ಹೊಸದಿಲ್ಲಿ,ಜು.5: ಜನಸಂಖ್ಯೆ ನಿಯಂತ್ರಿಸಿದ್ದರಿಂದ ದಕ್ಷಿಣ ಭಾರತದ ರಾಜ್ಯಗಳಿಗೆ ಕೇಂದ್ರದ ಪಾಲು ಮತ್ತು ಸಂಸತ್ ಸೀಟುಗಳು ಕಡಿಮೆಯಾಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಮಾಜಿ ಕೇಂದ್ರ ಸಚಿವ ಕಾಂಗ್ರೆಸ್ ನಾಯಕ ಜಯರಾಂ ರಮೇಶ್ ರಾಜ್ಯಸಭೆಯಲ್ಲಿ ಮುನ್ನೆಚ್ಚರಿಕೆ ನೀಡಿದರು. ಆದ್ದರಿಂದ ಕುಟುಂಬ ಯೋಜನೆಯ ಮೂಲಕ ಜನಸಂಖ್ಯೆ ನಿಯಂತ್ರಿಸಿದ ದಕ್ಷಿಣ ಭಾರತದ ರಾಜ್ಯಗಳಿಗೆ ಸಾಕಷ್ಟು ಪರಿಹಾರ ಒದಗಿಸಲು 15ನೆ ಹಣಕಾಸು ಆಯೋಗಕ್ಕೆ ಸೂಚನೆ ನೀಡಬೇಕೆಂದು ಜಯರಾಂ ರಮೇಶ್ ಹೇಳಿದರು. ದಕ್ಷಿಣ ಭಾರತದಲ್ಲಿ ಈಗ ಇರುವ ಜನಸಂಖ್ಯೆ ಹೆಚ್ಚು ಅಥವಾ ಕಡಿಮೆ ಆಗದಿರುವಾಗ ಉತ್ತರ ಭಾರತದ ನಾಲ್ಕು ರಾಜ್ಯಗಳು ತಮ್ಮ ಜನಸಂಖ್ಯೆಯನ್ನು ಪುನಃ ಹೆಚ್ಚಳಗೊಳಿಸುತ್ತಿದೆ ಎಂದು ಅವರು ತಿಳಿಸಿದರು.
ಜನಸಂಖ್ಯೆ ನಿಯಂತ್ರಣದಲ್ಲಿ ಕೇರಳ ನಿಗದಿತ ಗುರಿ ಕಂಡಿದೆ. 30 ವರ್ಷದ ಬಳಿಕ ಹೆಚ್ಚು ಅಭಿವೃದ್ಧಿ ಹೊಂದಿದೆ ಎನ್ನಲಾಗುವ ಗುಜರಾತ್ನಲ್ಲಿಯೂ ಜನಸಂಖ್ಯೆ ಹೆಚ್ಚಳವಾಗಿದೆ. ದಕ್ಷಿಣ ಭಾರತದ ಐದು ರಾಜ್ಯಗಳ ಜನಸಂಖ್ಯೆ ಈ ಶತಮಾನದ ಅರ್ಧಾಂಶದಲ್ಲಿ ಶೇ.15ದಿಂದ ಶೇ.12ಕ್ಕೆ ಇಳಿಕೆಯಾಗಲಿದೆ. ಆದರೆ ಉತ್ತರಪ್ರದೇಶ, ಮಧ್ಯಪ್ರದೇಶ, ಬಿಹಾರ, ರಾಜಸ್ಥಾನ ಈ ನಾಲ್ಕು ರಾಜ್ಯಗಳಲ್ಲಿ ಶೇ. 40ರಷ್ಟು ಇದ್ದ ಜನಸಂಖ್ಯೆ ಶೇ. 44ಕ್ಕೆ ಹೆಚ್ಚಳವಾಗಿದೆ. ಕುಟುಂಬ ಯೋಜನೆಯ ಮೂಲಕ ಜನಸಂಖ್ಯೆ ನಿಯಂತ್ರಿಸಿದ ದಕ್ಷಿಣ ಭಾರತಕ್ಕೆ ನಷ್ಟಪರಿಹಾರ ನೀಡಬೇಕೆಂದು ಜಯರಾಂ ರಮೇಶ್ ಆಗ್ರಹಿಸಿದರು.












