ಯುಪಿ: ಪತ್ರಕರ್ತನ ಮೃತದೇಹ ರೈಲ್ವೆ ಹಳಿಯಲ್ಲಿ; ಪೊಲೀಸರ ವಿರುದ್ಧ ಕೇಸು

0
253

ಸನ್ಮಾರ್ಗ ವಾರ್ತೆ

ಉನ್ನಾವ್: ಸ್ಥಳೀಯ ಹಿಂದಿ ದೈನಿಕದ ಪತ್ರಕರ್ತ ಸೂರಜ್ ಪಾಂಡೆ(22) ಎಂಬವರ ಮೃತದೇಹ ರೈಲ್ವೆ ಹಳಿಯಲ್ಲಿ ಕಂಡು ಬಂದಿದ್ದು ಸಂಬಂಧಿಕರ ದೂರಿನ ಹಿನ್ನೆಲೆಯಲ್ಲಿ ಉತ್ತರಪ್ರದೇಶ ಉನ್ನಾವ್ ಸಬ್ ಇನ್ಸ್‍ಪೆಕ್ಟರ್ ಸುನಿತಾ ಚೌರಾಸಿಯ, ಕಾನ್ಸ್‍ಟೇಬಲ್ ಅಮರ್ ಸಿಂಗ್ ಹಾಗೂ ಇನ್ನೊಬ್ಬರ ವಿರುದ್ಧ ಕೇಸು ದಾಖಲಿಸಲಾಗಿದೆ ಎಂದು ಸಿಟಿ ಸರ್ಕಲ್ ಇನ್ಸ್‌ಪೆಕ್ಟರ್ ಗೌರವ್ ತ್ರಿಪಾಠಿ ತಿಳಿಸಿದ್ದಾರೆ. ಸೂರಜ್‍ರನ್ನು ಕೊಂದು ನಂತರ ಗುರುವಾರ ಸಂಜೆ ಸದರ್ ಠಾಣಾ ಪ್ರದೇಶದ ರೈಲ್ವೆ ಟ್ರಾಕ್‍ನಲ್ಲಿ ಮೃತದೇಹವನ್ನು ಎಸೆದು ಹೋಗಿದ್ದಾರೆ ಎಂದು ಸಂಬಂಧಿಕರು ಆರೋಪಿಸಿದರು.

ಸೂರಜ್ ಮತ್ತು ಸಬ್ಇನ್ಸ್‌ಪೆಕ್ಟರ್ ಸುನಿತಾ ಚೌರಾಸಿಯ ಗೆಳೆಯರಾಗಿದ್ದರು. ಇದಕ್ಕಾಗಿ ನವೆಂಬರ್ 11ಕ್ಕೆ ಕಾನ್ಸ್‌ಟೇಬಲ್ ಅಮರ್‍ಸಿಂಗ್ ಸೂರಜ್‍ಗೆ ಕರೆಮಾಡಿ ಬೆದರಿಕೆ ಹಾಕಿದ್ದ ಎಂದು ಸೂರಜ್ ಪಾಂಡೆಯ ತಾಯಿ ಲಕ್ಷ್ಮೀ ಪಾಂಡೆ ಪೊಲೀಸರಿಗೆ ದೂರಿನಲ್ಲಿ ತಿಳಿಸಿದಾರೆ. ಗುರುವಾರ ಒಂದು ಫೋನ್ ಕರೆ ಬಂತು. ನಂತರ ಸೂರಜ್ ಮನೆಯಿಂದ ಹೋಗಿದ್ದಾನೆ. ನಂತರ ಆತನ ಕುರಿತ ಯಾವುದೇ ಮಾಹಿತಿ ನಮಗೆ ಸಿಕ್ಕಿಲ್ಲ ಎಂದು ಸೂರಜ್ ತಾಯಿ ಪೊಲೀಸರಿಗೆ ತಿಳಿಸಿದ್ದಾರೆ.