ಹಣೆಗೆ ಕುಂಕುಮ ಹಚ್ಚಲು ನಿರಾಕರಿಸಿದ ವಿಪಕ್ಷ ನಾಯಕ ಆರ್.ಅಶೋಕ್

0
785

ಸನ್ಮಾರ್ಗ ವಾರ್ತೆ

ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನು ಹಿಂದೂ ವಿರೋಧಿ, ಅಲ್ಪಸಂಖ್ಯಾತರ ಓಲೈಕೆಯಲ್ಲಿ ಮುಳುಗಿದೆ ಎಂದು ಸದಾ ಆರೋಪಿಸುತ್ತಿದ್ದ ವಿಪಕ್ಷ ನಾಯಕ ಆರ್.ಅಶೋಕ್ ಅವರು, ಹಣೆಗೆ ಕುಂಕುಮ ಹಚ್ಚಲು ನಿರಾಕರಿಸಿದ ಘಟನೆ ಕಲಬುರಗಿಯಲ್ಲಿ ನಡೆದಿದೆ.

ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಸುಲೆಪೇಟ್‌ನಲ್ಲಿರುವ ಬಿಜೆಪಿ ಕಚೇರಿಗೆ ಇಂದು(ಮಾ.24) ಭೇಟಿ ನೀಡಿದಾಗ ಹಿರಿಯ ಮುಖಂಡರೊಬ್ಬರು ಕುಂಕುಮ ಹಚ್ಚಲು ಮುಂದಾದಾಗ ನಿರಾಕರಿಸಿದ್ದಾರೆ.

ಕಚೇರಿಗೆ ಆಗಮಿಸಿದ ಅಶೋಕ್ ಅವರಿಗೆ ಬಿಜೆಪಿ ಮುಖಂಡರು ಹಾರ ಹಾಕಿ ಸ್ವಾಗತಿಸಲು ಮುಂದಾದರು. ಈ ವೇಳೆ ಎರಡು ಹಾರಗಳನ್ನು ತಾವು ಹಾಕಿಕೊಳ್ಳದೆ ಬಿಜೆಪಿ ಹಿರಿಯ ಮುಖಂಡ ಡಾ ವಿಶ್ವನಾಥ್ ಪವಾರ್ ಮತ್ತು ಇನ್ನೊಬ್ಬರಿಗೆ ಹಾಕಿ ಗೌರವಿಸಿದರು. ಈ ನಡುವೆ ಡಾ ವಿಶ್ವನಾಥ್ ಪವಾರ್ ಅವರು ಅಶೋಕ ಅವರ ಹಣೆಗೆ ಕುಂಕುಮ ಇಡಲು ಮುಂದಾದರು. ಆದರೆ ಅಶೋಕ್ ಅವರು ಕುಂಕುಮ ಹಚ್ಚದಂತೆ, ‘ಬೇಡ’ ಎನ್ನುವ ಮೂಲಕ ತಡೆದಿದ್ದಾರೆ. ಈ ವೇಳೆ ವಿಶ್ವನಾಥ್ ಅವರು ಒಮ್ಮೆಲೆ ಅವಾಕ್ಕಾದರೂ, ತಂದಿದ್ದಂತಹ ಶಾಲು ಹಾಕಿ ಸನ್ಮಾನಿಸಿದರು. ಇದರ ವಿಡಿಯೋ ಈಗ ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡಿದ್ದು, ಬಿಜೆಪಿ ಮುಖಂಡನ ನಡೆಗೆ ವಿರೋಧ ವ್ಯಕ್ತವಾಗುತ್ತಿದೆ.

ಈ ಹಿಂದೆ ಸದನದಲ್ಲಿ ಚರ್ಚೆಯ ವೇಳೆ ತಮ್ಮನ್ನು ತಾವು ಹೊಗಳುವ ಭರದಲ್ಲಿ, “ನಾನು ಗೃಹ ಸಚಿವನಾಗಿದ್ದಾಗ ಮಂಗಳೂರು ಪಬ್‌ನಲ್ಲಿ ಗಲಾಟೆ ಆದಾಗ ಬಿಜೆಪಿಯನ್ನು ಬೆಂಬಲಿಸುವ ಬಜರಂಗದಳದ ಕಾರ್ಯಕರ್ತರ ವಿರುದ್ಧವೇ ಗೂಂಡಾ ಕಾಯ್ದೆ ಹಾಕಿದ್ದೆ” ಎಂದು ಹೇಳಿದ್ದರು. ಆ ಮೂಲಕ ಸಂಘಪರಿವಾರದ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದ್ದರು. ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದ್ದಂತೆಯೇ ಎಚ್ಚೆತ್ತಿದ್ದ ಆರ್ ಅಶೋಖ್, ಬಜರಂಗದಳದ ಕಾರ್ಯಕರ್ತರ ಕ್ಷಮೆ ಕೇಳಿದ್ದರು. ಇದೀಗ ಕುಂಕುಮ ಹಣೆಗೆ ಇಡಲು ನಿರಾಕರಿಸಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

ಸಿದ್ದರಾಮಯ್ಯ ಹಿಂದೂ ವಿರೋಧಿ, ಕೇಸರಿ ಕಂಡರೆ ಆಗಲ್ಲ, ಕೇಸರಿ ಶಲ್ಯ ಧರಿಸಲ್ಲ, ಕುಂಕುಮ ಹಾಕಲ್ಲ ಹಾಗೂ ಡಿ ಕೆ ಶಿವಕುಮಾರ್ ಅವರು ಮುಸ್ಲಿಮರನ್ನು ನನ್ನ ಬ್ರದರ್ಸ್‌ ಎಂದು ಕರೆಯುತ್ತಾರೆ ಎಂದೆಲ್ಲಾ ಸದಾ ಟೀಕಿಸುವ ರಾಜ್ಯದ ಬಿಜೆಪಿ ನಾಯಕರು, ತಮ್ಮದೇ ನಾಯಕನ ಈ ನಡೆಗೆ ಏನು ಹೇಳುತ್ತಾರೆ ಎಂದು ಕಾದು ನೋಡಬೇಕಿದೆ. ಈ ನಡುವೆ ಕಾಂಗ್ರೆಸ್ ಇದನ್ನೇ ಅಸ್ತ್ರ ಮಾಡಿಕೊಳ್ಳುವ ಸಾಧ್ಯತೆ ಇದೆ.