ಅಮ್ಮುಂಜೆ: ಸಾಹಿತ್ಯ ಸಮ್ಮೇಳನಗಳು ಪ್ರತಿಯೊಬ್ಬರ ಭಾವನೆಗಳ ಸಮ್ಮಿಲನವಾಗಲಿ- ಸಂಧ್ಯಾ ಶೆಣೈ

0
145

22ನೇ ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ

ಸನ್ಮಾರ್ಗ ವಾರ್ತೆ

ಅಮ್ಮುಂಜೆ: “ಭಾಷೆ ಬೇಕಾಗಿರೋದು ಹೃದಯಕ್ಕೆ. ನಾವು ಹೃದಯದ ಭಾಷೆಯಲ್ಲಿ ಮಾತನಾಡೋಣ. ನಾವು ಎಷ್ಟೇ ಉನ್ನತ ಸ್ಥಾನಮಾನದಲ್ಲಿದ್ದರೂ ನಾವು ಹೃದಯದ ಭಾಷೆಯಲ್ಲಿ ಮಾತನಾಡಬೇಕು. ಸಾಹಿತ್ಯ ಸಮ್ಮೇಳನಗಳು ಪ್ರತಿಯೊಬ್ಬರ ಭಾವನೆಗಳ ಸಮ್ಮಿಲನವಾಗಲಿ. ಪ್ರೀತಿಯ ಮಾನವೀಯತೆಯ ಸಹಮಿಲನವಾಗಲಿ. ನಮ್ಮ ಮಕ್ಕಳನ್ನು ಸಮಾಜಮುಖಿಯಾಗಿ ಬೆಳೆಸೋಣ” ಎಂದು ಉಡುಪಿಯ ಖ್ಯಾತ ವಾಗ್ಮಿ ಸಂಧ್ಯಾ ಶೆಣೈ ಹೇಳಿದರು.

ಅವರು ಅಮ್ಮುಂಜೆ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ವಠಾರದಲ್ಲಿ ನಡೆದ 22ನೇ ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ದಿಕ್ಸೂಚಿ ಭಾಷಣ ಮಾಡುತ್ತಿದ್ದರು.

ಸಮ್ಮೇಳನದ ಅಧ್ಯಕ್ಷರಾದ ಪ್ರೊ.ಕೆ ಬಾಲಕ್ರಷ್ಣ ಗಟ್ಟಿ ಮಾತನಾಡಿ “ಓದುವ ಹವ್ಯಾಸವನ್ನು ಮಕ್ಕಳಲ್ಲಿ ಬೆಳೆಸಿಕೊಳ್ಳಬೇಕು. ಹೆಚ್ಚು ಭಾಷೆ ಕಲಿಯಲು ಪ್ರೇರೇಪಿಸಬೇಕು. ಆಡುವ ಭಾಷೆಯ ಬಗ್ಗೆ ಮಡಿವಂತಿಕೆ ಇರಬಾರದು. ಅನ್ಯ ಭಾಷೆಯ ಬಗ್ಗೆ ಅನಾದರ ಇರಬಾರದು. ಮಾತ್ರ ಭಾಷೆ ಯಾವುದೇ ಇರಲಿ ನಮ್ಮ ನಾಡು ನುಡಿಗೆ ಮೊದಲ ಪ್ರಾಶಸ್ತ್ಯ ನೀಡಬೇಕು ಎಂದರು.

ಸಮ್ಮೇಳವನ್ನು ಬಂಟ್ವಾಳ ಶಾಸಕ ರಾಜೇಶ್ ನಾಯಕ್ ಉದ್ಘಾಟಿಸಿ ಮಾತನಾಡಿದರು. ಪ್ರಾರಂಭದಲ್ಲಿ ಆಶಯ ನುಡಿದ ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಡಾ. ಎಂ.ಪಿ.ಶ್ರೀನಾಥ್ ಮಾತಡುತ್ತಾ “ನವ ಪ್ರತಿಭೆಗಳನ್ನು ಬೆಳೆಸುವ ಮೂಲಕ ಸಾಹಿತ್ಯವನ್ನು ಅಭಿವೃದ್ಧಿಪಡಿಸಬೇಕಾಗಿದೆ ಸಾಹಿತ್ಯ ಸಮ್ಮೇಳನದ ಮೂಲಕ ಸಾಹಿತ್ಯದ ವಾತಾವರಣವನ್ನು ನಿರ್ಮಿಸಿ ಸರ್ವರನ್ನು ಸಹ ಬಾಳ್ವೆಗೆ ಪ್ರೇರೇಪಿಸಬೇಕು. ಈ ಪ್ರಯತ್ನಗಳಿಗೆ ಸಾಹಿತ್ಯ ಪರಿಷತ್ ಜೊತೆ ಎಲ್ಲರ ಸಹಕಾರದ ಅಗತ್ಯವಿದೆ “ಎಂದು ಹೇಳಿದರು.

ಕನ್ನಡಸಾಹಿತ್ಯ ಪರಿಷತ್ತಿನ ಬಂಟ್ವಾಳ ತಾಲೂಕು ಅಧ್ಯಕ್ಷರಾದ ವಿಶ್ವನಾಥ್ ಅವರ ಭಾಷಣವನ್ನು ಅವರ ಪತ್ನಿ ರೇಖಾ ವಿಶ್ವನಾಥ್ ವಾಚಿಸಿದರು. ಕಾರ್ಯಕ್ರಮದ ಪ್ರಾರಂಭದಲ್ಲಿ ಅತಿಥಿಗಳನ್ನು ಮುಖ್ಯೋಪಾಧ್ಯಾಯರಾದ ಸಂಕಪ್ಪ ಶೆಟ್ಟಿ ಸ್ವಾಗತಿಸಿದರು. ಸಮ್ಮೇಳನ ಅಧ್ಯಕ್ಷರ ಪರಿಚಯವನ್ನು ನಿರ್ವಹಿಸಿದರು. ರಮಾನಂದ ನೂಜಿಪಾಡಿ ಹಾಗೂ ರವೀಂದ್ರ ಕುಕ್ಕಾಜೆ ಕಾರ್ಯಕ್ರಮ ನಿರೂಪಿಸಿದರು. ಸಾಹಿತಿಗಳು ವೈದ್ಯರಾದ ಡಾಕ್ಟರ್ ಸುರೇಶ್ ಅಣ್ಣ ಮುಂತಾದ ಅನೇಕ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.