಕರಣ್ ಸಿಂಗ್ ದಲಾಲ್ ನೇತೃತ್ವ ದಲ್ಲಿ ಕಾಂಗ್ರೆಸ್ ಪಕ್ಷವು ಸತ್ಯಶೋಧನಾ ಸಮಿತಿಯನ್ನು ರಚಿಸಿತು. ಅದು ಮತ ಎಣಿಕೆಯಲ್ಲಿ ಕೆಲವು ಗಂಭೀರ ಲೋಪಗಳನ್ನು ಪತ್ತೆ ಹಚ್ಚಿತು. ಮುಖ್ಯವಾಗಿ,
- ಕೆಲವು ಇವಿಎಂಗಳಲ್ಲಿ ಮತ ಎಣಿಕೆ ಮುಗಿದ ಬಳಿಕವೂ ಬ್ಯಾಟರಿ ಚಾರ್ಜ್ 99% ತೋರಿಸುತ್ತಿತ್ತು. ಇವಿಎಂ ಯಂತ್ರವು ಸಂಪೂರ್ಣ ದಿನ ಬಳಕೆಯಾದ ಬಳಿಕವೂ ಬ್ಯಾಟರಿ ಇಷ್ಟು ಪ್ರಮಾಣದಲ್ಲಿ ಚಾರ್ಜ್ ತೋರಿಸುತ್ತಿರುವುದು ಸಂಶಯಾಸ್ಪದ.
- ಮತಗಟ್ಟೆಯಲ್ಲಿ ದಾಖಲಾದ ಮತಗಳ ಲೆಕ್ಕ ಹೇಳುವ ಫಾರಮ್ 17ಸಿ ಮತ್ತು ಇವಿಎಂನಿಂದ ಬಂದ ಮತಗಳ ನಡುವೆ ವ್ಯತ್ಯಾಸ ಇದೆ.
- ಮತದಾನದ ದಿನದಂದು ಸಂಜೆ 5 ಗಂಟೆಗೆ ಘೋಷಿಸಿದ ಮತ ಚಲಾವಣೆಯ ಪ್ರಮಾಣ ಮತ್ತು ನಂತರ ಕೊಡಲಾದ ಅಂಕಿ-ಅಂಶಗಳಲ್ಲಿ ವಿಪರೀತ ಹೆಚ್ಚಳ.
- ಕೆಲವು ಸಂದರ್ಭಗಳಲ್ಲಿ ಇವಿಎಂ ಮತ್ತು ವಿವಿ ಪ್ಯಾಟ್ ಚೀಟಿಗಳು ಹೊಂದಿಕೆಯಾಗುತ್ತಿಲ್ಲ.
ಈ ಎಲ್ಲ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹೈಕೋರ್ಟ್ ಮೆಟ್ಟಲೇರಿತು. ದೂರನ್ನು ವಿಚಾರಣೆಗೆ ಎತ್ತಿಕೊಂಡ ಹೈಕೋರ್ಟ್ ಮಹತ್ವದ್ದೆಂದು ಹೇಳಲಾದ ಆದೇಶವೊಂದನ್ನು ನೀಡಿತು. ಫಾರಂ 17ಸಿ ಮತ್ತು ಮತಗಟ್ಟೆ ಒಳಗಿನ ದೃಶ್ಯಗಳುಳ್ಳ ಸಿಸಿಟಿವಿ ಫುಟೇಜ್ಗಳನ್ನು ಅರ್ಜಿದಾರರ ವಕೀಲರಾದ ಮಹ್ಮೂದ್ ಪ್ರಾಚಾರಿಗೆ ನೀಡಬೇಕು ಎಂದು ಅದು 2024 ಡಿಸೆಂಬರ್ 9ರಂದು ಹೇಳಿತು. ಈಗಾಗಲೇ ಇರುವ ನಿಯಮ 93ರ ಅಡಿಯಲ್ಲಿ ಹೈಕೋರ್ಟ್ ಈ ಆದೇಶವನ್ನು ನೀಡಿತ್ತು. ಅಂದಹಾಗೆ,
ಈ ಆದೇಶದ ಬಳಿಕ ನಡೆದದ್ದು ಅಭೂತಪೂರ್ವ ಬೆಳವಣಿಗೆ
ಹೈಕೋರ್ಟು ಆದೇಶದ 8 ದಿನಗಳ ಬಳಿಕ 2024 ಡಿಸೆಂಬರ್ 17ರಂದು ಚುನಾವಣಾ ಆಯೋಗ ಚುರುಕಾಯಿತು. ಹೈಕೋರ್ಟು ಯಾವ ನಿಯಮದಡಿ ಸಿಸಿ ಟಿವಿ ಫುಟೇಜ್ ಅನ್ನು ವಕೀಲರಿಗೆ ನೀಡುವಂತೆ ಆದೇಶಿಸಿತೋ ಅದೇ ನಿಯಮ 93ಕ್ಕೆ ತಿದ್ದುಪಡಿಯನ್ನು ಮಾಡು ವಂತೆ ಕೇಂದ್ರ ಸರಕಾರಕ್ಕೆ ಅಥವಾ ಕಾನೂನು ಸಚಿವಾಲಯಕ್ಕೆ ಪ್ರಸ್ತಾವನೆ ಸಲ್ಲಿಸಿತು. ಈ ಪತ್ರವನ್ನು ಕಾನೂನು ಸಚಿವಾಲಯ ಡಿಸೆಂಬರ್ 19ರಂದು ಸ್ವೀಕರಿಸಿತು. ಮರು ದಿನ ಡಿಸೆಂಬರ್ 20ರಂದು ಕಾನೂನು ಸಚಿವಾಲಯ ಮತ್ತು ಚುನಾವಣಾ ಆಯೋಗದ ನಡುವೆ ಚರ್ಚೆ ನಡೆಯಿತು. ನಿಯಮ 93ರಲ್ಲಿ ಬದಲಾವಣೆ ತರಲಾ ಯಿತು. ಅದಕ್ಕೆ ಅನುಮೋದನೆಯನ್ನೂ ನೀಡಲಾಯಿತು. ರಾತ್ರಿ 10.23 ನಿಮಿಷಕ್ಕೆ ಅಧಿಸೂಚನೆಯನ್ನೂ ಹೊರಡಿಸಲಾಯಿತು. ಈ ಎಲ್ಲವೂ ಡಿ. 20ರ ಒಂದೇ ದಿನ ನಡೆಯಿತು. ಹಳೆಯ ನಿಯಮದಲ್ಲಿ, ‘ಚುನಾವಣೆಗೆ ಸಂಬAಧಿಸಿದ ಎಲ್ಲ ಇತರ ಕಾಗದ ಪತ್ರಗಳು ಸಾರ್ವಜನಿಕ ಪರಿಶೀಲನೆಗೆ ತೆರೆದಿರುತ್ತದೆ’ ಎಂದಿತ್ತು. ಅದನ್ನು ‘ನಿರ್ದಿಷ್ಟಪಡಿಸಿದ ಎಲ್ಲ ಇತರ ಕಾಗದ ಪತ್ರಗಳು..’ ಎಂದು ಬದಲಾಯಿ ಸಲಾಯಿತು. ಈ ನಿಯಮವನ್ನು ತೋರಿಸಿ ಸಿಸಿಟಿವಿ ಫುಟೇಜ್ ಕೊಡಲು ನಿರಾಕರಿಸ ಲಾಯಿತು. ಅಂದಹಾಗೆ,
ಹೈಕೋರ್ಟ್ ಆದೇಶದ ಬಳಿಕ ಈ ಎಲ್ಲ ನಿಯಮಗಳಲ್ಲಿ ತರಾತುರಿಯಿಂದ ಬದಲಾವಣೆ ಮಾಡಲಾಯಿತು ಎಂಬುದೇ ಇಲ್ಲೇನೋ ಮೋಸ ನಡೆದಿದೆ ಎಂಬುದನ್ನು ಸೂಚಿಸುತ್ತದೆ. ಚುನಾವಣಾ ಆಯುಕ್ತರಿಗೆ ಕಾನೂನು ಕ್ರಮಗಳಿಂದ ರಿಯಾಯಿತಿಯನ್ನು ಒದಗಿಸಿರುವುದು ಮತ್ತು ರಾತೋರಾತ್ರಿ ನಿಯಮವನ್ನೇ ಬದಲಾವಣೆ ಮಾಡಿ ಸಾಕ್ಷ್ಯ ಒದಗಿಸುವುದರಿಂದ ನುಣುಚಿಕೊಳ್ಳುವುದು ನಿಜಕ್ಕೂ ಕೆಲವು ಪ್ರಶ್ನೆಗಳಿಗೆ ಕಾರಣವಾಗಿದೆ. ಸಿಸಿಟಿವಿ ಫುಟೇಜನ್ನು ಒದಗಿಸಿರುತ್ತಿದ್ದರೆ, ಮತಗಳ ಚಲಾವಣೆಯ ಲೆಕ್ಕ ಮತ್ತು ಇವಿಎಂನಲ್ಲಿ ದಾಖಲಾದ ಮತಗಳ ಲೆಕ್ಕಗಳನ್ನು ತಾಳೆ ಹಾಕಬಹುದಾಗಿತ್ತು. ಸಂಜೆ 5 ಗಂಟೆಯ ಬಳಿಕ ವಿಪರೀತ ಪ್ರಮಾಣದಲ್ಲಿ ಮತ ಚಲಾವಣೆಯಾಗಿರುವುದರ ಸತ್ಯಾಸತ್ಯತೆಯನ್ನು ತಿಳಿದುಕೊಳ್ಳಬಹುದಾಗಿತ್ತು. ಇವಿಎಂ ಯಂತ್ರವನ್ನು ದುರುಪಯೋಗಿಸಿಕೊಳ್ಳಲಾಗಿದೆಯಾ, ನಿರ್ದಿಷ್ಟ ಪಕ್ಷಕ್ಕೆ ನಕಲಿ ಮತಗಳನ್ನು ಚಲಾಯಿಸಲಾಗಿದೆಯಾ ಎಂಬಿತ್ಯಾದಿ ಸಂಶಯಗಳಿಗೆ ಉತ್ತರ ಸಿಗುತ್ತಿತ್ತು. ಆದರೆ, ನಿಯಮ 93ಕ್ಕೆ ತಿದ್ದುಪಡಿ ಮಾಡಿ ಈ ಅವಕಾಶಕ್ಕೇ ಚುನಾವಣಾ ಆಯೋಗ ಕಲ್ಲು ಹಾಕಿತು. ಆದ್ದರಿಂದಲೇ, ಚುನಾವಣಾ ಆಯೋಗದ ಪ್ರಾಮಾಣಿಕತೆ ಪ್ರಶ್ನೆಗೂ ಈಡಾಯಿತು. ಸದ್ಯ,
ಜ್ಞಾನೇಶ್ ಕುಮಾರ್ ಅವರು ಅನುಮಾನಾಸ್ಪದ ವ್ಯಕ್ತಿಯಾಗಿ ದೇಶದ ಮುಂದೆ ನಿಂತಿದ್ದಾರೆ. ಅವರು ಚುನಾವಣಾ ಆಯುಕ್ತರಾಗುವ ಮೊದಲು ಕೇರಳದ ಎರ್ನಾಕುಲಂನ ಜಿಲ್ಲಾಧಿಕಾರಿಯಾಗಿದ್ದರು. 2016 ಮೇ 16ರಂದು ಕೇಂದ್ರ ಗೃಹಸಚಿವಾಲಯದ ಜಂಟಿ ಕಾರ್ಯದರ್ಶಿಯಾದರು. ಇದು ಗೃಹಸಚಿವ ಅಮಿತ್ ಶಾ ಅವರ ಅಧೀನದಲ್ಲಿದೆ. 2018ರಿಂದ 21ರ ವರೆಗೆ ಹೆಚ್ಚುವರಿ ಕಾರ್ಯದರ್ಶಿಯಾಗಿ ನೇಮಕವಾದರು. ಈ ಸಮಯದಲ್ಲಿ ಕಾಶ್ಮೀರದ 370ನೇ ವಿಧಿರದ್ಧತಿ ಮತ್ತು ಜಮ್ಮು-ಕಾಶ್ಮೀರ ಪುನರ್ ಸಂಘಟನೆ ಕಾಯ್ದೆಯ ಕರಡು ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅಯೋಧ್ಯೆಯ ರಾಮಮಂದಿರ ಟ್ರಸ್ಟ್ ರಚನೆಯಲ್ಲೂ ಮುಖ್ಯ ಪಾತ್ರ ವಹಿಸಿದ್ದರು. 2022ರಿಂದ ಸಹ ಕಾರ ಸಚಿವಾಲಯದ ಕಾರ್ಯ ದರ್ಶಿಯಾಗಿ ನೇಮಕವಾದರು. ಇದು ಕೂಡಾ ಅಮಿತ್ ಶಾ ಅವರ ಅಧೀನದಲ್ಲಿದೆ. ಜನವರಿ 31, 2024ರಂದು ಐಎಎಸ್ ಅಧಿಕಾರಿಯಾಗಿ ನಿವೃತ್ತಿಯಾಗುವ ವರೆಗೂ ಅವರು ಇದೇ ಹುದ್ದೆಯಲ್ಲಿದ್ದರು. ಹೀಗೆ ನಿವೃತ್ತಿಯಾಗಿ ಒಂದೂವರೆ ತಿಂಗಳೊ ಳಗೆ 2024 ಮಾರ್ಚ್ 15ರಂದು ಚುನಾವಣಾ ಆಯುಕ್ತರಾಗಿ ನೇಮಕವಾದರು. ಮಾತ್ರವಲ್ಲ, 2024ರ ಲೋಕಸಭಾ ಚುನಾವಣೆಯ ಮೇಲ್ವಿಚಾರಣೆಯನ್ನು ನೋಡಿಕೊಂಡರು. 2025 ಫೆಬ್ರವರಿ 19ರಂದು ಮುಖ್ಯ ಚುನಾವಣಾ ಆಯುಕ್ತರಾಗಿ ನೇಮಕವಾದರು. ವಿಶೇಷ ಏನೆಂದರೆ,
ಗೃಹಸಚಿವ ಅಮಿತ್ ಶಾ ಅವರ ಅಧೀನದ ಸಹಕಾರ ಸಚಿವಾಲಯದ ಕಾರ್ಯ ದರ್ಶಿಯಾಗಿ ನಿವೃತ್ತರಾದ ಒಂದೂವರೆ ತಿಂಗಳಲ್ಲಿಯೇ ಜ್ಞಾನೇಶ್ ಕುಮಾರ್ ಅವರು ಚುನಾವಣಾ ಆಯುಕ್ತರಾಗಿ ನೇಮಕವಾದರು ಎಂಬುದು. ಆದ್ದರಿಂದಲೇ ಈ ನಿವೃತ್ತಿಯ ಬಗ್ಗೆಯೇ ಅನುಮಾನಗಳು ಮೂಡುತ್ತವೆ. ಚುನಾವಣಾ ಆಯುಕ್ತರಾಗಿ ನೇಮಕ ಮಾಡುವ ಉದ್ದೇಶದಿಂದಲೇ ಈ ನಿವೃತ್ತಿ ನಡೆಯಿತೇ, ಇವರ ನೇಮಕದ ಹಿನ್ನೆಲೆಯಲ್ಲಿ ಚುನಾವಣಾ ಆಯುಕ್ತರಿಗೆ ಕಾನೂನು ಪ್ರಕ್ರಿಯೆಯಿಂದ ರಿಯಾಯಿತಿಯನ್ನು ಕೊಡುವ ಕಾಯ್ದೆಯನ್ನು 2024 ಜನವರಿಯಲ್ಲಿ ಜಾರಿ ಮಾಡಲಾಯಿತೇ, 2025 ಫೆಬ್ರವರಿಯಲ್ಲಿ ಇವರು ಮುಖ್ಯ ಚುನಾವಣಾ ಆಯುಕ್ತರಾಗುತ್ತಾರೆ ಮತ್ತು ಆ ಸಮಯದಲ್ಲಿ SIR ಪ್ರಕ್ರಿಯೆಯನ್ನು ನಡೆಸಬಹುದು ಮತ್ತು ಜ್ಞಾನೇಶ್ ಕುಮಾರ್ರಿಗೆ ಯಾವ ತೊಂದರೆಯೂ ಆಗದಂತೆ ಕಾನೂನಿನ ರಕ್ಷಣೆ ಒದಗಿಸಬೇಕು ಎಂಬುದಾಗಿ ನಿರ್ಧರಿಸಲಾಗಿತ್ತೇ?
2025 ಆಗಸ್ಟ್ 7ರಂದು ರಾಹುಲ್ ಗಾಂಧಿ ದೆಹಲಿಯಲ್ಲಿ ಒಂದು ಪತ್ರಿಕಾ ಗೋಷ್ಠಿಯನ್ನು ಕರೆದಿದ್ದರು. ಮತಗಳ್ಳತನ ಆಗುತ್ತಿದೆ ಎಂಬುದಾಗಿ ಪಿಪಿಟಿ ಪ್ರೆಸೆಂಟೇ ಶನ್ ಮೂಲಕ ಮಾಧ್ಯಮಗಳಿಗೆ ವಿವರಿಸಿ ದರು. ಬೆಂಗಳೂರಿನ ಮಹದೇವಪುರ ಅಸೆಂಬ್ಲಿ ಕ್ಷೇತ್ರದ ಉದಾಹರಣೆಯನ್ನು ಕೊಟ್ಟು ಈ ವಾದವನ್ನು ಮುಂದಿಟ್ಟಿದ್ದರು. ಒಂದೇ ಮನೆ ವಿಳಾಸದಲ್ಲಿ 80ಕ್ಕಿಂತಲೂ ಅಧಿಕ ಮತದಾರರು ಮತದಾರರ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿರುವುದನ್ನು ದೇಶದ ಗಮನಕ್ಕೆ ತಂದಿದ್ದರು. ಇದಾಗಿ 10 ದಿನಗಳ ಬಳಿಕ ಆಗಸ್ಟ್ 17ರಂದು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ಪತ್ರಿಕಾಗೋಷ್ಠಿ ನಡೆಸಿ ದರು. ಮತಗಳ್ಳತನ ಎಂಬುದು ದೇಶಕ್ಕೆ ಮಾಡುವ ಅಪಮಾನ ಎಂದು ಹೇಳಿದರು. ಆರೋಪಗಳನ್ನು ಸಾಬೀತುಪಡಿಸಲು ಸಹಿ ಮಾಡಿದ ಪ್ರಮಾಣ ಪತ್ರವನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಬೇಕು ಅಥವಾ ದೇಶದ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದರು. ಇದಾಗಿ ಒಂದು ವರ್ಷ ಕಳೆದ ಬಳಿಕ, ಸ್ವತಃ ಜ್ಞಾನೇಶ್ ಕುಮಾರ್ ಅವರೇ ದೇಶದ ಕ್ಷಮೆ ಯಾಚಿಸುವಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಅವರ ವಿಶ್ವಾಸಾರ್ಹತೆಗೆ ಭಾರೀ ಪ್ರಮಾಣದಲ್ಲಿ ಧಕ್ಕೆ ಬಂದಿದೆ. ಇದಕ್ಕೆ ಕಾರಣ, ಅವರದೇ ಇಬ್ಬರು ಸಹೋದ್ಯೋಗಿಗಳು.
SIR ಪ್ರಕ್ರಿಯೆಯಲ್ಲಿ ಆಗಿರುವ ಗಂಭೀರ ಲೋಪಗಳನ್ನು ಸುಖ್ಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಎಂಬಿಬ್ಬರು ಆಯುಕ್ತರು ಲಿಖಿತ ಬರಹದ ಮೂಲಕ ಪ್ರಶ್ನಿಸಿದ್ದಾರೆ. ಹೊಸ ಮತದಾರರನ್ನು ಸೇರಿಸುವಾಗ ಅವರ ತಂದೆ-ತಾಯಿ ಅಥವಾ ಅಜ್ಜ-ಅಜ್ಜಿ ಹಳೆಯ ಮತದಾರರ ಪಟ್ಟಿಯಲ್ಲಿ ಇದ್ದರೇ ಎಂಬ ನಿಮಯವು ಕಾನೂನುಬಾಹಿರ ಎಂದವರು ಲಿಖಿತ ಆಕ್ಷೇಪ ನಡೆಸಿದ್ದಾರೆ. ಈ ನಿಯಮದ ಆಧಾರದಲ್ಲಿಯೇ ಲಕ್ಷಾಂತರ ಮತದಾರರನ್ನು ಮತದಾರರ ಪಟ್ಟಿಯಿಂದ ಹೊರಹಾಕಲಾ ಗಿದೆ. ದೇಶದ 30 ರಾಜ್ಯ ಮತ್ತು ಕೇಂದ್ರಾ ಡಳಿತ ಪ್ರದೇಶಗಳಲ್ಲಿ ಒಟ್ಟು 13 ಕೋಟಿ ಮತದಾರರನ್ನು ಪಟ್ಟಿಯಿಂದ ಹೊರಹಾಕಲಾಗಿದೆ. ಇವರಲ್ಲಿ ಸಾಕಷ್ಟು ಮಂದಿ ಈ ನಿಯಮದ ಕಾರಣದಿಂದಾಗಿ ಹೊರ ಬಿದ್ದಿದ್ದಾರೆ. ಈ ನಿಯಮವನ್ನು ಮಾಡುವ ಅಧಿಕಾರ ಸಂಸತ್ತಿಗಿದೆಯೇ ಹೊರತು ಚುನಾವಣಾ ಆಯುಕ್ತರಿಗಿಲ್ಲ. ಆದರೆ ಸಂಸತ್ತಿನ ಗಮನಕ್ಕೆ ತಾರದೆಯೇ ಜ್ಞಾನೇಶ್ ಕುಮಾರ್ ಅವರೇ ಈ ನಿಯಮವನ್ನು ತಂದಿರುವುದು ಗಂಭೀರ ಲೋಪವಾಗಿದೆ. ಇದರ ಹಿಂದೆ ಕೇಂದ್ರ ಸರಕಾರದ ಕೈವಾಡ ಇದೆ ಎಂಬ ಅನುಮಾನ ಇರುವುದರಿಂದ ಜ್ಞಾನೇಶ್ ಕುಮಾರ್ ವಿರುದ್ಧ ಪ್ರಶ್ನೆಗಳೆದ್ದಿವೆ. ಸಂಸತ್ತಿನಲ್ಲಿ ವಿರೋಧ ಪಕ್ಷಗಳು ನಿಯಮ ರಚನೆಗೆ ಅಡ್ಡಿಪಡಿಸಬಹುದು ಎಂಬ ಭಯದಿಂದ ಜ್ಞಾನೇಶ್ ಕುಮಾರ್ ಮೂಲಕ ಕೇಂದ್ರ ಸರಕಾರವೇ ಈ ನಿಯಮ ಮಾಡಿಸಿತೇ ಎಂಬ ಅನುಮಾನ ಬಲವಾಗಿದೆ. ಹೀಗೆ,
ಟಿ.ಎನ್. ಶೇಷನ್ ಕಟ್ಟಿದ ಚುನಾವಣಾ ಆಯೋಗದ ವಿಶ್ವಾಸಾರ್ಹತೆಯನ್ನು ಧರಾಶಾಹಿ ಮಾಡಲು ಜ್ಞಾನೇಶ್ ಕುಮಾರ್ ಯಶಸ್ವಿಯಾಗಿದ್ದಾರೆ.












