ಆಕ್ರಮಣ ಮುಂದುವರಿಸಿದ ಇಸ್ರೇಲ್: ಮತ್ತೆ 67 ಜನರ ಮಾರಣಹೋಮ

0
79

ಸನ್ಮಾರ್ಗ ವಾರ್ತೆ

ಭಯೋತ್ಪಾದನೆ ನಿರ್ಮೂಲನೆಯ ನೆಪದಲ್ಲಿ ಮುಗ್ದ ಪ್ಯಾಲೆಸ್ತೀನ್ ನಾಗರಿಕರ ಮೇಲೆ ಇಸ್ರೇಲ್‌ ನಡೆಸುತ್ತಿರುವ ಆಕ್ರಮಣಕ್ಕೆ ಸೋಮವಾರ 67 ಜನರು ಬಲಿಯಾಗಿದ್ದಾರೆ.

ಗಾಝಾದ ಅತ್ಯಂತ ಜನ ನಿಬಿಡ ನಗರವಾದ ರಫಾದಲ್ಲಿ ಇಸ್ರೇಲ್ ಅಟ್ಟಹಾಸ ಮೆರೆದಿದ್ದು, ಕಂದಮ್ಮಗಳು ಸೇರಿದಂತೆ 67 ಜನರು ಕೊನೆಯುಸಿರೆಳೆದಿದ್ದಾರೆ. ನೂರಾರು ಜನರು ಗಾಯಗೊಂಡಿದ್ದಾರೆ. ಘಟನೆಯ ಕುರಿತು ಅಂತಾರಾಷ್ಟ್ರೀಯ ಮಾಧ್ಯಮಗಳು ಪ್ರಕಟಿಸಿರುವ ಫೋಟೋಗಳು ಭೀಕರವಾಗಿದೆ.

ಸೋಮವಾರ ಗಾಝಾದ ದಕ್ಷಿಣದ ನಗರವಾದ ರಫಾದ ವಿವಿಧ ಭಾಗಗಳಲ್ಲಿ 14 ಮನೆಗಳು ಮತ್ತು ಮೂರು ಮಸೀದಿಗಳನ್ನು ಇಸ್ರೇಲ್ ಸೇನೆ ಹೊಡೆದುರುಳಿಸಿವೆ ಎಂದು ಹಮಾಸ್ ಸರ್ಕಾರ ವರದಿ ಮಾಡಿದೆ.

“ದಕ್ಷಿಣ ಗಾಝಾ ಪಟ್ಟಿಯಲ್ಲಿರುವ ಶಬೌರಾ ಪ್ರದೇಶದಲ್ಲಿ ಭಯೋತ್ಪಾದಕರ ನೆಲೆಗಳನ್ನು ಗುರಿಯಾಗಿಸಿ ಸರಣಿ ದಾಳಿ ನಡೆಸಲಾಗಿದೆ” ಎಂದು ಇಸ್ರೇಲಿ ಮಿಲಿಟರಿ ಹೇಳಿಕೊಂಡಿದೆ.

ಯುಎಸ್‌ನ ಎಬಿಸಿ ನ್ಯೂಸ್‌ ಜೊತೆ ಮಾತನಾಡಿರುವ ಇಸ್ರೇಲ್‌ ಪ್ರಧಾನಿ ಬೆಂಜಮಿನ್ ನೆತನ್ಯಾಹು, “ಹಮಾಸ್ ಅನ್ನು ನಿರ್ಮೂಲನೆ ಮಾಡುವವರೆಗೆ ರಫಾದಲ್ಲಿ ಕಾರ್ಯಾಚರಣೆ ಮುಂದುವರಿಯಲಿದೆ. ಅಲ್ಲಿಂದ ಹೊರ ಬರಲು ಬಯಸುವ ನಾಗರಿಕರಿಗೆ ನಾವು ವ್ಯವಸ್ಥೆಗಳನ್ನು ಮಾಡಿ ಕೊಡುತ್ತೇವೆ” ಎಂದಿದ್ದಾರೆ.

ಸುಮಾರು 130 ದಿನಗಳ ಕಾಲ ರಫಾದಲ್ಲಿ ಹಮಾಸ್ ವಶದಲ್ಲಿದ್ದ ಇಬ್ಬರನ್ನು ರಕ್ಷಿಸಲಾಗಿದೆ ಎಂದು ಇಸ್ರೇಲಿ ಮಿಲಿಟರಿ ಸೋಮವಾರ ಮುಂಜಾನೆ ಘೋಷಿಸಿದೆ. ಫೆರ್ನಾಂಡೋ ಸೈಮನ್ ಮರ್ಮನ್ ಮತ್ತು ಲೂಯಿಸ್ ಹರ್ ಎಂಬ ಇಬ್ಬರನ್ನು ಅಕ್ಟೋಬರ್ 7ರಂದು ಹಮಾಸ್ ಕಿಬ್ಬುಟ್ಜ್ ನಿರ್ ಯಿಟ್ಜಾಕ್‌ನಿಂದ ಅಪಹರಿಸಿತ್ತು. ಅವರನ್ನು ರಕ್ಷಿಸಿದ್ದೇವೆ. ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ತಿಳಿಸಿದೆ.

ಅಲ್‌ ಜಝೀರಾ ವರದಿಯ ಪ್ರಕಾರ, ಪ್ರಸ್ತುತ ಸುಮಾರು 1.4 ಮಿಲಿಯನ್ ಪ್ಯಾಲೆಸ್ತೀನಿಯನ್ನರು ರಫಾದಲ್ಲಿ ಆಶ್ರಯ ಪಡೆದಿದ್ದಾರೆ. ಅನೇಕರು ಡೇರೆಗಳಲ್ಲಿ ವಾಸಿಸುತ್ತಿದ್ದಾರೆ. ಅವರಿಗೆ ಆಹಾರ, ನೀರು ಮತ್ತು ಔಷಧ ಕೊರತೆ ಉಂಟಾಗಿದೆ.

ಇಸ್ರೇಲ್ ಮತ್ತು ಯುಎಸ್‌ ಜಂಟಿಯಾಗಿ ರಫಾದ ಜನರಿಗೆ ಅಗತ್ಯ ಸಾಮಾಗ್ರಿ ಒದಗಿಸುವ ಜವಬ್ದಾರಿ ವಹಿಸಿಕೊಂಡಿದೆ. ಜನರಿಗೆ ಪುನರ್ವಸತಿ ಕಲ್ಪಿಸಿರುವ ರಫಾ ನಗರದಲ್ಲೂ ಇಸ್ರೇಲ್ ಆಕ್ರಮಣ ಪ್ರಾರಂಭಿಸಿರುವುದಕ್ಕೆ ಮಾನವ ಹಕ್ಕುಗಳ ಸಂಘಟನೆಗಳು ಕಳವಳ ವ್ಯಕ್ತಪಡಿಸಿವೆ. ಮಾಧ್ಯಮ ವರದಿಗಳ ಪ್ರಕಾರ, ಇಸ್ರೇಲ್ ದಾಳಿಯಿಂದ ಮೃತಪಟ್ಟ ಗಾಝಾ ನಾಗರಿಕರ ಸಂಖ್ಯೆ 28 ಸಾವಿರ ದಾಟಿದೆ.