ಸನ್ಮಾರ್ಗ ವಾರ್ತೆ
ಇತ್ತೀಚೆಗೆ ನಾವು ದೇಶದಾದ್ಯಂತ 78ನೇ ಸ್ವಾತಂತ್ರೋತ್ಸವವನ್ನು ಬಹಳ ಸಂಭ್ರಮದಿಂದ ಆಚರಿಸಿದೆವು . ಆದರೆ ದೇಶದ ಜನತೆಗೆ ಸ್ವಾತಂತ್ರ್ಯ ದೊರಕಿದೆಯೇ ? ಸಾಮಾಜಿಕ ಸ್ಥಿತಿ ಮತ್ತು ಸಮೂಹದಲ್ಲಿ ಎಷ್ಟರಮಟ್ಟಿಗೆ ಸ್ವಾತಂತ್ರ್ಯದ ಕಲ್ಪನೆಯು ಕಾಣಸಿಗುತ್ತದೆ ಎಂಬುದರ ಕುರಿತು ಆಲೋಚಿಸಬೇಕಾದ ಅಗತ್ಯವಿದೆ.
ಮಾನವ ಹಕ್ಕುಗಳ ಘೋಷಣೆಯ ಪ್ರಕಾರ ಸ್ವಾತಂತ್ರ್ಯದ ವ್ಯಾಖ್ಯಾನದಲ್ಲಿ ಅದು ಯಾರಿಗೂ ಹಾನಿಕರ ಆಗಿರಬಾರದು ಎಂಬ ಅಂಶವು ಸೇರಿದೆ. ಪ್ರಸಕ್ತ ಸಮಾಜವು ಅನೇಕ ರೀತಿಯ ಸಮಸ್ಯೆಗಳಲ್ಲಿ ತೊಳಲಾಡುತ್ತಿದೆ ಎಂಬುದನ್ನು ನಾವು ಕಾಣುತ್ತಿದ್ದೇವೆ.
ಸಾಮ್ರಾಜ್ಯಶಾಹಿ ಶಕ್ತಿಗಳು ಸಾಂಸ್ಕೃತಿಕ ಮತ್ತು ಆರ್ಥಿಕ ನೆಲೆಯಲ್ಲಿ ಮಾನವರ ಹಕ್ಕುಗಳನ್ನು ಕಸಿದುಕೊಂಡು ಅವರನ್ನು ಆರ್ಥಿಕ ಗುಲಾಮರನ್ನಾಗಿ ಮಾಡಿದೆ. ಜೀವನದ ಮಟ್ಟ, ಸಮಾನತೆ ಗ್ಲಾಮರ್ ಇತ್ಯಾದಿಗಳ ಹೆಸರಿನಲ್ಲಿ ಕೊಳ್ಳುಬಾಕತೆಯ ಬಲೆಯಲ್ಲಿ ಬೀಳಿಸಿ ಅವರನ್ನು ದೈಹಿಕವಾಗಿ ಮಾತ್ರವಲ್ಲ ಮಾನಸಿಕವಾಗಿಯೂ ಗುಲಾಮರನ್ನಾಗಿ ಮಾಡಲಾಗಿದೆ.
ಬಂಡವಾಳಶಾಹಿ ಶಕ್ತಿಗಳ ಯೋಜನೆಗಳು ಸಮಾನತೆ ಮತ್ತು ಸ್ವಾತಂತ್ರ್ಯದ ಜಾಡಿನಲ್ಲಿ ಆಧುನಿಕ ಯುಗವನ್ನು ದಾರಿ ತಪ್ಪಿಸಿದೆ. ಮೊಬೈಲ್ ಫೋನ್, ಇಂಟರ್ನೆಟ್, ಫೇಸ್ಟುಕ್, ಇನ್ಸಾಗ್ರಾಮ್ ಮುಂತಾದ ಸಾಮಾಜಿಕ ಜಾಲತಾಣಗಳ ಮೂಲಕ ಮನೆ ಮೊಹಲ್ಲಗಳು ಮಾತ್ರವಲ್ಲ ಎಲ್ಲ ಕಡೆಗಳಲ್ಲೂ ಅಶ್ಲೀಲತೆಯು ಸಾಮಾನ್ಯವಾಗಿ ಬಿಟ್ಟಿದೆ .
ಇಂದು ಹೆಚ್ಚುತ್ತಿರುವ ನಗ್ನತೆ,ಜೂಜು ಮಧ್ಯಪಾನ ಮತ್ತು ಮಾದಕ ವಸ್ತುಗಳ ವ್ಯಸನ, ಲಿವಿಂಗ್ ರಿಲೇಶನ್ಶಿಪ್, ಸಲಿಂಗ ಕಾಮ ಹಾಗೂ ವೇಶ್ಯಾವಾಟಿಕೆಗಳಂತಹ ಕೆಡುಕುಗಳು ಒಂದೆಡೆ ಸಮಾಜದ ಹದಗೆಡುತ್ತಿರುವ ನೈತಿಕ ಮಟ್ಟಕ್ಕೆ ಕನ್ನಡಿ ತೋರಿಸುತ್ತಿದ್ದರೆ, ಇನ್ನೊಂದೆಡೆ ನೈತಿಕ ಸಾಮಾಜಿಕ ಮತ್ತು ಜೈವಿಕ ಮಟ್ಟದಲ್ಲಿ ಅಸಂಖ್ಯ ಸಮಸ್ಯೆಗಳನ್ನು ಹುಟ್ಟು ಹಾಕಿದೆ .
ಇಂದು ಯುವ ಜನಾಂಗವು ಪಥಭ್ರಷ್ಟವಾಗುತ್ತಿದೆ. ಕುಟುಂಬಗಳು ಛಿದ್ರಗೊಳ್ಳುತ್ತಿವೆ ಸಮಾಜದ ಸ್ಥಿತಿಗತಿಯು ಚಿಂತಾಜನಕವಾಗಿ ಬಿಟ್ಟಿದೆ.
ಇಂತಹ ಪರಿಸ್ಥಿತಿಯನ್ನು ಗಮನದಲ್ಲಿರಿಸಿ ಸಮಾಜದಲ್ಲಿ ಜಾಗೃತಿ ಮೂಡಿಸಲಿಕ್ಕಾಗಿ ಮತ್ತು ಪ್ರಸಕ್ತ ಸ್ಥಿತಿಯಲ್ಲಿ ಸುಧಾರಣೆ ತರಲಿಕ್ಕಾಗಿ ಜಮಾಅತೆ ಇಸ್ಲಾಮಿ ಹಿಂದ್ ಮಹಿಳಾ ವಿಭಾಗವು ದೇಶದಾದ್ಯಂತ ಒಂದು ತಿಂಗಳ ಅಭಿಯಾನವನ್ನು ಆಯೋಜಿಸುವ ತೀರ್ಮಾನವನ್ನು ಕೈಗೊಂಡಿದೆ.
2024 ಸೆಪ್ಟೆಂಬರ್ 1 ರಿಂದ 30 ರವರೆಗೆ ನೈತಿಕತೆಯೇ ಸ್ವಾತಂತ್ರ್ಯ ಎಂಬ ಧೈಯ ವಾಕ್ಯದಡಿ ಪ್ರಸ್ತುತ ಅಭಿಯಾನವನ್ನು ನಡೆಸಲಾಗುವುದು.
ಜಮಾಅತೆ ಇಸ್ಲಾಮಿ ಹಿಂದ್ ಮಹಿಳಾ ವಿಭಾಗವು ಈ ಅಭಿಯಾನದ ಮೂಲಕ ಮಾನವ ಜೀವನದ ಸುಭಿಕ್ಷೆ ಮತ್ತು ಮನೋಹರತೆಯು ನೈತಿಕ ಕಟ್ಟಳೆಗಳನ್ನು ಪಾಲಿಸುವುದರಿಂದಲೇ ಸಾಧ್ಯ ಎಂಬ ಪ್ರಜ್ಞೆಯನ್ನು ಬೆಳೆಸುವ ಸಂಕಲ್ಪವನ್ನು ತೊಟ್ಟಿದೆ. ಯುವ ಪೀಳಿಗೆಯನ್ನು ಸ್ವಾತಂತ್ರ್ಯದ ತಪ್ಪು ಕಲ್ಪನೆಯಿಂದ ಜಾಗೃತಗೊಳಿಸುವುದು ಮತ್ತು ಅದರಿಂದ ರಕ್ಷಿಸುವುದು ಈ ಅಭಿಯಾನದ ಪ್ರಮುಖ ಉದ್ದೇಶವಾಗಿದೆ.
ವಿಶೇಷತ ಮುಸ್ಲಿಂ ಸಮುದಾಯದಲ್ಲಿ ಕುರಾನ್ ಮತ್ತು ಸುನ್ನತ್ ನ ಬೆಳಕಿನಲ್ಲಿ ಇಸ್ಲಾಮಿನ ಸರಿಯಾದ ಅರಿವನ್ನು ಉಂಟು ಮಾಡುವುದು ಹಾಗೂ ತಮ್ಮ ಜೀವನವನ್ನು ಅದರ ಮಾನದಂಡದಲ್ಲಿ ಎರಕಹೊಯ್ಯುವಂತೆ ಪ್ರೇರೇಪಿಸುವುದರ ಕಡೆಗೆ ಗಮನವೀಯಲಾಗುವುದು. ಈ ಮೂಲಕ ಒಂದೆಡೆ ಅಲ್ಲಾಹನು ಮತ್ತು ಅವನ ಸಂದೇಶವಾಹಕರು (ಸ) ಮೆಚ್ಚುವಂತಹ ಜೀವನ ಸಾಗಿಸುವ ಮೂಲಕ ಯಶಸ್ಸನ್ನು ಗಳಿಸುವುದು ಹಾಗೂ ಸಮಾಜಕ್ಕಾಗಿ ಒಂದು ಅತ್ಯುತ್ತಮ ಮಾದರಿಯಾಗುವುದು.
ಅಭಿಯಾನದ ಸಂದರ್ಭದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ಉದಾಹರಣೆಗೆ, ‘ಧರ್ಮದಲ್ಲಿ ನೈತಿಕತೆಯ ಕಲ್ಪನೆ ‘ ಶೀರ್ಷಿಕೆಯಲ್ಲಿ ಅಂತರ್ಧಮೀಯ ವಿಚಾರಗೋಷ್ಠಿ, ಮಹಿಳಾ ಸಮಾವೇಶ, ಶಾಲಾ-ಕಾಲೇಜುಗಳಲ್ಲೂ ಉಪನ್ಯಾಸ, ವೈಯಕ್ತಿಕ ಭೇಟಿ,ಸಮಾಜದ ಪ್ರಸಿದ್ದ ವ್ಯಕ್ತಿಗಳ ಸಂದರ್ಶನ ನಡೆಸುವುದು ಅದರ ಪ್ರಮುಖ ಅಂಶಗಳನ್ನು ಆಯ್ದು ಸೋಶಿಯಲ್ ಮೀಡಿಯಾದ ಮೂಲಕ ಪ್ರಚಾರ ಮಾಡುವುದು.
ಲೇಖನ ಭಾಷಣ ಸ್ಪರ್ಧೆ ಪೋಸ್ಟರ್ ಡಿಸೈನಿಂಗ್ ಕಥೆ ಮುಂತಾದವುಗಳ ಸ್ಪರ್ಧೆಗಳನ್ನು ನಡೆಸಲಾಗುವುದು.
ಸಮುದಾಯದ ಯುವತಿಯರಲ್ಲಿ ಅನ್ನೂರ್ ಅಧ್ಯಾಯದ ಅಧ್ಯಯನ ಮತ್ತು ಅದರಲ್ಲಿ ಕ್ವಿಝ್ ಸ್ಪರ್ಧೆಯನ್ನು ನಡೆಸಲಾಗುವುದು.
ಕರ್ನಾಟಕದಲ್ಲಿ ಈ ಅಭಿಯಾನದ ಉದ್ಘಾಟನೆಯು ಸೆಪ್ಟೆಂಬರ್ 1 ರಂದು ನೆರವೇರಲಿರುವುದು. ಜಮಾಅತೆ ಇಸ್ಲಾಮಿ ಹಿಂದ್ ಕರ್ನಾಟಕ ರಾಜ್ಯ ಅಧ್ಯಕ್ಷರಾದ ಡಾಕ್ಟರ್ ಮುಹಮ್ಮದ್ ಸಅದ್ ಬೆಳಗಾವಿಯವರು ಇದರ ಅಧ್ಯಕ್ಷತೆ ವಹಿಸಲಿರುವರು. ರಾಜ್ಯದ ಇತರ ನಗರಗಳಾದ ಬೆಳಗಾವಿ, ಭಟ್ಕಳ, ಮಂಗಳೂರು, ಉಡುಪಿ, ಕೊಪ್ಪಳ, ರಾಯಚೂರು, ಗುಲ್ಬರ್ಗ ಮುಂತಾದ ಕಡೆಗಳಲ್ಲಿ ಜಮಾಅತೆ ಇಸ್ಲಾಮಿ ಕರ್ನಾಟಕ ರಾಜ್ಯ ಮಹಿಳಾ ವಿಭಾಗದ ಹೊಣೆಗಾರರು ಅಭಿಯಾನದ ವಿವರಣೆ ಮತ್ತು ಪ್ರಚಾರಕ್ಕಾಗಿ ಪತ್ರಿಕಾಗೋಷ್ಠಿ ನಡೆಸಿಕೊಡುವರು.