ದೆಹಲಿ ಹಿಂಸಾಚಾರ; ಪೊಲೀಸರ ಮೌನ, ಸಿಎಎ ಬೆಂಬಲಿಗರ ಪ್ರಚೋದನಕಾರೀ ಚಟುವಟಿಕೆಗಳು ಆಘಾತಕಾರಿ: ಪ್ರತಿಭಟಿಸುವ ಹಕ್ಕನ್ನು ದಮನಿಸಬೇಡಿ- ಜಮಾಅತೆ ಇಸ್ಲಾಮಿ ಹಿಂದ್ ಆಗ್ರಹ

0
894

ಸನ್ಮಾರ್ಗ ವಾರ್ತೆ

ನವದೆಹಲಿ: ರಾಷ್ಟ್ರದ ರಾಜಧಾನಿ ಮತ್ತು ಇತರ ನಗರಗಳಲ್ಲಿ ಹದಗೆಡುತ್ತಿರುವ ಕಾನೂನು ಸುವ್ಯವಸ್ಥೆ ಮತ್ತು ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯಕ್ಕೆ ಜಮಾಅತೆ ಇಸ್ಲಾಮಿ ಹಿಂದ್ ತೀವ್ರ ಕಳವಳ ವ್ಯಕ್ತಪಡಿಸಿದೆ.

ಈಶಾನ್ಯ ದೆಹಲಿಯ ಮೌಜ್‌ಪುರ ಪ್ರದೇಶದಲ್ಲಿ ಸಿಎಎ ಪರ ಮತ್ತು ವಿರೋಧಿ ಪ್ರತಿಭಟನಾಕಾರರ ನಡುವಿನ ಘರ್ಷಣೆಯ ಬಗ್ಗೆ ಜಮಾಅತ್ ಅಪಾರ ದುಃಖ ವ್ಯಕ್ತಪಡಿಸುತ್ತದೆ. ಇದರಲ್ಲಿ ಸಿಎಎ ಪರ ಪ್ರತಿಭಟನಾಕಾರರು ಕಲ್ಲು ತೂರಾಟ ನಡೆಸುತ್ತಿರುವುದು ಮತ್ತು ಹಿಂಸಾಚಾರಕ್ಕೆ ಪ್ರಚೋದಿಸುತ್ತಿರುವುದು ಕಣ್ಣಿಗೆ ಕಾಣುತ್ತಿದ್ದರೂ ದೆಹಲಿ ಪೊಲೀಸರು ಮೂಕ ಪ್ರೇಕ್ಷಕರಾಗಿದ್ದರು. ಸೋಮವಾರ ರಾತ್ರಿ ಹೌಜ್ ರಾಣಿಯಲ್ಲಿ ಶಾಂತಿಯುತ ಮೆರವಣಿಗೆ ನಡೆಸುತ್ತಿದ್ದ ಸಿಎಎ ವಿರೋಧಿ ಪ್ರತಿಭಟನಾಕಾರರನ್ನು ದೆಹಲಿ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ. ಲಾಠಿ ಚಾರ್ಜ್ ನಿಂದಾಗಿ ಅನೇಕ ಮಹಿಳೆಯರು ಮತ್ತು ಯುವತಿಯರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅನೇಕ ಪ್ರತಿಭಟನಾಕಾರರನ್ನು ವಿವಿಧ ಆಸ್ಪತ್ರೆಗಳಲ್ಲಿ ದಾಖಲಿಸಲಾಗಿದೆ. ಬಿಜೆಪಿ ಮುಖಂಡರು ಪೊಲೀಸರಿಗೆ ನೀಡಿದ ಬೆದರಿಕೆಯನ್ನು ಜಮಾಅತ್ ಖಂಡಿಸುತ್ತದೆ: “ಚಂದ್ ಬಾಗ್ ಮತ್ತು ಜಾಫ್ರಾಬಾದ್ ನಲ್ಲಿ ಪ್ರತಿಭಟನೆಯಲ್ಲಿ ತೊಡಗಿರುವ ಸಿಎಎ ವಿರೋಧಿ ಪ್ರತಿಭಟನಾಕಾರರನ್ನು 3 ದಿನಗಳಲ್ಲಿ ತೆರವುಗೊಳಿಸಿ, ಇಲ್ಲದಿದ್ದರೆ ಜನರು ಸುಮ್ಮನಿರುವುದಿಲ್ಲ ಎಂಬ ಹೇಳಿಕೆಯು ಹಿಂಸಾಚಾರಕ್ಕೆ ಮುಕ್ತ ಪ್ರಚೋದನೆಯಾಗಿದೆ. ಈ ಹೇಳಿಕೆಯನ್ನು ಕೊಟ್ಟ ಬಿಜೆಪಿ ನಾಯಕರೇ ಈ ಹಿಂದೆ ನವದೆಹಲಿಯಲ್ಲಿ ರ್ಯಾಲಿಯನ್ನು ನಡೆಸಿ ದೇಶದ್ರೋಹಿಗಳನ್ನು ಹೊಡೆದುರುಳಿಸುವ ಘೋಷಣೆಗಳನ್ನು ಕೂಗಿದ್ದರು. ಈಗಿನ ಈ ಪ್ರಚೋದನಕಾರೀ ಹೇಳಿಕೆಯನ್ನು ಹಿರಿಯ ಪೊಲೀಸ್ ಅಧಿಕಾರಿಯ ಸಮ್ಮುಖದಲ್ಲೇ ಇತ್ತೀಚಿನ ನೀಡಲಾಗಿದ್ದರೂ ಇವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಜಮಾಅತೆ ಇಸ್ಲಾಮಿ ಹಿಂದ್ ಉಪಾಧ್ಯಕ್ಷ ಮುಹಮ್ಮದ್ ಸಲೀಮ್ ಎಂಜಿನಿಯರ್ ಹೇಳಿದ್ದಾರೆ.

ಸಿಎಎ ವಿರುದ್ಧ ಪ್ರತಿಭಟನೆ ನಡೆಸುತ್ತಿರುವವರೂ ಸೇರಿದಂತೆ ಎಲ್ಲಾ ನಾಗರಿಕರಿಗೆ ಸುರಕ್ಷತೆಯನ್ನು ಭಾರತ ಸರ್ಕಾರ ಮತ್ತು ದೆಹಲಿ ಪೊಲೀಸರು ಖಾತ್ರಿಪಡಿಸಬೇಕು. ಪೊಲೀಸರು ಪೂರ್ವಾಗ್ರಹ ಪೀಡಿತ ರೀತಿಯಲ್ಲಿ ವರ್ತಿಸಬಾರದು ಮತ್ತು ಕಾನೂನನ್ನು ತಮ್ಮ ಕೈಗೆ ತೆಗೆದುಕೊಳ್ಳಲು ಯಾರಿಗೂ ಅವಕಾಶ ನೀಡಬಾರದು .ಸರ್ಕಾರ ಜಾರಿಮಾಡುವ ಕಾನೂನುಗಳು ಮತ್ತು ನೀತಿಗಳ ವಿರುದ್ಧ ಭಿನ್ನಾಭಿಪ್ರಾಯ ಮತ್ತು ಪ್ರತಿಭಟಿಸುವ ಹಕ್ಕನ್ನು ಸಂವಿಧಾನವು ಖಾತರಿಪಡಿಸಿದೆ. ಆದ್ದರಿಂದ ಶಾಂತಿ, ಸುವ್ಯವಸ್ಥೆಯನ್ನು ಸರಕಾರ ಕಾಪಾಡಬೇಕೆಂದು ಅವರು ಆಗ್ರಹಿಸಿದ್ದಾರೆ.