ಕೊರಗಜ್ಜನ ಕಟ್ಟೆ‌ ಅಪವಿತ್ರ ಪ್ರಕರಣದಲ್ಲಿ ಅಮಾಯಕರ ಮೇಲೆ ಸುಳ್ಳಾರೋಪ: ನಿಜ ಸಂಗತಿ ಭೇದಿಸಲು ಇಸ್ಮಾಯಿಲ್ ಶಾಫಿ ಒತ್ತಾಯ

0
957

ಸನ್ಮಾರ್ಗ ವಾರ್ತೆ

ಮಂಗಳೂರು: ಕೊರಗಜ್ಜನ ಕಟ್ಟೆ‌ ಅಪವಿತ್ರ ಪ್ರಕರಣದಲ್ಲಿ ಅಮಾಯಕರ ಮೇಲೆ ಸುಳ್ಳಾರೋಪ ಹೊರಿಸಿದ್ದಲ್ಲದೇ, ಬಂಧಿಸಿದ್ದ ತಪ್ಪು. ಈ ಹಿನ್ನೆಲೆಯಲ್ಲಿ ಘಟನೆಯ ಹಿಂದಿನ‌ ನಿಜಾಂಶ ಭೇದಿಸಲು ಕರ್ನಾಟಕ ರಾಜ್ಯ ಟಿಪ್ಪು ಸುಲ್ತಾನ್ ಅಭಿಮಾನಿಗಳ ಮಹಾ ವೇದಿಕೆ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯ ಅಧ್ಯಕ್ಷರಾದ ಹೆಚ್.ಇಸ್ಮಾಯಿಲ್ ಶಾಫಿ ಬಬ್ಬುಕಟ್ಟೆ ಆಗ್ರಹಿಸಿದ್ದಾರೆ.

ಕಳೆದ ಮಾರ್ಚ್ 31 ರಂದು ಕೊರಗಜ್ಜ ಕಟ್ಟೆಯನ್ನು ಅಪವಿತ್ರಗೊಳಿಸಿದ ಪ್ರಕರಣದ ತನಿಖೆ ನಡೆಯುತ್ತಿರುವ ವೇಳೆ ಇಬ್ಬರು ಮುಸ್ಲಿಮರು ಕೊರಗಜ್ಜನ ಕಟ್ಟೆಗೆ ಬಂದು ಹುಂಡಿಗೆ ಹಣ ಹಾಕಿದ್ದು ಇದನ್ನು‌ ತಪ್ಪಾಗಿ ಅರ್ಥೈಸಿದ ಹಿಂದೂ ಸಂಘಟನೆ ಕಾರ್ಯಕರ್ತರು ಇದು ಕೊರಗಜ್ಜನ ಕಟ್ಟೆಯನ್ನು ಅಪವಿತ್ರಗೊಳಿಸಿದ ಆರೋಪಿಗಳು ಪ್ರಾಯಶ್ಚಿತ ಮಾಡಲು ಬಂದದ್ದು ಎಂದು ಸುದ್ದಿ ಹಬ್ಬಿಸಿದಾಗ ಅಲ್ಲಿ ಜನರು ಸೇರಿದ್ದು ಬಳಿಕ ಅಲ್ಲಿಂದಲೇ ಇಬ್ಬರ ಬಂಧನ ಕೂಡ ಆಗಿತ್ತು.
ಆದರೆ ಪೊಲೀಸರು ವಿಚಾರಣೆ ಮಾಡುವ ಸಂದರ್ಭದಲ್ಲಿ, ನಾವು ಯಾವುದೇ ತಪ್ಪು ಮಾಡಿಲ್ಲ.
ಕೊರಗಜ್ಜನ ಕಟ್ಟೆಯ ಹುಂಡಿಗೆ ಹಣ ಹಾಕಲು ಬಂದದ್ದು ಎಂಬ ಸತ್ಯವನ್ನು ಹೇಳಿದ್ದರು.

ಈ ನಡುವೆ ಪತ್ರಿಕಾಗೋಷ್ಠಿ ಕರೆದ ಮಂಗಳೂರು ನಗರ ಪೊಲೀಸ್ ಕಮಿಷನರ್ ಶಶಿಕುಮಾರ್ ಅವರು, ಕೊರಗಜ್ಜನ ಕಟ್ಟೆ ಅಪವಿತ್ರಗೊಳಿಸಿದ ಪ್ರಕರಣದ ಆರೋಪಿಗಳು ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದು, ಜಿಲ್ಲೆಯ ವಿವಿಧೆಡೆ ದೇವಾಲಯಗಳ ಅಪವಿತ್ರಗೊಳಿಸಿದ ಘಟನೆಯಲ್ಲಿ ಕೈವಾಡವಿದೆ ಎಂದಿದ್ದರು.

ಅಲ್ಲದೇ, ಈ ಪೈಕಿ ಒಬ್ಬ ರಕ್ತಕಾರಿ ಮರಣ ಹೊಂದಿದ್ದಾನೆಂದೂ ಪೊಲೀಸ್ ಕಮಿಷನರ್ ವಿವರಣೆ ನೀಡಿದ್ದರು.

ನಿಜವಾಗಿ ಮೃತ ವ್ಯಕ್ತಿಗೆ ಒಂದು ವರ್ಷದಿಂದ ಏಡ್ಸ್ ಇದ್ದು ಇದು ಉಲ್ಬಣಗೊಂಡು ಆತ ಮೃತಪಟ್ಟಿದ್ದ.
ಇದೀಗ ಘಟನೆ ಸಂಪೂರ್ಣ ಉಲ್ಟಾ ಆಗಿದ್ದು, ಬಂಧಿತ ವ್ಯಕ್ತಿ ಗಳಿಗೆ ಕೊರಗಜ್ಜನ ಕಟ್ಟೆಯನ್ನು ಅಪವಿತ್ರಗೊಳಿಸಿದ ಪ್ರಕರಣದೊಂದಿಗೆ ಯಾವುದೇ ಸಂಬಂಧವಿಲ್ಲ ಎಂದು ಸಾಬೀತಾಗಿ, ಬಂಧನಕ್ಕೀಡಾದವರನ್ನು ಬಿಡುಗಡೆ ಗೊಳಿಸಲಾಗಿದೆ.

ಸೂಕ್ಷ್ಮ ವಿಷಯಗಳನ್ನು ಸರಿಯಾಗಿ ಅವಲೋಕಿಸದೆ ಯಾರ್ಯಾರದೋ ಮಾತು ಕೇಳಿ ಇನ್ನೊಂದು ಸಮುದಾಯದವರನ್ನು ವಿನಾಕಾರಣ ಬಂಧಿಸಿ ಜನರಿಗೆ ತಪ್ಪು ಸಂದೇಶ ಕಳಿಸಿರುವುದು ನಿಜಕ್ಕೂ ಪೊಲೀಸ್ ಇಲಾಖೆಗೆ ಕಪ್ಪು ಚುಕ್ಕೆ ಎಂದವರು ತಿಳಿಸಿದ್ದಾರೆ.

ಮುಸ್ಲಿಂ ಸಮುದಾಯದ ಯಾರಾದರೂ ಹಿಂದೂ ಕ್ಷೇತ್ರಗಳಿಗೆ ತೆರಳಿದರೆ ಅದರ ಫೋಟೋ ತೆಗೆದು ಸಾಮಾಜಿಕ ತಾಣಗಳಿಗೆ ರವಾನಿಸಿ ಪ್ರಚಾರ ಮಾಡುತ್ತಾರೆ. ಅದೇ ಮುಸ್ಲಿಂ ಧಾರ್ಮಿಕ ಕ್ಷೇತ್ರಗಳಿಗೆ ಎಷ್ಟೋ ಹಿಂದೂಗಳು ದಿನನಿತ್ಯ ಬರುತ್ತಾರೆ. ಮಂಗಳೂರು ಸೈದಾನಿ ಬೀವಿ ದರ್ಗಾಕ್ಕೆ ಪ್ರತಿನಿತ್ಯ ನೂರಾರು ಮಂದಿ ಹಿಂದೂ ಸಹೋದರ, ಸಹೋದರಿಯರು ಬರುತ್ತಾರೆ.
ಆದರೆ ಯಾರೂ ಕೂಡ ಇದನ್ನು ಪೋಟೋ ತೆಗೆದು ವೈರಲ್ ಮಾಡುವುದಿಲ್ಲ.

ಹಿಂದೂ ಧಾರ್ಮಿಕ ಕ್ಷೇತ್ರಗಳಿಗೆ ಯಾವುದೋ ವಿಷಯಗಳಿಗಾಗಿ ತೆರಳಿದವರನ್ನು ಯಾವುದೋ ಪ್ರಕರಣಗಳೊಂದಿಗೆ ಥಳಕು ಹಾಕಿ ಅವರನ್ನು ಮಾನಸಿಕವಾಗಿ ಕುಗ್ಗಿಸುವ ಪ್ರಯತ್ನ ನಡೆಯುತ್ತಿದೆ.
ಕೋಮು ಸೂಕ್ಷ್ಮ ಜಿಲ್ಲೆಯಲ್ಲಿ ಇಂಥಾ ಘಟನೆಗಳು ನಡೆದಾಗ ಅದು ವಿಕೋಪಕ್ಕೆ ತಿರುಗುವ ಸಾಧ್ಯತೆ ಹೆಚ್ಚಾಗಿರುತ್ತದೆ.‌ ಆದ್ದರಿಂದ ಈ ರೀತಿಯ ಯಾವುದೇ ಪ್ರಕರಣಗಳು ಮರುಕಳಿಸದಂತೆ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು.
ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಅವರು ಹಲವು ಕೆಲಸಗಳನ್ನು ಮಾಡಿ ಜನರ ಮೆಚ್ಚುಗೆ ಪಡೆದಿದ್ದಾರೆ.
ಈ ಪ್ರಕರಣಗಳ ಬಗ್ಗೆಯೂ ಸೂಕ್ತ ತನಿಖೆ ನಡೆಸಿ ಪ್ರಕರಣಗಳ ನಿಜಸ್ಥಿತಿ ಯನ್ನು ಬೇಧಿಸಬೇಕಿದೆ ಎಂದು ಒತ್ತಾಯಿಸಿದರು.

ಪ್ರಸ್ತುತ ಪ್ರಕರಣ ಮತ್ತು ಜಿಲ್ಲೆಯ ವಿವಿಧ ಕಡೆಗಳಲ್ಲಿ ಧಾರ್ಮಿಕ ಕ್ಷೇತ್ರಗಳ ಅಪವಿತ್ರಗೊಳಿಸಿದ ಪ್ರಕರಣಗಳ ಬಗ್ಗೆ ಮುಖ್ಯಮಂತ್ರಿ ಮತ್ತು ಗೃಹ ಸಚಿವರು ಸಮಗ್ರ ತನಿಖೆಗೆ ಆದೇಶ ನೀಡಿ ಪ್ರಸ್ತುತ ಪ್ರಕರಣಗಳ ಹಿಂದಿನ ಆರೋಪಿಗಳನ್ನು ಮತ್ತು ಹಿಂದಿರುವ ಷಡ್ಯಂತ್ರ ಗಳನ್ನು ಬಯಲಿಗೆಳೆಯಬೇಕು ಎಂದವರು ಆಗ್ರಹಿಸಿದ್ದಾರೆ.