ಇಸ್ಲಾಮಿಕ್ ಶಿಕ್ಷಣ ಸಂಸ್ಥೆಯಲ್ಲಿ ‘ಸಂಸ್ಕೃತ’ ಕಲಿಕೆ: ಕೇರಳದಲ್ಲೊಂದು ಮಾದರಿ ಶಿಕ್ಷಣ ಸಂಸ್ಥೆ

0
161

ಸನ್ಮಾರ್ಗ ವಾರ್ತೆ

ಕೇರಳದ ತ್ರಿಶೂರ್ ಜಿಲ್ಲೆಯ ಇಸ್ಲಾಮಿಕ್ ಶಿಕ್ಷಣ ಸಂಸ್ಥೆಯೊಂದರಲ್ಲಿ ವಿದ್ಯಾರ್ಥಿಗಳು ಸಂಸ್ಕೃತ ಅಭ್ಯಾಸ ಮಾಡುತ್ತಿದ್ದು, ಶ್ಲೋಕಗಳು ಮತ್ತು ಮಂತ್ರಗಳನ್ನು ಪಠಿಸುತ್ತಿದ್ದಾರೆ. ಹಿಂದೂ ಶಿಕ್ಷಕರ ಮಾರ್ಗದರ್ಶನದಲ್ಲಿ ಸಂಸ್ಕೃತ ಪಾಠ ನಡೆಯುತ್ತಿದೆ. ವಿದ್ಯಾರ್ಥಿಗಳು ಶಿಕ್ಷಕರ ಜತೆ ಸಂಸ್ಕೃತ ಭಾಷೆಯಲ್ಲಿಯೇ ಮಾತನಾಡುವ ಪ್ರಯತ್ನ ಕೂಡ ಮಾಡುತ್ತಾರೆ. ತರಗತಿಯಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ನಡುವಿನ ಎಲ್ಲ ಸಂಭಾಷಣೆಗಳೂ ಸಂಸ್ಕೃತದಲ್ಲಿಯೇ ನಡೆಸಲಾಗುತ್ತಿದೆ.

ಮುಸ್ಲಿಂ ಮಕ್ಕಳಿಗೂ ಸಂಸ್ಕೃತ, ಉಪನಿಷದ್, ಪುರಾಣಗಳು ಮುಂತಾದವುಗಳನ್ನು ಕಲಿಸುವುದರ ಹಿಂದಿನ ಉದ್ದೇಶ, ಬೇರೆ ಧರ್ಮಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಜ್ಞಾನ ಮತ್ತು ತಿಳಿವಳಿಕೆ ಮೂಡಿಸುವುದಾಗಿದೆ ಎಂದು ಮಾಲಿಕ್ ದೀನಾರ್ ಇಸ್ಲಾಮಿಕ್ ಕಾಂಪ್ಲೆಕ್ಸ್ ನಡೆಸುತ್ತಿರುವ ಅಕಾಡೆಮಿ ಆಫ್ ಷರಿಯಾದ ಪ್ರಾಂಶುಪಾಲರಾದ ಒನಂಪಿಲ್ಲಿ ಮುಹಮ್ಮದ್ ಫೈಜಿ ತಿಳಿಸಿದ್ದಾರೆ.

ಭಗವದ್ಗೀತೆ, ಉಪನಿಷದ್, ಮಹಾಭಾರತ, ರಾಮಾಯಣದ ಆಯ್ದ ಮಹತ್ವದ ಭಾಗಗಳನ್ನು ಎಂಟು ವರ್ಷಗಳ ಅವಧಿಗೆ ವಿದ್ಯಾರ್ಥಿಗಳಿಗೆ ಸಂಸ್ಕೃತ ಕಲಿಸಲು ಆಯ್ಕೆ ಮಾಡಲಾಗಿದೆ. ೧೦ನೇ ತರಗತಿ ಉತ್ತೀರ್ಣರಾದ ಬಳಿಕ ಈ ಶಿಕ್ಷಣ ನೀಡಲಾಗುತ್ತಿದೆ. ಈ ಪಾಠಗಳನ್ನು ಆಯ್ಕೆಯ ವಿಷಯಗಳಾಗಿ ಕಲಿಸಲಾಗುತ್ತಿದೆ. ಕೋಲ್ಕತ್ತ ವಿಶ್ವವಿದ್ಯಾಲಯದ ಅಧೀನಕ್ಕೆ ಒಳಪಟ್ಟಿರುವ ಈ ಷರಿಯಾ ಶಿಕ್ಷಣ ಸಂಸ್ಥೆಯಲ್ಲಿ ಕಲಾ ವಿಭಾಗದ ಪದವಿ ಕೋರ್ಸ‌ಗಳ ಜೊತೆಗೆ ಉರ್ದು ಮತ್ತು ಇಂಗ್ಲಿಷ್ ಭಾಷೆಯನ್ನು ಕೂಡ ಆಯ್ಕೆ ವಿಷಯಗಳನ್ನಾಗಿ ಕಲಿಸಲಾಗುತ್ತಿದೆ.

ಶ್ಲೋಕಗಳನ್ನು ಕಲಿಯುವ ಮತ್ತು ಆಲಿಸುವ ಆಸಕ್ತಿ ಇತ್ತು. ಅರೇಬಿಕ್ ಭಾಷೆಯಂತೆಯೇ ಮೊದಲು ಸಂಸ್ಕೃತವೂ ಕೂಡ ಉಚ್ಛರಿಸಲು ಕಷ್ಟದಾಯಕವೆನಿಸುತ್ತಿತ್ತು. ಆದರೆ ಕ್ರಮೇಣ ಅಭ್ಯಾಸ ಹಾಗೂ ನಿರಂತರ ಪಠಣದಿಂದಾಗಿ ಕಲಿಕೆ ಸರಳವಾಗುತ್ತಿದೆ ಎಂದು ವಿದ್ಯಾರ್ಥಿಗಳು ಹೇಳುತ್ತಾರೆ.

ಈ ಬಗ್ಗೆ ವಿದ್ಯಾರ್ಥಿಗಳ ಪೋಷಕರಿಂದಾಗಲಿ ಅಥವಾ ಬೇರೆ ಯಾರಿಂದಲೂ ಆಕ್ಷೇಪ ವ್ಯಕ್ತವಾಗಿಲ್ಲ. “ನನ್ನನ್ನು ಇಲ್ಲಿಗೆ ಆಹ್ವಾನಿಸಿದಾಗ, ನಾನೊಬ್ಬ ಹಿಂದೂವಾಗಿರುವುದರಿಂದ ಅರೇಬಿಕ್ ಸಂಸ್ಥೆಯಲ್ಲಿ ಕಲಿಸುವುದರ ಬಗ್ಗೆ ಆತಂಕವಿತ್ತು. ಆದರೆ, ಇಲ್ಲಿ ಹಿಂದೂ ಅಥವಾ ಮುಸ್ಲಿಂ ಸಮಸ್ಯೆಯೇ ಇಲ್ಲ. ನಾನು ಕಲಿಸಲು ಸಿದ್ಧನಾಗಿ ಬರುತ್ತಿದ್ದೇನೆ. ಹೀಗಾಗಿ ನನ್ನಲ್ಲಿ ಯಾವುದೇ ಕಟ್ಟುಪಾಡುಗಳಿಲ್ಲ” ಎಂದು ಪ್ರೊ. ಕೆ ಕೆ ಯತೀಂದ್ರನ್ ತಿಳಿಸಿದ್ದಾರೆ.