ಟ್ರಂಪ್‌ಗೆ ‘ವಿಷಯುಕ್ತ ಪತ್ರ’ ಕಳುಹಿಸಿದ ಶಂಕಿತೆಯ ಬಂಧನ

0
316

ಸನ್ಮಾರ್ಗ ವಾರ್ತೆ

ವಾಷಿಂಗ್ಟನ್,ಸೆ.21: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‍ಗೆ ವಿಷಯುಕ್ತ ಪತ್ರವನ್ನು ರವಾನಿಸಿದ ಘಟನೆಯಲ್ಲಿ ಶಂಕಿತ ಯುವತಿಯೊಬ್ಬಳನ್ನು ಬಂಧಿಸಲಾಗಿದೆ. ನ್ಯೂಯಾರ್ಕ್-ಕೆನಡಾ ಗಡಿಯಿಂದ ಮಹಿಳೆಯನ್ನು ಬಂಧಿಸಲಾಯಿತೆಂದು ಅಮೆರಿಕ ಲಾ ಎನ್‍ಫೋರ್ಸ್‍ಮೆಂಟ್ ಮೂಲಗಳು ತಿಳಿಸಿದ್ದು ಯುವತಿಯ ಹೆಸರು ಇತ್ಯಾದಿ ವಿವರಗಳನ್ನು ಬಹಿರಂಗಪಡಿಸಿಲ್ಲ.

ಅಮೆರಿಕನ್ ಕಸ್ಟಮ್ಸ್, ಬೋರ್ಡರ್ ಪ್ರೊಟೆಕ್ಷನ್ ಆಫಿಸರ್ಸ್ ಯುವತಿಯನ್ನು ಕಸ್ಟಡಿಗೆ ಪಡೆದುಕೊಂಡಿದ್ದಾರೆ.

ಕಳೆದ ದಿನ ಮಾರಕ ವಿಷಯುಕ್ತ ಪತ್ರ ವೈಟ್ ಹೌಸ್‍ಗೆ ಬಂದಿತ್ತು. ಅಮೆರಿಕದ ಪೋಸ್ಟಲ್ ವ್ಯವಸ್ಥೆಯಲ್ಲಿ ಪತ್ರ ವೈಟ್ ಹೌಸ್ ತಲುಪಿತ್ತು ಎನ್ನಲಾಗಿದ್ದು, ಎಲ್ಲಿಂದ ಈ ಪತ್ರ ಬಂದಿದೆ ಎಂದು ಫೆಡರಲ್ ಬ್ಯೂರೊ ಆಫ್ ಇನ್ವೆಸ್ಟಿಗೇಶನ್ ಮತ್ತು ಅಮೆರಿಕ ಗುಪ್ತಚರ ಸಂಸ್ಥೆ ತನಿಖೆ ಮಾಡುತ್ತಿತ್ತು.

ಕೆನಡಾದಿಂದ ಪತ್ರ ಬಂದಿದೆ ಎಂದು ರಾಯಲ್ ಕನೇಡಿನ್ ಮೌಂಟ್ ಪೊಲೀಸರು ನಂತರ ದೃಢೀಕರಿಸಿದ್ದರು. ಪತ್ರವನ್ನು ವೈಟ್ ಹೌಸ್‍ಗೆ ಬರುವ ಮೊದಲೇ ತಡೆಹಿಡಿಯಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪತ್ರದಲ್ಲಿ ರೀಸಿನ್ ಎಂಬ ವಿಷವಸ್ತು ಇರಿಸಲಾಗಿತ್ತು. ರೀಸಿನ್ ದೇಹದೊಳಕ್ಕೆ ಪ್ರವೇಶಿಸಿದರೆ 33 ಅಥವಾ 72 ಗಂಟೆಗಳಲ್ಲಿ ಸಾವು ಸಂಭವಿಸುತ್ತದೆ. ರೀಸಿನ್ ವಿರುದ್ಧ ಗುಣಪಡಿಸುವ ಔಷಧವೇ ಇಲ್ಲ. ಇದಕ್ಕಿಂತ ಮೊದಲೂ ರೀಸಿನ್ ಪತ್ರಗಳು ವೈಟ್ ಹೌಸ್‍ವರೆಗೆ ಬಂದಿವೆ. ಮಾಜಿ ಅಧ್ಯಕ್ಷ ಬರಾಕ್ ಒಬಾಮರಿಗೆ 2014ರಲ್ಲಿ ಮಿಸಿಸಿಪ್ಪಿಯಿಂದ ಒಬ್ಬರು ಈ ವಿಷಯುಕ್ತ ಪತ್ರ ಬರೆದಿದ್ದರು. ಈತನಿಗೆ 25 ವರ್ಷ ಜೈಲು ಶಿಕ್ಷೆ ನೀಡಲಾಗಿದೆ.