ಮುಸ್ಲಿಮರನ್ನು ಮತದಾರ ಪಟ್ಟಿಯಲ್ಲಿ ಸೇರಿಸಬಾರದು ಎಂಬ ಮಹಾರಾಷ್ಟ್ರ ಪಂಚಾಯತ್ ನ ತೀರ್ಮಾನದ ವಿರುದ್ಧ ಪ್ರತಿಭಟನೆ

0
351

ಸನ್ಮಾರ್ಗ ವಾರ್ತೆ

ಹೊಸ ನಿವಾಸಿಗಳಾದ ಮುಸ್ಲಿಮರನ್ನು ಮತದಾರ ಪಟ್ಟಿಯಲ್ಲಿ ಸೇರಿಸಬಾರದು ಎಂಬ ಮಹಾರಾಷ್ಟ್ರ ಪಂಚಾಯತ್ ನ ತೀರ್ಮಾನದ ವಿರುದ್ಧ ಪ್ರತಿಭಟನೆ ಜೋರಾಗಿದೆ. ಈ ತೀರ್ಮಾನವು ತಾರತಮ್ಯದಿಂದ ಕೂಡಿದೆ ಮತ್ತು ಸಂವಿಧಾನದ ಮೂಲ ತತ್ವಗಳಿಗೆ ವಿರುದ್ಧವಾಗಿದೆ ಎಂದು ಸೂಚಿಸಿ ವಿವಿಧ ಮುಸ್ಲಿಂ ಸಂಘಟನೆಗಳು ನ್ಯಾಯಾಲಯದ ಮೆಟ್ಟಿಲೇರಿವೆ.

ಕೊಲ್ಲಾಪುರ್ ಜಿಲ್ಲೆಯ ಸಿಗ್ನಾಪುರ್ ಗ್ರಾಮ ಪಂಚಾಯತ್ ಇಂತದ್ದೊಂದು ವಿಶಿಷ್ಟ ತೀರ್ಮಾನವನ್ನು ಕೈಗೊಂಡಿತ್ತು. ನವಂಬರ್ ನಲ್ಲಿ ಮಹಾರಾಷ್ಟ್ರದ ವಿಧಾನಸಭೆಗೆ ಚುನಾವಣೆ ನಡೆಯಲಿದ್ದು ಅದಕ್ಕಿಂತ ಮುಂಚಿತವಾಗಿ ಈ ವಿವಾದಾಸ್ಪದ ತೀರ್ಮಾನವನ್ನು ಕೈಗೊಳ್ಳಲಾಗಿದೆ.

ಆಗಸ್ಟ್ 28 ರಂದು ಈ ನಿಯಮ ಪಂಚಾಯತಿನಲ್ಲಿ ಅಂಗೀಕರಿಸಲಾಗಿದ್ದು ಸೆಪ್ಟೆಂಬರ್ 5 ರಂದು ಅಧಿಕೃತವಾಗಿ ಘೋಷಿಸಲಾಗಿತ್ತು. ಈ ನಿಯಮಕ್ಕೆ ಸರಪಂಚ್ ರಸಿಕ ಪಾಟೀಲ್ ಸಹಿಯನ್ನು ಹಾಕಿದ್ದಾರೆ. ಇತ್ತೀಚೆಗೆ ಗ್ರಾಮದಲ್ಲಿ ವಾಸಿಸ ತೊಡಗಿರುವ ಮುಸ್ಲಿಮರ ಹೆಸರನ್ನು ಮತದಾರರ ಪಟ್ಟಿಯಲ್ಲಿ ಸೇರಿಸಬಾರದು ಎಂಬುದು ಈ ತೀರ್ಮಾನದ ಪ್ರಮುಖ ಅಂಶ.

ಜಿಲ್ಲೆಯ ವಿವಿಧ ಮುಸ್ಲಿಂ ಸಂಘಟನೆಗಳು ಈ ಸರಪಂಚ್ ಮತ್ತು ಪಂಚಾಯತ್ ನ ಸದಸ್ಯರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಜಿಲ್ಲಾ ಮ್ಯಾಜಿಸ್ಟ್ರೇಟರ್ ಅವರಿಗೆ ದೂರು ನೀಡಿದೆ. ಈ ವಿಷಯ ವಿವಾದಕ್ಕೆ ಒಳಗಾಗುತ್ತಿರುವಂತೆ ಇಂಥದ್ದೊಂದು ತೀರ್ಮಾನ ಕೈಗೊಳ್ಳುವುದಕ್ಕೆ ಪಂಚಾಯಿತಿಗೆ ಅಧಿಕಾರ ಇಲ್ಲ ಎಂಬುದು ನಮಗೆ ಗೊತ್ತಿರಲಿಲ್ಲ ಎಂದು ಹೇಳಿ ಪಂಚಾಯತ್ ಕೈ ತೊಳೆದುಕೊಳ್ಳಲು ಯತ್ನಿಸಿದೆ. ಅಲ್ಲದೆ ಈ ತೀರ್ಮಾನ ಕೈಗೊಂಡದ್ದು ಸ್ಥಳೀಯ ಮುಸ್ಲಿಮರನ್ನು ಗುರಿಯಾಗಿಸಿ ಅಲ್ಲ ರೋಹೆಂಗ್ಯ ಮುಸ್ಲಿಮರನ್ನು ಗುರಿಯಾಗಿಸಿ ಎಂದು ತೇಪೆ ಹಚ್ಚಲು ಶ್ರಮಿಸಿದೆ.

22 ಸಾವಿರದಷ್ಟು ಜನಸಂಖ್ಯೆ ಇರುವ ಈ ಗ್ರಾಮದಲ್ಲಿ 1200ರಷ್ಟು ಮುಸ್ಲಿಮರಿದ್ದಾರೆ.