ಸೌದಿ ಅರೇಬಿಯಾ: ಇಂಡಿಯನ್ ಸೋಶಿಯಲ್ ಫೋರಂನಿಂದ ಕರುನಾಡ ಸಂಭ್ರಮ-2021 ಕಾರ್ಯಕ್ರಮ

0
41

ಸನ್ಮಾರ್ಗ ವಾರ್ತೆ

ರಿಯಾದ್: ಇಂಡಿಯನ್ ಸೋಶಿಯಲ್ ಫೋರಂ ರಿಯಾದ್ ಕರ್ನಾಟಕ ರಾಜ್ಯ ಸಮಿತಿ ವತಿಯಿಂದ ಕನ್ನಡ ರಾಜ್ಯೋತ್ಸವದ ಪ್ರಯುಕ್ತ “ಕರುನಾಡ ಸಂಭ್ರಮ-2021” ಕುಟುಂಬ ಸಮ್ಮಿಲನ ಕಾರ್ಯಕ್ರಮವು ರಿಯಾದಿನ ವಾಹತ್ ಅಲ್ ರಿಯಾದ್ ಫಾರ್ಮ್ ಹೌಸ್ ನಲ್ಲಿ ಜರುಗಿತು.

ಸಹಸ್ರ ಸಂಖ್ಯೆಯಲ್ಲಿ ಅನಿವಾಸಿ ಭಾರತೀಯರು ಪಾಲ್ಗೊಂಡ ಈ ಕಾರ್ಯಕ್ರಮದ ಸಭಾ ಕಾರ್ಯಕ್ರಮವು ಇಂಡಿಯನ್ ಸೋಶಿಯಲ್ ಫೋರಂ ರಿಯಾದ್ ಕರ್ನಾಟಕ ರಾಜ್ಯ ಸಮಿತಿ ಇದರ ರಾಜ್ಯಾಧ್ಯಕ್ಷರಾದ ಅಬ್ದುಲ್ ಮಜೀದ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಐಎಸ್ ಎಫ್ ರಿಯಾದ್ ಕೇಂದ್ರ ಸಮಿತಿಯ ಅಧ್ಯಕ್ಷ ಬಶೀರ್ ಕಾರಂದೂರು ಉದ್ಘಾಟಿಸಿದರು.

ಸದಸ್ಯರಾದ ಮೊಹಮ್ಮದ್ ನವೀದ್ ರವರು ಕರ್ನಾಟಕದಲ್ಲಿ ವಿವಿಧ ಜಾತಿ, ಮತ ಮತ್ತು ಧರ್ಮದ ಜನರಿದ್ದಾರೆ. ಪ್ರತಿಯೊಬ್ಬರ ಆಚಾರ ವಿಚಾರಗಳಲ್ಲಿ ಸಾಕಷ್ಟು ಭಿನ್ನಾಭಿಪ್ರಾಯಗಳಿವೆ. ಆದರೂ ಈ ನಾಡಿನ ನೆಲ, ಜಲ ಮತ್ತು ಸ್ವಾಭಿಮಾನದ ವಿಚಾರ ಬಂದಾಗ ನಾವೆಲ್ಲ ಪರಸ್ಪರ ಭಿನ್ನಾಭಿಪ್ರಾಯ ಬಿಟ್ಟು ಒಂದಾಗುತ್ತೇವೆ. ಆದರೆ ಇಂದು ಕೇಂದ್ರ ಒಕ್ಕೂಟ ಸರ್ಕಾರ ಕನ್ನಡಿಗರ ಮೇಲೆ ಹಿಂದಿ ಹೇರಿಕೆ ಮತ್ತು ಸಂಪತ್ತು ಹಂಚಿಕೆ ವಿಚಾರದಲ್ಲಿ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಹೇಳಿದರು.

ಐಎಸ್ ಎಫ್ ರಿಯಾದ್ ನ ಅಧ್ಯಕ್ಷರಾದ ತಾಜುದ್ದೀನ್ ಪುತ್ತೂರು, ಕೇಂದ್ರ ಸಮಿತಿ ಉಪಾಧ್ಯಕ್ಷರಾದ ಮುಸ್ತಾಕ್ ಕಸಮ್, ಖಿದ್ಮ ಫೌಂಡೇಶನ್ ನ ಅಧ್ಯಕ್ಷರಾದ ಫಝ್ಲು ರೆಹ್ಮಾನ್, ದಕ್ಷಿಣ ಕರ್ನಾಟಕ ಮುಸ್ಲಿಂ ಒಕ್ಕೂಟದ ಅಧ್ಯಕ್ಷರಾದ ಜಿ.ಕೆ. ಶೇಕ್, ಮಲೆನಾಡು ಎಜುಕೇಷನ್ ಅಂಡ್ ಚಾರಿಟಬಲ್ ಟ್ರಸ್ಟ್ ನ ಅಧ್ಯಕ್ಷರಾದ ನಝೀರ್ ಮಡತಿಲ್, ಬಸ್ರುರು ಮುಸ್ಲಿಂ ವೆಲ್ಫೇರ್ ಅಸೋಸಿಯೇಷನ್ ನ ಹನೀಫ್ ಬಸ್ರುರು, ರಿಯಾದ್ ಮೊಬೈಲ್ ಮೆಡಿಕಲ್ ಟೀಮ್ ನ (ಅರೋಗ್ಯ ಸಚಿವಾಲಯ) ಮುಖ್ಯಸ್ಥರಾದ ಡಾಕ್ಟರ್ ಕೈಸರ್ ಫರ್ವೇಜ್ ಮತ್ತು ಹಿದಾಯ ಫೌಂಡೇಶನ್ ನ ಅಧ್ಯಕ್ಷರಾದ ಮೊಹಮ್ಮದ್ ಅಲಿ ಬಿ.ಕೆ. ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಐಎಸ್ ಎಫ್ ರಾಜ್ಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಸಿರಾಜ್ ಸಜಿಪ ಸ್ವಾಗತಿಸಿದರೆ, ಕಾರ್ಯದರ್ಶಿ ಜವಾದ್ ಬಸ್ರುರು ಧನ್ಯವಾದ ಸಮರ್ಪಿಸಿದರು. ಶರೀಫ್ ಕಬಕರವರು ಕಾರ್ಯಕ್ರಮವನ್ನು ನಿರೂಪಿಸಿದರು. ಪುರುಷರು ಮಕ್ಕಳು ಮತ್ತು ಮಹಿಳೆಯರಿಗಾಗಿ ವಿಶೇಷ ಕ್ರೀಡಾಕೂಟ ಹಾಗು ಸ್ಪರ್ಧೆಗಳನ್ನು ಏರ್ಪಡಿಸಿ ವಿಜೇತರಿಗೆ ಆಕರ್ಷಕ ಬಹುಮಾನವನ್ನು ನೀಡಿ ಸನ್ಮಾನಿಸಲಾಯಿತು. ಮಂಗಳೂರಿನ ಕೋಮ್ ಕ್ವೆಸ್ಟ್ ಸೊಲ್ಯೂಶನ್ ವತಿಯಿಂದ ನಡೆದ ಅದೃಷ್ಠದ ಲಕ್ಕಿಕೂಪನ್ ಡ್ರಾನಲ್ಲಿ 10 ಅದೃಷ್ಠಶಾಲಿಗಳಿಗೆ ವಂಡರ್ಲಾಗೆ ಉಚಿತ ಟಿಕೇಟ್ ನೀಡಲಾಯಿತು.

ಹಗ್ಗ ಜಗ್ಗಾಟ ಫೈನಲ್ ಹಣಾಹಣಿಯಲ್ಲಿ ಮಲಝ್ ಗೈಸ್ ತಂಡವನ್ನು ಸೋಲಿಸುವುದರ ಮೂಲಕ ಬಂಟ್ವಾಳ ಗೈಸ್ ಕರುನಾಡ ಸಂಭ್ರಮ-2021 ಚೊಚ್ಚಲ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು. ಇನ್ನು ಕ್ರಿಕೆಟ್ ಪಂದ್ಯಾಟದಲ್ಲಿ ಲಗಾನ್ ಕ್ರಿಕೆಟರ್ಸ್ ತಂಡವು ವಿಜಯಿಯಾಗಿ, ಬಂಟ್ವಾಳ ಗೈಸ್ ತಂಡವು ದ್ವಿತೀಯ ಸ್ಥಾನವನ್ನು ಪಡೆಯಿತು.