ಬೆಂಗಳೂರು, ಜು. 16 : ಕರ್ನಾಟಕದಲ್ಲಿ ಗುರುವಾರ ವಿಶ್ವಾಸ ಮತ ಯಾಚನೆಯಿದ್ದು ಕಾಂಗ್ರೆಸ್ ಬಂಡಾಯ ಶಾಸಕ ರೋಶನ್ ಬೇಗ್ರನ್ನು ಮುಂಬೈಗೆ ಕರೆದುಕೊಂಡು ಹೋಗುವ ಬಿಜೆಪಿಯ ಪ್ರಯತ್ನ ವಿಫಲವಾಗಿದೆ. ಬಿಜೆಪಿ ರಾಜ್ಯ ಅಧ್ಯಕ್ಷ ಬಿ ಎಸ್ ಯಡಿಯೂರಪ್ಪರ ಆಪ್ತ ಸಂತೋಷ್ ಜೊತೆ ವಿಶೇಷ ವಿಮಾನದಲ್ಲಿ ಮುಂಬೈಗೆ ಪಾರಾಗಲು ರೋಶನ್ ಬೇಗ್ ಯತ್ನಿಸುವ ವೇಳೆ ಬೆಂಗಳೂರು ಪೊಲೀಸರು ರೋಶನ್ ಬೇಗ್ರನ್ನು ಬಂಧಿಸಿ ಕಸ್ಟಡಿಗೆ ಪಡೆದಿದ್ದಾರೆ.
ಐಎಂಎ ಜ್ಯುವೆಲ್ಲರಿ ಹೂಡಿಕೆ ವಂಚನೆ ಪ್ರಕರಣ ತನಿಖೆ ಮಾಡುವ ಎಸ್ಐಟಿ ತಂಡ ಬೇಗ್ರನ್ನು ಕೆಂಪೆಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ರಾತ್ರೆ ಹನ್ನೊಂದು ಗಂಟೆಗೆ ಬಂಧಿಸಿತು. ಬೇಗ್ ಕೂಡ ಐಎಂಎ ವಂಚನೆಯಲ್ಲಿ ಶಾಮೀಲಾಗಿದ್ದಾರೆ ಎಂಬ ಬಲವಾದ ಆರೋಪ ಇದೆ. ಅವರನ್ನು ಈ ಹಿಂದೆ ಹಾಜರಾಗುವಂತೆ ಎಸ್ಐಟಿ ನೋಟಿಸು ನೀಡಿತ್ತು. ಆದರೆ ಬೇಗ್ ಎಸ್ಐಟಿ ಮುಂದೆ ಹಾಜರಾಗಿರಲಿಲ್ಲ. ಇದೇವೇಳೆ ಬಿಜೆಪಿ ಸಹಾಯದಲ್ಲಿ ವಿಶೇಷ ಚಾರ್ಟರ್ಡ್ ವಿಮಾನದಲ್ಲಿ ಮುಂಬೈಗೆ ತಪ್ಪಿಸಿಕೊಂಡು ಹೋಗಲು ಅವರು ಯತ್ನಿಸಿ ಪೊಲೀಸರಿಗೆ ಸಿಕ್ಕಿಬಿದ್ದರು.












