ಇಸ್ಲಾಮ್ ಫೋಬಿಯಾ ಸಂದೇಶ: ಯುಎಇ ಮೂಲದ ಭಾರತೀಯರು ಕಾನೂನಿನ ಅಡಕತ್ತರಿಯಲ್ಲಿ

0
2268

ಸನ್ಮಾರ್ಗ ವಾರ್ತೆ

ನವದೆಹಲಿ, ಏಪ್ರಿಲ್ 7- ಇಸ್ಲಾಮಿ ಫೋಬಿಯಾ (ಇಸ್ಲಾಂ ಭೀತಿ) ಸಂದೇಶವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹರಡಿದ ಭಾರತೀಯ ಮೂಲದ ಇಬ್ಬರು ವ್ಯಕ್ತಿಗಳು ಯುಎಇಯಲ್ಲಿ ಕಾನೂನು ಕ್ರಮದ ಭೀತಿಯಲ್ಲಿದ್ದಾರೆ. ಗಲ್ಫ್ ನ್ಯೂಸ್ ನ ಪ್ರಕಾರ, ಅಬುದಾಬಿ ಮೂಲದ ಕಂಪೆನಿಯೊಂದರಲ್ಲಿ ಹಣಕಾಸು ವ್ಯವಸ್ಥಾಪಕ ನಾಗಿ ದುಡಿಯುತ್ತಿರುವ ಮಿತೇಶ್ ಅನ್ನುವ ವ್ಯಕ್ತಿ ಕಾನೂನು ಕ್ರಮ ಎದುರಿಸುವ ಸಾಧ್ಯತೆ ಇದೆ ಎಂದು ದ ವೈರ್ ಡಾಟ್ ಇನ್ ವರದಿ ಮಾಡಿದೆ.

ಆತ ತನ್ನ ಫೇಸ್ ಬುಕ್ ಖಾತೆಯಲ್ಲಿ ಇಸ್ಲಾಮೋಫೋಬಿಯಾ ಚಿತ್ರಗಳನ್ನು ಪೋಸ್ಟ್ ಮಾಡಿರುವುದಲ್ಲದೆ, ಜಿಹಾದಿ ಬಾಂಬರ್ ತನ್ನ ಶರೀರಕ್ಕೆ ಕಟ್ಟಿದ ಪಟ್ಟಿಯನ್ನು ಸ್ಪೋಟಿಸಿ 20 ಮಂದಿಯನ್ನು ಕೊಂದರೆ ಜಿಹಾದಿ ಕೊರೋನಾ ವೈರಸ್ ಸ್ಪೋಟಿಸಿದರೆ 2000 ಮಂದಿಯ ಸಾವಿಗೆ ಕಾರಣವಾಗಬಹುದು ಎಂದು ತನ್ನ ಪೋಸ್ಟ್ ನಲ್ಲಿ ಹೇಳಿದ್ದ.

ಇತ್ತೀಚೆಗೆ ತಬ್ಲೀಗಿ ಜಮಾಅತಿನ ಸದಸ್ಯರು ಪೊಲೀಸ್ ಅಧಿಕಾರಿಗಳ ಮೇಲೆ ಉಗುಳಿದರು ಅನ್ನುವ ಸುಳ್ಳು ವಿಡಿಯೋವನ್ನು ಉಲ್ಲೇಖಿಸಿ ಈತ ಈ ಪೋಸ್ಟ್ ಹಾಕಿದ್ದು ಇದು ಸಾಮಾಜಿಕ ಸೌಹಾರ್ದವನ್ನು ಕೆಡಿಸುತ್ತದೆ ಎಂಬ ದೂರು ವ್ಯಾಪಕವಾಗಿತ್ತು.

ಈ ವ್ಯಕ್ತಿ ದುಡಿಯುತ್ತಿರುವ ಕಂಪೆನಿಯ ಕಾನೂನು ಪ್ರತಿನಿಧಿ ಗಲ್ಫ್ ನ್ಯೂಸ್ ನೊಂದಿಗೆ ಮಾತಾಡಿ, ಈ ವಿಷಯದಲ್ಲಿ ನಾವು ತನಿಖೆಯನ್ನು ಆರಂಭಿಸಿದ್ದೇವೆ ಮತ್ತು ಇಂತಹ ವಿಷಯಗಳ ಬಗ್ಗೆ ನಾವು ಶೂನ್ಯ ಸಹನೆಯನ್ನು ಹೊಂದಿದ್ದೇವೆ ಎಂದು ಹೇಳಿದ್ದಾರೆ. ಕಾನೂನಿನ ಅನುಸಾರ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.

ಇಂಥದೇ ಇನ್ನೊಂದು ಪ್ರಕರಣ ಯುಎಇಯಲ್ಲಿ ನಡೆದಿದ್ದು ಇವೆಂಟ್ ಮ್ಯಾನೇಜ್ಮೆಂಟ್ ಕಂಪನಿಯನ್ನು ಹೊಂದಿರುವ ಭಾರತೀಯ ವ್ಯಕ್ತಿಯೊಬ್ಬ ತನ್ನಲ್ಲಿ ಉದ್ಯೋಗಕ್ಕಾಗಿ ಅರ್ಜಿ ಹಾಕಿದ ಮುಸ್ಲಿಂ ವ್ಯಕ್ತಿಯೊಂದಿಗೆ ನೀನು ಪಾಕಿಸ್ತಾನಕ್ಕೆ ಹೋಗು ಎಂದು ಹೇಳಿರುವುದು ಈ ಹಿಂದೆ ನಡೆದಿತ್ತು.

ತಾನು ಎಸ್ ಬಂಡಾರಿ ಎಂಬವರಿಗೆ ಉದ್ಯೋಗಕ್ಕಾಗಿ ನನ್ನ ಸಿವಿಯನ್ನು ವಾಟ್ಸಪ್ ಮೂಲಕ ಕಳುಹಿಸಿಕೊಟ್ಟಿದ್ದೆ ಮತ್ತು ಅದಕ್ಕೆ ಪ್ರತಿಯಾಗಿ ನೀನು ಪಾಕಿಸ್ತಾನಕ್ಕೆ ಹೋಗು ಅನ್ನುವ ಸಂದೇಶ ಬಂದಿದೆ ಎಂದು ಷಾ ಆಲಂ ಅನ್ನುವಾತ ದುಬೈ ಪೊಲೀಸರಿಗೆ ದೂರು ಕೊಟ್ಟಿದ್ದ. ಇವರಿಬ್ಬರ ನಡುವಿನ ವಾಟ್ಸಾಪ್ ಸಂಭಾಷಣೆ ಕೂಡ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಪ್ರಸಾರವಾಗಿತ್ತು. 2015ರಲ್ಲಿ ಯುಎಇಯಲ್ಲಿ ಜಾರಿಗೆ ಬಂದ ಕಾನೂನಿನಡಿಯಲ್ಲಿ ಎಲ್ಲ ರೀತಿಯ ಧಾರ್ಮಿಕ ಮತ್ತು ಜನಾಂಗೀಯ ತಾರತಮ್ಯವನ್ನು ನಿಷೇಧಿಸಲಾಗಿದೆ.

ಭಾಷಣಗಳು ಅಥವಾ ಪುಸ್ತಕಗಳು, ಕರಪತ್ರಗಳು ಅಥವಾ ಆನ್ಲೈನ್ ಮಾಧ್ಯಮದ ಮೂಲಕ ಧಾರ್ಮಿಕ ದ್ವೇಷವನ್ನು ಉಂಟುಮಾಡುವ ಯಾವುದೇ ರೀತಿಯ ಅಭಿವ್ಯಕ್ತಿಯನ್ನು ಈ ಕಾನೂನು ನಿಷೇಧಿಸುತ್ತದೆ.
ಇಸ್ಲಾಮೋಫೋಬಿಯಾ ವಿಷಯವನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಕ್ಕಾಗಿ ಮತ್ತು ಭಾರತೀಯ ಪತ್ರಕರ್ತೆ ರಾಣಾ ಅಯೂಬ್‌ಗೆ ನಿಂದನೀಯ ಸಂದೇಶಗಳನ್ನು ಕಳುಹಿಸಿದ್ದಕ್ಕಾಗಿ 2017 ರಲ್ಲಿ ಯುಎಇ ಮೂಲದ ಕಂಪನಿಯೊಂದು ಭಾರತೀಯ ಉದ್ಯೋಗಿಯನ್ನು ಕೆಲಸದಿಂದ ತೆಗೆದುಹಾಕಿತ್ತು. .

ಮಾರ್ಚ್ 15 ರಂದು ನ್ಯೂಜಿಲೆಂಡ್‌ನ ಎರಡು ಮಸೀದಿಗಳ ಮೇಲೆ ನಡೆದ ಭಯೋತ್ಪಾದಕ ದಾಳಿಯ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಅನುಚಿತ ಹೇಳಿಕೆಗಳನ್ನು ನೀಡಿದ್ದ ನೌಕರನನ್ನು 2019 ರಲ್ಲಿ ದುಬೈ ಮೂಲದ ಕಂಪನಿಯೊಂದು ವಜಾ ಮಾಡಿತ್ತು.

ಪೌರತ್ವ (ತಿದ್ದುಪಡಿ) ಕಾಯ್ದೆಯ ವಿರುದ್ಧ ಮಾತನಾಡಿದ ದೆಹಲಿ ಮೂಲದ ಮಹಿಳೆಯೊಬ್ಬರನ್ನು ಆನ್‌ಲೈನ್‌ನಲ್ಲಿ ನಿಂದಿಸಿದ ದುಬೈ ಮೂಲದ ಭಾರತೀಯ ಬಾಣಸಿಗನನ್ನು ಕಳೆದ ತಿಂಗಳು ವಜಾ ಮಾಡಲಾಗಿತ್ತು. ಆ ವ್ಯಕ್ತಿ ಫೇಸ್‌ಬುಕ್ ಪೋಸ್ಟ್‌ನಲ್ಲಿ ಆಕೆಯ ಮೇಲೆ ಅತ್ಯಾಚಾರ ಮಾಡುವುದಾಗಿ ಬೆದರಿಕೆ ಹಾಕಿದ್ದ.

ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.