ಎರಡು ಟೋಲ್ ಗೇಟ್ ನಡುವೆ ಇರಬೇಕಾದ ಅಂತರವೆಷ್ಟು? ಸುರತ್ಕಲ್ ಟೋಲ್ ಗೇಟ್ ಗೆ ಯಾಕೆ ವಿರೋಧ? ಈ ಬರಹ ಓದಿ

0
1695

ಅಲ್ಮೈಡಾ ಗ್ಲಾಡ್ಸನ್

ಕುಂದಾಪುರ-ತಲಪಾಡಿ ಮಧ್ಯೆ ಟೋಲ್‍ಗೇಟ್‍ಗಳ ಬಗ್ಗೆ ಯಾಕೆ ವಿರೋಧ? ಇದು ಗೊತ್ತಿದ್ದೂ, ಗೊತ್ತಿಲ್ಲದಂತೆ ನಟಿಸುವವರರಿಗೆ ಮಾತ್ರ ಸೀಮಿತ. ಟೋಲ್ ತಪ್ಪಲ್ಲ. ಆದರೆ ಅದನ್ನು ನಿಯಮ ಮುರಿದು ಬೇಕಾಬಿಟ್ಟಿಯಾಗಿ ಸಂಗ್ರಹಿಸುವುದಕ್ಕೆ ವಿರೋಧ.

National Highways Fee (Determination of rates and collection) Rules, 2008, Sec 8(2) ಪ್ರಕಾರ ರಾಷ್ಟ್ರೀಯ ಹೆದ್ದಾರಿಯಲ್ಲಿ ಎರಡು ಟೋಲ್‍ಗೇಟ್ ನಡುವಿನ ಕನಿಷ್ಟ ಅಂತರ ಅರವತ್ತು ಕಿಲೋಮೀಟರ್ ಇರಲೇಬೇಕು. ಇದಕ್ಕಿಂತ ಕಡಿಮೆ ಇರೋ ಹಾಗಿಲ್ಲ. ವಿಶೇಷ ಸಂದರ್ಭಗಳಲ್ಲಿ ಇದಕ್ಕಿಂತ ಕಡಿಮೆ ಅಂತರದಲ್ಲಿ ಟೋಲ್‍ಗೇಟನ್ನು ನಿರ್ಮಿಸಬೇಕಾದರೆ ಅದಕ್ಕೆ ಲಿಖಿತವಾಗಿ ಸಕಾರಣಗಳನ್ನು ಕೊಟ್ಟು ಪ್ರಾಧೀಕಾರದಿಂದ ಅನುಮತಿ ಪಡೆಯಬೇಕು. ಆದರೆ ಸದ್ಯಕ್ಕೆ ಕರಾವಳಿ ಜಿಲ್ಲೆಗಳಲ್ಲಿ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ 66ರ ಅವಸ್ಥೆ ನೋಡಿ.

ರಾಷ್ಟ್ರೀಯ ಹೆದ್ದಾರಿ 66ರಲ್ಲಿ ತಲಾಪಾಡಿಯಿಂದ ಸಾಸ್ತಾನ ಬಳಿಯ ಗುಂಡ್ಮಿಯವರೆಗೆ ಒಟ್ಟು ನಾಲ್ಕು ಟೋಲ್‍ಗೇಟ್‍ಗಳಿವೆ. ತಲಪಾಡಿ ಹಾಗೂ ಗುಂಡ್ಮಿಯ ನಡುವಿನ ಅಂತರ ತೊಂಬತ್ತೈದು (95) ಕಿಲೋಮೀಟರ್. ಅಂದರೆ ಕಾನೂನು ಪ್ರಕಾರ ಈ ಅಂತರದಲ್ಲಿ ಕೇವಲ ಎರಡು ಟೋಲ್‍ಗೇಟ್‍‍ಗಳಿಗೂ ಅವಕಾಶವಿಲ್ಲ. ಆದರೂ ನಮ್ಮ ಹೆದ್ದಾರಿಯಲ್ಲಿ ನಾಲ್ಕು ಟೋಲ್‍ಗೇಟ್‍ಗಳಿವೆ. ಅಂದರೆ ಸರಾಸರಿ ಇಪ್ಪತ್ಮೂರು ಕಿಲೋಮೀಟರಿಗೊಂದು ಟೋಲ್‍ಗೇಟ್ ಹೆದ್ದಾರಿ 66ರಲ್ಲಿದೆ. ಅದರಲ್ಲೂ NITK ಹಾಗೂ ಹೆಜಮಾಡಿ ನಡುವೆ ಹತ್ತು ಕಿಲೋಮೀಟರ್ ಅಂತರದಲ್ಲಿ ಎರಡು ಟೋಲ್‍ಗೇಟ್‍ಗಳಿವೆ. ಹೆದ್ದಾರಿ ಪ್ರಾಧಿಕಾರ ಇದೆಲ್ಲಾ ಗೊತ್ತಿದ್ದೂ ಸುಮ್ಮನಿರೋದು ಯಾಕೆಂದು ಕೇಳಬೇಕಾದ ಅಗತ್ಯವಿದೆಯೇ? ಇನ್ನು ಈ ಹೆದ್ದಾರಿಯ ಕೆಲಸನೂ ಮುಗಿದಿಲ್ಲ. ಪಂಪ್‍ವೆಲ್ ಫ್ಲೈಓವರಂತೂ ಸದ್ಯಕ್ಕೆ ಹಾಲಿವುಡ್‍ನ ಸಿನೆಮಾವೊಂದಕ್ಕೆ ಕಥೆಯಾಗುವ ಸಂಭವವಿದೆ. ಟೋಲ್ ಸಂಗ್ರಹಿಸಬೇಕಾದರೆ ಹೆದ್ದಾರಿಯ ಕೆಲಸ ಕನಿಷ್ಟ 75% ಮುಗಿದಿರಬೇಕು. ನಮ್ಮಲ್ಲಿ 75% ಬಿಡಿ 50% ಆಗುವ ಮೊದಲೇ ಟೋಲ್‍ಗೇಟ್‍ಗಳು ತಲೆಯೆತ್ತಿದ್ದವು. ಇನ್ನು ಟೋಲ್‍ಗೇಟ್‍ಗಳಲ್ಲಿ ಲೋಕಲ್ ವಾಹನಗಳಿಗೆ ವಿನಾಯತಿ ಕೊಡಬೇಕೆಂಬ ನಿಯಮವಿದೆ. ಅದನ್ನೂ ಗಾಳಿಗೆ ತೂರಿದ್ದಾರೆ ಹೆದ್ದಾರಿ ಪ್ರಾಧಿಕಾರದವರು.

ಹಾಗಾಗಿ ಸಾಲಿಗ್ರಾಮದಿಂದ ಅಥವಾ ಕುಂದಾಪುರ-ತಲಪಾಡಿಯವರೆಗೆ ಖಾಸಗಿ ಕಾರಿನಲ್ಲಿ ಹೋಗಿ ಬರೋದಾದರೇ ಒಂದು ದಿನಕ್ಕೆ Rs 390 ಟೋಲ್ ಕಟ್ಟಬೇಕು. ಒಂದ್ವೇಳೆ ದಿನಾಲೂ ಹೋಗುವವರಾದರೆ ತಿಂಗಳ ಪಾಸಿಗೆಂದೇ Rs 9100 ತೆಗೆಡಿದಬೇಕು. ಇದನ್ನು ವಿರೋಧಿಸದೆ ಸುಮ್ಮನಿರಬೇಕಾ?

ಹೆಜಮಾಡಿ ಟೋಲ್‍ಗೇಟ್‍ ಆರಂಭವಾದ ಮೇಲೆ NITK ಟೋಲ್‍ಗೇಟ್‍ ಮುಚ್ಚುತ್ತೇವೆಂದು ಹೇಳಿದ ಸಂಸದರು ಎಲ್ಲಿ ಬೆಂಕಿ ಹಚ್ಚುವಲ್ಲಿ ಬಿಜಿಯಾಗಿದ್ದಾರೆ? ಕರಾವಳಿಯ ಇನ್ನೊಬ್ಬ ಸಂಸದರು ಟೋಲ್‍ಗೇಟ್ ವಿಷಯದಲ್ಲಿ ಫುಲ್ಲಂ ಫುಲ್ ಮೌನ ವಹಿಸಿರೋದ್ಯಾಕೆ? ಟೋಲ್ ಸಂಗ್ರಹಿಸುವ ಕಂಪನಿಯಲ್ಲಿ ಅವರ ಪರೋಕ್ಷ ಮ್ಹಾಲಕತ್ವ ಇರುವ ಕಾರಣಕ್ಕೋ?

ಈ ಹೆದ್ದಾರಿ ಕಾಮಗಾರಿ ಆರಂಭವಾಗಿದ್ದು 2010ರಲ್ಲಿ. ಇನ್ನೂ ಯಾಕೆ ಮುಗಿದಿಲ್ಲ ಅಂತ ಯಾರನ್ನು ಕೇಳೋದು? ಅವತ್ತಿನಿಂದ, ಇದುವರೆಗೂ, ನಡುವೆ ಒಂದೂವರೆ-ಎರಡು ವರುಷದವಧಿ ಬಿಟ್ಟರೆ ಉಡುಪಿ-ಚಿಕ್ಕಮಗಳೂರಿನ ಸಂಸದರು ಬಿಜೆಪಿಯವರು. ಇನ್ನು ಪಕ್ಕದ ಮಂಗಳೂರಿನಲ್ಲಂತೂ ಕಳೆದ ಅಲ್ಮೋಸ್ಟ್ ಮೂವತ್ತು ವರುಷಗಳಿಂದ ಬಿಜೆಪಿ ಸಂಸದರೇ. ಇವರನ್ನು ಅಪೂರ್ಣ ಹೆದ್ದಾರಿಗಳು, ಫ್ಲೈಓವರ್, ಕಾನೂನುಬಾಹಿರ ಟೋಲ್‍ಗೇಟ್‍ಗಳ ಬಗ್ಗೆ ಕೇಳದೆ, ದೂರದೇ ಇನ್ಯಾರನ್ನು ಕೇಳಬೇಕು?