✍️ ಮುಹಮ್ಮದ್ ಕುಂಞಿ
ರಾಜ್ಯ ಕಾರ್ಯದರ್ಶಿ, ಜಮಾಅತೆ ಇಸ್ಲಾಮೀ ಹಿಂದ್, ಕರ್ನಾಟಕ
ಪ್ರವಾದಿ ಮುಹಮ್ಮದ್(ಸ)ರೊಡನೆ ತೋರುವ ಪ್ರೀತಿ (ಹುಬ್ಬರ್ರಸೂಲ್)ಯು ನಮ್ಮ ಈಮಾನಿನ (ವಿಶ್ವಾಸ) ಒಂದು ಭಾಗವಾಗಿದೆ. ಅಲ್ಲಾಹನ ಪ್ರವಾದಿಯೊಂದಿಗೆ ನಮಗಿರುವ ಸಂಬಂಧ, ಬದ್ಧತೆ ಅವರನ್ನು ಅನುಸರಣೆ ಮಾಡುವುದರಲ್ಲಿ ಅಡಗಿದೆ. ಪ್ರವಾದಿವರ್ಯರು(ಸ) ಇಂದು ನಮ್ಮ ಜೊತೆಯಿಲ್ಲ. ಆದರೆ ಅವರು ಬಿಟ್ಟು ಹೋದ ಚರ್ಯೆ, ಮೌಲ್ಯಯುತವಾದ ಬದುಕಿನ ಆದರ್ಶಗಳನ್ನು ನಿಷ್ಠೆಯಿಂದ ಚಾಚೂ ತಪ್ಪದೆ ಅನುಸರಿಸಬೇಕು. ಅದು ನಮ್ಮ ಬದುಕಿನ ಕ್ರಮವಾಗಬೇಕು.
ಪ್ರವಾದಿ(ಸ) ಹೀಗೆ ಹೇಳಿದ್ದಾರೆ: “ನಿಮ್ಮ ಮಾತಾಪಿತರಿಗಿಂತ, ನಿಮ್ಮ ಮಕ್ಕಳಿಗಿಂತ, ನಿಮ್ಮ ಬಂಧುಮಿತ್ರಾದಿಗಳಿಗಿಂತ, ನೀವು ಇಷ್ಟಪಡುವ ಎಲ್ಲರಿಗಿಂತ ನನ್ನನ್ನು ನೀವು ಅತಿ ಹೆಚ್ಚು ಪ್ರೀತಿಸುವ ತನಕ ನೀವು ವಿಶ್ವಾಸಿಗಳಾಗಲಾರಿರಿ”. ಆದ್ದರಿಂದ ನಾವು ಇಷ್ಟಪಡುವ ಎಲ್ಲಕ್ಕಿಂತ ಮಿಗಿಲಾಗಿ ಪ್ರವಾದಿವರ್ಯರನ್ನು ಪ್ರೀತಿಸುವ ತನಕ ನಮ್ಮ ಈಮಾನ್ ಪೂರ್ಣವಾಗದು. ನಮಗೆ ಈಮಾನಿನ ಮಾಧುರ್ಯ ಸಿಗಬೇಕಾದರೆ ನಮ್ಮ ಅತಿ ಹೆಚ್ಚಿನ ಪ್ರೀತಿ ಅಲ್ಲಾಹ್ ಮತ್ತು ಆತನ ಪ್ರವಾದಿಯಲ್ಲಿರಬೇಕು. ಒಮ್ಮೆ ಉಮರ್(ರ) ಪ್ರವಾದಿವರ್ಯರ ಬಳಿ ಬಂದು “ಪ್ರವಾದಿಗಳೇ, ನನ್ನನ್ನು ಬಿಟ್ಟರೆ ಎಲ್ಲವುಗಳಿಗಿಂತ ನಾನು ಅತಿ ಹೆಚ್ಚಾಗಿ ನಿಮ್ಮನ್ನು ಪ್ರೀತಿಸುತ್ತೇನೆ” ಎಂದು ಹೇಳಿದರು. ಆಗ ಪ್ರವಾದಿವರ್ಯರು(ಸ) ಹೇಳಿದರು: “ಉಮರ್, ನಿಮ್ಮ ಈಮಾನ್ ಪೂರ್ಣವಾಗಲಿಲ್ಲ.” ಉಮರ್ ಮೌನಿಯಾದರು. ಬಳಿಕ ಹೇಳಿದರು: “ಪ್ರವಾದಿವರ್ಯರೇ, ನಾನು ನನ್ನ ಜೀವಕ್ಕಿಂತ ಹೆಚ್ಚಾಗಿ ನಿಮ್ಮನ್ನು ಪ್ರೀತಿಸುತ್ತೇನೆ.” ಆಗ ಪ್ರವಾದಿವರ್ಯರು(ಸ): “ಉಮರ್, ನಿಮ್ಮ ಈಮಾನ್ ಈಗ ಪೂರ್ಣಗೊಂಡಿತು” ಎಂದು ಹೇಳಿದರು.
ಪ್ರವಾದಿವರ್ಯರನ್ನು(ಸ) ಸಹಾಬಿಗಳು ಯಾವ ರೀತಿಯಲ್ಲಿ ಪ್ರೀತಿಸುತ್ತಿದ್ದರು ಎಂಬುದಕ್ಕೆ ಇತಿಹಾಸದಲ್ಲಿ ಸಾಕಷ್ಟು ಉದಾಹರಣೆಗಳಿವೆ. ಕುರೈಶರ ನಾಯಕರಾಗಿದ್ದ ಅಬೂ ಸುಫ್ಯಾನ್ ಒಮ್ಮೆ ಹೀಗೆ ಹೇಳಿದ್ದರು: “ಮುಹಮ್ಮದ್ರನ್ನು ಅವರ ಅನುಯಾಯಿಗಳು ಪ್ರೀತಿಸುವಷ್ಟು ಜಗತ್ತಿನಲ್ಲಿ ಯಾರೂ ಯಾರನ್ನೂ ಪ್ರೀತಿಸುವುದನ್ನು ನಾನು ಕಂಡಿಲ್ಲ.” ಉಹುದ್ನ ಯುದ್ಧಭೂಮಿಯಲ್ಲಿ ಓರ್ವ ಅನ್ಸಾರಿ ಮಹಿಳೆಗೆ “ನಿಮ್ಮ ತಂದೆ, ನಿಮ್ಮ ಪತಿ, ನಿಮ್ಮ ಮಗ ಶಹೀದ್ ಆಗಿದ್ದಾರೆ” ಎಂದು ವಾರ್ತೆ ಬಂದಾಗಲೂ “ಪ್ರವಾದಿವರ್ಯರು(ಸ) ಸುರಕ್ಷಿತರಾಗಿದ್ದಾರೆಯೇ?” ಎಂದು ಆ ಮಹಿಳೆ ಕೇಳುತ್ತಲೇ ಇದ್ದರು. “ಪ್ರವಾದಿವರ್ಯರು ಸುರಕ್ಷಿತರಾಗಿದ್ದರೆ ನನಗೆ ಬರುವ ಎಲ್ಲ ವಿಪತ್ತುಗಳೂ ಕ್ಷುಲ್ಲಕ” ಎಂದು ಆ ಮಹಿಳೆ ಹೇಳಿದರು.
ಒಮ್ಮೆ ಪ್ರವಾದಿವರ್ಯರು(ಸ) ರೋಗಪೀಡಿತರಾಗಿದ್ದಾಗ ಬಿಲಾಲ್ ರನ್ನು ಕರೆದು “ಅಬೂಬಕ್ಕರ್ ಸಿದ್ದೀಕ್ ರವರು ನಮಾಝ್ನ ನೇತೃತ್ವ ವಹಿಸಲಿ” ಎಂದು ಹೇಳಿ ಕಳುಹಿಸುತ್ತಾರೆ. ಆಗ ಬಿಲಾಲ್(ರ) ಹೇಳಿದರು: “ನಮ್ಮ ಅಮ್ಮ ನನಗೆ ಜನ್ಮ ನೀಡದಿದ್ದರೆ ಉತ್ತಮವಿತ್ತು. ಪ್ರವಾದಿವರ್ಯರು(ಸ) ಇಲ್ಲದ ಬದುಕು ಊಹಿಸಲು ಸಾಧ್ಯವೇ?”. ಒಮ್ಮೆ ಉಹುದ್ ರಣಾಂಗಣದಲ್ಲಿ ಪ್ರವಾದಿವರ್ಯರು(ಸ) ಕೊಲ್ಲಲ್ಪಟ್ಟಿದ್ದಾರೆ ಎಂಬ ವದಂತಿ ಹಬ್ಬಿಸಲಾಯಿತು. ಆಗ ಉಮರ್(ರ) ಯುದ್ಧ ಕವಚವನ್ನು ಕಳಚಿಟ್ಟು ಹತಾಶೆಯಿಂದ ಒಂದೆಡೆ ಕುಳಿತಿರುತ್ತಾರೆ. ಅನಸ್ ಬಿನ್ ನಳರ್(ರ)ರವರು ಉಮರ್(ರ)ರ ಬಳಿ ಬಂದು “ಯುದ್ಧ ನಿಲ್ಲಿಸಿದೆ ಎಂದರೆ ಅದು ಅಪಾಯವಲ್ಲವೇ, ನಿನಗೆ ಏನಾಯಿತು ಉಮರ್?” ಎಂದು ಕೇಳುತ್ತಾರೆ. ಆಗ ಉಮರ್(ರ) “ಅಲ್ಲಾಹನ ಪ್ರವಾದಿಗಳು ಕೊಲ್ಲಲ್ಪಟ್ಟಿದ್ದಾರೆ ಎಂದಾದರೆ ನಾವೇಕೆ ಯುದ್ಧ ಮಾಡಬೇಕು?” ಎಂದು ಕೇಳುತ್ತಾರೆ. ಆಗ ನಳರ್(ರ, “ನೋಡಿ ಉಮರ್, ಅಲ್ಲಾಹನ ಪ್ರವಾದಿಗಳು ಕೊಲ್ಲಲ್ಪಟ್ಟಿದ್ದಾರೆ ಎಂದಾದರೆ ನಾವು ಬದುಕಿ ಏನು ಪ್ರಯೋಜನ?” ಎಂದು ಮರಳಿ ಪ್ರಶ್ನಿಸುತ್ತಾರೆ. ಇದನ್ನು ಕೇಳಿದ ಉಮರ್(ರ)ರವರು ಮತ್ತೆ ಯುದ್ಧ ಕವಚ ಧರಿಸಿ ಯುದ್ಧರಂಗಕ್ಕೆ ಧುಮುಕುತ್ತಾರೆ. ಇದು ಸಹಾಬಿಗಳು ಪ್ರವಾದಿಯನ್ನು ಪ್ರೀತಿಸಿದ ರೀತಿಯಾಗಿದೆ.
ಬದುಕಿನ ಎಲ್ಲಾ ಕ್ಷೇತ್ರಗಳಲ್ಲೂ ಪ್ರವಾದಿವರ್ಯರನ್ನು ಅನುಸರಿಸುವ ಬಾಧ್ಯತೆ ನಮಗಿದೆ. ದಿಕ್ರ್, ತಸ್ಬೀಹ್, ದುಆ ಬಹಳ ಸುಲಭದ ಕಾರ್ಯವಾಗಿದೆ. ನಮ್ಮ ಮದುವೆಯಲ್ಲಿ, ನಮ್ಮ ಆರ್ಥಿಕ ವ್ಯವಹಾರಗಳಲ್ಲಿ, ನಮ್ಮ ರಾಜಕೀಯ ನಡೆಯಲ್ಲಿ, ನಮ್ಮ ಕುಟುಂಬದಲ್ಲಿ ಅಲ್ಲಾಹನ ಪ್ರವಾದಿಯ ಚರ್ಯೆ ಪಾಲಿಸಲು ನಮಗೆ ಸಾಧ್ಯವಾಗಬೇಕು.
ವ್ಯಾಪಾರವನ್ನು ಪ್ರವಾದಿವರ್ಯರು ಅತೀ ಹೆಚ್ಚು ಪ್ರೋತ್ಸಾಹಿಸಿದರು. ಸ್ವರ್ಗದ ಸುವಾರ್ತೆ ಪಡೆದ ಹತ್ತು ಸಹಾಬಿಗಳಲ್ಲಿ ಆರು ಮಂದಿ ಬಹಳ ದೊಡ್ಡ ವ್ಯಾಪಾರಿಗಳಾಗಿದ್ದರು. ಪ್ರವಾದಿವರ್ಯರು(ಸ) ಸ್ವತಃ ವ್ಯಾಪಾರಿಯಾಗಿದ್ದರು. “ವ್ಯಾಪಾರದಲ್ಲಿ ಮೋಸ ಮಾಡುವವನು ನನ್ನವನಲ್ಲ” ಎಂದು ಸಾರಿದರು. ತಾನು ಮಾರಾಟ ಮಾಡುವ ವಸ್ತುಗಳ ಬಗ್ಗೆ ಇಲ್ಲದ ಗುಣ ಹೇಳಿ ಮಾರಾಟ ಮಾಡುವವನು ನನ್ನವನಲ್ಲ. ವ್ಯಾಪಾರದಲ್ಲಿ ಹಲವು ಪಾಠಗಳನ್ನು ಕಲಿಸಿದ್ದಾರೆ. ಅದನ್ನು ನಿಷ್ಠೆಯಿಂದ ಪಾಲಿಸಬೇಕು. “ವ್ಯಾಪಾರ ನನ್ನ ಸ್ವಂತದ್ದು, ಅದಕ್ಕೆ ಬಹಳಷ್ಟು ಖರ್ಚು ಮಾಡಬೇಕಾಗುತ್ತದೆ, ಆದ್ದರಿಂದ ವ್ಯಾಪಾರ ಹೇಗೆ ನಡೆಯಬೇಕು ಎಂಬುದನ್ನು ನಾನು ನಿರ್ಧರಿಸುತ್ತೇವೆ” ಎಂದು ಚಿಂತಿಸುವುದಾದರೆ ಅಲ್ಲಾಹನ ಪ್ರವಾದಿಗೂ ನಮಗೂ ಏನೂ ಸಂಬಂಧವಿರುವುದಿಲ್ಲ.
ನಮ್ಮ ಎಲ್ಲಾ ವಿಚಾರಗಳಲ್ಲೂ ಅಲ್ಲಾಹನ ಪ್ರವಾದಿ(ಸ) ಇಮಾಮ್(ನಾಯಕ) ಆಗಿರಬೇಕು. ಪ್ರವಾದಿವರ್ಯರ(ಸ) ಮಾರ್ಗದರ್ಶನವು ನಮಗೆ ಅತ್ಯಂತ ಪ್ರೀತಿಯುತವಾದದ್ದಾಗಿರಬೇಕು. ಪ್ರವಾದಿವರ್ಯರು(ಸ) ಯಾವುದನ್ನು ಇಷ್ಟಪಡುತ್ತಿದ್ದರೋ ಅದನ್ನು ಪ್ರೀತಿಸಬೇಕು. ಪ್ರವಾದಿವರ್ಯರು(ಸ) ನೀಡಿದ ತೀರ್ಪಿನ ಬಳಿಕ ಅದರಲ್ಲಿ ಅಸಹನೆಯಿರಬಾರದು. ಕುಟುಂಬ ಸಮಸ್ಯೆ, ವಾರೀಸು ಸೊತ್ತು ಮತ್ತಿತರ ಸಮಸ್ಯೆಗಳಲ್ಲಿ ಅಲ್ಲಾಹನ ಪ್ರವಾದಿವರ್ಯರು(ಸ) ನೀಡಿದ ತೀರ್ಪಿನ ಬಗ್ಗೆ ಅಸಹನೆ ಇದ್ದರೆ ನಮ್ಮ ಈಮಾನ್ ಪೂರ್ಣಗೊಂಡಿಲ್ಲ ಎಂದರ್ಥ.
ವಾರೀಸು ಸೊತ್ತು ವಿತರಣೆಯಾಗುವಾಗ ಹೆಚ್ಚು ಸಮಸ್ಯೆಗಳುಂಟಾಗುತ್ತದೆ. ನಮಾಝ್ನಲ್ಲಿ ರಕಅತ್ ಸಂಖ್ಯೆಯ ಬಗ್ಗೆ ಕುರ್ಆನ್ನಲ್ಲಿ ಪ್ರಸ್ತಾಪಿಸಲ್ಪಟ್ಟಿಲ್ಲ. ಆದರೆ ವಾರೀಸು ಸೊತ್ತು ಹಂಚಿಕೆ ಮಾಡುವಾಗ ಯಾರಿಗೆ ಎಷ್ಟೆಷ್ಟು ಹಂಚಬೇಕು ಎಂಬ ಬಗ್ಗೆ ಸ್ಪಷ್ಟವಾದ ವಿವರಣೆ ಇದೆ. ಹೀಗಿರುವಾಗ ಮಧ್ಯಸ್ಥಿಕೆ ವಹಿಸಿದಾತನು ಅದರಂತೆ ಹಂಚಿದಾಗ ಆ ಬಗ್ಗೆ ಮನದಲ್ಲಿ ಕಿಂಚಿತ್ತೂ ಅಸಮಾಧಾನ, ಅಸಹನೆ ಉಂಟಾಗಬಾರದು. ಝಕಾತ್ ಹಂಚಿಕೆಗೂ ಇದು ಅನ್ವಯಿಸುತ್ತದೆ. ಒಂದು ವೇಳೆ ನಮ್ಮಲ್ಲಿ ಅಸಹನೆ ಉಂಟಾದರೆ ಈಮಾನ್ ಪೂರ್ಣಗೊಂಡಿಲ್ಲ ಎಂದಾಗಿದೆ. ಪ್ರವಾದಿಯನ್ನು ನಿಶ್ಶರ್ತವಾಗಿ ಅನುಸರಿಸಬೇಕು. ಜುಮಾದ ದಿನದಂದು ಜುಮಾ ಅಝಾನ್ ಆದ ಕೂಡಲೇ ವ್ಯಾಪಾರ ವಹಿವಾಟುಗಳನ್ನು ಸ್ಥಗಿತಗೊಳಿಸಬೇಕು. ಎಷ್ಟೇ ಭರಪೂರ್ಣ ವ್ಯಾಪಾರವಾದರೂ ಸರಿ, ಅಷ್ಟಕ್ಕೇ ನಿಲ್ಲಿಸಿ ಮಸೀದಿಯತ್ತ ತೆರಳಬೇಕು. ಇದು ಪ್ರವಾದಿವರ್ಯರ ಅನುಸರಣೆಯಾಗಿದೆ.
ಜನರಿಗೆ ತೋರಿಸುವುದಕ್ಕಾಗಿ ಯಾವ ಪುಣ್ಯಕಾರ್ಯ ಮಾಡಿದರೂ ಅದು ವ್ಯರ್ಥವಾಗಿದೆ. ಆದರೆ ಪ್ರವಾದಿವರ್ಯರ(ಸ) ಹೆಸರಲ್ಲಿ ನೀವು ಸಲಾತ್ ಹೇಳುವುದರ ಹೊರತು, ಅದಕ್ಕೆ ಪ್ರತಿಫಲವಿದೆ. ಅಲ್ಲಾಹನ ಪ್ರವಾದಿಯ ಹೆಸರಲ್ಲಿ ಸಲಾಮ್ ಹೇಳುವುದು ಪುಣ್ಯಕರ್ಮವಾಗಿದೆ. ಅಲ್ಲಾಹನ ಪ್ರವಾದಿವರ್ಯರನ್ನು ಪ್ರೀತಿಸುವಾಗ ನಮ್ಮ ಬದುಕಲ್ಲಿ ಮಹತ್ತರ ಬದಲಾವಣೆ ಉಂಟಾಗುತ್ತದೆ. ಆ ಪ್ರವಾದಿಯನ್ನು ಪ್ರೀತಿಸಿದ ಕಾರಣಕ್ಕಾಗಿಯೇ ಆ 23 ವರ್ಷಗಳಲ್ಲಿ ಅರಬ್ ಜನತೆಯಲ್ಲಿ ಅಮೋಘ ಬದಲಾವಣೆ ಕಂಡುಬಂತು. ಪ್ರವಾದಿಯ ಬದುಕು ನಮ್ಮ ಮೇಲೆ ಮಹತ್ತರ ಪ್ರಭಾವ ಬೀರುತ್ತದೆ. ಸಂಗೀತ ಲೋಕದ ಮಾಂತ್ರಿಕ ಕ್ಯಾಟ್ ಸ್ಟೀವನ್ಸ್ ಬದುಕಲ್ಲಿ ಬದಲಾವಣೆ ಬಂತು. ಅವರು ಯೂಸುಫ್ ಇಸ್ಲಾಮ್ ಆಗಿ ಬದಲಾದರು. ಇಂತಹ ಅನೇಕ ಉದಾಹರಣೆಗಳನ್ನು ನೀಡಬಹುದು. ಆರನೇ ಶತಮಾನದಲ್ಲಿ ಸಮಾನತೆಯನ್ನು ಸಾರಿ “ನೀವು ಬಾಚಣಿಗೆಯ ಹಲ್ಲಿನಂತೆ ಸಮಾನರು” ಎಂದರು. ಅದನ್ನು ಸಮಾಜಕ್ಕೆ ಪ್ರಸ್ತುತಪಡಿಸಬೇಕಾಗಿದೆ. ಅಲ್ಲಾಹನ ಪ್ರವಾದಿಯ ಬದುಕನ್ನು ನಿಷ್ಠೆಯಿಂದ ಜೀವನದಲ್ಲಿ ಅಳವಡಿಸಿಕೊಳ್ಳುವುದು ನಿಜವಾದ ಪ್ರತಿರೋಧವಾಗಿದೆ. ಪ್ರವಾದಿ ಮುಹಮ್ಮದರು ಜಗತ್ತಿಗೆ ಕರುಣೆಯಾಗಿ ಬಂದಿದ್ದಾರೆ. ಅದನ್ನು ಜನರ ಮುಂದಿಡಬೇಕಾಗಿದೆ.
ನಿರೂಪಣೆ: ಸಲೀಮ್ ಬೋಳಂಗಡಿ












