ಚಿಕ್ಕಬಳ್ಳಾಪುರ: ಮಹಿಳಾ ಮತದಾರರ ಓಲೈಕೆಯತ್ತ ರಾಜಕೀಯ ಪಕ್ಷಗಳ ಚಿತ್ತ

0
454

ಸ್ಟೌವ್, ಮಿಕ್ಸಿ, ಫ್ಯಾನ್, ಸೀರೆ ಸಹಿತ ಪ್ರವಾಸಗಳ ಬಂಪರ್ ಆಫರ್

ಸನ್ಮಾರ್ಗ ವಾರ್ತೆ

ಚಿಕ್ಕಬಳ್ಳಾಪುರ: ಜಿಲ್ಲೆಯ ಐದೂ ವಿಧಾನಸಭಾ ಕ್ಷೇತ್ರಗಳಲ್ಲಿ ವಿವಿಧ ರಾಜಕೀಯ ಪಕ್ಷಗಳು ಕುಕ್ಕರ್, ಸ್ಟೌವ್, ಫ್ಯಾನ್, ಸೀರೆ ವಿತರಣೆ, ಓಂ ಶಕ್ತಿ ಧರ್ಮಸ್ಥಳ ಪ್ರವಾಸಕ್ಕೆ ಕರೆದೊಯ್ಯುವ ಪ್ರಕ್ರಿಯೆಯಲ್ಲಿ ಬ್ಯುಸಿಯಾಗಿವೆ. ಇಲ್ಲಿ ಮಹಿಳಾ ಮತದಾರರೇ ಅಧಿಕವಿರುವುದರಿಂದ ಎಲ್ಲ ರಾಜಕೀಯ ಪಕ್ಷಗಳೂ ಮಹಿಳೆಯರ ಮೇಲೆ ಕಣ್ಣು ನೆಟ್ಟಿವೆ.

ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಸಚಿವ ಡಾಕ್ಟರ್ ಕೆ.ಸುಧಾಕರ್ ಮಮಹಿಳಾ ಮತದಾರರ ಮನ ಗೆಲ್ಲಲು ಕಸರತ್ತು ನಡೆಸಿದ್ದಾರೆ. ತಮ್ಮ ಕ್ಷೇತ್ರದಲ್ಲಿ ಇತ್ತೀಚಿಗೆ ಚಿಕ್ಕಬಳ್ಳಾಪುರ ಉತ್ಸವ ನಡೆಸಿದರು. ಇದರ ಭಾಗವಾಗಿ ಮಹಿಳೆಯರಿಗೆ ರಂಗೋಲಿ ಸ್ಪರ್ಧೆ ಆಯೋಜಿಸಲಾಗಿತ್ತು. ಇದರಲ್ಲಿ 55,000 ಕ್ಕಿಂತಲೂ ಹೆಚ್ಚು ಮಹಿಳೆಯರು ಭಾಗಿಯಾಗಿದ್ದರು. ಭಾಗಿಯಾದ ಎಲ್ಲರಿಗೂ ಡಾ.ಸುಧಾಕರ್ ಫೌಂಡೇಶನ್‌‌ನಿಂದ ಸ್ಟೌವ್‌ಗಳನ್ನು ವಿತರಿಸಲಾಗುತ್ತಿದೆ.ಸ್ಥಳೀಯ ಬಿಜೆಪಿ ಮುಖಂಡರು ಮನೆ ಮನೆಗೆ ತೆರಳಿ ಸ್ಟೌವ್ ನೀಡುತ್ತಿದ್ದಾರೆ.. ಮತ್ತೊಂದು ಕಡೆ ಓಂ ಶಕ್ತಿ ಪ್ರವಾಸಕ್ಕೂ ಮಹಿಳೆಯರನ್ನು ಕರೆದೆಯಲಾಗುತ್ತಿದೆ.

ಗೌರಿಬಿದನೂರು ವಿಧಾನಸಭಾ ಕ್ಷೇತ್ರದಲ್ಲಿ ಮಹಿಳೆಯರಿಗೆ ಸೀರೆಗಳನ್ನು ವಿತರಿಸಲಾಗಿದೆ. ಹೊಲಿಗೆ ಯಂತ್ರಗಳನ್ನೂ ನೀಡಲಾಗಿದೆ. ಇಲ್ಲೂ ಕೂಡ ರಂಗೋಲಿ ಸ್ಪರ್ಧೆಯನ್ನು ಏರ್ಪಡಿಸಿ ಫ್ಯಾನ್, ಕುಕ್ಕರನ್ನು ವಿತರಿಸಲಾಗಿದೆ. ಬಾಗೇಪಲ್ಲಿ ಕ್ಷೇತ್ರದಲ್ಲಿ ಬಿಜೆಪಿ ಮುಖಂಡ ಮುನಿರಾಜು ಅವರು ಸೀರೆ ವಿತರಿಸಿದ್ದಾರೆ. ಓಂ ಶಕ್ತಿ ಪ್ರವಾಸಕ್ಕೂ ಕಳುಹಿಸುತ್ತಿದ್ದಾರೆ. ಪ್ರವಾಸಕ್ಕೆ ಕರೆದುಕೊಂಡು ಹೋದ ಸಮಯದಲ್ಲಿ ಮಹಿಳೆಯರಿಂದ ಆಣೆ ಪ್ರಮಾಣ ಸಹ ಮಾಡಿಸಲಾಗುತ್ತಿದೆ ಎಂದು ತಿಳಿದ ಬಂದಿದೆ.