ಇಸ್ರೇಲ್-ಪ್ಯಾಲೆಸ್ತೀನ್ ಘರ್ಷಣೆ | ಪ್ಯಾಲೆಸ್ತೀನ್ ರಾಷ್ಟ್ರ ಸ್ಥಾಪನೆಯೇ ಪರಿಹಾರ: ರಷ್ಯಾ ಅಧ್ಯಕ್ಷ ಪುಟಿನ್

0
445

ಸನ್ಮಾರ್ಗ ವಾರ್ತೆ

ಇಸ್ರೇಲ್-ಪ್ಯಾಲೆಸ್ತೀನ್ ನಡುವಿನ ಘರ್ಷಣೆ ನಿಲ್ಲಬೇಕೆಂದರೆ ಪ್ಯಾಲೆಸ್ತೀನ್ ರಾಷ್ಟ್ರದ ಸ್ಥಾಪನೆಯೇ ಪರಿಹಾರ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹೇಳಿಕೆ ನೀಡಿದ್ದಾರೆ.

ರಷ್ಯಾಕ್ಕೆ ಭೇಟಿ ನೀಡಿದ್ದ ಇರಾಕ್ ಪ್ರಧಾನ ಮಂತ್ರಿ ಮೊಹಮ್ಮದ್ ಶಿಯಾ ಅಲ್-ಸುಡಾನಿ ಅವರೊಂದಿಗೆ ಮಾತುಕತೆ ಮಧ್ಯೆ ಪುಟಿನ್ ಈ ಹೇಳಿಕೆ ನೀಡಿದ್ದಾರೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿದೆ.

ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧದ ಬಗ್ಗೆ ತಮ್ಮ ಮೊದಲ ಸಾರ್ವಜನಿಕ ಹೇಳಿಕೆ ನೀಡಿರುವ ಪುಟಿನ್, ಅಮೆರಿಕವು ಪ್ಯಾಲೆಸ್ತೀನ್‌ ಜನರ ಹಿತಾಸಕ್ತಿಗಳಿಗೆ ವಿರುದ್ಧವಾಗಿ ಕಾರ್ಯ ನಿರ್ವಹಿಸುತ್ತಿರುವ ಇಸ್ರೇಲ್ ಪರವಾಗಿ ತನ್ನ ನೀತಿಯನ್ನು ಅನುಸರಿಸುತ್ತಿದೆ ಎಂದು ಆರೋಪಿಸಿದರು.

“ಇಸ್ರೇಲ್-ಪ್ಯಾಲೆಸ್ತೀನ್ ನಡುವಿನ ಸಂಘರ್ಷವು ಮಧ್ಯಪ್ರಾಚ್ಯದಲ್ಲಿ ಅಮೆರಿಕದ ನೀತಿ ಯಾವ ರೀತಿಯಲ್ಲಿ ವೈಫಲ್ಯ ಎಂಬುವುದಕ್ಕೆ ಸ್ಪಷ್ಟ ಉದಾಹರಣೆಯಾಗಿದೆ. ಈ ಮಾತನ್ನು ನಾನು ಮಾತ್ರ ಅಲ್ಲ, ನನ್ನೊಂದಿಗೆ ಅನೇಕರು ಒಪ್ಪುತ್ತಾರೆ ಎಂದು ನಾನು ಭಾವಿಸುತ್ತೇನೆ” ಎಂದು ಇರಾಕ್ ಪ್ರಧಾನಿ ಮೊಹಮ್ಮದ್ ಶಿಯಾ ಅಲ್ ಸುಡಾನಿ ಅವರೊಂದಿಗೆ ಸಾರ್ವಜನಿಕ ಮಾತುಕತೆ ವೇಳೆ ರಷ್ಯಾ ಅಧ್ಯಕ್ಷ ಪ್ರಸ್ತಾಪಿಸಿದ್ದಾರೆ.

“ವಾಷಿಂಗ್ಟನ್ ಸಂಘರ್ಷವನ್ನು ನಿಯಂತ್ರಿಸುವಲ್ಲಿ ತನ್ನದೇ ಏಕಸ್ವಾಮ್ಯ ನೀತಿಯನ್ನು ಹೊಂದಲು ಪ್ರಯತ್ನಿಸಿತ್ತು. ಆದರೆ ದುರದೃಷ್ಟವಶಾತ್ ಅದು ಎರಡೂ ಕಡೆಯವರಿಗೆ ಸ್ವೀಕಾರಾರ್ಹವಾಗುವಂತಹ ನೀತಿಯನ್ನು ರಚಿಸುವುದಕ್ಕೆ ಚಿಂತಿಸಲಿಲ್ಲ. ಪ್ರತಿ ಬಾರಿಯೂ, ಪ್ಯಾಲೆಸ್ತೀನ್ ಜನರ ಮೂಲಭೂತ ಹಿತಾಸಕ್ತಿಗಳನ್ನು ಗಣನೆಗೆ ತೆಗೆದುಕೊಳ್ಳದೆ ಕೆಲವೊಂದು ನೀತಿ ರೂಪಿಸಿದೆ” ಎಂದು ಪುಟಿನ್ ಅಮೆರಿಕದ ವಿರುದ್ಧ ಆರೋಪಿಸಿದ್ದಾರೆ.

ಇಸ್ರೇಲ್-ಪ್ಯಾಲೆಸ್ತೀನ್ ಸಂಘರ್ಷ ನಿಲ್ಲಬೇಕೆಂದರೆ ಸ್ವತಂತ್ರ ಸಾರ್ವಭೌಮ ಪ್ಯಾಲೆಸ್ತೀನ್ ರಾಷ್ಟ್ರದ ಸ್ಥಾಪನೆಯೇ ಪರಿಹಾರ. ಪ್ಯಾಲೆಸ್ತೀನ್ ರಾಷ್ಟ್ರದ ರಚನೆಯ ಕುರಿತು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಧಾರವನ್ನು ನಾವು ಕಾರ್ಯಗತಗೊಳಿಸಬೇಕಾಗಿದೆ ಎಂದು ಹೇಳಿದ್ದಾರೆ.