ಆರ್ಥಿಕವಾಗಿ ದುರ್ಬಲ ಕುಟುಂಬಗಳಿಗೆ ಮನೆ ನಿರ್ಮಿಸಿ ಕೊಡುವ ಮೂಲಕ ಜಮಾಅತೆ ಇಸ್ಲಾಮಿ ಹಿಂದ್ ಪ್ರವಾದಿ(ಸ)ರವರ ಮಾದರಿ ಅನುಸರಿಸುತ್ತಿದೆ: ಕೋಟ ಇಬ್ರಾಹಿಮ್ ಸಾಹೇಬ್

0
41

ಸನ್ಮಾರ್ಗ ವಾರ್ತೆ

ಹೂಡೆ: ‌ಜಮಾಅತೆ ಇಸ್ಲಾಮೀ ಹಿಂದ್ ವಿವಿಧ ರೀತಿಯಲ್ಲಿ ಜನಸೇವೆಯಲ್ಲಿ ತೊಡಗಿದ್ದು ಸಮಾಜದ ಅಶಕ್ತರ ಕಷ್ಟಗಳಿಗೆ ಸ್ಪಂದಿಸುವ ಮೂಲಕ ಪ್ರವಾದಿ ಮಹಮ್ಮದ್(ಸ)ರ ಮಾದರಿಯನ್ನು ಅನುಸರಿಸುತ್ತಿದೆ. ಇದು ಅಲ್ಲಾಹನ ಆಜ್ಞೆಯನ್ನು ಪಾಲಿಸಿ ಆತನಿಗೆ ಕೃತಜ್ಞತೆಯನ್ನು ಅರ್ಪಿಸುವ ಉತ್ತಮ ವಿಧಾನ ಎಂದು ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಅಧ್ಯಕ್ಷರಾದ ಕೋಟ ಇಬ್ರಾಹಿಮ್ ಸಾಹೇಬ್’ರವರು ಹೇಳಿದರು. ಅವರು ತೋನ್ಸೆ-ಹೂಡೆ ಜಮಾಅತೆ ಇಸ್ಲಾಮಿ ಹಿಂದ್’ನ ವತಿಯಿಂದ ಹೂಡೆಯ ಎಫ್.ಎಮ್ ಅಲ್ತಾಫ್’ರ ಕುಟುಂಬಕ್ಕೆ ನೂತನವಾಗಿ ನಿರ್ಮಿಸಿ ಕೊಟ್ಟ ಮನೆಯ ಕೀಲಿಗೈ ಹಸ್ತಾಂತಸಿ ಮಾತನಾಡುತ್ತಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ತೋನ್ಸೆ ಪಂಚಾಯತ್ ಕಾರ್ಯದರ್ಶಿ ದಿನಕರ್ ಬೆಂಗ್ರೆಯವರು ಮನೆ ನಿರ್ಮಿಸಿ ಕೊಡಲಿಕ್ಕಾಗಿ ಮಾರಣಾಂತಿಕ ಕಾಯಿಲೆಯಿಂದಾಗಿ ಕಾಲು ಕಳೆದುಕೊಂಡ ಹೊರತಾಗಿಯೂ ದುಡಿದು ಸ್ವಾವಲಂಬಿ ಬದುಕು ಸಾಗಿಸುತ್ತಿರುವ ಅಲ್ತಾಫ್’ರನ್ನು ಆಯ್ಕೆ ಮಾಡಿರುವುದು ಅತ್ಯಂತ ಸೂಕ್ತವಾದ ಆಯ್ಕೆ ಎಂದು ಹೇಳಿದರು. ಅಲ್ಲದೆ ಜಮಾಅತೆ ಇಸ್ಲಾಮಿ ಹಿಂದ್’ನ ಇತರ ಸೇವಾಕಾರ್ಯಗಳಲ್ಲಿಯೂ ತೊಡಗಿಕೊಡಿರುವುದು ಪ್ರಶಂಸಾರ್ಹ ಎಂದು ಹೇಳಿದರು.

‌”ಆರ್ಥಿಕವಾಗಿ ಅಶಕ್ತರಾದ ಸೂರಿಲ್ಲದ ಕುಟುಂಬಗಳಿಗೆ ಸೂರು ಒದಗಿಸುವ ಜಮಾಅತೆ ಇಸ್ಲಾಮಿ ಹಿಂದ್, ತೋನ್ಸೆ-ಹೂಡೆ ಶಾಖೆಯ ಯೋಜನೆಯ ಭಾಗವಾಗಿ ಈ ಮನೆ ನಿರ್ಮಿಸಿ ಕೊಡಲಾಗಿದೆ. ಈಗಾಗಲೇ ಸಮಾಜದ ಉದ್ಯೋಗವಿಲ್ಲದ ಅಶಕ್ತರಿಗೆ ಉದ್ಯೋಗ ಒದಗಿಸುವ ನಿಟ್ಟಿನಲ್ಲಿಯೂ ಸ್ಥಳೀಯ ಶಾಖೆ ಆರಂಭಿಕ ಹೆಜ್ಜೆ ಇಟ್ಟಿದೆ.

ಈ ಎಲ್ಲಾ ಕೆಲಸಗಳಿಗೆ ಪ್ರವಾದಿ ಮಹಮ್ಮದ್ (ಸ)ರ ಜೀವನ ಮಾದರಿಯೇ ನಮಗೆ ಪ್ರೇರಣೆ ಎಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಮಾಅತೆ ಇಸ್ಲಾಮಿ ಹಿಂದ್ ಸ್ಥಾನೀಯ ಅಧ್ಯಕ್ಷರಾದ ಅಬ್ದುಲ್ ಕಾದಿರ್ ಮೊಹಿಯ್ಯುದ್ದೀನ್ ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಮಲ್ಪೆ ಜಮಾಅತೆ ಇಸ್ಲಾಮಿ ಹಿಂದ್ ಅಧ್ಯಕ್ಷರಾದ ಶಬ್ಬೀರ್ ಮಲ್ಪೆ, ಎಚ್.ಆರ್.ಎಸ್ ಉಡುಪಿ ಜಿಲ್ಲಾ ಹೊಣೆಗಾರರಾದ ಹಸನ್ ಕೋಡಿಬೇಂಗ್ರೆ, ಅಬುಲೈಸ್ ಇಸ್ಲಾಹಿ ಮಸೀದಿಯ ಇಮಾಮರಾದ ಮಹಮ್ಮದ್ ತಾರಿಕ್, ಎಸ್.ಐ.ಓ ತೋನ್ಸೆಯ ಅಧ್ಯಕ್ಷರಾದ ವಸೀಮ್ ಅಬ್ದುಲ್ಲಾ, ಎಚ್.ಆರ್.ಎಸ್ ತೋನ್ಸೆ ಸಂಚಾಲರಾದ ಎನ್. ಝೈನುಲ್ಲಾ, ಪಂಚಾಯತ್ ಸದಸ್ಯರುಗಳಾದ ಕುಸುಮ, ಜಮೀಲಾ ಸದೀದಾ, ವಿಜಯ ಪಡುಕುದ್ರು, ಸುಝಾನ್ ಗುಜ್ಜರಬೆಟ್ಟು, ಮುಮ್ತಾಝ್, ಯಶೋಧಾ, ಆಶಾ , ಡಾ.ಫಹೀಮ್ ಅಬ್ದುಲ್ಲಾ ಇನ್ನಿತರರು ಉಪಸ್ಥಿತರಿದ್ದರು. ಮುಫೀದ್ ಅವರ ಕುರ್‌ಆನ್ ಪಠನದೊಂದಿಗೆ ಆರಂಭಗೊಂಡ ಸಭೆಯನ್ನು ಯಾಸೀನ್ ಕೋಡಿಬೇಂಗ್ರೆ ನಿರೂಪಿಸಿ ಕೊನೆಯಲ್ಲಿ ಧನ್ಯವಾದವಿತ್ತರು.


LEAVE A REPLY

Please enter your comment!
Please enter your name here