ಜಮಾಅತೆ ಇಸ್ಲಾಮೀ ಹಿಂದ್‌ನಿಂದ ರೈತರಿಗೆ ಬೆಂಬಲ: ಕೃಷಿ ಸಂಬಂಧಿತ ಮಸೂದೆಗಳನ್ನು ಹಿಂಪಡೆಯುವಂತೆ ಸರ್ಕಾರಕ್ಕೆ ಆಗ್ರಹ

0
480

ನವದೆಹಲಿ,ಸೆ.21(ಸನ್ಮಾರ್ಗ ವಾರ್ತೆ): ಈ ವಾರ ಲೋಕಸಭೆಯಲ್ಲಿ ಅಂಗೀಕರಿಸಲ್ಪಟ್ಟ ಮೂರು ಕೃಷಿ ಸಂಬಂಧಿತ ಸುಧಾರಣಾ ಮಸೂದೆಗಳನ್ನು ಹಿಂಪಡೆಯಬೇಕು ಎಂಬ ರೈತರ ನಿಲುವನ್ನು ಜಮಾಅತೆ ಇಸ್ಲಾಮೀ ಹಿಂದ್(ಜೆಐಹೆಚ್) ಬೆಂಬಲಿಸಿದೆ. ರೈತರು ಹಾಗೂ ಗ್ರಾಹಕರ ಹಿತದೃಷ್ಟಿಯಿಂದ ಮಸೂದೆಗಳನ್ನು ಹಿಂತೆಗೆದುಕೊಳ್ಳಬೇಕೆಂದು ಸರ್ಕಾರಕ್ಕೆ ಜಮಾಅತೆ ಇಸ್ಲಾಮೀ ಹಿಂದ್ ಒತ್ತಾಯಿಸಿದೆ.

ಪಂಜಾಬ್ ಮತ್ತು ಹರಿಯಾಣಗಳಲ್ಲಿ ರೈತರು ರಸ್ತೆಗಿಳಿದು ಪ್ರತಿಭಟನೆ ನಡೆಸುತ್ತಿರುವ ವಿಷಯದಲ್ಲಿ ಇಂಡಿಯಾ ಟುಮಾರೊ‌‌‌ಗೆ ನೀಡಿದ ಸಂದರ್ಶನವೊಂದರಲ್ಲಿ, ಜೆಐಹೆಚ್ ಉಪಾಧ್ಯಕ್ಷ ಮುಹಮ್ಮದ್ ಸಲೀಮ್ ಇಂಜಿನಿಯರ್‌ರವರು ಮಾತನಾಡುತ್ತಾ, “ಸರಕಾರ ಜಾರಿಗೆ ತಂದಿರುವ ಮೂರು ಮಸೂದೆಗಳು ಆಹಾರ ಖರೀದಿ ವ್ಯವಹಾರಗಳಲ್ಲಿ ಕಾರ್ಪೊರೇಟ್‌ಗಳಿಗೆ ನುಸುಳಲು ಅವಕಾಶ ನೀಡುತ್ತದರ ಎಂದು ಆರೋಪಿಸಿದ್ದಾರೆ. ಮಧ್ಯವರ್ತಿ ಕಾರ್ಪೋರೆಟ್‌ಗಳು ಅಗತ್ಯ ಆಹಾರ ಧಾನ್ಯಗಳು ಮತ್ತು ತರಕಾರಿಗಳ ದಾಸ್ತಾನನ್ನು ಮಾಡುವ ತಂತ್ರಕ್ಕೆ ಕೈ ಹಾಕಬಹುದು. ಹಾಗೂ ಇದರಿಂದಾಗಿ ತರಕಾರಿ ಮತ್ತು ಧಾನ್ಯಗಳ ಬೆಲೆಯು ಗಗನಕ್ಕೇರಿದ ನಂತರವೇ ಮಧ್ಯವರ್ತಿಗಳು ಮಾರುಕಟ್ಟೆಗೆ ಪೂರೈಸಿ ಜನಸಾಮಾನ್ಯರನ್ನು ಕೊಳ್ಳೆಹೊಡೆಯಲು ಪ್ರಯತ್ನಿಸಬಹುದು‌” ಎಂದು ಆರೋಪಿಸಿದರು.

ಹೊಸ ಕಾನೂನುಗಳು ರೈತರಿಗೆ ತಮ್ಮ ಕೃಷಿ ಉತ್ಪನ್ನಗಳ ಖರೀದಿಗೆ ಸಂಬಂಧಿಸಿದಂತೆ ಖಾತರಿ ನೀಡುವ ಯಾವುದೇ ನಿಬಂಧನೆಯನ್ನು ಹೊಂದಿರದ ಕಾರಣದಿಂದಾಗಿ [ಇದು ಭಾರತೀಯ ಆಹಾರ ನಿಗಮದ (ಎಫ್‌ಸಿಐ) ಕನಿಷ್ಠ ಬೆಂಬಲ ಬೆಲೆ ಅಥವಾ ಎಂಎಸ್‌ಪಿಯಲ್ಲಿ ಖರೀದಿಸಿರುವ ಅಸ್ತಿತ್ವದಲ್ಲಿರುವ ಕಾನೂನುಗಳ ಅಡಿಯಲ್ಲಿರುತ್ತದೆ] ರೈತರು ತಮ್ಮ ಉತ್ಪನ್ನಗಳನ್ನು ಕಾರ್ಪೊರೇಟ್‌ಗಳು ಮತ್ತು ಇತರೆ ಮಧ್ಯವರ್ತಿಗಳು ನಿಗದಿ ಪಡಿಸುವ ಬೆಲೆಗೆ ಮಾರಾಟ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಬಹುದು ಎಂದು ಅವರು ಹೇಳಿದರು.

ಕಾರ್ಪೊರೇಟ್‌ಗಳು ಅಗ್ಗದ ಬೆಲೆ ನಿಗದಿ ಪಡಿಸಿ ರೈತರಿಂದ ಫಸಲನ್ನು ಕೊಳ್ಳೆ ಹೊಡೆದು ದಾಸ್ತಾನು ಸಂಗ್ರಹಿಸಲು ಮುಂದಾಗಬಹುದು. ಮಾರುಕಟ್ಟೆಯಲ್ಲಿ ಕೃತಕ ಕೊರತೆಯನ್ನು ಸೃಷ್ಟಿಸಲು ಸರಕುಗಳನ್ನು ದಾಸ್ತಾನು ಮಾಡಿ ಮತ್ತು ಬೆಲೆಗಳು ಹೆಚ್ಚಾದಾಗ ಮಾತ್ರ ಅವುಗಳನ್ನು ಮಾರುಕಟ್ಟೆಗೆ ತರುವ ಪ್ರಯತ್ನಗಳು ನಡೆಯುತ್ತವೆ. ಹಾಗಾಗಿ ಈ ಮಸೂದೆಗಳು ಕಾರ್ಪೊರೇಟ್‌ಗಳಿಗೆ ಮಾತ್ರ ಪ್ರಯೋಜನವನ್ನು ನೀಡುತ್ತವೆಯೇ ಹೊರತು ರೈತರು ಅಥವಾ ಗ್ರಾಹಕರಿಗೆ ಪ್ರಯೋಜನಕಾರಿಯಾಗಿಲ್ಲ” ಎಂದು ಅವರು ಹೇಳಿದರು.

ತಮ್ಮ ಸಂಸ್ಥೆ ದೇಶಾದ್ಯಂತದ ರೈತರ ಕಳವಳಗಳನ್ನು ಅರ್ಥೈಸಿದೆ ಮತ್ತು ಅವರ ಒತ್ತಡಗಳನ್ನು ಹಂಚಿಕೊಂಡಿದೆ ಎಂದು ಹೇಳಿದ ಸಲೀಮ್ ಇಂಜನೀಯರ್‌ರವರು, ರೈತರು ತೊಂದರೆ ಅನುಭವಿಸದಂತಾಗಲು ಈ ಕಾನೂನುಗಳನ್ನು ಹಿಂತಪಡೆಯಬೇಕೆಂದು ಸರ್ಕಾರಕ್ಕೆ ಒತ್ತಾಯಿಸಿದರು.