ನಾಲ್ಕು ದೇಶಗಳ ವಲಸಿಗರಿಗೆ ಅನುಮತಿ ನೀಡಿದ ಅಮೇರಿಕ: ಪ್ರತಿ ತಿಂಗಳು 30 ಸಾವಿರ ವಲಸಿಗರ ಪ್ರವೇಶಕ್ಕೆ ಜೋ ಬೈಡನ್ ಸಮ್ಮತಿ

0
38

ಸನ್ಮಾರ್ಗ ವಾರ್ತೆ

ವಾಷಿಂಗ್ಟನ್: ನಾಲ್ಕು ದೇಶಗಳಿಂದ ಪ್ರತಿ ತಿಂಗಳು 30,000 ವಲಸಿಗರನ್ನು ದೇಶಕ್ಕೆ ಪ್ರವೇಶಿಸಲು ಅನುಮತಿ ನೀಡುವುದಾಗಿ ಅಮೇರಿಕಾ ಘೋಷಿಸಿದೆ. ನಿಕಾರಗುವಾ, ವೆನೆಜುವೆಲಾ, ಕ್ಯೂಬಾ, ಹೇಯ್ತಿ ಮುಂತಾದ ರಾಷ್ಟ್ರಗಳಿಂದ ವಲಸಿಗರು ಅಮೇರಿಕಾ ಪ್ರವೇಶಿಸಲಿದ್ದಾರೆ. ಅನಧಿಕೃತ ವಲಸಿಗರನ್ನು ತಡೆಯುವುದು ಇದರ ಉದ್ದೇಶ ಎಂದು ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ.

ವಲಸಿಗರನ್ನು ಸ್ವೀಕರಿಸಲು ಅಮೇರಿಕಾದ ಓರ್ವ ಪ್ರಾಯೋಜಕರು ಬೇಕು. ವ್ಯಕ್ತಿಯ ಸಂಪೂರ್ಣ ಮಾಹಿತಿ ಅರಿತ ಬಳಿಕ ಅಮೇರಿಕಾ ಪ್ರವೇಶಕ್ಕೆ ಅನುವು ಮಾಡಿಕೊಡಲಾಗುವುದು. ಆದರೆ, ಅನಧಿಕೃತ ವಲಸಿಗರು ಅಮೇರಿಕದ ಗಡಿಗಳಿಂದ ದೂರವಿರಿ ಎಂಬ ಎಚ್ಚರಿಕೆಯನ್ನು ಬೈಡನ್ ನೀಡಿದ್ದಾರೆ.

ಕಳೆದ ಅಕ್ಟೋಬರ್ ತಿಂಗಳಲ್ಲಿ ವೆನೆಜುವೆಲಾದಿಂದ ಸಾವಿರಾರು ವಲಸಿಗರ ಪ್ರವೇಶಕ್ಕೆ ಅನುವು ಮಾಡಿ ಕೊಡಲಾಗಿತ್ತು. ಅವರು ವಿಮಾನದಲ್ಲಿ ಆಗಮಿಸಿದ್ದರು. ಈ ಯೋಜನೆಯನ್ನು ಉಳಿದ ಮೂರು ರಾಷ್ಟ್ರಗಳಿಗೆ ವಿಸ್ತರಣೆ ಮಾಡಲಾಗಿದೆ. ರಿಪಬ್ಲಿಕನ್ ಪಕ್ಷವು ಅಧ್ಯಕ್ಷರ ಈ ನಿರ್ಧಾರಕ್ಕೆ ವಿರುದ್ಧವಾಗಿದೆ. ಡೆಮಾಕ್ರಾಟ್‌ಗಳ ಒಂದು ವಿಭಾಗ ಇದರ ಪರವಾಗಿದೆ. ಮುಂದಿನ ವಾರ ಬೈಡನ್, ಅಮೇರಿಕ ಮತ್ತು ಮೆಕ್ಸಿಕೋ ಗಡಿಯನ್ನು ಸಂದರ್ಶಿಸಲಿದ್ದಾರೆ. ಈ ಭೇಟಿ ಗಡಿಯಲ್ಲಿ ಶಾಂತಿ ಕಾಪಾಡುವ ಉದ್ದೇಶವೆಂದು ಅವರು ಹೇಳಿದರು.

ಸಂಕಷ್ಟದಲ್ಲಿರುವ ದೇಶಗಳಿಂದ ನಿಯಂತ್ರಿತ ವಲಸಿಗರನ್ನು ಕರೆತರುವುದು ಅಮೇರಿಕದ ಯೋಜನೆಯಾಗಿದೆ ಎಂದು ಹೇಳುವ ಮೂಲಕ ಬೈಡನ್ ದೇಶದ ಅತ್ಯಂತ ವಿವಾದಾತ್ಮಕ ರಾಜಕೀಯ ವಿಷಯಗಳ ಬಗ್ಗೆ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.

LEAVE A REPLY

Please enter your comment!
Please enter your name here