ಜೆಎನ್‌ಯು ವಿದ್ಯಾರ್ಥಿ ಒಕ್ಕೂಟ ಚುನಾವಣೆ | ಎಡರಂಗದ ಅಭ್ಯರ್ಥಿಗಳಿಗೆ ಭರ್ಜರಿ ಜಯ; ಎಬಿವಿಪಿಗೆ ತೀವ್ರ ಮುಖಭಂಗ

0
431

ಸನ್ಮಾರ್ಗ ವಾರ್ತೆ

ದೇಶದ ಪ್ರಖ್ಯಾತ ವಿಶ್ವವಿದ್ಯಾನಿಲಯಗಳಲ್ಲಿ ಒಂದಾಗಿ ಗುರುತಿಸಿಕೊಂಡಿರುವ ದೆಹಲಿಯ ಜವಾಹರ್‌ಲಾಲ್ ನೆಹರೂ ವಿಶ್ವವಿದ್ಯಾಲಯದ(ಜೆಎನ್‌ಯು) ವಿದ್ಯಾರ್ಥಿ ಒಕ್ಕೂಟದ ಚುನಾವಣೆಯಲ್ಲಿ ಎಡ-ವಿದ್ಯಾರ್ಥಿ ಸಂಘಟನೆಗಳು ಈ ಬಾರಿ ಮೇಲುಗೈ ಸಾಧಿಸಿದೆ. ಆ ಮೂಲಕ ಆರ್‌ಎಸ್‌ಎಸ್‌ನ ವಿದ್ಯಾರ್ಥಿ ಘಟಕ ಎಬಿವಿಪಿಗೆ ಭಾರೀ ಮುಖಭಂಗವಾಗಿದೆ.

ಎಡ-ವಿದ್ಯಾರ್ಥಿ ಸಂಘಟನೆಗಳು ಒಕ್ಕೂಟ (AISA, SFI, DSF ಮತ್ತು AISF) ಮತ್ತು BAPSA ವಿದ್ಯಾರ್ಥಿ ಸಂಘಟನೆ ವಿಜಯಶಾಲಿಯಾಗಿವೆ.

ಅಧ್ಯಕ್ಷ ‌ಸ್ಥಾನ‌ಕ್ಕೆ ಎಡ ವಿದ್ಯಾರ್ಥಿ ಒಕ್ಕೂಟದಿಂದ AISA ಸಂಘಟನೆಯ ಧನಂಜಯ ವಿಜಯಶಾಲಿಯಾಗಿದ್ದಾರೆ. ಪ್ರಧಾನ ಕಾರ್ಯದರ್ಶಿ ಸ್ಥಾನದಲ್ಲಿ BAPSA ಸಂಘಟನೆಯ ಪ್ರಿಯಾಂಶಿ ಆರ್ಯಾ ವಿಜಯಶಾಲಿಯಾಗಿದ್ದಾಳೆ. ಎಡ ವಿದ್ಯಾರ್ಥಿ ಒಕ್ಕೂಟದಿಂದ ಉಪಾಧ್ಯಕ್ಷ ‌ಸ್ಥಾನದಲ್ಲಿ‌ ಸ್ಪರ್ಧಿಸಿರುವ SFI ವಿದ್ಯಾರ್ಥಿ ಸಂಘಟನೆಯ ಅವಿಜಿತ್ ಘೋಷ್‌ ವಿಜಯಶಾಲಿಯಾಗಿದ್ದಾರೆ ಮತ್ತು ಸಹ ಕಾರ್ಯದರ್ಶಿ ಸ್ಥಾನಕ್ಕೆ ಎಡ‌ ಒಕ್ಕೂಟದ ‌AISF ಸಂಘಟನೆಯ ‌ಅಭ್ಯರ್ಥಿ ಮೊಹಮದ್ ಸಾಜಿದ್ ಜಯ ಗಳಿಸಿದ್ದಾರೆ ಎಂದು ಜೆಎನ್‌ಯು ವಿದ್ಯಾರ್ಥಿ ಸಂಘಟನೆ AISA ಸೋಷಿಯಲ್ ಮೀಡಿಯಾ ಮೂಲಕ ಮಾಹಿತಿ ನೀಡಿದೆ.

ಕೋವಿಡ್ ಕಾರಣದಿಂದ ಕಳೆದ ನಾಲ್ಕು ವರ್ಷಗಳಿಂದ ಜೆನ್‌ಯುನಲ್ಲಿ ಚುನಾವಣೆ ನಡೆದಿರಿಲ್ಲ. ಸುದೀರ್ಘ ವರ್ಷಗಳ ಬಳಿಕ ನಡೆಯುತ್ತಿರುವ ಈ ಚುನಾವಣೆ ಭಾರೀ ಕುತೂಹಲಕ್ಕೆ ಕಾರಣವಾಗಿತ್ತು. ಎಡಪಂಥೀಯ ವಿದ್ಯಾರ್ಥಿ ಘಟಕಗಳಾದ ಆಲ್ ಇಂಡಿಯಾ ಸ್ಟೂಡೆಂಟ್ ಆಸೋಸಿಯೇಶನ್(AISA) ಡೆಮಾಕ್ರಟಿಕ್ ಸ್ಟುಡೆಂಟ್ ಫೆಡರೇಶನ್(DSF), ಸ್ಟೂಡೆಂಟ್ ಫೆಡರೇಶನ್ ಆಫ್ ಇಂಡಿಯಾ(SFI) ಆಲ್ ಇಂಡಿಯಾ ಸ್ಟೂಡೆಂಟ್ ಫೆಡರೇಶನ್(AISF) ವಿದ್ಯಾರ್ಥಿ ಸಂಘಟನೆಗಳು ಜಂಟಿಯಾಗಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್(ಎಬಿವಿಪಿ) ವಿರುದ್ದ ಸ್ಪರ್ಧಿಸಿತ್ತು.

4 ವರ್ಷಗಳ ಬಳಿಕ ನಡೆದ ಜವಾಹರ್‌ಲಾಲ್ ನೆಹರೂ ವಿದ್ಯಾರ್ಥಿ ಘಟಕ ಚುನಾವಣೆಯಲ್ಲಿ ಶೇಕಡಾ 73ರಷ್ಟು ಮತದಾನವಾಗಿತ್ತು. 12 ವರ್ಷಗಳಲ್ಲೇ ಗರಿಷ್ಠ ಮತದಾನ ದಾಖಲಾಗಿತ್ತು. 7,700 ವಿದ್ಯಾರ್ಥಿಗಳು ತಮ್ಮ ಹಕ್ಕು ಚಲಾಯಿಸಿದ್ದರು.