ರಾಜ್ಯದಲ್ಲಿ ಮುಂದುವರಿದ ದಲಿತ ದೌರ್ಜನ್ಯ: ಹೊಲದಲ್ಲಿ ದನ ನುಗ್ಗಿತೆಂಬ ಕಾರಣಕ್ಕೆ ದಲಿತ ಮಹಿಳೆಗೆ ಥಳಿತ

0
342

ಸನ್ಮಾರ್ಗ ವಾರ್ತೆ

ಕೊಪ್ಪಳ: ರಾಜ್ಯದಲ್ಲಿ ವಿವಿಧೆಡೆ ದಲಿತರ ಮೇಲೆ ಸವರ್ಣೀಯರು ದೌರ್ಜನ್ಯ ಎಸಗುತ್ತಿರುವ ಘಟನೆಗಳು ಆಗಾಗ ವರದಿಯಾಗುತ್ತಲೇ ಇವೆ. ತನ್ನ ಜಮೀನಿಗೆ ಜಾನುವಾರು ನುಗ್ಗಿ ಉಪಟಳ ಮಾಡಿದೆ ಎಂಬ ಕಾರಣಕ್ಕಾಗಿ 30 ವರ್ಷದ ದಲಿತ ಮಹಿಳೆಗೆ ವ್ಯಕ್ತಿಯೊಬ್ಬ ಚಪ್ಪಲಿಯಿಂದ ಥಳಿಸಿರುವ ಘಟನೆ ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನ ರಾಂಪುರ ಗ್ರಾಮದಲ್ಲಿ ನಡೆದಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೊ ವೈರಲ್ ಆಗಿದೆ.

ಹೊಲಕ್ಕೆ ನುಗ್ಗಿದ್ದ ಹಸುವನ್ನು ಆರೋಪಿ ಅಮರೇಶ್ ಕುಂಬಾರ್ ತನ್ನ ಮನೆಯ ಮುಂದೆ ಕಟ್ಟಿ ಹಾಕಿದ್ದನು‌. ಅದನ್ನು ರಕ್ಷಿಸಲು ಹೋದಾಗ ಚಪ್ಪಲಿಯಿಂದ ಥಳಿಸಿ ಜಾತಿ ನಿಂದನೆ ಮಾಡಿದ್ದಾನೆ ಎಂದು ಶೋಭಮ್ಮ ಆರೋಪಿಸಿದ್ದಾರೆ. ಆರೋಪಿ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ದೌರ್ಜನ್ಯ ತಡೆ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಇದೇ ರೀತಿಯ ಘಟನೆ ಕಳೆದ ವಾರ ಹಾಸನದ ಬೇಲೂರು ತಾಲೂಕಿನ ಬೆಳ್ಳಾವರ ಗ್ರಾಮದಲ್ಲಿ ನಡೆದಿತ್ತು. ಕಾಫಿ ಬೀಜ ಕದಿಯಲು ಬಂದಿದ್ದ ಎಂದು ಆರೋಪಿಸಿ ಕಾಫಿ ತೋಟದ ಮಾಲೀಕರು ಯುವಕನೊಬ್ಬನನ್ನು ಹಿಡಿದು ಕೈಕಾಲು ಕಟ್ಟಿ ಅಮಾನವೀಯವಾಗಿ ಥಳಿಸಿದ್ದರು. ದಲಿತ ಮಹಿಳೆಯೊಬ್ಬಳು ನೀರು ಕುಡಿದಳೆಂದು ನೀರಿನ ತೊಟ್ಟಿಯನ್ನು ಗೋಮೂತ್ರ ಹಾಕಿ ಸ್ವಚ್ಛಗೊಳಿಸಿದ ಘಟನೆ ಇತ್ತೀಚೆಗೆ ಚಾಮರಾಜನಗರದ ಹೆಗ್ಗೋತರ ಗ್ರಾಮದಲ್ಲಿ ನಡೆದಿತ್ತು.