ಗಾಝಾದಲ್ಲಿ ಕದನ ವಿರಾಮ ಪ್ರಯತ್ನಗಳನ್ನು ದುರ್ಬಲಗೊಳಿಸುತ್ತಿರುವ ಇಸ್ರೇಲ್; ಕತಾರ್ ಪ್ರಧಾನಿ ಬಹಿರಂಗ

0
149

ಸನ್ಮಾರ್ಗ ವಾರ್ತೆ

ವಾಷಿಂಗ್ಟನ್: ಗಾಝಾದಲ್ಲಿ ಇಸ್ರೇಲ್‌ನ ನರಮೇಧದ ಕೃತ್ಯಗಳಿಗೆ ಜವಾಬ್ದಾರರಾಗಿರುವವರು ಯುದ್ಧ ಅಪರಾಧಿಗಳು ಎಂದು ಕತಾರ್ ಪ್ರಧಾನಿ ಶೇಖ್ ಮೊಹಮ್ಮದ್ ಬಿನ್ ಅಬ್ದುಲ್ ರಹಮಾನ್ ಬಿನ್ ಜಾಸಿಮ್ ಅಲ್ ಥಾನಿ ಹೇಳಿದ್ದಾರೆ. ಖ್ಯಾತ ಪತ್ರಕರ್ತ ಪಿಯರ್ಸ್ ಮಾರ್ಗನ್ ಅವರೊಂದಿಗೆ ನಡೆಸಿದ ಸಂದರ್ಶನದಲ್ಲಿ ಅವರು ಇಸ್ರೇಲ್‌ನ ಮಿಲಿಟರಿ ಕ್ರಮಗಳನ್ನು ತೀವ್ರವಾಗಿ ಟೀಕಿಸಿದರು. ಗಾಝಾದಲ್ಲಿ ಕದನ ವಿರಾಮ ಮಾತುಕತೆಗಳನ್ನು ಸುಲಭಗೊಳಿಸಲು ಕತಾರ್ ಮಾಡುತ್ತಿರುವ ಪ್ರಯತ್ನಗಳನ್ನು ಇಸ್ರೇಲ್ ಮೊದಲಿನಿಂದಲೂ ದುರ್ಬಲಗೊಳಿಸಲು (sabotage) ಪ್ರಯತ್ನಿಸಿದೆ ಎಂದೂ ಕತಾರ್ ಪ್ರಧಾನಿ ತಿಳಿಸಿದರು.

ಅಕ್ಟೋಬರ್ 7, 2023 ರಂದು ಹಮಾಸ್ ನಡೆಸಿದ ದಾಳಿಯನ್ನು ಅವರು ‘ಹತ್ಯಾಕಾಂಡ’ ಎಂದು ಬಣ್ಣಿಸಿದರು ಮತ್ತು ಅದನ್ನು ಖಂಡಿಸಬೇಕು ಹಾಗೂ ಅಪರಾಧಿಗಳಿಗೆ ಶಿಕ್ಷೆಯಾಗಬೇಕು ಎಂದು ಹೇಳಿದರು. ಆದಾಗ್ಯೂ, ಅದಕ್ಕೆ ಪ್ರತಿಕ್ರಿಯೆಯಾಗಿ ಇಸ್ರೇಲ್ ನಡೆಸುವ ಪ್ರತಿದಾಳಿಗೆ ಯಾವುದೇ ಸಮರ್ಥನೆಯಿಲ್ಲ ಎಂದು ಅವರು ಸ್ಪಷ್ಟಪಡಿಸಿದರು. ಆಸ್ಪತ್ರೆಗಳು ಮತ್ತು ಶಾಲೆಗಳನ್ನು ಗುರಿಯಾಗಿಸಲಾಗುತ್ತಿದೆ ಮತ್ತು ಯಾವ ವಾದಗಳನ್ನು ಮುಂದಿಟ್ಟರೂ ಇದನ್ನು ಸಮರ್ಥಿಸಲು ಸಾಧ್ಯವಿಲ್ಲ ಎಂದು ಅವರು ಸೇರಿಸಿದರು.

ಅಕ್ಟೋಬರ್ 2025 ರಲ್ಲಿ ಜಾರಿಗೆ ಬಂದ ಯುಎಸ್‌-ಮಧ್ಯಸ್ಥಿಕೆಯ ಕದನ ವಿರಾಮ ಒಪ್ಪಂದವನ್ನು ಇಸ್ರೇಲ್ ನಿರಂತರವಾಗಿ ಉಲ್ಲಂಘಿಸುತ್ತಿದೆ ಮತ್ತು ಅಂದಿನಿಂದ ಗಾಝಾದಲ್ಲಿ 1,400 ಕ್ಕೂ ಹೆಚ್ಚು ಫೆಲೆಸ್ತೀನಿಯರು ಹತ್ಯೆಗೀಡಾಗಿದ್ದಾರೆ ಎಂದು ಕತಾರ್ ಪ್ರಧಾನಿಎತ್ತಿ ತೋರಿಸಿದರು.

ಇಸ್ರೇಲ್ ಪ್ರಸ್ತುತ ಗಾಝಾದ ಸುಮಾರು 70 ಪ್ರತಿಶತದಷ್ಟು ನಿಯಂತ್ರಣವನ್ನು ಹೊಂದಿದೆ ಮತ್ತು ಶಾಂತಿ ಪ್ರಯತ್ನಗಳನ್ನು ವಿಫಲಗೊಳಿಸುವ ಇಸ್ರೇಲ್‌ನ ಗುರಿಯು ಅಸ್ಪಷ್ಟವಾಗಿದೆ ಎಂದು ಸಚಿವರು ಹೇಳಿದರು. 2025 ರಲ್ಲಿ ದೋಹಾದಲ್ಲಿ ಮಾತುಕತೆಗಾಗಿ ಸಭೆ ಸೇರಿದ್ದ ಹಮಾಸ್ ನಾಯಕರನ್ನು ಗುರಿಯಾಗಿಸುವ ಮೂಲಕ ಇಸ್ರೇಲ್, ದೇಶದ ಸಾರ್ವಭೌಮತ್ವವನ್ನು ಉಲ್ಲಂಘಿಸಿದೆ ಎಂದೂ ಅವರು ಆರೋಪಿಸಿದರು.

ಅಮೆರಿಕ ಮತ್ತು ಇರಾನ್ ನಡುವಿನ ಉದ್ವಿಗ್ನತೆಯನ್ನು ಮಾತುಕತೆಯ ಮೂಲಕ ಬಗೆಹರಿಸುವಲ್ಲಿ ಕತಾರ್ ಮತ್ತು ಪಾಕಿಸ್ತಾನ ಪ್ರಮುಖ ಪಾತ್ರ ವಹಿಸುತ್ತಿವೆ ಎಂದೂ ಶೇಖ್ ಮೊಹಮ್ಮದ್ ತಿಳಿಸಿದರು. ಇರಾನ್ ಮೇಲಿನಾ ದಂಡನೆಗಳನ್ನು (ನಿರ್ಬಂಧಗಳನ್ನು) ತೆಗೆದುಹಾಕುವುದು, ಹಾರ್ಮುಝ್‌ ಜಲಸಂಧಿಯಲ್ಲಿ ನೌಕಾಯಾನದ ಸ್ವಾತಂತ್ರ್ಯವನ್ನು ಖಚಿತಪಡಿಸುವುದು ಮತ್ತು ಗಲ್ಫ್ ದೇಶಗಳು ಹಾಗೂ ಇರಾನ್ ನಡುವಿನ ಪ್ರಾದೇಶಿಕ ಭದ್ರತಾ ವ್ಯವಸ್ಥೆಗಳನ್ನು ಮರುರೂಪಿಸುವುದು ಈ ಪ್ರದೇಶದಲ್ಲಿ ಶಾಂತಿಯನ್ನು ಸಾಧಿಸಲು ಪರಿಗಣಿಸಬೇಕಾದ ಮೂರು ಪ್ರಮುಖ ವಿಷಯಗಳಾಗಿವೆ ಎಂದು ಅವರು ಬೆಟ್ಟು ಮಾಡಿದರು.