ಸನ್ಮಾರ್ಗ ವಾರ್ತೆ
ಕೈರೊ: ಇಸ್ರೇಲ್ ಪಡೆಗಳು ಉತ್ತರ ಗಾಝಾದಲ್ಲಿರುವ ಆಸ್ಪತ್ರೆಯ ಮೇಲೆ ಡ್ರೋನ್ ದಾಳಿ ನಡೆಸಿದ ಪರಿಣಾಮ ನಾಲ್ಕು ಮಕ್ಕಳು ಸೇರಿ ಆರು ಮಂದಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಪೋಲಿಯೊ ಲಸಿಕೆ ನೀಡುವ ಕಾರ್ಯಕ್ರಮ ನಡೆಯುತ್ತಿತ್ತು, ಈ ವೇಳೆ ದಾಳಿ ಸಂಭವಿಸಿದೆ ಎಂದು ಫೆಲೆಸ್ತೀನ್ ಅಧಿಕಾರಿಗಳು ಹೇಳಿದ್ದಾರೆ.
ಆದರೆ ಇಸ್ರೇಲ್ ಸೇನೆ ಈ ದಾಳಿಯ ಆರೋಪವನ್ನು ತೀವ್ರವಾಗಿ ತಳ್ಳಿ ಹಾಕಿದ್ದು, ತಮ್ಮ ಸೈನಿಕರು ಯಾವುದೇ ರೀತಿಯ ದಾಳಿಯನ್ನು ನಡೆಸಿಲ್ಲವೆಂದು ಸ್ಪಷ್ಟಪಡಿಸಿದೆ.
ಶನಿವಾರ ಮಧ್ಯಾಹ್ನ ಗಾಝಾ ನಗರದಲ್ಲಿರುವ ಶೇಖ್ ರದ್ವನ್ ಕ್ಲಿನಿಕ್ ಮೇಲೆ ಇಸ್ರೇಲ್ ಪಡೆಗಳು ದಾಳಿ ನಡೆಸಿದ್ದಾರೆ. ವಿಶ್ವಸಂಸ್ಥೆಯ ಪ್ರತಿನಿಧಿಗಳು ಸ್ಥಳದಿಂದ ತೆರಳಿದ ತಕ್ಷಣವೇ ಈ ಘಟನೆ ಸಂಭವಿಸಿದೆ ಎಂದು ಗಾಝಾ ಆರೋಗ್ಯ ಸಚಿವಾಲಯದ ನಿರ್ದೇಶಕ ಡಾ. ಮುನೀರ್ ಅಲ್-ಬೌರುಷ್ ತಿಳಿಸಿದ್ದಾರೆ.
ವಿಶ್ವಸಂಸ್ಥೆ ಹಾಗೂ ಯುನಿಸೆಫ್ ಜಂಟಿಯಾಗಿ ಈ ಆಸ್ಪತ್ರೆಯಲ್ಲಿ ಪೋಲಿಯೋ ಲಸಿಕಾಕರಣ ಅಭಿಯಾನವನ್ನು ನಡೆಸುತ್ತಿದ್ದು, ದಾಳಿಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದೆ.












