ಉಪವಾಸವನ್ನು ಅರ್ಧದಲ್ಲೇ ತೊರೆದು ಪ್ಲಾಸ್ಮಾ ದಾನ ಮಾಡಿದ ತಬ್ಲೀಗಿ ಕಾರ್ಯಕರ್ತರು: ದೇಶಕ್ಕಾಗಿ ಜೀವ ನೀಡಲೂ ಸಿದ್ಧ- ವೀಡಿಯೊ

0
1842

ಸನ್ಮಾರ್ಗ ವಾರ್ತೆ

ನವದೆಹಲಿ ಏಪ್ರಿಲ್ 30- ದೆಹಲಿಯ ನಿಜಾಮುದ್ದೀನ್ ಮರ್ಕಸ್ ನಲ್ಲಿ ನಡೆದ ತಬ್ಲೀಗಿ ಸಭೆಯಲ್ಲಿ ಭಾಗವಹಿಸಿದವರಲ್ಲಿ ಕೋರೋನಾ ಪಾಸಿಟಿವ್ ಪತ್ತೆಯಾದದ್ದನ್ನು ಅನುಸರಿಸಿ ದೇಶದಲ್ಲಿ ಭಾರೀ ಮಟ್ಟದಲ್ಲಿ ದ್ವೇಷದ ಪ್ರಚಾರವನ್ನು ಮಾಡಲಾಗಿರುವುದು ನಿಮಗೆ ಗೊತ್ತು. ಭಾರತದಲ್ಲಿ ಕೊರೋನಾ ವೈರಸ್ಸನ್ನು ಹರಡಲು ಇವರು ಪ್ರಯತ್ನಿಸುತ್ತಿದ್ದಾರೆ ಅನ್ನುವ ಅತ್ಯಂತ ಅಮಾನವೀಯ ಆರೋಪವನ್ನು ಕೂಡ ಅವರ ಮೇಲೆ ಹೇರಲಾಗಿರುವುದೂ ನಿಮಗೆ ಗೊತ್ತು. ಆದರೆ ಹಾಗೆ ಆರೋಪಿಸಿದವರೇ ಈಗ ತಬ್ಲೀಗಿ ಕಾರ್ಯಕರ್ತರ ಸೇವಾ ಮನೋಭಾವವನ್ನು ಕಂಡು ಮೌನವಾಗಿದ್ದಾರೆ.

ಕೊರೋನಾ ಪಾಸಿಟಿವ್ ಆಗಿ ಆ ಬಳಿಕ ಗುಣ ಮುಕ್ತರಾದವರು ಪ್ಲಾಸ್ಮಾವನ್ನು (ರಕ್ತವನ್ನು) ದಾನ ಮಾಡಬೇಕೆಂದು ತಬ್ಲೀಗಿ ಮುಖಂಡ ಮುಹಮ್ಮದ್ ಸಾದ್ ಅವರು ಧ್ವನಿ ಸಂದೇಶದ ಮೂಲಕ ವಿನಂತಿಸಿದ ಬಳಿಕ ದೊಡ್ಡ ಮಟ್ಟದಲ್ಲಿ ತಬ್ಲೀಗಿ ಕಾರ್ಯಕರ್ತರು ತಮ್ಮ ಪ್ಲಾಸ್ಮಾವನ್ನು ದಾನ ಮಾಡಲು ಮುಂದೆ ಬರುತ್ತಿದ್ದಾರೆ. ದೇಶದ ವಿವಿಧ ರಾಜ್ಯಗಳ ಅನೇಕಾರು ಕಾರ್ಯಕರ್ತರು ಹೀಗೆ ತಮ್ಮ ರಕ್ತದ ಮಾದರಿಯನ್ನು ನೀಡಲು ಮುಂದೆ ಬಂದಿದ್ದಾರೆ. ಇಂಥವರಲ್ಲಿ ತಮಿಳುನಾಡಿನ ಇನಾಯತ್ ಕೂಡ ಒಬ್ಬರು. ಕೊರೋನಾ ಪಾಸಿಟಿವ್ ಆಗಿ ಗಂಭೀರ ಸ್ಥಿತಿಯಲ್ಲಿ ಇರುವವರಿಗೆ ಕೊರೋನಾ ರೋಗ ಮುಕ್ತರಾದವರು ತಮ್ಮ ರಕ್ತದ ಮಾದರಿಯಲ್ಲಿರುವ ಪ್ಲಾಸ್ಮಾವನ್ನು ನೀಡಿದರೆ ಅವರು ಗುಣಮುಖರಾಗುವ ಸಾಧ್ಯತೆ ಹೆಚ್ಚಿರುವುದರಿಂದ ಪ್ಲಾಸ್ಮಾ ದಾನಕ್ಕೆ ಬಹಳ ಮಹತ್ವವಿದೆ.

ಏಪ್ರಿಲ್ 21ರಂದು ತನ್ನ ಇತರ ಗೆಳೆಯರ ಜೊತೆ ಇನಾಯತ್ ಪ್ಲಾಸ್ಮಾ ದಾನ ಮಾಡಿದ್ದಾರೆ. ಇನಾಯತ್ ಸಹಿತ ಇತರ ಕಾರ್ಯಕರ್ತರ ಸಂದರ್ಶನವನ್ನು ದ ಕ್ವಿಂಟ್ ಜಾಲತಾಣ ಪ್ರಕಟಿಸಿದೆ.

ಇದು ಕೇವಲ ಒಂದು ಬಿಂದು ರಕ್ತ ಮಾತ್ರ. ದೇಶಕ್ಕಾಗಿ ಮತ್ತು ಈ ದೇಶದ ಜನರಿಗಾಗಿ ನಾವು ಜೀವ ನೀಡಲೂ ಸಿದ್ಧರಿದ್ದೇವೆ. ಜನರಿಗೆ ನೆರವಾಗುವುದು ಬದುಕಿನ ಪರಮ ಗುರಿ ಎಂದು ಇಸ್ಲಾಂ ಮತ್ತು ಪ್ರವಾದಿ ಮುಹಮ್ಮದರು ನಮಗೆ ಕಲಿಸಿಕೊಟ್ಟಿದ್ದಾರೆ ಎಂದು ಇನಾಯತ್ ಹೇಳಿದ್ದಾರೆ. ನಾವು ಯಾವುದೇ ರೀತಿಯ ನೆರವಿಗೂ ಸಿದ್ಧರಿದ್ದೇವೆ. ಪ್ಲಾಸ್ಮ ಇದರ ಒಂದು ಭಾಗ ಮಾತ್ರ ಎಂದು ಜಾರ್ಖಂಡಿನ ಹಶ್ಮುದ್ದೀನ್ ಅನ್ಸಾರಿ ಹೇಳುತ್ತಾರೆ.

ಕೊರೋನಾ ಪಾಸಿಟಿವ್ ಆದ ತಬ್ಲೀಗಿ ಕಾರ್ಯಕರ್ತರನ್ನು ದೆಹಲಿಯ ನರೋಲ ಮತ್ತು ಸುಲ್ತಾನ್ ಪುರದಲ್ಲಿ ಕ್ವಾರಂಟೈನ್ ಗೊಳಿಸಲಾಗಿತ್ತು. ಅವರೆಲ್ಲರೂ ಈಗ ರೋಗ ಮುಕ್ತರಾಗಿದ್ದಾರೆ. ಇವರಲ್ಲಿ 90 ಮಂದಿ ಪ್ಲಾಸ್ಮಾ ದಾನ ಮಾಡಿದ್ದಾರೆ. ಕೆಲವರು ತಮ್ಮ ಉಪವಾಸವನ್ನು ಅರ್ಧದಲ್ಲೇ ತೊರೆದು ಪ್ಲಾಸ್ಮಾವನ್ನು ದಾನ ಮಾಡಿದರೆ ಇನ್ನೂ ಕೆಲವರು ಉಪವಾಸ ಮುಗಿದ ಬಳಿಕ ದಾನ ಮಾಡಿದ್ದಾರೆ.

ಆದರೆ ಪ್ಲಾಸ್ಮಾ ತೆರಪಿಯ ಮೂಲಕ ರೋಗಿಗಳನ್ನು ಗುಣಪಡಿಸುವ ಕುರಿತಂತೆ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಸಂಶೋಧನೆಯಲ್ಲಿ ನಿರತವಾಗಿದೆ. ಸ್ಪಷ್ಟ ಪುರಾವೆ ಲಭಿಸಿದ ಬಳಿಕ ಈ ಕುರಿತಂತೆ ಸ್ಪಷ್ಟನೆ ನೀಡಲಿದೆ ಎಂದು ಸಂಸ್ಥೆಯ ಅಧಿಕೃತರು ಹೇಳಿದ್ದಾರೆ.

ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.