ಜಸ್ಟೀಸ್ ಫಾರ್ ಉಝ್ಮಾ: ಬಾಲ ಕಾರ್ಮಿಕರ ಕುರಿತು ಸರ್ವೆ ನಡೆಸಲು ಪಾಕ್ ಪ್ರಧಾನಿ ಆದೇಶ

0
705

ಇಸ್ಲಾಮಾಬಾದ್: 16 ರ ಹರೆಯದ ಬಾಲೆ ಉಝ್ಮಾ ಜೀತ ಕಾರ್ಮಿಕಳಾಗಿ ದುಡಿದ ಮನೆಯೊಡತಿಯಿಂದ ತೀವ್ರ ಚಿತ್ರಹಿಂಸೆಗೊಳಗಾಗಿ ಸಾವನ್ನಪ್ಪಿದ ದುರಂತವು ಪಾಕಿಸ್ತಾನವನ್ನಿಡೀ ಬೆಚ್ಚಿ ಬೀಳಿಸಿದ್ದು,ಮಾನವ ಹಕ್ಕುಗಳ ಸಂರಕ್ಷಕರಿಂದ ತೀವ್ರ ಪ್ರತಿಭಟನೆಯನ್ನು ಹುಟ್ಟು ಹಾಕಿತ್ತು.

ಬಾಲ ಕಾರ್ಮಿಕರು ಮತ್ತು ಜೀತ ಕಾರ್ಮಿಕರಾಗಿ ದುಡಿಯುತ್ತಿರುವವರ ಕುರಿತು ದೇಶದಾದ್ಯಂತ ಸರ್ವೆ ನಡೆಸುವಂತೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಆದೇಶಿಸಿದ್ದಾರೆ. ದೇಶದಲ್ಲಿ ಮಾನವಹಕ್ಕುಗಳ ಉಲ್ಲಂಘನೆಯನ್ನು ತಡೆಯುವ ಹಾಗೂ ಬಡತನ ರೇಖೆಗಿಂತ ಕಳಗಿರುವವರನ್ನು ಮೇಲಕ್ಕೆತ್ತಬೇಕಾದ ಅಗತ್ಯತೆ ಇರುವುದನ್ನು ಅವರು ಈ ಸಂದರ್ಭದಲ್ಲಿ ತಿಳಿಸಿದರು. ಬಾಲ ಕಾರ್ಮಿಕ ಮತ್ತು ಜೀತ ಪದ್ಧತಿಯಿಂದ ಮಕ್ಕಳನ್ನು ಸಂರಕ್ಷಿಸಬೇಕಾದ ಅಗತ್ಯತೆ ದೇಶದಲ್ಲಿದೆ. ಇದಲ್ಲದೇ ದೈಹಿಕ ಹಿಂಸೆ, ಮನೆಯಲ್ಲಿಯಾಗುತ್ತಿರುವ ಶೋಷಣೆಗಳಿಗೆ ಕಠಿಣ ಶಿಕ್ಷೆ ನೀಡುವ ಕುರಿತು ಹಾಗೂ ಸಾಂವಿಧಾನಿಕವಾಗಿ ತ್ವರಿತ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರು.

ಕಳೆದ ವರ್ಷ ಕರಾಚಿಯಲ್ಲಿ ಕೆಲಸಕ್ಕಿದ್ದ ಮುಹಮ್ಮದ್ ಇಮ್ರಾನ್ ಎಂಬ 15 ವರ್ಷದ ಬಾಲಕನನ್ನು ಮಾಲಿಕನು ಚಿತ್ರವಿಚಿತ್ರವಾಗಿ ಹಿಂಸಿಸಿ ಕೊಲೆಯನ್ನೆಸಗಿದ್ದನು. ಇದಲ್ಲದೇ 2017 ರಲ್ಲಿ 10 ವರ್ಷದ ಬಾಲಕಿ ತೈಬಾ ಮನೆಗೆಲಸದಲ್ಲಿದ್ದಾಗ ಅನುಮಾನಾಸ್ಪದ ರೀತಿಯಲ್ಲಿ ಮರಣ ಹೊಂದಿದ್ದಳು. ಆಕೆಯ ದೇಹವನ್ನು ಪರಿಶೀಲನೆಗೊಳಪಡಿಸಿದಾಗ 20ಕ್ಕೂ ಹೆಚ್ಚು ಗಾಯದ ಗುರುತುಗಳಿದ್ದುವಲ್ಲದೇ ಆಕೆಯ ಕೈಗಳನ್ನು ಗ್ಯಾಸ್ ಸ್ಟವ್ ನಲ್ಲಿರಿಸಿ ಸುಟ್ಟ ಹಸಿ ಗಾಯಗಳಿದ್ದವು.

ಉಝ್ಮಾ ಪ್ರಕರಣವು ವೈದ್ಯಕೀಯ ಪರಿಶೀಲನೆಗಳಿಂದ ಹೊಸ ತಿರುವನ್ನು ಪಡೆದುಕೊಂಡಿದ್ದು ಆಕೆಗೆ ಎಂಟು ತಿಂಗಳುಗಳ ಕಾಲ ಯಾವುದೇ ರೀತಿಯ ಸರಿಯಾದ ಪೌಷ್ಟಿಕ ಆಹಾರ ನೀಡದೇ ಕೇವಲ 4000 ರೂಪಾಯಿಗಳಿಗಾಗಿ ಹಗಲಿರುಳು ದುಡಿಸಿಕೊಳ್ಳಲಾಗಿತ್ತೆಂಬ ಸತ್ಯಾಂಶವು ಆಕೆಯ ಹೆತ್ತವರಿಂದ ಬಹಿರಂಗವಾಗಿದೆ‌. ಮಗಳನ್ನು ಭೇಟಿಯಾಗಲು ಅನುಮತಿಸದ ಮನೆಯೊಡತಿ ಬಾಲ್ಕನಿಯಿಂದಲೇ ಸಂಬಳದ ಹಣವೆಂದು ಹೇಳಿ 2500 ರೂಪಾಯಿಗಳನ್ನು ಎಸೆದು ಬಿಡುತ್ತಿದ್ದುದ್ದರ ಕುರಿತು ತಿಳಿಸಿದ್ದಾರೆ‌. ಉಝ್ಮಾಳ ದೇಹದಲ್ಲಿ ಮರ್ದನಕ್ಕೊಳಪಡಿಸಿದ ಹಲವು ಗಾಯಗಳಿದ್ದು ಆಕೆಯ ನಾಲಗೆಯು ಅರ್ಧ ಕತ್ತರಿಸಲ್ಪಟ್ಟ ಸ್ಥಿತಿಯಲ್ಲಿಯೂ, ಎಲಬುಗಳು ತುಂಡಾಗಿದ್ದುವಲ್ಲದೇ ಆಕೆಯ ಮುಖ- ಎದೆಯ ಮೇಲೆ ಹೊಡೆದ ಗಾಯಗಳಿದ್ದವೆಂಬುದು, ಆಕೆಯನ್ನು ತಾವು ಉಪಯೋಗಿಸುತ್ತಿದ್ದ ಬಾತ್ ರೂಮ್ ನಲ್ಲಿ ಮಮಲಗಿಸುತ್ತಿದ್ದರೆಂಬುದು ತಿಳಿದು ಬಂದಿದೆ. ಉಝ್ಮಾಳನ್ನು ಹೊಡೆದು ಕೊಲೆ ಮಾಡಿದ ಮನೆಯೊಡತಿ ತದನಂತರ ವಿದ್ಯುತ್ ಶಾಕ್ ಕೊಟ್ಟಿರುವ ಕುರಿತು ಹಾಗೂ ಆಕೆಯ ದೇಹವನ್ನು ಚರಂಡಿಯಲ್ಲಿ ಎಸೆದ ಕುರಿತು ಒಪ್ಪಿಕೊಂಡಿರುವುದಾಗಿ ಪೋಲಿಸರು ತಿಳಿಸಿದ್ದಾರೆ.

ಉಝ್ಮಾ ಪ್ರಕರಣವು ಬಾಲಕಾರ್ಮಿಕ ಪದ್ಧತಿಯಿಂದ ಮಕ್ಕಳನ್ನು ಸಂರಕ್ಷಿಸಬಲ್ಲುದೇ ಎಂಬುದನ್ನು ಕಾದು ನೋಡಬೇಕಿದೆ.