ಗರ್ಭಿಣಿಯ ಮೃತದೇಹವನ್ನು ರಸ್ತೆಯುದ್ದಕ್ಕೂ ಸ್ಟ್ರೆಚರ್ ನಲ್ಲಿ ತಳ್ಳಿಕೊಂಡು ಹೋದ ಕುಟುಂಬ: ಕಾಶ್ಮೀರದಲ್ಲಿ ಆಕ್ರೋಶ- ವೀಡಿಯೊ

0
1088

ಸನ್ಮಾರ್ಗ ವಾರ್ತೆ

ಅನಂತನಾಗ್ ಮೇ 5- ಜಮ್ಮು-ಕಾಶ್ಮೀರದ ಅನಂತನಾಗ್ ನಲ್ಲಿ ಗರ್ಭಿಣಿ ಮಹಿಳೆಯ ಮೃತದೇಹವನ್ನು ಆಸ್ಪತ್ರೆಯಿಂದ ಮನೆಗೆ ಸ್ಟ್ರೆಚರ್ ನಲ್ಲಿ ಕೊಂಡೊಯ್ಯಲಾದ ಘಟನೆ ನಡೆದಿದೆ. ಆಂಬುಲೆನ್ಸ್ ನೀಡಲು ಆಸ್ಪತ್ರೆಯ ಅಧಿಕಾರಿಗಳು ನಿರಾಕರಿಸಿದ ಕಾರಣಕ್ಕಾಗಿ ಸ್ಟ್ರೆಚರ್ ನಲ್ಲಿ ಮೃತದೇಹವನ್ನು ಸಾಗಿಸಲಾಗಿದೆ ಎಂದು ಎನ್ಡಿಟಿವಿ ವರದಿ ಮಾಡಿದೆ.

ಬಟ್ಟೆಯಿಂದ ಹೊದೆದು ಮೃತದೇಹವನ್ನು ಕುಟುಂಬವು ಸ್ಟ್ರೆಚರ್ ನಲ್ಲಿ ತಳ್ಳಿಕೊಂಡು ಹೋಗುವ ವೀಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶದಿಂದ ಹಂಚಿಕೊಳ್ಳಲಾಗಿದೆ. ವೈದ್ಯರ ನಿರ್ಲಕ್ಷ್ಯವೇ ಯುವತಿಯ ಮರಣಕ್ಕೆ ಕಾರಣವೆಂದು ಕುಟುಂಬ ಆರೋಪಿಸಿದೆ. ಹಾಗೆಯೇ ಘಟನೆಯ ಕುರಿತಂತೆ ತನಿಖೆಗೆ ಆದೇಶಿಸಿರುವುದಾಗಿಯೂ ಓರ್ವ ವೈದ್ಯ ಮತ್ತು ದಾದಿಯನ್ನು ಅಮಾನತು ಮಾಡಲಾಗಿರುವುದಾಗಿಯೂ ಅಧಿಕಾರಿಗಳು ತಿಳಿಸಿದ್ದಾರೆ.

ಈ ಕುಟುಂಬಕ್ಕೆ ನ್ಯಾಯ ಲಭಿಸಬೇಕು ಮತ್ತು ತಪ್ಪಿತಸ್ಥ ವೈದ್ಯರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಹಲವು ಕಡೆ ಜನರು ಪ್ರತಿಭಟನೆ ನಡೆಸಿದ್ದಾರೆ. ಪಶ್ಚಿಮ ಕಾಶ್ಮೀರ ಜಿಲ್ಲೆಯಲ್ಲಿ ಕಳೆದ 10 ದಿನಗಳಲ್ಲಿ ಅಧಿಕಾರಿಗಳ ನಿರ್ಲಕ್ಷದಿಂದ ಸಾವಿಗೀಡಾದ ಎರಡನೇ ಗರ್ಭಿಣಿ ಇವರಾಗಿದ್ದಾರೆ. ಕಳೆದ ಭಾನುವಾರ ಸ್ಥಳೀಯ ಆಸ್ಪತ್ರೆಯಿಂದ ದೊಡ್ಡ ಆಸ್ಪತ್ರೆಗೆ ಹೋಗಲು ತಿಳಿಸಲಾಗಿತ್ತು. ಆ ಪ್ರಕಾರ ಅನಂತನಾಗ್ ನ ಮೆಟರ್ನಿಟಿ ಅಂಡ್ ಚೈಲ್ಡ್ ಕೇರ್ ಹಾಸ್ಪಿಟಲ್ ಗೆ ದಾಖಲಿಸಲಾಯಿತು. ಎರಡು ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ವಿಳಂಬ ಮಾಡಲಾಯಿತು ಎಂದು ಕುಟುಂಬ ಆರೋಪಿಸಿದೆ.

ಕಳೆದವಾರ ಅವಳಿ ಮಕ್ಕಳಿಗೆ ಜನ್ಮವಿತ್ತ ತಾಯಿ ಕೂಡ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಕೊರೋನಾ ಪೀಡಿತ ಪ್ರದೇಶದಿಂದ ಬಂದ ಯುವತಿಗೆ ಸೂಕ್ತ ಚಿಕಿತ್ಸೆಯನ್ನು ನೀಡಿರಲಿಲ್ಲ ಎಂಬ ಆರೋಪ ಕೇಳಿ ಬಂದಿತ್ತು. ಮೃತಪಟ್ಟ ಒಂದು ದಿನದ ಬಳಿಕ ಬಂದ ಪರೀಕ್ಷೆ ಫಲಿತಾಂಶದಂತೆ ಆ ಯುವತಿಗೆ ಕೊರೋನಾ ದೃಢಗೊಂಡಿತ್ತು. ಮೃತದೇಹದೊಂದಿಗೆ ಅನಾದರ ತೋರಿಸಲಾಗಿದೆ ಎಂಬ ಆರೋಪದ ಕುರಿತಂತೆ ತನಿಖೆಗೆ ಆದೇಶ ನೀಡಲಾಗಿದೆಯಾದರೂ ಈವರೆಗೆ ಯಾವ ಕ್ರಮವನ್ನೂ ಕೈಗೊಳ್ಳಲಾಗಲಿಲ್ಲ.

ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.