ಸದ್ಯಕ್ಕೆ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಿಸದಿರಿ: ಸರಕಾರಕ್ಕೆ ಸೂಚನೆ ನೀಡಿದ ಹೈಕೋರ್ಟ್

0
532

ಸನ್ಮಾರ್ಗ ವಾರ್ತೆ

ಬೆಂಗಳೂರು: ಕೋವಿಡ್ ನ ಹಿನ್ನೆಲೆಯಲ್ಲಿ ಎಲ್ಲ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳನ್ನು ಪಾಸ್ ಮಾಡುತ್ತೇವೆ ಎಂದಿದ್ದ ಶಿಕ್ಷಣ ಇಲಾಖೆಯ ತೀರ್ಮಾನಕ್ಕೆ ಸದ್ಯ ಬ್ರೇಕ್ ಬಿದ್ದಿದೆ. ರೆಗ್ಯೂಲರ್ ವಿದ್ಯಾರ್ಥಿಗಳನ್ನು ಸಾರ್ವತ್ರಿಕವಾಗಿ ಪಾಸ್ ಮಾಡುಲಾಗುವುದು ಎಂದು ಸರಕಾರ ಆದೇಶ ನೀಡಿದ ಬೆನ್ನಲ್ಲೆ ರಿಪಿಟರ್ಸ್ ವಿದ್ಯಾರ್ಥಿಗಳು ಕೂಡ ನಮ್ಮನ್ನೂ ಪಾಸ್ ಮಾಡಿ ಎಂದು ಹೈ ಕೋರ್ಟ್ ಮೆಟ್ಟಿಲೇರಿದ್ದರಿಂದ ಸದ್ಯ ತಡೆ ಬಿದ್ದಿದೆ. ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ ಮಾಡದಂತೆ ಹೈಕೋರ್ಟ್ ತಡೆ ಹಿಡಿದಿದೆ.

ಸರಕಾರ ಆದೇಶ ನೀಡಿದ ಬೆನ್ನಲ್ಲೆ ಕಳೆದ ವಾರ ರಿಪಿಟರ್ಸ್ ವಿದ್ಯಾರ್ಥಿಗಳು ಸಲ್ಲಿಕೆ ಮಾಡಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಸರಕಾರದ ನಿಲುವನ್ನು ತಿಳಿಸುವಂತೆ ಸೂಚನೆ ನೀಡಿತ್ತು. ಇಂದು ಅರ್ಜಿ ವಿಚಾರಣೆ ಸಂದರ್ಭದಲ್ಲಿ ಸರಕಾರ ತಮ್ಮ ನಿಲುವನ್ನು ತಿಳಿಸಿ ಈಗಾಗಲೇ 12 ತಜ್ಞರ ಸಮಿತಿ ರಚಿಸಿರುವುದಾಗಿ ಹೈಕೋರ್ಟಿಗೆ ಮಾಹಿತಿ ನೀಡಿದೆ.

76 ಸಾವಿರ ರಿಪೀಟರ್ಸ್‍ಗಳ ಫಲಿತಾಂಶದ ಬಗ್ಗೆ ತೀರ್ಮಾನ ಮಾಡಲಿದೆ. ತಜ್ಞರ ಸಮಿತಿ ಸಲಹೆ ಆಧರಿಸಿ ಸರಕಾರ ತೀರ್ಮಾನಿಸಲಿದೆ. 15 ದಿನಗಳೊಳಗೆ ಸಮಿತಿ ವರದಿ ನೀಡಲಿದೆ ಎಂದು ಪರೀಕ್ಷಾ ವಿಭಾಗದ ಜಂಟಿ ನಿರ್ದೇಶಕ ಕೃಷ್ಣಪ್ಪ ಹೈಕೋರ್ಟಿಗೆ ಮಾಹಿತಿ ರವಾನೆ ಮಾಡಿದರು.

ರಿಪೀಟರ್ಸ್ ಮತ್ತು ಸಾಮಾನ್ಯ ವಿದ್ಯಾರ್ಥಿಗಳ ನಡುವೆ ತಾರತಮ್ಯ ಬೇಡ. ಖಾಸಗಿ ವಿದ್ಯಾರ್ಥಿಗಳಿಗೆ ಮಾತ್ರ ಪರೀಕ್ಷೆ ಅನಿವಾರ್ಯ ಎಂದು ನ್ಯಾ.ಬಿ.ವಿ. ನಾಗರತ್ನ ನೇತೃತ್ವದ ಪೀಠ ಅಭಿಪ್ರಾಯ ತಿಳಿಸಿತ್ತು. ಅಲ್ಲದೇ ವಿಚಾರಣೆ ಜುಲೈ 5 ಕ್ಕೆ ಮುಂದೂಡಿ ಸರಕಾರದ ನಿಲುವು ತಿಳಿಸಲು ಹೈಕೋರ್ಟ್ ಸೂಚನೆ ನೀಡಿದೆ.