ಖ್ಯಾತ ಇಸ್ಲಾಮಿಕ್ ವಿದ್ವಾಂಸ ಮೌಲಾನ ವಹಿದುದ್ದೀನ್ ಖಾನ್ ನಿಧನ

0
541

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಇತ್ತೀಚಿಗಷ್ಟೇ ಪದ್ಮ ವಿಭೂಷಣ ಪ್ರಶಸ್ತಿಗೆ ಭಾಜನರಾಗಿದ್ದ ಖ್ಯಾತ ಇಸ್ಲಾಮಿಕ್ ವಿದ್ವಾಂಸ ಮೌಲಾನ ವಹಿದುದ್ದೀನ್ ಖಾನ್ ಅವರು ನಗರದ ಅಪೋಲೊ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಅವರಿಗೆ 96 ವರ್ಷ ವಯಸ್ಸಾಗಿತ್ತು. ಖಾನ್ ಅವರು ಕಳೆದ ವಾರ ಕೋವಿಡ್-19 ಸೋಂಕಿಗೆ ಒಳಗಾಗಿದ್ದರು.‌ ಈ ಹಿನ್ನೆಲೆಯಲ್ಲಿ ಅಪೋಲೊ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದ್ದರಿಂದ ಬುಧವಾರ ಸಂಜೆ ನಿಧನರಾಗಿರುವುದಾಗಿ ತಿಳಿದು ಬಂದಿದೆ.

1925ರಲ್ಲಿ ಅಝಂಗಢದಲ್ಲಿ ಜನಿಸಿರುವ ಮೌಲಾನ ವಹಿದುದ್ದೀನ್ ಖಾನ್ ಅವರು ಕಟ್ಟಾ ರಾಷ್ಟ್ರೀಯವಾದಿಗಳ ಕುಟುಂಬದಿಂದ ಬಂದವರು. ಖಾನ್ 1970ರಲ್ಲಿ ದಿಲ್ಲಿಯಲ್ಲಿ ಇಸ್ಲಾಮಿಕ್ ಸೆಂಟರ್ ಸ್ಥಾಪಿಸಿದ್ದರು. ಆರು ವರ್ಷಗಳ ಬಳಿಕ ಅವರು ಅಲ್ –ರಿಸಾಲಾ ಎಂಬ ಮಾಸಿಕ ಪತ್ರಿಕೆಯನ್ನು ಆರಂಭಿಸಿದರು. ಇದು ಮುಖ್ಯವಾಗಿ ಖಾನ್ ಅವರ ಲೇಖನಗಳನ್ನು ಒಳಗೊಂಡಿತ್ತು. ಅಲ್-ರಿಸಾಲಾವನ್ನು ಇಂಗ್ಲೀಷ್ ಹಾಗೂ ಹಿಂದಿಯಲ್ಲಿ 1984 ಹಾಗೂ 1990ರಲ್ಲಿ ಆರಂಭಿಸಲಾಯಿತು. ಖಾನ್ ಅವರು 200ಕ್ಕೂ ಅಧಿಕ ಪುಸ್ತಕಗಳನ್ನು ಬರೆದಿದ್ದಾರೆ. ಅವರ ಬಹುಪಾಲು ಕೃತಿಯು ಜಾತ್ಯತೀತತೆ, ಅಂತರ್-ನಂಬಿಕೆಯ ಸಂವಾದ, ಸಾಮಾಜಿಕ ಸಾಮರಸ್ಯ ಹಾಗೂ ವಾಕ್ ಸ್ವಾತಂತ್ರ್ಯದ ಮೇಲೆ ಕೇಂದ್ರೀಕರಿಸಿದೆ.

ಅಧ್ಯಾತ್ಮಿಕ ಕ್ಷೇತ್ರದಲ್ಲಿ ಖಾನ್ ಅವರ ಅಸಾಧಾರಣ ಕೊಡುಗೆಗಾಗಿ ಈ ವರ್ಷ ಭಾರತದ 2ನೇ ಅತ್ಯುನ್ನತ ನಾಗರಿಕ ಪ್ರಶಸ್ತಿ ಪದ್ಮ ವಿಭೂಷಣವನ್ನು ನೀಡಲಾಗಿತ್ತು. 2000ರಲ್ಲಿ ಪದ್ಮ ಭೂಷಣ ಪ್ರಶಸ್ತಿಗೂ ಅವರು ಭಾಜನರಾಗಿದ್ದರು.