ಜನಸಾಮಾನ್ಯರ ಜೀವಹಾನಿ ವಿಷಯದಲ್ಲಿ ಯಾವುದೇ ಕಾರಣಕ್ಕೂ ರಾಜಿಯಾಗಬಾರದು: ಜಮಾಅತೆ ಇಸ್ಲಾಮೀ ಹಿಂದ್

0
323

ಮೊರ್ಬಿ ಸೇತುವೆ ದುರಂತ: ನ್ಯಾಯಾಂಗ ತನಿಖೆಗೆ ಆಗ್ರಹ

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಗುಜರಾತ್‌ನ ಮೊರ್ಬಿ ಸೇತುವೆ ಕುಸಿತ  ದುರಂತಕ್ಕೆ ತೀವ್ರ ಶೋಕ ವ್ಯಕ್ತಪಡಿಸಿರುವ ಜಮಾಅತೆ ಇಸ್ಲಾಮಿ ಹಿಂದ್(JIH) ಘಟನೆಯ ಕುರಿತು ನ್ಯಾಯಾಂಗ ತನಿಖೆಗೆ ಆಗ್ರಹಿಸಿದೆ.

ಮಾಧ್ಯಮಗಳಿಗೆ ಹೇಳಿಕೆ ನೀಡಿದ ಜೆಐಎಚ್ ಉಪಾಧ್ಯಕ್ಷರಾದ ಪ್ರೊ ಸಲೀಂ ಇಂಜಿನಿಯರ್‌ರವರು, ಮೊರ್ಬಿ ಸೇತುವೆಯ ಕುಸಿತದಿಂದ 140ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು ಸುಮಾರು 200 ಜನರು ಈಗಲೂ ಕಾಣೆಯಾಗಿರುವ ಘಟನೆಯು ನಮ್ಮನ್ನು ಆಘಾತಕ್ಕೂ ತೀವ್ರ ದುಃಖಕ್ಕೂ ತಳ್ಳಿದೆ. ಮೃತರಿಗೆ ಸಂತಾಪ ಸೂಚಿಸುತ್ತೇವೆ ಮತ್ತು ಗಾಯಾಳುಗಳು ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇವೆ ಎಂದು ಅವರು ಶೋಕ ವ್ಯಕ್ತಪಡಿಸಿದರು.

ಮೊರ್ಬಿ ಪುರಸಭೆಯಿಂದ ಅಗತ್ಯವಿರುವ ಫಿಟ್‌ನೆಸ್ ಪ್ರಮಾಣಪತ್ರವಿಲ್ಲದೆ ಸೇತುವೆಯನ್ನು ನಿರ್ವಹಿಸುತ್ತಿದ್ದವರು ನಾಲ್ಕು ದಿನಗಳ ಹಿಂದೆ ಅದನ್ನು ಸಾರ್ವಜನಿಕರಿಗಾಗಿ ತೆರೆದಿದ್ದಾರೆ ಎಂದು ವರದಿಗಳಲ್ಲಿ ಹೇಳಲಾಗುತ್ತಿದೆ. ದುರಂತದ ಕುರಿತು ಸರ್ಕಾರವು ನೇಮಿಸಿದ ತನಿಖೆಯ ಫಲಿತಾಂಶಗಳನ್ನು ಸಾರ್ವಜನಿಕಗೊಳಿಸಬೇಕು ಮತ್ತು ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯನ್ನು ನೀಡಬೇಕು. ದುರಂತಕ್ಕೆ ಕಾರಣರಾದ ಎಲ್ಲಾ ಸರ್ಕಾರಿ ಮತ್ತು ಸರ್ಕಾರೇತರ ಜನರಿಗೆ ಕಾನೂನಿನ ಪ್ರಕಾರ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಅವರು ಆಗ್ರಹಿಸಿದರು.

ಗುಜರಾತ್ ಸರ್ಕಾರವು ತನ್ನ ಯಾವುದೇ ಸಾರ್ವಜನಿಕ ಕಾರ್ಯಗಳಲ್ಲಿ ಭ್ರಷ್ಟಾಚಾರ ಅಥವಾ ನಿಯಮಗಳ ಉಲ್ಲಂಘನೆಯಾಗದಂತೆ ನೋಡಿಕೊಳ್ಳಬೇಕು. ಯಾತ್ರಾರ್ಥಿಗಳು ಅಥವಾ ಭಕ್ತರು ತಮ್ಮ ಧಾರ್ಮಿಕ ಆಚರಣೆಗಳಿಗಾಗಿ ಸಾರ್ವಜನಿಕ ಸ್ಥಳಗಳಲ್ಲಿ ನೂಕುನುಗ್ಗಲು ಉಂಟಾದಾಗ ಅವರ ಜೀವಗಳ ಭದ್ರತೆಯನ್ನು ಸರ್ಕಾರವು ಖಾತರಿ ಪಡಿಸಬೇಕು. ಜನಸಾಮಾನ್ಯರ ಜೀವಹಾನಿ ವಿಷಯದಲ್ಲಿ ಯಾವುದೇ ಕಾರಣಕ್ಕೂ ರಾಜಿಯಾಗಬಾರದು. ಸಂತ್ರಸ್ತ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಪ್ರೊ.ಸಲೀಂ ಒತ್ತಾಯಿಸಿದ್ದಾರೆ.