ಸನ್ಮಾರ್ಗ ವಾರ್ತೆ
ವಿದ್ಯಾರ್ಥಿಗಳ ಪರವಾಗಿ ಜಂತರ್ ಮಂತರ್ನಲ್ಲಿ ನಡೆದ ಪ್ರತಿಭಟನೆಯಲ್ಲಿ ನಿಸ್ವಾರ್ಥವಾಗಿ ಸ್ವಯಂಸೇವಕರಾಗಿ ಸೇವೆ ಸಲ್ಲಿಸಿ, ತದನಂತರ ಪೊಲೀಸರಿಂದ ಕಿರುಕುಳ ಹಾಗೂ ಬೆದರಿಕೆಯನ್ನು ಎದುರಿಸಿದ ಜುನೈದ್ ಜಮಾಅತೆ ಇಸ್ಲಾಮೀ ಹಿಂದ್(ಜೆಐಎಚ್) ಕೇಂದ್ರ ಕಚೇರಿಗೆ ಭೇಟಿ ನೀಡಿದರು. ತಮ್ಮ ಭೇಟಿಯ ಸಂದರ್ಭದಲ್ಲಿ ಅವರು ಜೆಐಎಚ್ ಉಪಾಧ್ಯಕ್ಷ ಮಲಿಕ್ ಮೋಅತಸಿಮ್ ಖಾನ್, ಅಸೋಸಿಯೇಶನ್ ಫಾರ್ ಪ್ರೊಟೆಕ್ಷನ್ ಆಫ್ ಸಿವಿಲ್ ರೈಟ್ಸ್ (ಎಪಿಸಿಆರ್) ಇದರ ರಾಷ್ಟ್ರೀಯ ಕಾರ್ಯದರ್ಶಿ ನದೀಮ್ ಖಾನ್ ಹಾಗೂ ಜೆಐಎಚ್ ಇತರ ನಾಯಕರನ್ನು ಭೇಟಿಯಾದರು.
ಪೊಲೀಸರು ಯಾವುದೇ ಕಾನೂನುಬದ್ಧ ಸಮರ್ಥನೆಯಿಲ್ಲದೆ ತಮ್ಮನ್ನು ಅನ್ಯಾಯವಾಗಿ ಬಂಧಿಸಿ ಉತ್ತರಾಖಂಡಕ್ಕೆ ಕರೆದೊಯ್ದರು ಎಂದು ವಿವರಿಸುತ್ತಾ ಜುನೈದ್ ತಮಗೆ ಎದುರಾದ ಅನ್ಯಾಯವನ್ನು ಹಂಚಿಕೊಂಡರು. ಬೆದರಿಸುವ ಪ್ರಯತ್ನವಾಗಿ ತಮ್ಮ ಮೇಲೆ ಎನ್ಐಎ ಪ್ರಕರಣಗಳನ್ನು ದಾಖಲಿಸುವುದು ಎಂದು ಹೆದರಿಸಲಾಗಿದೆ ಎಂಬುದನ್ನು ಅವರು ಬಹಿರಂಗಪಡಿಸಿದರು.

ಜುನೈದ್ ಅವರ ಧೈರ್ಯ, ನಿಸ್ವಾರ್ಥ ಸೇವೆ ಹಾಗೂ ವಿದ್ಯಾರ್ಥಿ ಚಳವಳಿಗೆ ನೀಡಿದ ಕೊಡುಗೆಯನ್ನು ಜೆಐಎಚ್ ಉಪಾಧ್ಯಕ್ಷ ಮಲಿಕ್ ಮೊಅತಸಿಮ್ ಖಾನ್ ಶ್ಲಾಘಿಸಿದರು. ಜುನೈದ್ ಎದುರಿಸಿದ ಕಿರುಕುಳ ಮತ್ತು ಬೆದರಿಕೆಯ ವಿರುದ್ಧ ಸಂಘಟನೆಯು ಸಂಪೂರ್ಣ ಕಾನೂನು ಮತ್ತು ನೈತಿಕ ಬೆಂಬಲ ನೀಡುವುದಾಗಿ ಅವರಿಗೆ ಭರವಸೆ ನೀಡಿದರು.
ಇದಕ್ಕೂ ಮುನ್ನ, ಅಸೋಸಿಯೇಷನ್ ಫಾರ್ ಪ್ರೊಟೆಕ್ಷನ್ ಆಫ್ ಸಿವಿಲ್ ರೈಟ್ಸ್ (ಎಪಿಸಿಆರ್) ನ ತಂಡವು ಜುನೈದ್ ಅವರ ಸ್ವಗ್ರಾಮಕ್ಕೆ ಭೇಟಿ ನೀಡಿ, ಅಲ್ಲಿ ಸ್ಥಳೀಯ ಎಸ್ಎಚ್ಒ ಮತ್ತು ಇತರ ಅಧಿಕಾರಿಗಳನ್ನು ಭೇಟಿಯಾಯಿತು. ಜುನೈದ್ ವಿರುದ್ಧದ ಕಿರುಕುಳ, ಬೆದರಿಕೆ ಮತ್ತು ಬಲಪ್ರಯೋಗದ ತಂತ್ರಗಳನ್ನು ತಕ್ಷಣವೇ ಕೊನೆಗೊಳಿಸಬೇಕೆಂದು ತಂಡವು ಬಲವಾಗಿ ಒತ್ತಾಯಿಸಿತು ಎಂದು ವರದಿಯಾಗಿದೆ.












