ಜಮಾಅತೆ ಇಸ್ಲಾಮೀ ಹಿಂದ್ ಕೋವಿಡ್-19 ಜಾಗೃತಿ ಅಭಿಯಾನ ಸಮಾರೋಪ: ನಮ್ಮ ಸೇವೆ ಎಂದಿನಂತೆ ಜಾರಿಯಲ್ಲಿದೆ- ಅಕ್ಬರ್ ಅಲಿ

0
396

ಸನ್ಮಾರ್ಗ ವಾರ್ತೆ

ಕೋವಿಡ್-19 ಕಾಯಿಲೆ ಮುನ್ನೆಚ್ಚರಿಕೆ ಕ್ರಮವಾಗಿ ಮುಖಗವುಸು ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಸಮಾಜದಲ್ಲಿ ಜಾಗೃತಿ ಮೂಡಿಸಲು ಜಮಾಅತೆ ಇಸ್ಲಾಮಿ ಹಿಂದ್ ಕರ್ನಾಟಕ ಆ.5ರಿಂದ ಆರಂಭಿಸಿದ್ದ ‘ಕೋವಿಡ್-19- ಮರಳಿ ಸೃಷ್ಟಿಕರ್ತನ ಕಡೆಗೆ’ ಎಂಬ ಪಾಕ್ಷಿಕ ಅಭಿಯಾನ ಗುರುವಾರ ಕೊನೆಗೊಂಡಿತು.

ದೇಶದಲ್ಲಿ ಕೊರೋನಾ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಮುನ್ನೆಚ್ಚರಿಕೆ ಹಾಗೂ ಜನರಲ್ಲಿ ಜಾಗೃತಿ ಮೂಡಿಸಲು ಸ್ಯಾನಿಟೈಸರ್, ಮಾಸ್ಕ್ ವಿತರಣೆ ಮಾಡುವ ಜೊತೆಗೆ ಕರಪತ್ರ ಮತ್ತು ಆಟೋಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದೇವೆ. ಅಭಿಯಾನದ ಮೂಲಕ ಜನರಲ್ಲಿ ಅನೈತಿಕತೆ, ಪಾಪಕಾರ್ಯ, ಅನ್ಯಾಯ ಮತ್ತು ಕೋಮು ಭಾವನೆಯಿಂದ ಹೊರ ಬರುವಂತೆ ಮನವಿ ಮಾಡಿದ್ದೇವೆ. ಪರಸ್ಪರ ಸಹಕಾರ ಮತ್ತು ಸೌಹಾರ್ದತೆ ಸದಾ ಉಳಿಸಿಕೊಳ್ಳಬೇಕು ಎಂದು ಜನರಲ್ಲಿ ಮನವಿ ಮಾಡಿದ್ದೇವೆ. ಜಾತಿ ಧರ್ಮದ ಹಂಗಿಲ್ಲದೇ ಮಾನವೀಯತೆಯನ್ನು ಪ್ರಧಾನವನ್ನಾಗಿಸಿಕೊಂಡು ಅಭಿಯಾನ ನಡೆಸಿರುವುದಾಗಿ ಅಭಿಯಾನದ ಸಂಚಾಲಕರಾದ ಅಕ್ಬರ್‌ ಅಲಿ ಹೇಳಿದ್ದಾರೆ.

ಕೋವಿಡ್‌ನಿಂದ ಮೃತರಾದವರ ದಫನ ಅಥವಾ ಚಿತಾದಹನಕ್ಕೆ ಮುಸ್ಲಿಂ ಯುವಕರು ಮುಂದಡಿಯಿಟ್ಟು ಸಹಕರಿಸುವಂತೆ ಉತ್ತೇಜನ ನೀಡುವಿಕೆ, ಲಾಕ್‌ಡೌನ್ ದಿನಗಳಿಂದಲೂ ಆಹಾರ, ಬಟ್ಟೆ, ಔಷಧಿ ವಿತರಣೆ, ರಾಜ್ಯದಲ್ಲಿ ಒಟ್ಟು 12 ಆಮ್ಲಜನಕ ಕೇಂದ್ರಗಳನ್ನು ತೆರೆಯುವಿಕೆ, ವಿವಿಧ ಧರ್ಮಗಳ ಧರ್ಮಗುರುಗಳ ಜೊತೆ ವೆಬಿನಾರ್‌ ಮೂಲಕ ವಿಚಾರಗೋಷ್ಠಿ ನಡೆಸಿರುವುದಾಗಿ ಅವರು ಹೇಳಿದರು.

ನಮ್ಮ ಅಭಿಯಾನ ಮುಕ್ತಾಯಗೊಂಡರೂ ನಮ್ಮ ಸೇವೆ ಎಂದಿನಂತೆ ಮುಂದುವರಿಯಲಿದೆ ಎಂದು ಅಕ್ಬರ್‌ ಅಲಿ ತಿಳಿಸಿದರು.

ಡಾಕ್ಟರ್ಸ್ ಫಾರ್ ಹ್ಯುಮಾನಿಟಿ, ಹ್ಯುಮಾನಿಟೇರಿಯನ್ ರಿಲೀಫ್ ಸೊಸೈಟಿ ಮೂಲಕ ಕೋವಿಡ್-19 ಸಹಾಯವಾಣಿ, ಮಹಿಳಾ ಸಹಾಯವಾಣಿ, ಅಂಬ್ಯುಲೆನ್ಸ್, ಕೌನ್ಸೆಲಿಂಗ್ ಸೇವೆಗಳು ಮುಂದಿನ ದಿನಗಳಲ್ಲಿಯೂ ಇರಲಿದೆ ಎಂದು ಅಕ್ಬರ್ ಅಲಿ ಹೇಳಿದ್ದಾರೆ.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.