ಸೀರತ್ ಅಭಿಯಾನ| ಅ. 7ರಂದು ಜಮಾಅತೆ ಇಸ್ಲಾಮೀ ಹಿಂದ್ ದ‌.ಕನ್ನಡ ವತಿಯಿಂದ ಸರ್ವಧರ್ಮೀಯರಿಗಾಗಿ ವಿಚಾರಗೋಷ್ಠಿ

0
287

ಸನ್ಮಾರ್ಗ ವಾರ್ತೆ

ಮಂಗಳೂರು: “ಪ್ರವಾದಿ ಮುಹಮ್ಮದ್(ಸ)ರನ್ನು ಅರಿಯೋಣ” ಶೀರ್ಷಿಕೆಯಡಿಯಲ್ಲಿ ಜಮಾಅತೆ ಇಸ್ಲಾಮೀ ಹಿಂದ್(ಜೆಐಹೆಚ್) ರಾಜ್ಯಾದ್ಯಂತ ಹಮ್ಮಿಕೊಂಡಿರುವ ಸೀರತ್ ಅಭಿಯಾನದ ಪ್ರಯುಕ್ತ ದಕ್ಷಿಣ ಕನ್ನಡ ಜಿಲ್ಲಾ ಘಟಕದ ವತಿಯಿಂದ ಸರ್ವ ಧರ್ಮೀಯ ಬಾಂಧವರಿಗಾಗಿ ವಿಚಾರಗೋಷ್ಠಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಮಾಅತೆ ಇಸ್ಲಾಮೀ ಹಿಂದ್ ದ.ಕ. ಜಿಲ್ಲಾ ಸಂಚಾಲಕ ಅಮೀನ್ ಅಹ್ಸನ್ ತಿಳಿಸಿದ್ದಾರೆ.

ಬುಧವಾರ ಮಂಗಳೂರಿನ ವುಡ್‌ಲ್ಯಾಂಡ್ಸ್‌ ಹೊಟೇಲ್‌ನಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ದೇಶದ ಹಿತಚಿಂತನೆ: ಪ್ರವಾದಿ ಮುಹಮ್ಮದ್(ಸ) ಚಿಂತನೆಗಳ ಬೆಳಕಿನಲ್ಲಿ” ಎಂಬ ವಿಷಯದಲ್ಲಿ ಅಕ್ಟೋಬರ್ 7ರಂದು, ಶುಕ್ರವಾರ ಸಂಜೆ 7 ಗಂಟೆಗೆ ಮಂಗಳೂರಿನ ಪುರಭವನದಲ್ಲಿ(ಟೌನ್‌ ಹಾಲ್) ಈ ವಿಚಾರಗೋಷ್ಠಿಯನ್ನು ಏರ್ಪಡಿಸಲಾಗಿದೆ ಎಂದರು.

ಮುಖ್ಯ ಅತಿಥಿಗಳಾಗಿ ಚಿಂತಕರು, ಕಡೂರಿನ ಮಾಜಿ ಶಾಸಕರಾದ ವೈ.ಎಸ್.ವಿ ದತ್ತ, ಕೆಪಿಸಿಸಿ ರಾಜ್ಯ ವಕ್ತಾರರಾದ ನಿಕೇತ್ ರಾಜ್ ಮೌರ್ಯ, ಹೋಲಿ ಕ್ರಾಸ್ ಚರ್ಚ್‌ನ ಧರ್ಮಗುರುಗಳಾದ ಫಾ। ಕ್ಲಿಫರ್ಡ್ ಫೆರ್ನಾಂಡಿಸ್ ಭಾಗವಹಿಸಲಿದ್ದಾರೆ‌. ಶಾಂತಿ ಪ್ರಕಾಶನದ ವ್ಯವಸ್ಥಾಪಕರಾದ ಮುಹಮ್ಮದ್ ಕುಂಞಿಯವರು ವಿಷಯ ಮಂಡಿಸಲಿದ್ದಾರೆ.

ಜಮಾಅತೆ ಇಸ್ಲಾಮೀ ಹಿಂದ್ ಕರ್ನಾಟಕ ರಾಜ್ಯಾಧ್ಯಕ್ಷರಾದ ಡಾ. ಬೆಳ್ಗಾಮೀ ಮುಹಮ್ಮದ್ ಸಾದ್‌ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಸರ್ವಧರ್ಮೀಯ ಬಾಂಧವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಯೋಜನ ಪಡೆಯಬೇಕೆಂದು ಅಮೀನ್ ಅಹ್ಸನ್ ತಿಳಿಸಿದರು.

“ಪ್ರವಾದಿ ಮುಹಮ್ಮದ್(ಸ)ರನ್ನು ಅರಿಯೋಣ” ಅಭಿಯಾನದ ಕುರಿತು:

ಜಗತ್ತಿಗೆ ಬಂದ ಎಲ್ಲ ಮಹಾ ಪುರುಷರು ಧರ್ಮ ಜಾತಿ-ಲಿಂಗ ಭೇದವಿಲ್ಲದೇ ಪ್ರತಿಯೊಂದು ಸಮುದಾಯದ ಆಸ್ತಿಯಾಗಿದ್ದಾರೆ. ಅವರ ತತ್ವ ಸಿದ್ಧಾಂತಗಳು ಆದರ್ಶಪ್ರಾಯ ಬದುಕು ಸಮಾಜದಲ್ಲಿ ದೊಡ್ಡ ಕ್ರಾಂತಿಯನ್ನೇ ತಂದಿದೆ. ಅಂತಹ ಸಮಾಜ ಸುಧಾರಕರನ್ನು ಪರಸ್ಪರ ಅರಿಯುವ, ತಿಳಿಯುವ ವಾತಾವರಣ ನಮ್ಮ ಮಧ್ಯೆ ನಿರ್ಮಾಣವಾಗಬೇಕು. ನಮ್ಮ ದೇಶದ ಪಸಕ್ತ ಪರಿಸ್ಥಿತಿಯಲ್ಲಿ ನಾವು ಪರಸ್ಪರ ಪ್ರೀತಿ-ವಿಶ್ವಾಸ-ಸೌಹಾರ್ದತೆಯೊಂದಿಗೆ ಬದುಕಬೇಕಾದುದು ಅತೀ ಅಗತ್ಯ. ವಿವಿಧ ಧರ್ಮ-ಜಾತಿ-ಪಂಗಡಗಳ ಮಧ್ಯೆ ಸಾಮರಸ್ಯ ಹಾಗೂ ಸಹಬಾಳ್ವೆ ಬೆಳೆದು ಬರಬೇಕು. ಪರಸರ ಅಪಗ್ರಹಿಕೆ ದೂರವಾಗಬೇಕು. ಪರಸ್ಪರ ನಂಬಿಕೆ ಸುದೃಢವಾಗಬೇಕು.

ದುರದೃಷ್ಟವಶಾತ್, ಇಂದು ಸಮಾಜದಲ್ಲಿ ಮುಹಮ್ಮದ್(ಸ) ಪೈಗಂಬರರ ಬಗ್ಗೆ ಬಹಳಷ್ಟು ತಪ್ಪು ತಿಳುವಳಿಕೆಗಳು ವ್ಯಾಪಕವಾಗಿವೆ. ದಿನನಿತ್ಯವೆಂಬಂತೆ ಅಪಪ್ರಚಾರಗಳು ನಡೆಯುತ್ತಿವೆ. ಇಂತಹ ಸಂದರ್ಭದಲ್ಲಿ, ಅವರ ಜನ್ಮ ತಿಂಗಳ ಪ್ರಸಕ್ತ ಸನ್ನಿವೇಶದಲ್ಲಿ ಪ್ರವಾದಿ ಮುಹಮ್ಮದ್(ಸ)ರ ಬಗ್ಗೆಯಿರುವ ತಪ್ಪುಕಲ್ಪನೆಗಳನ್ನು ದೂರೀಕರಿಸಲು ಮತ್ತು ಅವರು ಸಮಾಜಕ್ಕೆ ನೀಡಿರುವ ಸಂದೇಶಗಳನ್ನು ಪರಿಚಯಿಸಲು 2022 ಸೆಪ್ಟೆಂಬರ್ 30ರಿಂದ ಅಕ್ಟೋಬ‌ರ್ 9ರ ತನಕ ಜಮಾಅತೆ ಇಸ್ಲಾಮೀ ಹಿಂದ್ ಕರ್ನಾಟಕ ವತಿಯಿಂದ ರಾಜ್ಯದಾದ್ಯಂತ “ಪ್ರವಾದಿ ಮುಹಮ್ಮದ್‌ರನ್ನು(ಸ) ಅರಿಯೋಣ” ಎಂಬ ಶೀರ್ಷಿಕೆಯಲ್ಲಿ ಹತ್ತು ದಿನಗಳ ಅಭಿಯಾನವನ್ನು ಆಚರಿಸಲಾಗುತ್ತಿದೆ.

ಈ ಪ್ರಯುಕ್ತ ಶಾಂತಿ ಪ್ರಕಾಶನದ ವತಿಯಿಂದ ‘ಪ್ರವಾದಿ ಮುಹಮ್ಮದ್ (ಸ) ಸಮಗ್ರ ವ್ಯಕ್ತಿತ್ವ’ ಮತ್ತು ‘ಪ್ರವಾದಿ ಮುಹಮ್ಮದ್(ಸ): ವಿವಾಹಗಳು ಮತ್ತು ವಿಮರ್ಶೆಗಳು’ ಎಂಬ ಎರಡು ಕೃತಿಗಳನ್ನು ಹೊರತರಲಾಗಿದೆ. ವಿವಿಧ ಕಡೆಗಳಲ್ಲಿ ವೃದ್ಧಾಶ್ರಮಗಳಿಗೆ ಭೇಟಿ, ಹಿರಿಯರಿಗೆ ಸನ್ಮಾನ, ಆಸ್ಪತ್ರೆ, ಭೇಟಿ, ಸುಚಿತ್ವ ಅಭಿಯಾನ, ರಕ್ತದಾನ ಶಿಬಿರ, ಗಿಡ ನೆಡುವುದು ಇತ್ಯಾದಿ ಸಮಾಜ ಸೇವಾ ಕಾರ್ಯಗಳನ್ನು ಅದೇ ರೀತಿ ಸೀರತ್, ಪ್ರವಚನ, ವಿಚಾರಗೋಷ್ಠಿ, ಚರ್ಚಾಗೋಷ್ಠಿ, ಪ್ರಬಂಧ ಮತ್ತು ಭಾಷಣ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ.

ಪತ್ರಿಕಾಗೋಷ್ಠಿಯಲ್ಲಿ ಕಾರ್ಯಕ್ರಮ ಸಂಚಾಲಕ ಅಬ್ದುಲ್ ಗಫೂರ್ ಕುಳಾಯಿ, ಉಪಸಂಚಾಲಕ ತಫ್‌ಲೀಲ್, ಜ.ಇ.ಮಂಗಳೂರು ಸ್ಥಾನೀಯ ಅಧ್ಯಕ್ಷ ಕೆ.ಎಂ.ಅಶ್ರಫ್, ಜ. ಹಿಂದ್ ದ.ಕ ಜಿಲ್ಲಾ ಸಂಚಾಲಕಿ ಸಮೀನಾ ಯು ಹಾಗೂ ಮಂಗಳೂರು ಸ್ಥಾನೀಯ ಸಹ ಸಂಚಾಲಕಿ ಶಹೀದಾ ಉಮರ್‌ ಉಪಸ್ಥಿತರಿದ್ದರು.