ಸನ್ಮಾರ್ಗ ವಾರ್ತೆ
ಮಂಗಳೂರು: “ಈ ನಗರವು ನಾಗಾಲೋಟದಿಂದ ಪ್ರಗತಿ ಹೊಂದುತ್ತಾ ಸಾಗುತ್ತಿದೆ. ಇಲ್ಲಿನ ಮುಸ್ಲಿಮ್ ಸಮಾಜ,
ಮುಸ್ಲಿಮ್ ಶೈಕ್ಷಣಿಕ ಸಂಸ್ಥೆಗಳು ಡಾಕ್ಟರ್, ಇಂಜಿನಿಯರ್ಗಳನ್ನು ಸಿದ್ಧಗೊಳಿಸುತ್ತಿವೆ. ಅದರೆ ಧಾರ್ಮಿಕ ವಿದ್ವಾಂಸರ
ತಯಾರಿಯ ಬಗ್ಗೆ ಇದುವರೆಗೂ ಇಲ್ಲಿನ ಯಾವುದೇ ವಿದ್ಯಾಸಂಸ್ಥೆಯು ಆಲೋಚಿಸಿದಂತಿಲ್ಲ. ಈ ನಿಟ್ಟಿನಲ್ಲಿ ನಾವು
ಈ ಹೊಣೆಗಾರಿಕೆಯನ್ನು ಹೊತ್ತುಕೊಂಡು ಮುಂದಿನ ಪೀಳಿಗೆಯಲ್ಲಿ ಆಧುನಿಕ ವಿಜ್ಞಾನದ ಅರಿವುಳ್ಳ ಧಾರ್ಮಿಕ
ವಿದ್ವಾಂಸರನ್ನು ತಯಾರಿಸ ಬಯಸುತ್ತೇವೆ. ಸಮಾಜದಲ್ಲಿ ಸುಧಾರಣೆಯನ್ನು ತರಬಯಸುವ ಜನರು ಈ ನಿಟ್ಟಿನಲ್ಲಿ
ಮುಂದೆ ಬಂದು ಸಹಕರಿಸಬೇಕಿದೆ” ಎಂದು ಹಿರಾ ಕಾಲೇಜಿನ ಇಸ್ಲಾಮೀ ಅಧ್ಯಯನ ಪೀಠದ ಮುಖ್ಯಸ್ಥರಾದ
ಮೌಲಾನಾ ಶುಐಬ್ ಹುಸೈನಿ ನದ್ವಿ ಹೇಳಿದರು.
ಅವರು ಇಲ್ಲಿನ ಬೋಳಾರದ ಶಾದಿ ಮಹಲ್ ಸಭಾಂಗಣದಲ್ಲಿ ಆಯೋಜಿಸಲಾದ ‘ಜಾಮಿಯಾ ಇಸ್ಲಾಮಿಯಾ
ಮಂಗಳೂರು ಇದರ ಪರಿಚಯ ಮತ್ತು ಉದ್ದೇಶ’ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡುತ್ತಿದ್ದರು.
“ಮೂಲಭೂತವಾಗಿ ಇಸ್ಲಾಮೀ ಶಿಕ್ಷಣವನ್ನು ನೀಡುವುದೇ ನಮ್ಮ ಸಂಸ್ಥೆಯ ಉದ್ದೇಶವಾಗಿದೆ. ಮೆಟ್ರಿಕ್
ಉತ್ತೀರ್ಣರಾದ ವಿದ್ಯಾರ್ಥಿಗಳಿಗಾಗಿರುವ ಈ ಆರು ವರ್ಷಗಳ ಕೋರ್ಸ್ನಲ್ಲಿ ಇಸ್ಲಾಮೀ ಆಲಿಮಿಯತ್
ಕೋರ್ಸ್ನೊಂದಿಗೆ ಲೌಕಿಕ ಶಿಕ್ಷಣವಾದ ಪಿಯುಸಿ ಮತು ಪದವಿ ಶಿಕ್ಷಣವನ್ನೂ ನೀಡಲಾಗುವುದು. ಒಟ್ಟಿನಲ್ಲಿ ಒಂದು
ಆರೋಗ್ಯಪೂರ್ಣ ಸಮಾಜದ ನಿರ್ಮಾಣಕ್ಕಾಗಿ ಮುಸ್ಲಿಮ್ ಯುವಜನತೆಯಲ್ಲಿ ಇಸ್ಲಾಮಿನ ನೈಜ ಕಲ್ಪನೆಯನ್ನು
ಬಿತ್ತುವುದೇ ಮೂಲ ಉದ್ದೇಶವಾಗಿದೆ” ಎಂದು ಅವರು ತಿಳಿಸಿದರು.
“ವಸ್ತುತಃ ಜ್ಞಾನದಲ್ಲಿ ಲೌಕಿಕ ಮತ್ತು ಧಾರ್ಮಿಕ ಎಂಬ ವಿಂಗಡನೆಯಿಲ್ಲ. ಜ್ಞಾನವು ಒಂದೇ ಆಗಿದೆ. ಜಗತ್ತಿನಲ್ಲಿ
ಇಂದಿಗೂ ಜ್ಞಾನದ ಪ್ರಗತಿಯು ಕುರ್ಆನನ್ನೇ ಅವಲಂಬಿಸಿದೆ ಎಂಬುದಕ್ಕೆ ವೈಜ್ಞಾನಿಕ ಆವಿಷ್ಕಾರಗಳೇ ಸಾಕ್ಷಿ ನುಡಿಯುತ್ತಿವೆ.
ಆದರೆ ಈ ದೈವಿಕ ಜ್ಞಾನವನ್ನು ಕಡೆಗಣಿಸಿದ ಕಾರಣದಿಂದಲೇ ಮಾನವೀಯ ಸಂಸ್ಕøತಿಯು ಅಧಃಪತನದೆಡೆಗೆ ಸಾಗುತ್ತಿದೆ.
ಹಲವು ರೀತಿಯ ಶಿಕ್ಷಣ-ತರಬೇತಿಯ ಆರ್ಜನೆಯಲ್ಲಿ ದೇವವಾಣಿಯ ಜ್ಞಾನದ ನೇತೃತ್ವ ದೊರೆತರೆ ಆ ಜ್ಞಾನವು
ಫಲಪ್ರದವಾಗುವುದು” ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಜಾಮಿಯಾ ಇಸ್ಲಾಮಿಯಾ ಮಂಗಳೂರು ಇದರ ಟ್ರಸ್ಟಿಗಳಲ್ಲೋರ್ವರಾದ
ಮೌಲಾನಾ ಯಹ್ಯಾ ತಂಙಳ್ ಮದನಿಯವರು, “ನಗರದಲ್ಲಿ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಹಲವಾರು ಶಿಕ್ಷಣ
ಸಂಸ್ಥೆಗಳು ಕಾರ್ಯಾಚರಿಸುತ್ತಿವೆ. ಜತೆಗೆ ಮದ್ರಸಾ ಶಿಕ್ಷಣ ಸಂಸ್ಥೆಗಳೂ ಹೇರಳ ಪ್ರಮಾಣದಲ್ಲಿವೆ. ಹಾಗಿದ್ದರೂ ಅಂತಿಮ
ಕಾಲದಲ್ಲಿ ಜ್ಞಾನವನ್ನು ಎತ್ತಲಾಗುವುದು ಎಂಬ ಪ್ರವಾದಿವಚನದ ಇಂಗಿತವೇನು? ವಸ್ತುತಃ ಜನರು ಹೆಚ್ಚೆಚ್ಚು
ವಿದ್ಯಾಪಾರಂಗತರಾಗುತ್ತಾರಾದರೂ ಅಲ್ಲಾಹನ ಅರಿವು ಹೊಂದುವುದರಲ್ಲಿ ಹಿಂದುಳಿಯುವುದು ಎಂದಾಗಿದೆ ಎಂದು
ಜ್ಞಾನಿಗಳ ಅಧ್ಯಯನಗಳನ್ನು ನೋಡಿದಾಗ ತಿಳಿದು ಬರುತ್ತದೆ” ಎಂದು ಹೇಳಿದರು.
“ಅಲ್ಲಾಹನು ಆದಿಪಿತ ಆದಮರನ್ನು ಸೃಷ್ಟಿಸಿದಾಗ ಮೊತ್ತಮೊದಲು ಸಕಲ ವಸ್ತುಗಳ ಹೆಸರುಗಳನ್ನು
ಕಲಿಸಿಕೊಟ್ಟಿದ್ದನು. ಅಷ್ಟೇ ಅಲ್ಲ, ಪ್ರತಿಯೊಂದರ ಕಾರ್ಯಕ್ಷಮತೆ, ಉಪಯೋಗಗಳನ್ನು ತಿಳಿಸಿಕೊಟ್ಟಿದ್ದಾನೆ. ಆಧುನಿಕ ಶಿಕ್ಷಣದಲ್ಲಿ ಒಂದು ವಸ್ತುವಿನ ಬಾಹ್ಯರೂಪ ಮತ್ತ ಉಪಯೋಗಗಳನ್ನು ಕಲಿಸಲಾಗುತ್ತದಾದರೂ ಅದನ್ನು ಸೃಷ್ಟಿಸಿದವನ ಜ್ಞಾನವನ್ನು ಕಲಿಸಲಾರದು. ಆ ಶಿಕ್ಷಣವನ್ನು ಜಾಮಿಯಾ ಇಸ್ಲಾಮಿಯಾ ಮಂಗಳೂರು ಮೂಲಕ ನೀಡಲಾಗುವುದು.

ಒಟ್ಟಿನಲ್ಲಿ ಆಧುನಿಕವಾದ ಲೌಕಿಕ ವಿಜ್ಞಾನದ ಜೊತೆಯಲ್ಲಿಯೇ ಧಾರ್ಮಿಕ ಜ್ಞಾನವನ್ನು ನೀಡಿ ಆಧುನಿಕ ವಿದ್ವಾಂಸರನ್ನು ಹೊರತರುವುದೇ ಈ ಸಂಸ್ಥೆಯ ಉದ್ದೇಶವಾಗಿದೆ” ಎಂದು ಅವರು ಹೇಳಿದರು.
ಆರಂಭದಲ್ಲಿ ಮೌಲಾನಾ ಸಫೀಉಲ್ಲಾಹ್ ಕುರ್ಆನ್ ಪಠಿಸಿದರು. ಬೋಳಾರ ಇಸ್ಲಾಮಿಕ್ ಚಾರಿಟೇಬಲ್ ಟ್ರಸ್ಟ್ನ
ಟ್ರಸ್ಟಿ ಕೆ.ಎಂ. ಅಶ್ರಫ್ರವರು ಪ್ರಾಸ್ತಾವಿಕ ನುಡಿಗಳನ್ನಾಡಿ ಸ್ವಾಗತಿಸಿದರು. ರಹ್ಮತುಲ್ಲಾಹ್ ಮಾಸ್ಟಟರ್ ರವರು ಕಾರ್ಯಕ್ರಮ ನಿರೂಪಿಸಿ, ಧನ್ಯವಾದವಿತ್ತರು.












